Karada Vishwa

Article · December 20, 2025

ಮಣಭಾರ ಹೊರುತಿದ್ದ ಕುಂಬಾರ...

ಲೇಖಕಿ : ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

☘️☘️☘️☘️☘️
ಮಣ್ಣಿನ ಪಾತ್ರೆಗಳ ಒಂದು ಸುಂದರ ಹಳೆ ನೆನಪು.. ಆರೋಗ್ಯಪೂರ್ಣ ಬಾಳಿನ ದಿನಗಳ ಸಿಹಿ ನೆನಪು. ಒಮ್ಮೆ ನೆನಪಿಸಿಕೊಳ್ಳೊಣ !

ಬಿದಿರ ಕೋಲಿಗೆ ಮಣ್ಣಿನ ಮಡಕೆಗಳನ್ನು ಕಟ್ಟಿ ಹೆಗಲ ಮೇಲೆ ಹೊತ್ತುಕೊಂಡು ಮನೆ ಮನೆಗೆ ಬರುತ್ತಿದ್ದ 'ಕುಂಬಾರ' ಈಗೆಲ್ಲೋ ಮಾಯವಾದ ! ಅವನಂತೆಯೇ ಮಣ್ಣಿನ ಪಾತ್ರೆಗಳು ಕೂಡ ಮಾಯವಾಗಿವೆ. ಅಲ್ಲೊಂದು ಇಲ್ಲೊಂದು ಅಂತ ಕೆಲವರ ಮನೆಯಲ್ಲಿ ಮಾತ್ರ ಈಗ ಇದರ ಬಳಕೆ.

ತರಕಾರಿ ಗಿಡಗಳಿಗೆ ನೀರೆರೆಯಲು ಬಳಸುತ್ತಿದ್ದದ್ದು ಮಣ್ಣಿನ ಕೊಡಪಾನ . ಅದರ ಬಾಯಿ ಚಿಕ್ಕದು. ನೀರು ತುಂಬಿ ತಂಪಾಗಿಡಲು ಮಣ್ಣಿನ ಹೂಜೆ. ಇದುವೇ ಆಗಿನ ಫ್ರಿಜ್ ನೀರು...ತಣ್ಣಗೆ ತಂಪು ತಂಪು. ಗಂಜಿ ಬೇಯಿಸಲು ಬಳಸುವ ಮಡಕೆಗಳು (ಭಾಣ), ಸಾಂಬಾರ್, ಪಲ್ಯಗಳ ತಯಾರಿಗೆ ಬಳಸುವ ಅಗಲ ಬಾಯಿಯ, ತುಂಬ ಎತ್ತರವಿಲ್ಲದ ವಿತ್ಥಣೆ ಎನ್ನುವ ಪಾತ್ರೆ , ಬಿಸಿನೀರಿಗೆ ದೊಡ್ದದಾದ ಹಂಡೆ, ಉಪ್ಪಿನಲ್ಲಿ ಸಂಗ್ರಹಿಸುವ ಆಹಾರ ವಸ್ತುಗಳಿಗಾಗಿ ದೊಡ್ಡ ದೊಡ್ಡ ಗಾತ್ರದ ಹಂಡೆ(ಮಂಡಂ), ಮಣ್ಣಿನ ಬಾವಡೆಗಳು, ದೋಸೆಯನ್ನು ಹೊಯ್ಯುವ ಪಾತ್ರೆ - ಹೀಗೆಯೇ ಬೇರೆ ಬೇರೆ ಆಕಾರದ, ಗಾತ್ರದ ಪಾತ್ರೆಗಳು... ಮಜ್ಜಿಗೆ, ಹಾಲು, ಬೆಣ್ಣೆ ಮೊಸರುಗಳ ಸಂಗ್ರಹಕ್ಕೆ (ಬುಡ್ಕುಲ) ಸಣ್ಣ ಪಾತ್ರೆಗಳು, ಅದಕ್ಕೆ ಸರಿಯಾದ ಮುಚ್ಚಳಗಳು, ಮಣ್ಣಿನ ಹಣತೆಗಳು ಎಲ್ಲವೂ ಮಣ್ಣಿನದೇ.  ಅದರಿಂದ ಆಹಾರವನ್ನು ಜಾಗ್ರತೆಯಾಗಿ ತೆಗೆಯಲು ಗೆರಟೆಯ ಸೌಟುಗಳು! ಪಾತ್ರೆಯ ಗಾತ್ರಕ್ಕೆ, ಆಕಾರಕ್ಕೆ ಹೊಂದಿಕೊಂಡು ಅದರ ಹೆಸರು. 

