
Article · November 12, 2026
ಯುದ್ಧ
By ಗಾಯತ್ರಿ ನಾಗರಾಜ ಅಡ್ಕತ್ತೊಟ್ಟಿ
ಗಾಯತ್ರಿ ನಾಗರಾಜ ಅಡ್ಕತ್ತೊಟ್ಟಿ
ಒಂದು ಅಪೂರ್ಣ ಪುಟ್ಟ ಕಥೆ
ಅವಳ ಹೆಸರು ಸುಮಾ. ಮದುವೆಯಾಗಿ ಸುಮಾ ಅತ್ತೆಯ ಮನೆಗೆ ಕಾಲಿಟ್ಟಾಗ ಅವಳ ಮನಸಿನಲ್ಲಿ ಸಾವಿರ ಕನಸುಗಳಿದ್ದವು. ಗಂಡ ಚೆನ್ನಾಗಿ ಓದಿದವನು, ಒಳ್ಳೆಯ ಕೆಲಸದಲ್ಲಿದ್ದವನು. ಇನ್ನು ಬದುಕು ಸುಖವಾಗಿರುತ್ತದೆ ಎಂದುಕೊಂಡಿದ್ದಳು. ಸುಮಾ ಚಿಕ್ಕಂದಿನಿಂದಲೂ ಹಾಗೆಯೇ. ಪ್ರೀತಿ ಪ್ರೇಮವೆಂದು ಯಾರ ಹಿಂದೆಯೂ ಅಲೆದವಳಲ್ಲ. ಎಲ್ಲರ ಜೊತೆ ನಗುನಗುತ್ತಾ ಬೆರೆತು ಬದುಕಿದವಳು. ಸ್ವಾರ್ಥವಿಲ್ಲದೆ, ಎಲ್ಲರನ್ನು ತನ್ನವರಂತೆ ಕಂಡವಳು. ಮದುವೆಯಾದ ಮೇಲೆ ಗಂಡನ ಜೊತೆಗೂ ಹಾಗೆಯೇ, ಸಂಪೂರ್ಣವಾಗಿ ಬೆರೆತು, ಪ್ರೀತಿಯಿಂದ ಬದುಕಬೇಕು ಎಂದುಕೊಂಡಿದ್ದಳು.
ಆದರೆ ನಾಲ್ಕೈದು ದಿನಗಳಲ್ಲೇ ಅವನ ಮುಖ ಪರಿಚಯವಾಗತೊಡಗಿತು. ಪ್ರೀತಿ ಇಲ್ಲವೆಂದಲ್ಲ. ಆದರೆ ಆ ಪ್ರೀತಿಯ ಜೊತೆಗೇ ಕೋಪ, ಹಠ, ಜಗಳ ಹುಟ್ಟಿನಿಂದಲೇ ಬಂದಿತ್ತು. ಏನು ಮಾಡಿದರೂ ತಪ್ಪು. ಹೊರಗೆ ಹೋಗಿ ಯಾರ ಜೊತೆ ಮಾತನಾಡಿದರೂ ಸಂಶಯ. ಮಾತು ಬೆಳೆದು ಹೊಡೆತಕ್ಕೆ, ಬಡಿತಕ್ಕೆ ತಿರುಗುತ್ತಿತ್ತು. ಮೊದಮೊದಲು ಸುಮಾ ಬೆಲ್ಲ ನುಂಗಿದಂತೆ ಸುಮ್ಮನಿದ್ದಳು. "ನಾನು ಯಾರ ಜೊತೆಯೂ ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ" ಎಂದು ಎಷ್ಟು ಹೇಳಿದರೂ ಕೇಳುವವರೇ ಇರಲಿಲ್ಲ. ಮನೆಯವರು, ಸಂಬಂಧಿಕರು ಎಲ್ಲರೂ ಅವಳನ್ನೇ ದೂಷಿಸತೊಡಗಿದರು. "ಇವಳ ಕಾಲಿಡುವಿಕೆಯೇ ಸರಿ ಇಲ್ಲ, ಇವಳ ಮನಸ್ಸೇ ಸರಿ ಇಲ್ಲ" ಎಂದರು.
ಹೀಗೆ ಕೆಲವು ವರ್ಷಗಳು ಕಳೆದವು. ಒಂದು ದಿನ ಅವಳಿಗೆ ಅನಿಸಿತು, ಇದರಿಂದ ನನಗೆ ವಿಮೋಚನೆ ಬೇಕು. ಊರವರಲ್ಲಿ ಕೇಳಿಕೊಂಡಳು. ಕೆಲವರು ಹೇಳಿದರು, ಅವನಿಗೆ ಮಾನಸಿಕ ಸ್ವಸ್ಥತೆ ಇಲ್ಲ, ಅದಕ್ಕಾಗಿ ಹೀಗೆ ಮಾಡುತ್ತಾನೆ ಎಂದು. ಆದರೆ ಅವನು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಕೊನೆಗೆ ಅವಳು ದೂರವಾಗುವ ಯೋಚನೆಗೆ ಬಂದಳು. ಆದರೆ ಆಗ ನೆನಪಾದದ್ದು ಇಬ್ಬರ ಒಡನಾಟದಲ್ಲಿ ಹುಟ್ಟಿದ ಮಗು. ಮಗುವನ್ನು ನೆನೆದು, "ಇದಕ್ಕೆ ಆಗುವುದಿಲ್ಲ" ಎಂದು ಸುಮ್ಮನಾದಳು.
ಅವನು ಮಾತ್ರ ಬಿಡಲಿಲ್ಲ. "ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನವಳು. ಇನ್ಯಾರ ಜೊತೆಯೂ ನೀನು ಮಾತನಾಡುವಂತಿಲ್ಲ. ನಿನ್ನನ್ನು ಸಾಯಲು ಬಿಡಲಾರೆ, ಬದುಕಲು ಬಿಡಲಾರೆ" ಎಂದು ಹೇಳುತ್ತಲೇ ಇದ್ದ. ಸುಮಾ ಈಗಲೂ ಅದೇ ಮನೆಯಲ್ಲಿ ಇದ್ದಾಳೆ. ಹೊರಗಿನಿಂದ ನೋಡಿದರೆ ಮನೆ ಸುಮ್ಮನಿದೆ. ಒಳಗೆ ಮಾತ್ರ ಅವಳ ಮನಸ್ಸಿನಲ್ಲಿ ಪ್ರತಿದಿನ ಒಂದು ಯುದ್ಧ ನಡೆಯುತ್ತಲೇ ಇದೆ. ಮಗುವಿಗಾಗಿ ಬದುಕಬೇಕಾ, ತನಗಾಗಿ ಬದುಕಬೇಕಾ ಎಂಬ ಯುದ್ಧ.
