Karada Vishwa

Article · May 23, 2026

ಆರಿದ ದೀಪ

(ಕವಿತೆ ) - ಸಂಧ್ಯಾ ಕೊರೆಕ್ಕಾನ

ಆರಿ ಹೋಗಿದೆ ತೈಲ ನಂದಿಹೋಯಿತು ದೀಪ 
ಇರುಳ ದಾರಿಯ ನಡುವೆ ನಡೆಯಲೆಂತು 
ಸುತ್ತಕೇಳುವ ದನಿಯು ಬಿತ್ತರಿಸಿ ಹೇಳುತಿದೆ
ಎತ್ತ ಹೋಗುವೆಯಯ್ಯ ಗತಿಯಾರು ಇಲ್ಲ 

ತುತ್ತನೀಡಿದ ಕೈಯ ಕತ್ತರಿಸಿ ಬಿಟ್ಟಿರಲು
ಎತ್ತಿನಿಲಿಸುವರಾರು ಕತ್ತಲಿನವೊಳಗೆ
ಕಿತ್ತು ಹೋಗಿರುವುದನು ಹೊಲಿದು ಕೊಡುವರು ಯಾರು
ದಾರಸೂಜಿಯು ದೂರದೂರವಾಗೆ 

ಅತ್ತಕಂಗಳ ನೀರು ಒರೆಸುವರು ಯಾರಿಲ್ಲ 
ಬೆತ್ತಲಾಗಿದೆ ಜೀವ ವಸನ ಧರಿಸಿದರು 
ಮುತ್ತಿರುವ ನಿಶೆಯನ್ನು ದೂರಮಾಡುವ ಬೆಳಕು 
ಹೊತ್ತು ತರುವನು ಯಾರು ಈ ದಿನದಲಿ 


Creative Writings
ಆರಿದ ದೀಪ