Karada Vishwa

Article · October 31, 2026

ಕಾಯುವಿಕೆಯಲ್ಲಿದೆ ಹಿತವಾದ ಸುಖ

By ದಿವ್ಯಾ ಶಿರಂತಡ್ಕ

ದಿವ್ಯಾ ಬಿ ಶಿರಂತಡ್ಕ

ರಾಮಾಯಣದಲ್ಲಿ ಬರುವ ಒಂದು ಬಹುಮುಖ್ಯ ಪಾತ್ರ ಶಬರಿಯದು. ಆಕೆ ತನ್ನ ಜೀವನದ ಸುದೀರ್ಘ ಕಾಲವನ್ನು ರಾಮನ ದರ್ಶನವನ್ನು ನಿರೀಕ್ಷಿಸುತ್ತಲೇ ಕಳೆಯುತ್ತಿರುತ್ತಾಳೆ. ಇಂದು ಇಲ್ಲವೇ ನಾಳೆ ರಾಮ ಬಂದೇ ಬರಬಹುದು ಎನ್ನುವ ಬಲವಾದ ನಂಬಿಕೆಯೇ ಆಕೆಯ ಕಾಯುವಿಕೆ ಸಹನೀಯಗೊಳಿಸಿದ್ದು ಎನ್ನಬಹುದು. ಅಲ್ಲದೆ ಪ್ರತಿದಿನದ ಕಾಯುವಿಕೆಯಲ್ಲಿ ಅವಳಿಗೆ ವಿಶೇಷ ಆದರ, ಆಸಕ್ತಿ, ಕಾತರವಂತೂ ಇದ್ದಿರಬೇಕು.

ಮೇಲಿನದ್ದು ತ್ರೇತಾಯುಗದ ಉದಾಹರಣೆಯಾದರೂ ದೀರ್ಘ ತಪಸ್ಸು ಒಳ್ಳೆಯ ಫಲ ನೀಡಿದಾಗ, ಕಾಲ ಯಾವುದಾದರೂ ಮನಸ್ಸು ಮುದಗೊಳ್ಳುತ್ತದೆ .ಆಕೆ ತನ್ನ ಜೀವನದುದ್ದಕ್ಕೂ ಕೂಲಿ ಮಾಡಿ ಸಂಸಾರ ನಡೆಸಿದವಳು. ಅವಳಿಗೆ ಕೂಲಿಯಾಗಿ ಸಿಗುತ್ತಿದ್ದುದು ದಿನಕ್ಕೆ ಇಂತಿಷ್ಟು ಭತ್ತ. ಸಣ್ಣ ಪ್ರಾಯದಲ್ಲೇ ವಿಧವೆಯಾಗಿದ್ದ ಆಕೆಯ ಜೊತೆ ನಾಲ್ಕೈದು ಹೆಣ್ಣು ಮಕ್ಕಳು. ಅವರು ಬೀಡಿ ಕಟ್ಟಿ ಒಂದಷ್ಟು ದುಡಿದದ್ದು ಮೇಲ್ಖರ್ಚಿಗೆ. ಹೆಣ್ಣು ಮಕ್ಕಳನ್ನೆಲ್ಲ ಹೇಗೋ ಕಷ್ಟಪಟ್ಟು ಮದುವೆ ಮಾಡಿಸಿ ಸುರಕ್ಷಿತ ದಡ ಮುಟ್ಟಿಸಿದ್ದಳು. ಅನಂತರದ ವರ್ಷಗಳಲ್ಲಿ ಭತ್ತದ ಬದಲಿಗೆ ಕೂಲಿಯಾಗಿ ಹಣವೇ ಕೈ ಸೇರುತ್ತಿತ್ತು. ಅದರಲ್ಲೇ ಒಂದಷ್ಟು ಉಳಿತಾಯ. ಸರಿಪ್ರಾಯದಲ್ಲಿ ತನ್ನೆರಡು ಕೈಗಳಿಗೆ ಬಂಗಾರದ ಬಳೆ ಮಾಡಿಸಿ ಹಾಕಬೇಕೆಂಬ ಮನದಾಳದ ಆಸೆಯೊಂದು‌ ಒಳಗೊಳಗೆ ಹಾಗೆಯೇ ಜೀವಂತವಾಗಿತ್ತು. ಕೊನೆಗೂ ಆಕೆಯ ಆಸೆ ಫಲಿಸಿ ಆರು ದಶಕಕ್ಕಿಂತಲೂ ಹೆಚ್ಚು ದುಡಿದ ಕೈಗಳೊಳಗೆ ಎರಡು ಬಂಗಾರದ ಬಳೆಗಳು ಸೇರಿ ಕುಳಿತಾಗ ಕೈಗಳ ಚರ್ಮ ಸುಕ್ಕುಗಟ್ಟಿದ್ದರೂ ಮುಖದಲ್ಲಿ ಅವರ್ಣನೀಯ ಸಂತೃಪ್ತಿ ಎದ್ದು ಕಾಣುತ್ತಿತ್ತು. ಕಾಯುವಿಕೆಯ ಶಕ್ತಿಯೇ ಅಂತಹದು.

ಮೊನ್ನೆ ಯಾವುದೋ ಸಮಾರಂಭದಲ್ಲಿ ಸಿಕ್ಕಿ ಪರಿಚಯವಾದ ನವ ದಂಪತಿಗಳ ಕಂಗಳಲ್ಲಿ ವಿಶೇಷ ಹೊಳಪು ದ್ವಿಗುಣಗೊಂಡಿದೆಯೇನೋ ಎಂದೆನಿಸಿತ್ತು. ಮಾತನಾಡುತ್ತಾ ಇದ್ದಂತೆ 17 ವರ್ಷಗಳಷ್ಟು ದೀರ್ಘ ಅವಧಿಯ ಅವರ ಪ್ರೇಮ ತಪಸ್ಸಿನಂತೆ ಫಲ ನೀಡಿ ವೈವಾಹಿಕ ಬಂಧನಕ್ಕೆ ಒಳಪಟ್ಟಿದ್ದರು ಎಂದು ತಿಳಿದಾಗ ಆ ಕಣ್ಣಿನ ಹೊಳಪು ನನಗೆ ಅರ್ಥವಾಗಿಬಿಟ್ಟಿತು.

