
Article · March 19, 2026
ಹೊಸ ವರುಷ ಸಂತಸವ ಹೊತ್ತು ತರಲಿ 💐
- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
☘️☘️☘️
ಬಂತು ಬಂತು ಯುಗಾದಿ, ಉರುಳಿ ಕಾಲದ ಗಾದಿ
ಮುಂದಕಡಿ ಇಡಬೇಕು ಬಾಳ ಹಾದಿ
ಪ್ರಕೃತಿಯಲಿ ಹೊಸ ಚಿಗುರು, ಹೊಸತು ಭರವಸೆ ಮೂಡಿ,
ಹೊಸತೊಂದು ಯುಗದೆಡೆಗೆ ಮುಖವ ಮಾಡಿ /
ರಸ್ತೆಯುದ್ದಕು ಹಸಿರ ಸಿರಿಯಿಂದ ಚೆಲ್ಲಿರುವ
ಸುಂದರದ ಸುಮರಾಶಿ ಹಾಸು ಮೆತ್ತೆ
ಕಣ್ಗಳಿಗೆ ಹಬ್ಬವೂ ಮನಕೆ ಚೇತೋಹಾರಿ
ಋತು ವಸಂತನು ಬಂದ ನಗುತ ಮತ್ತೆ /
ಹಕ್ಕಿಗಳ ಇಂಚರಾ ದುಂಬಿಗಳ ಝೇಂಕಾರ
ಸುಂದರವು ಈ ಪ್ರಕೃತಿ ಸುಮನೋಹರಾ
ಹಳೆಬೇರು ಹೊಸಚಿಗುರು ಮತ್ತೆ ಲವಲವಿಕೆಯೂ
ಪರಿಸರದಿ ಮೈದಳೆದು ಚಿತ್ತಹಾರ /
ಬೇವು ಬೆಲ್ಲವ ಹಂಚಿ, ಎಲ್ಲರಿಗೂ ಹಾರೈಕೆ
ಕಷ್ಟ ಸುಖಗಳು ಸಮವೆ ಇರಲಿ ಎಂದೂ
ಸುಖದುಃಖ ಹಂಚುತಲಿ ಸಂತಸದಿ ಬಾಳುವುದು
ಚೆಲುವ ಜೀವನ ಯಾನ ಸಾಗಿಮುಂದೂ /
ಮತ್ತೆ ಬಂದ ವಸಂತ, ಹೊತ್ತು ತಂದ ಸುಗಂಧ
ಫಲಪುಷ್ಪ ಕಾಣಿಕೆಯ ರೂಪದಲ್ಲಿ
ವರ್ಣಮಯ ಪ್ರಕೃತಿಯಲ್ಲಿ ವರ್ಣಮಯ ಫಲಪುಷ್ಪ
ಜೀವರಾಶಿಗೆ ಸ್ವಣ೯ಯುಗವು ಇಲ್ಲಿ /
ಚೈತ್ರ ಶುದ್ಧದ ಪಾಡ್ಯಮಿಯ ದಿನದೆ ಹೊಸ ವರುಷ
ಪ್ರತಿ ವರುಷ ಹೀಗೆಯೇ ಮುಂದುವರೆದು
ಸಂತೋಷ ಸೌಭಾಗ್ಯ ಆರೋಗ್ಯ ಭಾಗ್ಯವನು
ನೀಡಿ ಹರಸಲಿ ದೇವ ದೀನಬಂಧು /
☘️☘️☘️
Creative Writings
