Karada Vishwa

Article · September 20, 2026

ಮಂತ್ರದಿಂದ ಮಾವಿನಕಾಯಿ ಉದುರೀತೆ!?

By ಶಾರದಾ ಕಜೆಗದ್ದೆ ಬಾಯಾರು

ಶಾರದಾ ಕಜಕದ್ದೆ

ನಾರಾಯಣೀಯಂ ಅನುಭವಾಮೃತ

ಕೇರಳದ ಶ್ರೇಷ್ಠ ಕೃತಿ ನಾರಾಯಣೀಯಂ ಅನ್ನು ಓದಬೇಕು ಎಂಬ ಹಂಬಲ ಮನದಾಳದಲ್ಲಿತ್ತು. ಆದರೆ ಅದು ಮಲಯಾಳಂ ಭಾಷೆಯಲ್ಲಿರಬಹುದೇನೋ ಎಂಬ ಸಂಶಯವಿತ್ತು. ಪುಸ್ತಕ ತೆರೆದು ನೋಡಿದರೆ ಸಂಸ್ಕೃತ ಭಾಷೆ. ಹಾಗಾಗಿ ಓದಬಹುದೆಂಬ ದೃಢತೆ ಬಂತು. ಓದಲು ಹೊರಟರೆ ಉಳಿದ ಸಂಸ್ಕೃತ ಶ್ಲೋಕಗಳಂತೆ ಇದಲ್ಲ ಎಂದೆನಿಸಿತು. Online class ಮುಖಾಂತರ ನಾರಾಯಣೀಯಂ ಪಾಠ ಶುರು ಮಾಡುವರೆಂಬ ವಿಷಯ ತಿಳಿದು ಅವಕಾಶ ಅದಾಗಿಯೇ ಒದಗಿ ಬಂದಿದ್ದಕ್ಕೆ ತುಂಬ ಹಿತವೆನಿಸಿತು.

ಒಂದಾರು ತಿಂಗಳುಗಳ ನಿರಂತರ online ತರಗತಿಯಿಂದಾಗಿ ನಾರಾಯಣೀಯಂ ಓದಲು ತಕ್ಕಮಟ್ಟಿಗೆ ತಿಳಿದುಕೊಂಡೆ. ರಾಮಾಯಣ, ಮಹಾಭಾರತಗಳಲ್ಲದೆ ವಿಶೇಷವಾಗಿ ಏನಿರಬಹುದು ಎಂಬ ಕುತೂಹಲವಿತ್ತು. ರಾಮಾಯಣ, ಮಹಾಭಾರತಗಳನ್ನು ಹೆಚ್ಚಿನವರೆಲ್ಲರೂ ಕಥಾ ರೂಪದಲ್ಲಿ ಓದಿರುತ್ತೇವೆ. ಆದರೆ ನಾರಾಯಣೀಯಂ ನಲ್ಲಿ ನಮಗೆ ಅದಾಗಲೇ ತಿಳಿದಿರುವ ನಾರಾಯಣವತಾರಗಳನ್ನು ಕಾವ್ಯಾತ್ಮಕವಾಗಿ, ಛಂದೋಬದ್ಧವಾಗಿ ಅತ್ಯಂತ ಸುಂದರವಾಗಿ, ಭಕ್ತಕವಿ ಮೆಪ್ಪತ್ತೂರು ನಾರಾಯಣ ಭಟ್ಟತಿರಿಯವರು ನೂರು ಸರ್ಗಗಳಲ್ಲಿ ಅಂದಾಜು 1040 ಶ್ಲೋಕಗಳ ಮುಖಾಂತರ ವಿವರಿಸಿದ್ದಾರೆ. ಅಕ್ಷರಸಂಖ್ಯೆಗಳ ಆಧಾರದಲ್ಲಿರುವ ವಿವಿಧ ಸಂಸ್ಕೃತ ಛಂದಸ್ಸುಗಳಿಂದ ಬೇರೆ ಬೇರೆ ದಶಕಗಳನ್ನು ಅಲಂಕರಿಸಿದ್ದಾರೆ ಕವಿಗಳು. ಇಂಥ ಅಪೂರ್ವ ಛಂದಸ್ಸುಗಳಿಗನುಸಾರವಾಗಿ ಸರಳಸುಂದರ ರಾಗಗಳನ್ನು ಸಂಯೋಜಿಸಿ ಕಾವ್ಯಾತ್ಮಕವಾಗಿ ಓದಲು ಕಲಿಸಿರುವುದು ಒಂದು ಸುವರ್ಣಾವಕಾಶ.

ಅದಾಗಲೇ ಓದಿರುವ ಕಥೆಯ ಇನ್ನೊಂದು ರೂಪ ಇದು ಅಷ್ಟೇ ಎಂದು ಶುರುಶುರುವಿಗೆ ಕೊಂಚ ನಿರಾಶೆಯಾದರೂ ಒಂದೊಂದೇ ದಶಕಗಳನ್ನು ಮುಂದುವರಿಸಿದಂತೆ ಕವಿಯ ಭಾಷಾ ಪಾಂಡಿತ್ಯ, ವ್ಯಾಕರಣದ ಅಗಾಧ ಜ್ಞಾನ, ಪುರಾಣ ಕಥೆಗಳನ್ನ ಪ್ರಸ್ತುತಪಡಿಸುವ ಅದ್ಭುತ ಶೈಲಿ ಅನಾವರಣವಾಗುತ್ತಾ ಹೋದಂತೆ ದಿನಕಳೆದಂತೆ ಆಸಕ್ತಿಯೊಂದಿಗೆ ಆಶ್ಚರ್ಯವಾಗುತ್ತಿತ್ತು.