ಆವೆ ಮಣ್ಣನ್ನು ಹುಡುಕಿ ತಂದು ನೀರಿನಲ್ಲಿ ಕಲಸಿ, ಬೆರೆಸಿ, ಒಂದು ಮಡಕೆ, ಪಾತ್ರೆ ಮಾಡಲು ಕುಂಬಾರನಿಗೆ ತುಂಬಾ ಸಮಯ, ಶ್ರಮದ ಆವಶ್ಯಕತೆ ಅಗತ್ಯ. ಆದರೆ ಜೀವನೋಪಾಯಕ್ಕಾಗಿ ಮಾಡುತ್ತಿದ್ದ. ನ್ಯಾಯವಾಗಿ ಅದನ್ನು ಮಾರಿ ಬಂದ ಹಣದಲ್ಲಿ ಬದುಕು ನಿರ್ವಹಿಸುವ ಅನಿವಾರ್ಯತೆ ಅವನಿಗಿತ್ತು. ಆಹಾರ ತುಂಬಿದ ಮಣ್ಣಿನ ಪಾತ್ರೆಗಳನ್ನು ಚಕ್ರಾಕಾರದ 'ನಿವಣ' ಅಥವಾ 'ಚೆರಿಯೆo' ಎನ್ನುವ ವಸ್ತುವಿನ ಮೇಲೆ ಇಡುವುದು. ಯಾಕೆಂದರೆ ಒಡೆಯಬಾರದು, ಉರುಳಿ ಬೀಳಬಾರದೆಂದು!

ಸ್ವಲ್ಪವೇ ಕುಟ್ಟಿದರೂ, ಪಾತ್ರೆಗಳು ಒಡೆದು ಹೋಗುವ ಭಯ. ಅದಕ್ಕೆ ಇದರ ಬಳಕೆಗೆ ತಾಳ್ಮೆ ಮತ್ತು ಜಾಗ್ರತೆ ಎರಡೂ ಬೇಕು. ಒಡೆಯಲು ಒಂದು ಕ್ಷಣ ಸಾಕು.
'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ' ಎನ್ನುವ ಮಾತೇ ಇದೆಯಲ್ಲ.!

ಈಗೇನಿದ್ದರೂ ಸ್ಟೀಲ್,  ಕ್ಯಾನ್ಸರ್ ಕಾರಕ   ಅಲ್ಯುಮೀನಿಯಂ, ನಾನ್ ಸ್ಟಿಕ್ ತವಾಗಳು ನಮಗಿಷ್ಟ . ಜೋರಾಗಿ ಕುಟ್ಟಿದರೂ ಒಡೆಯುವುದಿಲ್ಲ, ಫಳ ಫಳ ಬಣ್ಣ, ಶ್ರಮವಿಲ್ಲದೆ ಯಂತ್ರಗಳಿಂದ ತಯಾರು ಮಾಡಬಹುದಾದದ್ದು.  ಮಣ್ಣಿನ ಪಾತ್ರೆಗಳಲ್ಲಿ ಆಹಾರ ಬೇಯಿಸಿ ತಿಂದಾಗ, ಉಂಡಾಗ ಇರದ ರೋಗ ರುಜಿನಗಳೆಲ್ಲ ಮನೆ ಮನೆಗೂ ಭೇಟಿ ಕೊಟ್ಟು, ಹೇಗಿದ್ದೀರಾ ಅಂತ ಕೇಳ್ತಾ ನಮ್ಮ ಮನೆಗಳಲ್ಲೆ ಠಿಕಾಣಿ ಹೂಡುತ್ತಿವೆ.

