
Article · August 19, 2026
ಹೃದಯದೊಳು ಮಿನುಗು ತಾರೆ .
By ಜಯಶ್ರೀ . ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಒಬ್ಬ ಸಮಾಜ ಸೇವಕ ಜನಮಾನಸದಲ್ಲಿ ಶಾಶ್ವತವಾಗಿ ನಿಲ್ಲಬಲ್ಲ..!
ಎಲ್ಲಿ ಹೋದೆಯೋ ನೀನು
ಹೇಳು ಓ ಸರದಾರ
ಬೇಸರವು ಬಂತೇನು ಸೇತುವೆಯ ಕಟ್ಟಿ ?
ಇನ್ನಷ್ಟು ಸಮಯ ನೀ
ಇರಲೇಬೇಕಿತ್ತಿಲ್ಲಿ
ಕಟ್ಟಬಹುದಿತ್ತು ಸೇತುವೆಗಳ ಇನ್ನಷ್ಟು ಗಟ್ಟಿ /
ಮರಣವೆಂಬುದು ಜಗದಿ
ಹೊಸ ವಿಷಯವೇನಲ್ಲ
ಸಾಮಾನ್ಯವಾದ ಸಂಗತಿಯು /
ಹಳತು ಅಂಗಿಯ ಕಳಚಿ
ಹೊಸತೊಂದು ತೊಟ್ಟಂತೆ
ಎಲ್ಲರಿಗೂ ಬರುವುದೀ ಸ್ಥಿತಿಯು /
ಹರಿವ ನದಿ, ಹೊಳೆ, ತೋಡು,
ಎರಡು ದಡಗಳ ಮತ್ತೆ
ಸೇರಿಸುವ ಕಾಯಕವು ಬಾಕಿ ಇಹುದು/
ಅದಕಾಗಿ ದೇವರಲಿ
ಪ್ರಾರ್ಥನೆಯ ಮಾಡಿದರೆ,
ಹೊಸರೂಪ , ಹೊಸ ಜನ್ಮ ನೀಡಬಹುದು /
ದೇಹ ಶಾಶ್ವತವಲ್ಲ,
ಆತ್ಮ ನಶ್ವರವಲ್ಲ,
ಆತ್ಮನೆಂಬುದು ದೇವನಂಶವಿಹುದು /
ಹೃದಯಗಳ ಬೆಸೆದವನು
ಶೃಂಖಲೆಯ ಬಿಗಿತವನು
ಮತ್ತಷ್ಟು ಬಿಗಿಗೊಳಿಸೆ ಕಳಿಸಬಹುದು/
ಹೊಸ ಹೊಸತು ನಿಲುವಂಗಿ
ತೊಟ್ಟು ಬರುವಂತಿರಲಿ,
ನಿನಗಾಗಿ ಕಾಯುತಿದೆ ಮತ್ತೀ ಧರೆ /
ದೂರ ನೀ ಹೋಗಿಲ್ಲ
ಎಲ್ಲರೊಳಗಿಹೆಯಲ್ಲ?
ಹೃದಯದಂಗಳದಲ್ಲಿ ಮಿನುಗು ತಾರೆ!
Creative Writings
