Karada Vishwa

Article · June 27, 2026

ಗೆರೆಗಳು ಸೇರಿದಾಗ

(ಸಣ್ಣ ಕಥೆ)✍️ದಿವ್ಯಾ ಬಿ ಶಿರಂತಡ್ಕ

ಅಂದು ರಾಧಿಕಾ ಗಣೇಶ್ ದಂಪತಿಗಳಿಗೆ ಅತ್ಯಂತ ಸಂತಸದ ದಿನ. ತಮ್ಮ ಏಕೈಕ ಪುತ್ರ

ಆಕಾರ್, ಅಂತರಾಷ್ಟ್ರೀಯ ಖ್ಯಾತಿ ಪಡೆದು ದೇಶದ ಕೀರ್ತಿಯನ್ನು ಎಲ್ಲಡೆ ಪಸರಿಸುತ್ತಿರುವ ಚಿತ್ರಕಾರ. ನವದೆಹಲಿಯಲ್ಲಿ ಒಂದು ಸನ್ಮಾನ ಸಮಾರಂಭ. ಸುಂದರವಾದ ಬೆಳಕಿನ ಆ ಸ್ವರ್ಗ ಸದೃಶ ಸಭಾಭವನದಲ್ಲಿ ಕೇಂದ್ರ ಮಂತ್ರಿಯಿಂದ ಸನ್ಮಾನಿಸಲ್ಪಡುತ್ತಿರುವ ಮಗ. ಚಪ್ಪಾಳೆ ತಟ್ಟುತ್ತಿದ್ದ ರಾಧಿಕಾಗೆ ಯಾಕೋ ಆ ಹಳೆ ನೆನಪು ಮರುಕಳಿಸಿ ಕಣ್ಣು ಮಂಜಾಯಿತು.

ಎರಡು ದಶಕಗಳ ಹಿಂದಿನ ಘಟನೆ.ಊಟ ಮಾಡಿ ಕೊಂಚ ವಿಶ್ರಾಂತಿ ಪಡೆಯಲೆಂದು ಮಲಗಿದ್ದಳು. ಎದ್ದು ಹೊರ ಬಂದಾಗ ತಮ್ಮ ಹೊಸ ಮನೆಯ ಒಳ ಹೊರಗಿನ ಗೋಡೆಗಳಲ್ಲಿ ಮಗನ ಚಿತ್ರವಿಚಿತ್ರ ಬಣ್ಣದ ಪೆನ್ಸಿಲಿನ ಗೆರೆಗಳೇ ತುಂಬಿದ್ದವು.. ಎಲ್ಲಿತ್ತೋ ಸಿಟ್ಟು... ದನಕ್ಕೆ ಬಡಿದಂತೆ ಬಡಿದಿದ್ದಳು. ಎಳೆ ಕೈಯ ಕಿರುಬೆರಳು ಫ್ರಾಕ್ಚರ್ ಗೊಂಡದ್ದು ಕೋಪ ಇಳಿದ ಮೇಲೆಯಷ್ಟೇ ಆಕೆಯ ಗಮನಕ್ಕೆ ಬಂದದ್ದು. ನಂತರ ಪಶ್ಚಾತಾಪ ಪಟ್ಟದಕ್ಕೆ ಲೆಕ್ಕವಿಲ್ಲ. ಆ ಕಹಿ ಎಷ್ಟೆಂದರೂ ಹೋಗುವುದೇ ಇಲ್ಲ. ಇಂದೂ ಪ್ರತ್ಯಕ್ಷವಾಗಿ ಕಣ್ಣಾಲಿಗಳು ತುಂಬಿದವು. ಸಂತೋಷದೊಳಗೆ ದುಃಖವೋ , ದುಃಖದೊಳಗೆ ಸಂತೋಷವೋ ಅರಿಯಳಾದಳು.

Creative Writings