
Article · September 9, 2026
ಲಾವಣ್ಯ
ವೀಣಾ ಎಂ ಭಟ್
ಚಿತ್ತ ಹರಣದ ಚೆಲುವೆ ಸೆಳೆಯುವೆ ನಗುವಲ್ಲಿ
ಮತ್ತೇರುತಿದೆ ನಿನ್ನ ಮೋಹಕ ನೋಟದಲಿ
ಕರಿ ಮುಗಿಲ ಕುಂತಲವು ತೇಲಾಡುವ ಸೊಗಸು
ಬೆಳದಿಂಗಳಲಿ ಓಲಾಡುತಿದೆ ಮನಸು
ಬೆಳ್ಳಿ ಬಟ್ಟಲ ಶಶಿಯು ನಗುತಿಹ ಬಾನಲ್ಲಿ
ತಿಂಗಳ ಬೆಳಕನ್ನು ಸುತ್ತಲೂ ಚೆಲ್ಲಿ
ಬರೆದಿಹನು ಚಿತ್ತಾರದ ಹೊದಿಕೆ ಬಾನಲ್ಲಿ
ಹಾಸಿದನು ಮೇಘದ ವರ್ಣಮಾಲೆಯಲಿ
ಅರಳಿಹುದು ಮಲ್ಲಿಗೆಯು ಕಂಪನ್ನ ಸೂಸುತಲಿ
ತನು ಮನಕೆ ಚೈತನ್ಯ ಕೊಡುವ ತಂಗಾಳಿ
ಮಲ್ಲಿಗೆಯ ಸಜ್ಜೆಯದು ಹಾಸಿ ಕರೆದಿದೆ ಇಲ್ಲಿ
ನಗುಮೊಗದ ಎನ್ನರಸಿ ಬಾರೆ ಮಡಿಲಲ್ಲಿ
ಸಿರಿ ಸಂಪದವು ಪರಿಪೂರ್ಣ ಈ ತನುವಲ್ಲಿ
ಸುಪ್ತಸ್ವರ ತುಂಬಿದ ಮಾದಕ ನೋಟದಲಿ
ಅಧರದ ಹೂನಗು ಮಧುರತೆ ಯಾನದಲಿ
ಶುಭಮಂಗಳದ ಮಿಲನ ಈ ಘಳಿಗೆಯಲ್ಲಿ
Creative Writings
