Karada Vishwa

Article · August 15, 2026

ಪಾಲು

By ಶಾರದಾ ಕಜೆಗದ್ದೆ ಬಾಯಾರು

- ಶಾರದಾ ಕಜಕದ್ದೆ

ಪ್ರಕೃತಿದತ್ತ ಪಾಲುದಾರರ ಬಗೆಗಿನ ಕಥೆ

ಅಂದು ಸಂಜೆ ಅಪ್ಪ ಕಾಲ್ ಮಾಡಿ ಊರಿಗೆ ಬರಲು ಹೇಳಿದರು. ಸಾಧ್ಯವಾದರೆ ಒಂದು ವಾರ ರಜೆ ತೆಗೆದು ಬಂದರೆ ಆದೀತೆಂದಿದ್ದರು. ಸರಿ ಎಂದು ರಾತ್ರಿ ಬಸ್ಸಿಗೆ ಹೊರಟೆ. ಮುಂಜಾನೆಯೇ ಮನೆಗೆ ತಲುಪಿದೆ. ಅಪ್ಪ ಅಮ್ಮ ಇಬ್ಬರೂ ಎದ್ದು ಬೆಳಗಿನ ಕೆಲಸಗಳನ್ನು ಮುಗಿಸಿ ನನಗಾಗಿ ದಾರಿ ಕಾಯುತ್ತಿದ್ದರು.ಕೈಕಾಲು ಮುಖ ತೊಳೆದು ಮನೆಯೊಳಗೆ ಹೋಗಿ ಕುಳಿತೆ. ಕೊಂಚ ಹೊತ್ತು ಸುಧಾರಿಸಿ ಮತ್ತೆಯೇ ಸ್ನಾನಕ್ಕೆ ಹೋಗುವುದಾಗಿ ಹೇಳಿದೆ. ಅಮ್ಮ ಬಿಸಿಬಿಸಿ ಚಾ ಮಾಡಿ ಕೊಟ್ಟರು. ಹಾಗೆಯೇ ಹೀರುತ್ತ ಸುಮ್ಮನೆ ಇಬ್ಬರನ್ನೂ ಸೂಕ್ಷ್ಮವಾಗಿ ಗಮನಿಸಿದೆ. ಅಪ್ಪ ಸುಸ್ತಾದಂತೆ ಕಂಡರು, ಅಮ್ಮ ತುಸು ಬೇಜಾರಿನಲ್ಲಿದ್ದಂತೆ ಅನಿಸಿತು.

ಹಾಗೆಯೇ ಮಾತನಾಡುತ್ತಾ ಸಮಯ ಮುಂದಡಿ ಇಡುತಿತ್ತು. ಇನ್ನು ಸ್ನಾನಾದಿಗಳನ್ನು ನಿತ್ಯಕರ್ಮಗಳನ್ನು ಮುಗಿಸಿ ಬರೋಣವೆಂದು ಎದ್ದು ನಡೆದೆ. ಬಂದಾಗ ಅಪ್ಪ ಪೂಜೆ ಮುಗಿಸಿ ಪೇಪರ್ ಓದುತ್ತಿದ್ದರು. ಅಮ್ಮ ದೋಸೆ ಹೊಯ್ಯುತ್ತಿದ್ದಳು. ನಂತರ ಮೂವರು ಒಟ್ಟಿಗೆ ಕುಳಿತು ಬೆಳಗ್ಗಿನ ತಿಂಡಿ ತಿಂದು ಬಂದು ಹೊರಗಡೆ ಕುಳಿತುಕೊಂಡೆವು. ಸ್ವಲ್ಪ ಸಮಯದ ನಂತರ ಅಪ್ಪ ತೋಟಕ್ಕೆ ಕರೆದುಕೊಂಡು ಹೋದರು. ಇಡೀ ತೋಟವನ್ನು, ಸಣ್ಣ ಗುಡ್ಡವನ್ನು ತೋರಿಸುತ್ತಾ ಇದೆಲ್ಲವನ್ನೂ ಇನ್ನು ಮುಂದೆ ನೀನೇ ನೋಡಿಕೊಳ್ಳಬೇಕು ಎಂದರು. ಒಬ್ಬನೇ ಮಗ, ಎಲ್ಲವೂ ನಿನ್ನದೇ ಎಂದರು. ಯಾಕೆ ಇಷ್ಟು ದಿಢೀರನೆ ಈ ನಿರ್ಧಾರ ಎಂದು ಕೇಳಿದೆ. ಸಣ್ಣಕ್ಕೆ ಹೃದಯದ ತೊಂದರೆ. ಇನ್ನು ಈ ಜವಾಬ್ದಾರಿಗಳಿಂದ ವಿರಮಿಸೋಣ ಎಂದು ಅನಿಸ್ತಿದೆ. ಹಾಗಾಗಿ ಹೇಳಿದೆ. ಯೋಚಿಸಿ ನಿರ್ಧರಿಸು ಎಂದು ಶಾಂತವಾಗಿ ನುಡಿದರು.