ಹಿಂದಿನ ಕಾಲದಲ್ಲಿ ರೇಡಿಯೋ, ಟಿವಿ, ವಾಹನ ಮುಂತಾದವುಗಳನ್ನು ಖರೀದಿಸಬೇಕು ಎಂದರೆ ತಿಂಗಳುಗಟ್ಟಲೆ ಮೊದಲೇ ಬುಕ್ ಮಾಡಬೇಕಿತ್ತು. ಕೆಲವೊಮ್ಮೆ ವರ್ಷ ಕಳೆದ ಮೇಲಷ್ಟೇ ಅದು ಕೈ ಸೇರುತ್ತಿತ್ತು. ಆದರೂ ಆಗ ಸಿಗುತ್ತಿದ್ದ ಖುಷಿ ಕ್ಷಣಾರ್ಧದಲ್ಲಿ ಮನೆ ಸೇರುವ ಈಗಿನ ವಸ್ತುಗಳಿಗಿಂತ ಅದೆಷ್ಟೋ ಪಾಲು ಜಾಸ್ತಿ! ನಾವು ಸಣ್ಣವರಿರುವಾಗ ಅಜ್ಜಿ ಮನೆಗೆ ಬಂದರೆ ಅಪರೂಪಕ್ಕೆ ಅಜ್ಜ ಪೇಟೆಗೆ ಹೋಗುವಾಗ ಅವರ ಜೊತೆ ನಡೆದುಕೊಂಡೇ ಹೋಗುತ್ತಿದ್ದೆವು. ಪೇಟೆಯ ಕೆಲಸ ಮುಗಿಸಿ ಮನೆಗೆ ವಾಪಸಾಗುವಾಗ ಅವರು ಖರೀದಿಸುತ್ತಿದ್ದ ಹತ್ತಿಪ್ಪತ್ತು ರೂಪಾಯಿಯ ಗೋಳಿಬಜೆಯ ಸುತ್ತಲೇ ನಮ್ಮ ಮನಸ್ಸು ಸುತ್ತುತ್ತಿತ್ತು. ಮನೆ ತಲುಪಿದಾಗ ತಿನ್ನುವ ಬಾಯಿಗಳು ಅದೆಷ್ಟೋ. ಎಲ್ಲರಿಗೂ ಹಂಚಿದಾಗ ಕೈ ಸೇರುತ್ತಿದ್ದುದು ಕೇವಲ ಎರಡೇ ಗೋಳಿಬಜೆ. ಆಗ ಅಜ್ಜಿಯೋ ಅಜ್ಜನೋ ಅವರ ಪಾಲಿನ ಅರ್ಧವೋ ಒಂದು ಗೋಳಿಬಜೆಯೋ ಕೊಟ್ಟರೆ ಅದಕ್ಕೆ ಇರುವ ರುಚಿ ಅದು ಎಕ್ಸ್ಟ್ರಾ ಬೋನಸ್! ಈಗ ಫೈವ್ ಸ್ಟಾರ್ ಹೋಟೆಲಲ್ಲಿ ತಿಂದರೂ ಬಹುಶಃ ಆ ಖುಷಿ ಸಿಗಲಿಕ್ಕಿಲ್ಲ.

ಈಗ ಎ ಐ ಯುಗ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಎಲ್ಲವೂ ಸಾಧ್ಯವಾಗುವ ತಂತ್ರಜ್ಞಾನದ ದಿನಗಳು. 'ಕಾಯುವಿಕೆ' ಎಂದರೆ ಅದೊಂದು ಯಮಯಾತನೆ ಎಂದು ತಿಳಿದುಕೊಳ್ಳುವವರೇ ಹೆಚ್ಚು. ಮಾಗುವಿಕೆ ಕೂಡ ಕೃತಕವಾಗಿರುವ ಕಾಲ. ಹಣ್ಣುಗಳನ್ನು ಕೂಡ ಅವಧಿ ಮುಂಚಿತವಾಗಿ ಕೊಯ್ದು ಬಲವಂತದಿಂದ ಮಾಗಿಸುವ ಈ ಕಾಲಘಟ್ಟದಲ್ಲಿ ಅತ್ತ ನೈಜ ರುಚಿಯೂ ಇಲ್ಲದೆ ಇತ್ತ ಆರೋಗ್ಯವನ್ನೂ ಅಡವಿಟ್ಟುಕೊಂಡಿದ್ದೇವೆ. ಒಂದು ಹಣ್ಣು ಮಾಗುವಷ್ಟೂ ತಾಳ್ಮೆ ಇಲ್ಲದ ನಾವು ಇನ್ನು ಯಾವುದಕ್ಕೆ ಕಾದು ಕುಳಿತೇವು? ಕಾಯುವಿಕೆಯಲ್ಲಿ ಸುಖವನ್ನು ಹೇಗೆ ಕಂಡೇವು? 'ತಾಳುವಿಕೆಗಿಂತನ್ಯ ತಪವು ಇಲ್ಲ' ಎನ್ನುವ ವಾದಿರಾಜರ ಸಾಲುಗಳು ಕಾಡುತ್ತಲೇ ಇರುತ್ತದೆ....






Creative Writings