Karada Vishwa

Article · November 17, 2026

ಮರಳುಗಾಡಿನಲಿ ಒಂದು ದಿನ

ವೀಣಾ ಎಂ ಭಟ್

ಮರಳುಗಾಡಿನ ನಡುವೆ ಸಿಲುಕಿದೆನು ಅಕಟಕಟಾ

ಎಲ್ಲಿ ಹೋಗಲೆ ಮರುಳೆ ದಾರಿ ಕಾಣದೆ ಸಂಕಟ

ಹೊತ್ತು ತಂದವರಾರೊ ಗೊತ್ತು ಗುರಿ ಇಲ್ಲದೆಯೆ

ತಂದವರು ಎತ್ತ ಸಾಗಿದರೋ ಒಂದು ನಾನರಿಯೆ

ಹಸಿರನೆಲ ಜಲವಿಲ್ಲ ಉಸಿರಿಗೆ ದನಿಯಿಲ್ಲ

ಬಿಸಿಲಿಗೆ ಆಸರೆ ಇಲ್ಲ ಬಳಲಿ ಬೆಂಡಾದೆನಲ್ಲ

ಬೆಸೆಯಲು ಯಾರಿಲ್ಲ ಎತ್ತ ಸಾಗಲಿ ದೇವನೆ ಬಲ್ಲ

ಹಸಿದು ಎದೆಗುಂದಿ ನಾ ಸೋತು ಹೋದೆನಲ್ಲ

ಮಳಲ ಬಿಸಿ ತಾಳದೆ ಎಲ್ಲಿ ಕೂರಲಿ ಬೇಗೆ

ನಗ್ನ ಪಾದಕೆ ಮಳಲ ಬಿಸಿಯು ತಾಳದ ಧಗೆ

ಯಾವ ಜನುಮದ ಕರ್ಮ ಬೆಂಬಿಡದೆ ಕಾಡುತಿದೆ

ಬೊಬ್ಬಿಡುವ ಸ್ವರಕಾಗಿ ಹರಸಾಹಸವ ತೋರಿದೆ

ದೈವವ ಕರೆದೆ ಸುದೈವ ಎಲ್ಲಿದೆ ಎನಗೆ

ಸಿಲುಕಿದೆನಾ ಕಂಟಕದಿ ಮೋಸವಾಯಿತೆ ಎನಗೆ

ಗಂಟಲೊಣಗಿತಲ್ಲ ಕಾದಿರುವೆ ಜಲನಿಧಿಗೆ

ಸುತ್ತ ಕತ್ತಲು ಹಬ್ಬಿ ಮಬ್ಬಾಯಿತು ಧರೆಗೆ

ಕಣ್ಣಕುಕ್ಕಿದರೂ ಕಾಣಲಾರದ ಕಾಳರಾತ್ರಿ

ಎತ್ತನೋಡಿದರತ್ತ ಪ್ರೇತಗಳ ಮೂರುತಿ

ರಕ್ಕಸ ಪಿಶಾಚಿಗಳ ತಿರುಗಾಟ ಸುತ್ತಲು

ಹುಚ್ಚೆದ್ದು ಕುಣಿದಾಗ ನಾ ಹೆದರಿ ಕಂಗಾಲು

ಥರಥರನೆ ನಡುಗಿದೆನು ನಿದ್ದೆಯ ಕಂಗಳಲಿ

ಭಯದಿ ಕೂಗಿದೆನಾಗ ಕೆಟ್ಟ ಕನಸಿನಲಿ

ಓಡಿ ಬಂದಳು ಅಮ್ಮ ಸಾಂತ್ವನವ ಮಾಡುತಲಿ

ಮಲಗು ನೀ ನನ್ನ ಚಿನ್ನ ಶ್ರೀ ರಾಮನ ಸ್ಮರಣೆಯಲಿ

Creative Writings