
Article · November 18, 2025
ನೆರಳು
--ದಿವ್ಯಾ ಶಿರಂತಡ್ಕ
ಕಷ್ಟ ಕಾರ್ಪಣ್ಯಗಳ ಬಿಸಿಲಲ್ಲಿ ಬೆಂದು
ನೆರಳಿನಾಶ್ರಯವನು ಕಲ್ಪಿಸುತ ಅಂದು
ಮಕ್ಕಳಿಲ್ಲದ ಕೊರಗ ಮರೆಯಲೆಂದು
ಗಿಡಗಳನು ನೆಟ್ಟಳಾ ಮಾತೆ ತಿಮ್ಮಕ್ಕ...
ಚಿಕ್ಕಯ್ಯನೆಂಬ ದೊಡ್ಡ ಮನಸ್ಸಿನ ಪತಿಯ
ಜೊತೆಗೂಡಿ ನೆಟ್ಟಳು ಆಲದ ಸಸಿಯ
ಬಲು ದೂರದಿಂ ನೀರು ತಂದದಕೆ ಉಣಿಸಿ
ಸಂರಕ್ಷಿಸಿದಳು ಅದನು ಮಾತೆ ತಿಮ್ಮಕ್ಕ...
ಶಾಲೆಯ ಮೆಟ್ಟಿಲನು ಹತ್ತದಿದ್ದರೂ ಕೂಡ
ಚಿಣ್ಣರಿಗೆ ಪಠ್ಯವೇ ಆದಳಾಕೆ..
ನೆರಳಿನಾಸರೆ ಕೊಡುವ ಆಲದ ತರುಗಳನು
ಮುದ್ದಿಂದ ಬೆಳೆಸಿದಳು ಮಾತೆ ತಿಮ್ಮಕ್ಕ..
ವೃದ್ಧಾಪ್ಯ ಬಂದಾಗ ಕೈಬಿಡುವ ಮಕ್ಕಳು
ಈ ಲೋಕದೊಳು ಇಹರೆಷ್ಟೋ ಮಂದಿ..
ತನ್ನ ನೋವಿಗೆ ಮುನಿಯದೆ ಮರುಗದೆ
ಮಾದರಿಯಾಗಿಹಳು ಮಾತೆ ತಿಮ್ಮಕ್ಕ..
ತುಂಬ ಜೀವನದಿ ಪರಿಸರವ ಪ್ರೀತಿಸುತ
ಅದರಲ್ಲೇ ಸುಖವನ್ನು ಕಂಡಳಾಕೆ..
ಸಾಲುಮರಗಳನು ಸಾಕಿ ಸಲುಹಿದ ಕಾರಣ
ವೃಕ್ಷಮಾತೆಯೆ ಆದಳು ನಮ್ಮತಿಮ್ಮಕ್ಕ..
...ಸಾಗರಿ
-------------------------------------------------------------------------------------------
ಕವಿಯ ಕಿರುಪರಿಚಯ -
ದಿವ್ಯಾ ಬಿ. ಶಿರಂತಡ್ಕ - ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ. ಗೃಹಕೃತ್ಯದ ಜೊತೆಗೆ ಮನೆಯಲ್ಲೇ ಲೆಕ್ಕಪತ್ರ ಹಾಗೂ ತೆರಿಗೆ ಸಂಬಂಧಿ ಕೆಲಸ ನಿರ್ವಹಣೆ. ಕಥೆ, ಕವನ, ಹಾಸ್ಯಲೇಖನ, ಇನ್ನಿತರ ಬರಹಗಳಲ್ಲಿ ಆಸಕ್ತಿಯಿಂದ ಕೃಷಿ ಮಾಡುತ್ತಾ 'ಕರಾಡ ವಾಣಿ' ಮಾಸ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಣೆ. ಸಮಾಜಮುಖಿ ಕೆಲಸಗಳಲ್ಲಿ ಆಸಕ್ತೆ.

Creative Writings
