Karada Vishwa

Article · November 14, 2026

ಮಗುವಿನ ಕುತೂಹಲದ ಪ್ರಶ್ನೆ, ಅಮ್ಮನಲ್ಲಿ !

By ಜಯಶ್ರೀ ಕೆ. ಆರ್ ಭಟ್ ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಅಮ್ಮಾ ಏಕೆ ಬಾನಿನಲ್ಲಿ
ಹೊಗೆಯ ಹಾಗೆ ಕಾಣುತಿಹುದು
ಚಲಿಸಿಕೊಂಡು ಎಲ್ಲ ಕಡೆಗೆ
ಹೋಗುತಿರುವುದೂ ?

ಚಂದಮಾಮ ಅಲ್ಲಿ ತಾನು
ಅಡುಗೆ ಬೇಯಿಸುತ್ತಲಿಹನೆ ?
ಅದಕೆ ಏನು ಬಾನಿನಲ್ಲಿ
ಹೊಗೆಯು ಬರುವುದು?

ಗಿಡವು, ಮರವು, ನೀರು,ಬೆಂಕಿ
ಎಲ್ಲವೂನು ಅಲ್ಲಿ ಇಹುದೆ?
ಹೇಗೆನಿಂತ ಚಂದಮಾಮ
ಕೆಳಗೆ ಬೀಳದೆ?

ಬಾನು ಕೆಳಗೆ ಬೀಳುತಿಲ್ಲ,
ಸೂರ್ಯ ಕೆಳಗೆ ಬೀಳನಲ್ಲ
ಚಂದ್ರ, ತಾರೆ ಅಂಟಿದಂತೆ
ಬಾನಲಿರುವುದೆ?

ಗೆಳೆಯರಿಹರೆ ಚಂದ್ರಗಲ್ಲಿ
ಕೆರೆಯು ಇಹುದೆ ನೀರಿಗಲ್ಲಿ,
ಗೆರೆಯು ಇಹುದೆ ಬಾನಿನಲ್ಲಿ
ಸೂರ್ಯ ಚಲಿಸಲೂ ?

ರಸ್ತೆ ಇಹುದೆ ಚಲಿಸಲೆಂದು
ವಸ್ತುವಿಹುದೆ ಆಟಕೆಂದು
ಮನೆಯು ಇಹುದೆ ವಾಸಕೆಂದು?
ಮೆಟ್ಟಲೇರಲು?

ಹೇಗೆ ಅಮ್ಮ ಹೀಗೆ ಎಲ್ಲ?
ಬಾನಿಗೇಕೆ ಕಂಬವಿಲ್ಲ
ಕೊಡೆಯ ಹಾಗೆ ನಿಂತಿತಲ್ಲ
ಯಾರು ಇಟ್ಟರೂ ?

ಇಷ್ಟು ದೊಡ್ಡ ಕೊಡೆಯ ಯಾರು
ತಂದುಕೊಟ್ಟರು?
ಮೇಲೆ ಎತ್ತಿ ಅಂಬರವನು
ಅಂಟಿಸಿಟ್ಟರೂ?

Creative Writings