ಮನೆಗೆ ಹೋಗಿ ಮೂವರು ಕುಳಿತು ಮಾತನಾಡಿ ನಿರ್ಧರಿಸೋಣ ಅಂದುಕೊಂಡೆ. ಹಾಗೇ ಮಾತನಾಡುತ್ತ ಅಮ್ಮ, ಅಪ್ಪ ಇಬ್ಬರೂ ಹೇಳಿದರು ಇನ್ಮುಂದೆ ಈ ಮನೆ, ತೋಟ, ಪಕ್ಕದ ಗುಡ್ಡೆ ಎಲ್ಲವೂ ನಿನಗೊಬ್ಬನಿಗೆ ಸೇರಿದ್ದು, ನೀನೇ ಇದೆಲ್ಲದರ ಜವಾಬ್ದಾರಿ ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳಬೇಕು ಅಂತೆಂದರು. ಹಾಗೆ ನನ್ನ ಕೆಲಸವನ್ನು work from home ತೆಗೆದುಕೊಂಡರಾಯಿತೆಂದು ಯೋಚಿಸುತ್ತಾ ಒಪ್ಪಿಗೆ ಕೊಟ್ಟೆ.

ಇದೇ ಗುಂಗಿನಲ್ಲಿ ಎರಡು ದಿನ ಕಳೆದಿದ್ದೇ ಗೊತ್ತಾಗಲಿಲ್ಲ. ಮರುದಿನ ಬೆಳಗೆದ್ದು ತೋಟ, ಗುಡ್ಡ ಸುತ್ತಾಡಿ ಬರುವೆನೆಂದು ಹೇಳಿ ಬೇಗ ಮನೆಯಿಂದ ಹೊರಟೆ. ತೋಟಕ್ಕಿಳಿಯುತ್ತಲೇ ಇಬ್ಬನಿಯಿಂದ ತೊಯ್ದ ಜೇಡರ ಬಲೆ ಮುಖ, ತಲೆಕೂದಲಿಗೆ ಅಂಟಿಬಿಟ್ಟಿತು. ಮುಂದಕ್ಕೆ ಹೋಗುತ್ತಿದ್ದಂತೆ ಸೊಳ್ಳೆಗಳು ಗುಯಿಂಗುಡುತ್ತಾ ಸ್ವಾಗವಿತ್ತು ನನ್ನನ್ನು ಮುತ್ತಿದುವು. ಪೇರಳೆ ಮರದಲ್ಲಿ ಹಣ್ಣು ಇದೆಯೇ ಎಂದು ಕತ್ತೆತ್ತಿದರೆ ನಾಲ್ಕಾರು ಬಗೆಯ ಹಕ್ಕಿಗಳು ಹೊಟ್ಟೆ ತುಂಬಿಸುತ್ತಿದ್ದುವು. ಕೆಲವು ಹೀಚು ಕಾಯಿಗಳು ಬಾವಲಿಗಳು ಮುಟ್ಟಿ ಕಪ್ಪಾಗಿ ಉದುರಿದ್ದುವು. ಮುಂದಕ್ಕೆ ಸಾಗುತ್ತ ಸೋಗೆಯೊಂದಕ್ಕೆ ಮುಗ್ಗರಿಸಿದೆ. ಕೆಳಗೆ ನೋಡಿದರೆ ಒಂದಷ್ಟು ಚೇರಟೆಗಳು ಸೋಗೆಯಡಿಯಲ್ಲಿ ಬೆಚ್ಚಗೆ ಮಲಗಿದ್ದವು. ಹಾಳೆ ದೊಡ್ಡದಿದೆಯಲ್ಲಾ, ಕಡಿಯೋಣ ಎಂದು ಕೈಗೆತ್ತಿಕೊಂಡರೆ ಅಂಟು ಹುಳ ಕೈಗೆ ತಾಗಿ ಹೇಸಿಗೆಯಾಯಿತು. ಬಾಳೆಎಲೆಯಿಂದ ಕೈ ಉಜ್ಜೋಣವೆಂದು ಎಲೆ ಕಡಿಯಲು ನೋಡಿದರೆ ಚಂದದ ಹಸಿರು ಹುಳ ಎಳೇ ಚಿಗುರನ್ನು ತಿನ್ನುತ್ತಿದೆ.

