
Article · November 4, 2026
ಹಿರಿಯರ ಮಾತು ಹರಟೆಯಲ್ಲ, ಆರೋಗ್ಯದ ಸಂಜೀವಿನಿ
ಉಪಯುಕ್ತ ನ್ಯೂಸ್ ನಲ್ಲಿ ಪ್ರಕಟವಾದ ಎಸ್. ಎನ್. ಭಟ್, ಸೈಪಂಗಲ್ಲು ಅವರ ಲೇಖನ
ಮನೆಯ ಹಜಾರದಲ್ಲೋ ಅಥವಾ ಊರಿನ ಕಟ್ಟೆಯ ಮೇಲೋ ಹಿರಿಯರು ಗಂಟೆಗಟ್ಟಲೆ ಮಾತನಾಡುತ್ತಾ ಕುಳಿತಿದ್ದರೆ, ಇಂದಿನ ಯುವಪೀಳಿಗೆಗೆ ಅದು 'ವೃದ್ಧಾಪ್ಯದ ಹರಟೆ'ಯಂತೆ ಕಾಣುವುದು ಸಾಮಾನ್ಯ. "ಅಜ್ಜ-ಅಜ್ಜಿಗೆ ಮಾತೇ ಹೆಚ್ಚು, ಕೆಲಸವಿಲ್ಲದೆ ಹಳೆ ಕಥೆ ಹೇಳುತ್ತಾರೆ'' ಎಂದು ಗೇಲಿ ಮಾಡುವವರೂ, ಬೇಸತ್ತು ದೂರ ಸರಿಯುವವರೂ ಕಡಿಮೆಯಿಲ್ಲ. ಆದರೆ, ನರವಿಜ್ಞಾನ ಹಾಗೂ ಮನೋವೈದ್ಯಕೀಯ ಲೋಕ ಇಂದು ಸಾರುತ್ತಿರುವ ಸತ್ಯವೇ ಬೇರೆ. ಹಿರಿಯರು ಹೆಚ್ಚು ಹೆಚ್ಚು ಮಾತನಾಡುವುದು ಕೇವಲ ಕಾಲಕ್ಷೇಪವಲ್ಲ, ಅದೊಂದು ಅದ್ಭುತ ನೈಸರ್ಗಿಕ ಚಿಕಿತ್ಸೆ. ವಯಸ್ಸಾಗುತ್ತಿದ್ದಂತೆ ಮನುಷ್ಯನನ್ನು ಆವರಿಸುವ ದೊಡ್ಡ ಸವಾಲೆಂದರೆ ಏಕಾಂಗಿತನ ಮತ್ತು ಮರೆಗುಳಿತನ. ಆಲೈಮರ್ಸ್ ಹಾಗೂ ಡಿಮೆನ್ಶಿಯಾದಂತಹ ಮೆದುಳಿನ ಕ್ಷೀಣತೆಗೆ ಮಾರುಕಟ್ಟೆಯಲ್ಲಿ ಯಾವುದೇ ಖಚಿತ ರಾಮಬಾಣ ಔಷಧಿಗಳಿಲ್ಲದ ಈ ಕಾಲದಲ್ಲಿ, ಮೆದುಳನ್ನು ಸದಾ ಕ್ರಿಯಾಶೀಲವಾಗಿಡುವ ಏಕೈಕ ನೈಸರ್ಗಿಕ ಸಾಧನವೆಂದರೆ ನಿರಂತರ ಸಂಭಾಷಣೆ.
