
Article · October 31, 2026
ಕಾಲದ ಮೌಲ್ಯ
By ಗಾಯತ್ರಿ ನಾಗರಾಜ
ಗಾಯತ್ರಿ ಕೆ ಅಡ್ಕತೊಟ್ಟಿ
ಮನದ ಬೆಸುಗೆಯ ದಾರವೆಲ್ಲೋ ಕಿತ್ತು ಹೋಗಿಹುದಲ್ಲ
ಒಲವಿನ ಮಾತಿಗೀಗ ಹಳೆಯ ಗಂಧವೆ ಇಲ್ಲ.
ಕೈ ಹಿಡಿದು ನಡೆದ ನಂಬಿಕೆಯೇ ಮಸುಕು
ಬಂಧಗಳೆಂಬುದು ಬರೀ ಹೆಸರಿನದೇ ನಂಟು
ಲಕ್ಷ್ಮಿಯ ಒಡಲಿನ ಮುಂದೆ ನರನು ಸಣ್ಣವನಾದ,
ಅಂತಸ್ತಿನ ತೆರೆಮರೆಯಲಿ ಹೃದಯ ತೊರೆದೇ ಹೋದ
ಕರುಣೆಯ ದೀಪವದು ಆಸೆಯಲಿ ನಂದಿಹೋಯಿತು,
ಮನುಷ್ಯನನ್ನು ಕಾಣಲು ಮನುಷ್ಯನೇ ಮರೆತು ಹೋಯಿತು.
ಕಾಸು ತುಂಬಿದ ಕೈಗಳವನ ಒಣ ಮಾತಿಗೂ,
ಜನಸಾಗರವೇ ತಲೆದೂಗುವ ಕಾಲವಿದು.
ಸತ್ಯವಲ್ಲದಿದ್ದರೂ ಸರಿ, ಜನ ಜೈ ಎನ್ನುವರು,
ಅವನ ತಪ್ಪಿಗೂ ಕೂಡಾ ಹೊಸ ಅಲಂಕಾರ ಹುಡುಕುವರು.
ಅತ್ತ ಮೂಲೆಯಲ್ಲಿ ಕುಳಿತ ಮುಗ್ಧ ವಿವೇಕಿ,
ಲೋಕದ ಹಿತಕ್ಕಾಗಿ ನುಡಿಯನು ಹೆಣೆದರೂ.
ಯಾರ ಕಿವಿಗೂ ಬೀಳದು ಅವನ ಮೌನದ ಕೂಗು,
ಕಸದ ತೊಟ್ಟಿಯ ಸೇರುವುದು ಅವನ ಅನುಭವದ ಹೂವು.
ಒಲವು ಮಾರಾಟಕ್ಕಿದೆ, ಗುಣ ಅಡವೀನಧೀನ
ಮಾತಿಗೆ ಬೆಲೆಯಿಲ್ಲ, ಮೌನಕ್ಕೆ ಅರ್ಥವಿಲ್ಲ.
ಇಂತಹ ಕಾಲದಲ್ಲಿ ನಾವಿನ್ನು ಬದುಕಬೇಕಿದೆ,
ಕಳೆದುಹೋದ ಮನುಷ್ಯತ್ವವನ್ನು ಮತ್ತೆ ಹುಡುಕಬೇಕಿದೆ.
Creative Writings
