
Article · June 22, 2026
ಅಪ್ಪನೆಂಬ ದೇವನು
✍🏻 ಶಿ. ಜ, ಮಸ್ಕತ್
ಸಪ್ತಪದಿಯ ತುಳಿದ ಮ್ಯಾಲೆ
ಆಕೆ ಅವನ ಹೆಗಲಿಗೇ
ಮೂರು ಗಂಟು ಬೆಸೆದ ಬಳಿಕ
ಅವನೆ ಬಾಳ ದೀವಿಗೇ ll ll
ತವರ ತೊರೆದು ಬಂದ ಮೇಲೆ
ಅವನೆ ಬದುಕು ಅವಳಿಗೇ
ಕೂಡಿ ಬಾಳ ಹೊರಟ ಕ್ಷಣವೆ
ಅವನ ಕಸುಬೇ ಕೂಳಿಗೇ ll ll
ಭಾವ ಬೆರೆದು ಜೀವ ಸೆಳೆದು
ಬಸಿರು ಪಡೆಯಿತು ಪ್ರೇಮಕೇ
ಚಿಗುರು ಬಸಿದ ಜೀವ ನಗುತಿರೆ
ಕರುಳ ಕುಡಿಯದು ಬಗಲಿಗೇ ll ll
ಕಂದ ನಗುತಿರೆ ಆಕೆ ಮೈಮರೆ
ಕಸುಬೇ ಅವನದು ದಿನಚರಿ
ಹೊಟ್ಟೆ ಹಿಟ್ಟಿನ ಚಿಂತೆ ಜತೆಜತೆ
ಉಡಲು ಬೇಕು ಬಟ್ಟೆ ಬರೇ ll ll
ಆಕೆ ಮರೆತಳು ಅವನ ಇರುವನೆ
ಕರುಳ ಕುಡಿ ಬೆಳೆಯುತಿರೇ
ಕಾಸು ಉಳಿಸೆ ಜೀವ ತೇಯ್ದನು
ಮಡದಿ ಮಗುವಿನ ನಗುವಿಗೇ ll ll
ಜಗದ ಪರಿವೆ ಮರೆತು ದುಡಿವನು
ಮಡದಿ ಮಕ್ಕಳ ಏಳ್ಗೆಗೇ
ಕಷ್ಟ ನುಂಗುತ ನಗುವ ಮರೆವನು
ಮಗುವ ನಗುವಿನ ಆಸೆಗೇ ll ll
ತನ್ನದೆಲ್ಲವ ಧಾರೆ ಎರೆವನು
ಸ್ವಾರ್ಥವಿಲ್ಲದ ಮನುಜನೂ
ಕರುಳ ಬಂಧಕೆ ಜೀವ ತೇಯ್ವನು
ಅಪ್ಪನೆಂಬ ಆ ದೇವನು ll ll
( Occasion : father's day)
Creative Writings