ಒಂದಷ್ಟು ದಶಕಗಳು ಓದಿಸಿಯಾದಮೇಲೆ ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದಾಗ ಹೆಚ್ಚಿನವರೆಲ್ಲರ ಉತ್ತರ ಮಲಗಿದ ತಕ್ಷಣವೇ ಚೆನ್ನಾಗಿ ನಿದ್ದೆ ಬರುತ್ತದೆ ಅನ್ನುವುದಾಗಿತ್ತು. ಹಾಸ್ಯಾಸ್ಪದ ಅನ್ನಿಸಿದರೂ ಆರೋಗ್ಯದ ಮೊದಲ ಗುಟ್ಟೇ ಚಂದದ ಗಟ್ಟಿ ನಿದ್ದೆ.
ಯೋಚನೆ ಮಾಡಿ ಯಾವ ಒತ್ತಡವಿಲ್ಲದೆ, ಸ್ವಂತ ಆಸಕ್ತಿಯಿಂದ, ಗುರುಗಳು ಓದಿದ್ದು ಕೇಳುತ್ತಾ, ಅದನ್ನೇ ವಿದ್ಯಾರ್ಥಿಗಳೆಲ್ಲ ಆ ಕೂಡಲೇ ಪ್ರಸ್ತುತ ಪಡಿಸುತ್ತಾ, ರಾಗೋಚ್ಚಾರಗಳಲ್ಲಿ ತಪ್ಪಿದ್ದರೆ ತತ್ಕ್ಷಣವೇ ಸರಿಪಡಿಸುತ್ತಾ, ಪರೀಕ್ಷೆ, ಅಂಕಗಳು, ಪಾಸು ನಪಾಸುಗಳಂಥ ಯಾವ ಬಾಹ್ಯ ಒತ್ತಡ, ಹೇರಿಕೆಗಳಿಲ್ಲದೆ ಅತ್ಯಂತ ಸಂಯಮ ಸಮಾಧಾನದಿಂದ, ಗುರುಕುಲ ಮಾದರಿಯಲ್ಲಿ ಪುರಾಣ ಕಥೆಯನ್ನು ಒಂದು ಗಂಟೆಯ ಕಾಲ ಹಾಗೇ ಕೇಳುತ್ತ ಓದುತಿದ್ದರೆ ಮನಸ್ಸಿನ ತಳಮಳ,ದುಃಖ, ಚಿಂತೆಗಳಂಥ ಎಲ್ಲ ತಾಪತ್ರಯಗಳನ್ನು ಮರೆತು ಎಂಥವನಿಗಾದರೂ ಆ ತಾದಾತ್ಮ್ಯತೆಯಲ್ಲಿ ನೆಮ್ಮದಿಯ ನಿದ್ದೆ ಖಂಡಿತವಾಗಿಯೂ ಸಿಕ್ಕೀತು. ಇಂದಿನ ಈ ಅತೀ ಒತ್ತಡದ ಜೀವನ ಜಂಜಾಟದಲ್ಲಿ ಇಂಥಾ ಭಾಗ್ಯ ಬೇರೆ ಬೇಕೇ.

ಈ ಪ್ರಕ್ರಿಯೆಯನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸಿದರೆ ಯಾಕೆ ಮನಸ್ಸಿಗೆ ನೆಮ್ಮದಿ ದೊರಕುತ್ತಿತ್ತು ಎಂಬುದು ಅರ್ಥವಾಗುತ್ತದೆ. ಒಂದು ಗಂಟೆಯ ಕಾಲ ಏಕಾಗ್ರ ಚಿತ್ತದಿಂದ, ಯಾವ ಒತ್ತಡವಿಲ್ಲದೆ, ಸುಖಾಸನಭಂಗಿಯಲ್ಲಿ ಕುಳಿತು, ಹೊಸಹೊಸ ಶ್ಲೋಕಗಳನ್ನು ಆಸಕ್ತಿಯಿಂದ ಕೇಳುತ್ತಾ, ತಪ್ಪುಗಳಾದರೂ ಭಯದ ಒತ್ತಡವಿಲ್ಲದೆ ಸರಿಮಾಡಿಕೊಂಡು ರಾಗಬದ್ಧವಾಗಿ ಉಚ್ಚಕಂಠದಲ್ಲಿ, ಉತ್ಸಾಹದಿಂದ ಸಂಸ್ಕೃತ ಶ್ಲೋಕಗಳನ್ನು ಪಠಿಸಿದರೆ ದೇಹ, ಮನಸ್ಸು, ಹೃದಯ, ಶ್ವಾಸಕೋಶಗಳಿಗೆ ಸರಿಯಾದ ವ್ಯಾಯಾಮ ದೊರೆತು ನೆಮ್ಮದಿ ಸಿಗುವುದರಲ್ಲಿ ಖಂಡಿತ ಸಂಶಯವಿಲ್ಲ ಅಲ್ಲವೇ.

Creative Writings