
Article · May 26, 2026
ಒಂದೇ ಚಿಂತೆ
- ವೀಣಾ ಎಂ. ಭಟ್
ಅಂತೆ ಕಂತೆಯ ಸಂತೆ ಜಗದಿ ಬಿತ್ತುವರಂತೆ
ಬಿತ್ತಿ ಮೇಲಿನ ಮಾತು ನಮಗ್ಯಾಕೆ ಬೇಕಂತೆ
ಹಲವು ನಾಲಗೆಯಲ್ಲಿ ನುರಿತ ಮಾತಿನ ಕಂತೆ
ಜನ ಗಡಣದಲಿ ಭರದಿ ಹರಿವ ನದಿಯಂತೆ
ಉರಿವ ಜ್ವಾಲೆಗೆ ತುಪ್ಪ ಧಾರೆಯ ಸುರಿಸುರಿದು
ಅಳುವ ಜೀವಕೆ ತುಂಬು ನೋವನುಣಿಸುತಿದೆ
ಮಾತಿಲ್ಲದೆ ಹೃದಯ ಮೌನರಾಗವ ಹಾಡಿ
ನೀತಿ ಬಾಳಿನ ಹಾದಿಯಲಿ ಮುಳ್ಳನು ಕೂಡಿ
ನಿತ್ಯ ನಿರ್ಮಲ ಚಿತ್ತ ಬಿತ್ತಿ ಬೀಜದ ಕದಿರು
ಸುತ್ತೆಲ್ಲ ತುಂಬಿಹುದು ಚಿಗುರೆಲೆಯ ಹಸಿರು
ಮಾತಿನ ತುಣುಕಲ್ಲಿ ಕಟು ಸತ್ಯ ಅಡಗಿರಲಿ
ನೋವ ನೀಡುವ ಗಾಳಿ ಮಾತು ವಿರಮಿಸಲಿ
ರಾಮನಾಮವ ಜಪಿಸದ ನಾಲಗೆಯ ಫಲವೇನು
ಶ್ಯಾಮನೊಲುಮೆ ಇರದ ಬಾಳು ಹಸನೇನು
ಸೋಮಶೇಖರನ ಭಜಿಸಿ ಸಿಗುವುದು ಚೈತನ್ಯ
ಕಾಮಿತಾರ್ಥವ ನೀಡಿ ಸಲಹು ಗಿರಿಜಾರಮಣ
Creative Writings
