
Article · March 18, 2026
' ಯುಗಾದಿ '
ಲೇಖಕರು: ಶಕುಂತಲಾ ಪಿ. ಭಟ್, ಚಾಂಗುಳಿ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ !
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ !!
ಮಾನವ ಜನ್ಮ ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಿಕ. ಪ್ರತಿ ಕ್ಷಣವನ್ನು ಆನಂದಿಸಬೇಕು, ನವಚೈತನ್ಯ ತುಂಬಲು ಹಬ್ಬವು ಹರಿದಿನವಾಗಬೇಕು. ದೀರ್ಘಕಾಲದ ತಪದಿಂದ ಭಗವತ್ ಚೈತನ್ಯವನ್ನು ತುಂಬಿಸಿ ಮಾನವ ಸೃಷ್ಟಿಯನ್ನು ಬ್ರಹ್ಮನು ಆರಂಭಿಸಿದ ದಿನವೇ ಯುಗಾದಿ. ಶ್ರೀರಾಮ ರಾವಣನ ರಾಕ್ಷಸೀ ಶಕ್ತಿಯನ್ನು ದಮನ ಮಾಡಿ ವಿಜಯೋತ್ಸವ ಆಚರಿಸಿದ ದಿನ ಯುಗಾದಿ. ಯುಗಾದಿ ವಸಂತ ಋತುವಿನ ಆಗಮನ, ಚಾಂದ್ರಮಾನ ಪದ್ಧತಿಯ ಪ್ರಕಾರ ಅಮಾವಾಸ್ಯೆಯ ಮರುದಿನ ಚಾಂದ್ರಮಾನ ಯುಗಾದಿ ಚೈತ್ರ ಶುಕ್ಲ ಪ್ರತಿಪದೇಯ ದಿನ. ಭಾರತೀಯ ಕಾಲಗಣನೆಯ ಲೆಕ್ಖದ ಪ್ರಕಾರ ಯುಗಗಳನ್ನು ಆರಂಭಿಸಿದ ದಿನ ಯುಗಾದಿ. ಯುಗ ಎಂದರೆ ಆದಿಯೂ ಅನಂತವೂ ಆಗಿ ರೂಪಗೊಂಡ ಕಾಲದ ಅಂಶ, ಬ್ರಹ್ಮನ ಸೃಷ್ಟಿಯ ಮೊದಲ ದಿನ.
ಸನಾತನ ಧರ್ಮದ ವಿಚಾರಗಳು ಆಧುನಿಕ ಶಿಕ್ಷಣದಲ್ಲಿ ಕೇವಲ ಜ್ಞಾನವಾಗಿ ಉಳಿದಿದೆ. ಯಾರಾದರೂ ಮಕ್ಕಳಲ್ಲಿ ಹೊಸ ವರ್ಷ ಯಾವಾಗ ಎಂದು ಕೇಳಿದರೆ ತಟ್ಟನೆ ಜನವರಿ ಒಂದು ಎನ್ನುತ್ತಾರೆ. ಹಬ್ಬ ಹರಿ ದಿನಗಳೆಂದರೆ ಇಷ್ಟದೇವರ ಉಪಾಸನೆ, ಪ್ರಕೃತಿಯ ಆರಾಧನೆ, ಮಾನವರಿಗೆ ಇದರ ಜೊತೆಗೆ ಪರಮವಾದ ಅವಿನಾಭಾವ ಸಂಬಂಧ.
ಮಾನವ ಬುದ್ಧಿಯ ಅಪಾರ ಶಕ್ತಿಯ ಅರಿವಿನೊಡನೆ ಸಮೂಹವು ಕಾಲದ ಅನಂತತೆಯನ್ನು ನೆನಪಿಸುತ್ತದೆ. ವಿಶಾಲವಾದ ಈ ಜಗತ್ತಿನಲ್ಲಿ ಭಾಗವತ ಸಪ್ತಾಹ, ಮಹಾಭಾರತ, ಜ್ಯೋತಿಷ್ಯ, ಉಪನಿಷತ್ತು ಇವೇ ಮೊದಲಾದ ಪ್ರಕ್ರಿಯೆಗಳು ಬಿತ್ತರಗೊಳ್ಳುತ್ತಿವೆ. ವಾಸ್ತವವಾಗಿ ಆಧ್ಯಾತ್ಮಿಕ ಸಾಹಿತ್ಯದ ಮೂಲಕ ನಮಗೆ ಅನುಭವ ಸಿಗಲು ಸಾಧ್ಯವಾಗುತ್ತಿದೆ. ಯುಗಾದಿಯಲ್ಲಿ ಎರಡು ಬಗೆಗಳಿವೆ - ಸೂರ್ಯ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿ ಹಾಗೂ ಚಂದ್ರ ಚಲನೆಯನ್ನು ಆಧರಿಸಿ ಚಾಂದ್ರಮಾನ ಯುಗಾದಿಯು ಚಾಲ್ತಿಯಲ್ಲಿದೆ.