ಮಾತನಾಡುವುದು ನಮಗೆ ತೀರಾ ಸಹಜ ಪ್ರಕ್ರಿಯೆಯಾಗಿ ಕಂಡರೂ, ನರವಿಜ್ಞಾನದ ದೃಷ್ಟಿಯಲ್ಲಿ ಅದೊಂದು ಅತ್ಯಂತ ಸಂಕೀರ್ಣ ಜೈವಿಕ ಜಾಲತಾಣದ ವಿಸ್ಮಯಕಾರಿ ಕಾರ್ಯಾಚರಣೆ. ಒಂದು ಸರಳ ವಾಕ್ಯವನ್ನು ಆಡಿ ಮುಗಿಸುವ ಹೊತ್ತಿಗೆ ಮೆದುಳಿನ ಮುಂಭಾಗದಲ್ಲಿ ವಿಷಯದ ಉಗಮವಾಗಿ, ಶಬ್ದಕೋಶದಿಂದ ಸೂಕ್ತ ಪದಗಳು ಆಯ್ಕೆಯಾಗಿ, ವ್ಯಾಕರಣಬದ್ಧ ವಾಕ್ಯ ರಚನೆಯಾಗಿ, ಧ್ವನಿಪೆಟ್ಟಿಗೆಗೆ ಆಜ್ಞೆ ರವಾನೆಯಾಗುತ್ತದೆ. ಈ ಇಡೀ ಪ್ರಕ್ರಿಯೆ ಸೆಕೆಂಡಿನ ನೂರನೇ ಒಂದು ಭಾಗದಲ್ಲಿ ಜರುಗುವಾಗ ಕೋಟ್ಯಂತರ ನರಕೋಶಗಳು ವಿದ್ಯುತ್ ಹಾಗೂ ರಾಸಾಯನಿಕ ಸಂಕೇತಗಳ ಮೂಲಕ ಪರಸ್ಪರ ಸಂವಹನ ನಡೆಸುತ್ತವೆ. ಅಂದರೆ, ಒಂದು ಸಣ್ಣ ಸಂಭಾಷಣೆಯೂ ಸಹ ಮೆದುಳಿಗೆ ದೊರೆಯುವ ಪೂರ್ಣ ಪ್ರಮಾಣದ ಏರೋಬಿಕ್ ವ್ಯಾಯಾಮಕ್ಕೆ ಸಮಾನ. ವಿಜ್ಞಾನದಲ್ಲಿ "ಬಳಸಿ, ಇಲ್ಲವೇ ಕಳೆದುಕೊಳ್ಳಿ'' ಎಂಬ ಪ್ರಸಿದ್ದ ನಿಯಮವಿದೆ. ನಿವೃತ್ತಿಯ ನಂತರ ಹಿರಿಯರು ಮೌನಕ್ಕೆ ಶರಣಾದಾಗ ಈ ನರಸಂಪರ್ಕಗಳು ಜಡವಾಗಿ ಮರೆವು ವೇಗವಾಗಿ ಆವರಿಸುತ್ತದೆ. ಅದೇ ಮುಕ್ತವಾಗಿ ಮಾತನಾಡುವವರಲ್ಲಿ ಈ ಸಂಪರ್ಕಗಳು ಜಾಗೃತವಾಗಿ ಉಳಿದು ಮೆದುಳಿಗೆ ಯುವಾವಸ್ಥೆಯ ಚೈತನ್ಯ ನೀಡುತ್ತವೆ. ಸುಡೊಕು ಅಥವಾ ಕ್ರಾಸ್ವರ್ಡ್ ಆಡುವುದಕ್ಕಿಂತಲೂ ಜೀವಂತ ಮನುಷ್ಯರೊಂದಿಗೆ ಮಾತನಾಡುವುದು ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿ ಜಿಮ್ನಾಸ್ಟಿಕ್ಸ್.
ಮಾತು ಕೇವಲ ಮೆದುಳಿನ ಕಸರತ್ತಿಗೆ ಸೀಮಿತವಾಗಿಲ್ಲ; ಅದೊಂದು ಶ್ರೇಷ್ಠ ಒತ್ತಡ ನಿವಾರಕವೂ ಹೌದು. ಮನಸ್ಸಿನ ಅನಿಸಿಕೆ ಮತ್ತು ಆತಂಕಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ಒಳಗೇ ಅದುಮಿಟ್ಟುಕೊಂಡರೆ ಅದು ಉಸಿರುಗಟ್ಟುವ ಸ್ಥಿತಿಯನ್ನು ನಿರ್ಮಿಸಿ ಖಿನ್ನತೆಗೆ ದೂಡುತ್ತದೆ. ಅದೇ ಆಪ್ತರೊಂದಿಗೆ ಮನಬಿಚ್ಚಿ ಹರಟುವಾಗ ದೇಹದಲ್ಲಿ 'ಎಂಡಾರ್ಫಿನ್' ಹಾರ್ಮೋನ್ಗಳು ಸ್ರವಿಸಿ ಮಾನಸಿಕ ಒತ್ತಡ ಕರಗುತ್ತದೆ. ಜೊತೆಗೆ ಮಾತನಾಡುವಾಗ ಮುಖದ ಹತ್ತಾರು ಸ್ನಾಯುಗಳು, ಗಂಟಲು ಹಾಗೂ ಧ್ವನಿಪೆಟ್ಟಿಗೆಗೆ ಚಲನೆ ಸಿಗುವುದಲ್ಲದೆ, ಆಳವಾದ ಉಸಿರಾಟದಿಂದ ಶ್ವಾಸಕೋಶದ ಸಾಮರ್ಥ್ಯವೂ ವೃದ್ಧಿಸುತ್ತದೆ. ಇದು ರಕ್ತಸಂಚಾರವನ್ನು ಸಮತೋಲನದಲ್ಲಿಟ್ಟು ತಲೆಸುತ್ತು, ದೃಷ್ಟಿ ಮತ್ತು ಕಿವಿ ಮಂದವಾಗುವ ಅಪಾಯಗಳನ್ನು ತಗ್ಗಿಸುತ್ತದೆ.
