
Article · October 25, 2026
ಬಾ ಓ ಕಂದ
By ಗಾಯತ್ರಿ ನಾಗರಾಜ ಅಡ್ಕತ್ತೊಟ್ಟಿ
ಗಾಯತ್ರಿ ಕೆ ಅಡ್ಕತೊಟ್ಟಿ
ಹಸಿರಿನ ನಡುವೆ ಬಣ್ಣದ ಚಿತ್ತಾರ
ಹಕ್ಕಿಗಳ ಕಲರವ ದುಂಬಿಯ ಜೇಂಕಾರ
ಜುಳು ಜುಳು ಹರಿಯುವ ಜರಿಯ ನಿನಾದ
ನೋಡಲು ಬಾರೆಯಾ ಓ ಕಂದ
ಬೆಟ್ಟದ ಮೇಲಿಂದ ಇಳಿದು ಬಂದ ಮೋಡ,
ಮುತ್ತಿಡುವ ಹಾಗೆ ತಬ್ಬಿದೆ ಭೂಮಿಯ ದಡ
ತೊಟ್ಟಿಕ್ಕುವ ಎಲೆಯಲಿ ಸೂರ್ಯನ ಬಂಗಾರ
ಇದೇ ನೋಡು ನಮ್ಮ ನಿಸರ್ಗದ ಶೃಂಗಾರ
ಇಲ್ಲಿ ಕಲ್ಮಶವಿಲ್ಲ ಹಸಿರಿನ ಕಳೆ ಎಲ್ಲ
ಮನುಜನ ಕುತಂತ್ರದ ಕಲಹವಿಲ್ಲ
ಇಲ್ಲಿ ಹರಿಯುವುದು ಪ್ರೀತಿಯೊಂದೇ
ಬದುಕುವುದು ಎಲ್ಲ ಜೀವ ಒಂದೇ ಎಂದೇ
ಕಳೆದೆಯದಿರು ಬಾಲ್ಯ,ಬೇಡದಿಹ ಕಾರ್ಯದಲಿ
ಕಣ್ಣಾರೆ ಕಾಣು ಸೌಂದರ್ಯ ವೈಭವ
ಮಣ್ಣಿನ ವಾಸನೆ ಮೂಸು, ನೀರ ತಂಪನು ಸವಿ
ದಣಿದ ನಿನ್ನ ಮನಸಿಗೂ ನೆಮ್ಮದಿಯ ಸವಿ
Creative Writings