ಚಾಂದ್ರಮಾನ ಯುಗಾದಿಯ ಚೈತ್ರ ಮಾಸದಲ್ಲಿ ಭೂಮಾತೆಗೆ ಹಸಿರುಡುಗೆ, ಪರಿಸರ ದೇವತೆಗೆ ಚಿಗುರೆಲೆಗಳ ಕೊಡುಗೆ. ಅರಳಿರುವ ಪುಷ್ಪಗಳಿಂದ ತೇಲಿ ಬರುವ ಸುವಾಸನೆ, ಕೋಗಿಲೆಗಳ ಇನಿದನಿ, ಹಕ್ಕಿಗಳ ಇಂಚರ, ದುಂಬಿಗಳ ಝೇಂಕಾರ ಎಲ್ಲೆಲ್ಲಿಯೂ ಯುಗಾದಿಯ ನವಗಾನ. ಅಷ್ಟೇ ಯಾಕೆ? ಮೇರುಶಿಖರ ಹಿಮಾಲಯದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಹೊಸ ವರುಷದ ಸಂಚಲನ. ಪಂಚಾಂಗ ಶ್ರವಣ - ಹೊಸ ಪಂಚಾಂಗ ಖರೀದಿಸಿ ದೇವರ ಮುಂದಿಟ್ಟು ನಮಸ್ಕರಿಸಿ ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಘಳಿಗೆ ಎಲ್ಲವನ್ನೂ ಅರಿತುಕೊಳ್ಳುವುದು ಪಂಚಾಂಗದ ಶ್ರವಣದಿಂದ. ಶುಭ ದಿನಗಳು, ಶುಭ ಯೋಗ, ಶುಭ ಗಳಿಗೆ, ಶುಭಕರಣ, ಶುಭ ನಕ್ಷತ್ರ, ಶುಭ ತಿಥಿ ಇವು ನಮ್ಮ ಕೆಲಸ ಕಾರ್ಯಗಳಲ್ಲಿ ಸಿದ್ಧಿಯನ್ನುಂಟುಮಾಡುತ್ತದೆ.
ಯುಗಾದಿ ಎಂದರೆ ಬೇವು ಬೆಲ್ಲದ ಮಿಶ್ರಣ, ಮನೆಯೆದುರು ರಂಗೋಲಿ ಹಾಕಿ, ತಳಿರು ತೋರಣ ಕಟ್ಟಿ, ಸಿಹಿಯಡುಗೆ ಮಾಡಿ ಹಂಚಿ ತಿಂದು ಖುಷಿಯಾಗುವುದು ರೂಢಿ. ಬೇವಿನ ಎಲೆ, ಚಿಗುರು, ಹೂವು ಎಲ್ಲವೂ ರೋಗ ಪರಿಹಾರಕ ಗುಣ ಹೊಂದಿದೆ. ಬೆಲ್ಲವೂ ಆಯಾಸ ಪರಿಹಾರ ಮಾಡುತ್ತದೆ. ಹಾಗಾಗಿ ಬೇವು ಬೆಲ್ಲ ತಿಂದು ಸುಖವಾಗಿರೋಣ, ಕಷ್ಟಗಳ ಮರೆಯೋಣ. ಹೊಸತನದ ಸಂಕೇತವಾಗಿ ಮಕ್ಕಳು ಹೊಸ ಉಡುಪು ಧರಿಸಿ ದೇವರಿಗೆ ಹಾಗೂ ಗುರು ಹಿರಿಯರಿಗೆ ವಂದಿಸಿ ಸದ್ಗುಣಗಳಾದ ಪ್ರೀತಿ, ತಾಳ್ಮೆ, ಕ್ಷಮೆ, ನಿಸ್ವಾರ್ಥಗುಣ, ಕರ್ತವ್ಯ ನಿಷ್ಠೆ, ಒಳ್ಳೆಯ ಸಂಸ್ಕಾರ ಇವೆಲ್ಲ ವೃದ್ಧಿಗೊಳಿಸಿ ಹೊಸ ಮನುಷ್ಯರಾಗುವ ದೀಕ್ಷೆ ತಳೆಯುವ ಹಬ್ಬವೇ ಯುಗಾದಿ. ಭಾರತೀಯ ಸಂಪ್ರದಾಯದಲ್ಲಿ ಹಿರಿಯರಿಗೆ ನಮಸ್ಕರಿಸಿ, ಗೌರವಿಸುವುದು, ವಿನಯ ತೋರುವುದು ಇದು ಕಿರಿಯರಿಗೆ ಶೋಭೆ ನೀಡುವುದು. ಹಿರಿಯರ ಮಾರ್ಗದರ್ಶನ ಅವರ ಅನುಭವದ ಬೆಳಕು ಕಿರಿಯರಿಗೆ ಸುದೀರ್ಘ ಜೀವನಕ್ಕೆ ದಾರಿದೀಪವಾಗುತ್ತದೆ. ಹಳತಿನ ಯಶಸ್ಸಿನಲ್ಲಿ ಮೈ ಮರೆಯದೆ ಹೊಸತನವ ಕಟ್ಟಿ ಹರುಷದಿಂದ ಬಾಳೋಣ. ಹಳೆಯದು ಕಳೆದು ಹೊಸತರ ಸೃಷ್ಟಿಯಾಗಲಿ. ಈ ಚೆಲುವಿನ ಧರಣಿಯ ನಿಸರ್ಗದಲ್ಲಿದೆ ಪೂಜ್ಯತೆ-ಧನ್ಯತೆ, ಪರಮ ಸುಖವದರಲಿ ಕಂಡಾಗ ಬಾಳಿಗಿದೆ ಭವ್ಯತೆ. ಎಲ್ಲರಿಗೂ ಯುಗಾದಿಯ ಹೊಸ ಸಂವತ್ಸರದ ಶುಭಾಶಯಗಳು.

-ಶಕುಂತಲಾ ಪಿ. ಭಟ್, ಚಾಂಗುಳಿ.
Creative Writings