ನಿವೃತ್ತಿ ಎಂದರೆ ಬದುಕಿನ ಮುಕ್ತಾಯವಲ್ಲ, ಹೊಣೆಗಾರಿಕೆಗಳಿಂದ ಮುಕ್ತಿ ಪಡೆದು ಹೊಸದಾಗಿ ಬದುಕಲು ಸಿಗುವ ಸುಂದರ ಅವಕಾಶ. ಸಕ್ರಿಯ ಜೀವನ ಇದ್ದಕ್ಕಿದ್ದಂತೆ ಕಡಿದುಹೋದಾಗ ಉಂಟಾಗುವ ನಿರ್ವಾತವನ್ನು ತುಂಬಲು ಮಾತು ಮತ್ತು ಸಂವಹನವೇ ಅತಿ ದೊಡ್ಡ ಇಂಧನ. ಸಮಾನ ವಯಸ್ಕರೊಂದಿಗೆ ಕಷ್ಟ-ಸುಖ ಹಂಚಿಕೊಳ್ಳುವುದು, ಕುಟುಂಬದ ಚರ್ಚೆಗಳಲ್ಲಿ ಭಾಗಿಯಾಗಿ 'ನಾನೂ ಈ ಮನೆಯ ಸಕ್ರಿಯ ಭಾಗ' ಎಂದು ಭಾವಿಸುವುದು, ಹಾಗೂ ಮುಗ್ಧ ಮಕ್ಕಳೊಂದಿಗೆ ಕಥೆ ಹೇಳುತ್ತಾ ಬೆರೆಯುವುದು ಹಿರಿಯರನ್ನು ಸದಾ ಚೈತನ್ಯದಿಂದ ಇಡುತ್ತದೆ.
ಇಲ್ಲಿ ಮನೆಯವರ ಹೊಣೆಗಾರಿಕೆಯೂ ದೊಡ್ಡದಿದೆ. ಹಿರಿಯರು ಮಾತನಾಡುವಾಗ ಅದರಲ್ಲಿ ಪುನರಾವರ್ತನೆ ಇರಬಹುದು, ಹಳೆಯ ಕಥೆಗಳೇ ಮತ್ತೆ ಬರಬಹುದು; ಆದರೆ ಅದನ್ನು ತಾಳ್ಮೆಯಿಂದ ಆಲಿಸುವ ಕೌಶಲವನ್ನು ಮನೆಯವರು ಬೆಳೆಸಿಕೊಳ್ಳಬೇಕು. ಹಿರಿಯರಿಗೆ ಬೇಕಾಗಿರುವುದು ಉಪದೇಶವಲ್ಲ, ತಮ್ಮ ಮಾತಿಗೆ ಸಿಗುವ ಮನ್ನಣೆ ಮತ್ತು ಒಂದು ಸಹಾನುಭೂತಿಯ ಕಿವಿ. ದಿನದ ಸುದ್ದಿಗಳನ್ನು ಅವರೊಂದಿಗೆ ಹಂಚಿಕೊಂಡು ಮಾತನಾಡಲು ನಾವೇ ಪ್ರೇರೇಪಿಸಬೇಕು. ಮೌನ ಆವರಿಸಿದಾಗ ಆಲೋಚನೆಗಳು ನಿಶ್ಚಲವಾಗಿ ಮನಸ್ಸು ಮಂಕಾಗುತ್ತದೆ. ಹಿರಿಯರ ಮುಕ್ತ ಮಾತು ಕೇವಲ ಶಬ್ದವಲ್ಲ, ಅದು ಅವರ ಮಾನಸಿಕ ಆರೋಗ್ಯದ ಕವಚ ಮತ್ತು ದೀರ್ಘಾಯುಷ್ಯದ ರಹಸ್ಯ. ಮನೆಯಲ್ಲಿ ಹಿರಿಯರ ಮಾತುಗಳು ನಿರಂತರವಾಗಿ ಪ್ರತಿಧ್ವನಿಸುತ್ತಿರಲಿ, ಅದೇ ಆ ಮನೆಯ ನಿಜವಾದ ಚೈತನ್ಯ.