 ಈಗಿನ ದೊಂಬರಾಟದ ಯಾಂತ್ರಿಕ ಜೀವನದಲ್ಲಿ ಒಳ್ಳೆಯ ಆರೋಗ್ಯಪೂರ್ಣ ಬದುಕಿಗೆ ಬೇಕಾದದ್ದೇನೂ ಇಲ್ಲ, ಬೇಡವಾದದ್ದೆಲ್ಲವೂ ಇದೆ. ಒಳಿತೆಲ್ಲ ಮರೆಯಾಗಿ ಆಧುನಿಕತೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಜಗತ್ತು, ಕಾಲ ಬದಲಾದಂತೆ ಜೀವನ ಶೈಲಿಯೂ ಬದಲಾಗುತ್ತಾ ಇದೆ ಮತ್ತು ನಾವು ಇದನ್ನು ಒಪ್ಪಿಕೊಳ್ಳುತ್ತಿದ್ದೇವೆ. ಬದಲಾವಣೆ ಜಗದ ನಿಯಮವಂತೆ. ಮನುಷ್ಯನ ಗುಣ, ನಡತೆ ಎಲ್ಲದರಲ್ಲೂ ಬದಲಾವಣೆ. ಆದರೆ, ಕಳೆದು ಹೋದ ಮುಗ್ಧ, ಸುಂದರ, ಸಂತಸದ ಆರೋಗ್ಯಪೂರ್ಣ ದಿನಗಳು ಕಳೆದು ಹೋಗಿವೆ. ಮತ್ತೆಂದೂ ಬಾರದೇನೋ!

ಎಲ್ಲರೂ ಜೊತೆಯಾಗಿ ಕುಳಿತು ಉಣ್ಣುವ ಕಾಲ ಈಗಿಲ್ಲ. ಕೈಯಲ್ಲಿತಟ್ಟೆ ಹಿಡಿದು ನಿಂತು ಉಣ್ಣುತ್ತೇವೆ. ಈಗ ಪುರುಸೊತ್ತಿಲ್ಲ, ಬಿಡುವಿಲ್ಲ, ಸಮಯವಿಲ್ಲ,....... ಹೀಗೇ..... ಎಲ್ಲವೂ.....ಎಲ್ಲರೂ... ಬದಲಾವಣೆಯ ಕಡೆಗೆ ದಾಪುಗಾಲು........ಅಷ್ಟೇ...🤷‍♂️

ಯಂತ್ರಗಳ ಯುಗದಲ್ಲಿ ಯಾಂತ್ರಿಕದ ಜೀವನವು
ಮಾಂತ್ರಿಕನು ಕುಂಬಾರ ಮಾಯವಾದ..
ಅವನ ಮಾಂತ್ರಿಕ ಕರದಿ ಜನುಮ ತಳೆಯುವ ಮಡಕೆ,
ಸೇರಿ ಹೋಯಿತು ಮಣ್ಣಿನಾಳದೊಳಗೆ......ಕಾಲಗರ್ಭದೊಳಗೆ...

ಕುಂಬಾರ ಬೇಕಿಲ್ಲ, ಮಡಕೆಗಳು ಬೇಕಿಲ್ಲ,
ದಾಪುಗಾಲಿನ ಹೆಜ್ಜೆ ಹೊಸತರೆಡೆಗೆ,
ಕಾಲ ಕಳೆದಂತೆಲ್ಲ ಹೊಸ ಹೊಸತು ಬೆಳವಣಿಗೆ,   
ಹಳತೆಲ್ಲ ಸೇರಿತೂ ಅಳಿವಿನೆಡೆಗೆ.... 
☘️☘️☘️☘️☘️


Creative Writings
ಮಣಭಾರ ಹೊರುತಿದ್ದ ಕುಂಬಾರ...