ಹಾಗೇ ಸೂಕ್ಷ್ಮವಾಗಿ ಗಮನಿಸುತ್ತಾ ಮುಂದಡಿ ಇಟ್ಟಾಗ ಹಸಿರು ಹುಲ್ಲಿನಲ್ಲಿ ಬಗೆಬಗೆಯ ಕಂಬಳಿಹುಳ, ಮಿಡತೆಗಳು ಕಾಣಿಸಿದವು. ಜಾಗರೂಕತೆಯಿಂದ ಮೆಲ್ಲನೆ ಮುಂದಕ್ಕೆ ಹೋದರೆ ತೋಟದಂಚಿನ ಗುಡ್ಡ, ಅದರ ಮೇಲೆ ಗಂಡು ಹೆಣ್ಣು ನವಿಲುಗಳು ತಮ್ಮ ಮರಿಗಳೊಂದಿಗೆ ಅತ್ತಿಂದಿತ್ತ ಅಡ್ಡಾಡುತ್ತಿವೆ. ಮೆಲ್ಲನೆ ಗುಡ್ಡ ಹತ್ತೋಣವೆಂದು ಹೊರಟರೆ ಸರಕ್ಕನೆ ಹಾವೊಂದು ಓಡಿತು, ನೋಡಿದರೆ ಅಲ್ಲೇ ಇಲಿ ಹೆಗ್ಗಣಗಳ ಬಿಲವಿದೆ. ಗುಡ್ಡೆಯಲ್ಲಿರುವ ಗೇರು ಮಾವು, ಕುಂಟಲ,ಚೂರಿಕಾಯಿ, ಕೇಪುಳಹಣ್ಣು ಹಾಗೂ ಇನ್ನಿತರ ಕಾಡಿನ ಮರಗಳ ತುಂಬ ಹತ್ತಾರು ಬಗೆಯ ಹಕ್ಕಿಗಳ ಚಿಲಿಪಿಲಿ. ಅವುಗಳ ಅಡಿಯಲ್ಲಿ ಬೆಳೆದ ಹುಲ್ಲು, ಪೊದೆ, ಗಿಡ ಬಳ್ಳಿಗಳ ತುಂಬೆಲ್ಲ ಅವೆಷ್ಟೋ ಜಾತಿಯ ಹುಳ,ಇರುವೆ, ಚಿಟ್ಟೆ, ಜೇಡ, ಮಿಡತೆ ಹೀಗೇ ಹೆಸರು ತಿಳಿಯದ ಬಣ್ಣ ಬಣ್ಣದ ಸಣ್ಣದೊಡ್ಡ ರಾಶಿ ಜೀವಿಗಳು ಓಡಾಡುತ್ತಿವೆ.

ಮೈಯೆಲ್ಲ ಉಜ್ಜುತ್ತಾ, ತುರಿಸುತ್ತಾ ಪುನಃ ಗುಡ್ಡವಿಳಿದು ತೋಟದ ಕೊನೆಯಲ್ಲಿ ಇರುವ ಕೆರೆಯ ತುಂಬ ಶುಭ್ರ ನೀರು. ಹಾಗೆ ಮೆಟ್ಟಿಲಿಳಿದು ನೀರಿನಲ್ಲಿ ಕೈಯಾಡಿಸಿ ನೋಡಿದರೆ ಹದವಾದ ಬೆಚ್ಚಗಿನನೀರು. ಬೊಗಸೆಯಲ್ಲಿ ತುಂಬಿ ಮುಖ ತೊಳೆದೆ. ಆಹಾ! ಎಂಥಾ ದಿವ್ಯ ಅನುಭವ! ಕೈ ಕಾಲು ಮುಖ ತೊಳೆದುಕೊಂಡರೆ ಇಡೀ ದೇಹ ಮನಸ್ಸುಗಳೆರಡೂ ಪುಳಕಿತ. ಹಾಗೇ ಸುಮ್ಮನೆ ಪಕ್ಕದ ಕಲ್ಲಿನಲ್ಲಿ ಕುಳಿತು ನೀರಿನಲ್ಲಿ ಕಾಲು ಅಲ್ಲಾಡಿಸುತ್ತ ಕಣ್ಣು ಹಾಯಿಸಿ ನೋಡಿದರೆ ಕೆರೆಯ ತುಂಬೆಲ್ಲ ಹತ್ತಾರು ಬಗೆಯ ಮೀನುಗಳು ಓಡಾಡುತ್ತಿವೆ. ಜೊತೆಗೇ ಒಳ್ಳೆ, ಕಪ್ಪೆ, ಆಮೆ, ಏಡಿಗಳ ವಾಸ. ಅಲ್ಲದೆ ಮಿಂಚುಳ್ಳಿ, ನೀರ್ಕಾಗೆಗಳು ಆಹಾರಕ್ಕಾಗಿ ಅತ್ತಿತ್ತ ಹಾರುತ್ತಿವೆ.

ಆಯಾಸ ಕಮ್ಮಿ ಆಯಿತೆಂದು ಅಲ್ಲಿಂದ ಹೊರಟು ಮುಂದಕ್ಕೆ ಬಂದಾಗ ಜಂಬುನೇರಳೆ ಮರ ದಟ್ಟಗುಲಾಬಿ ಬಣ್ಣದ ದಳಗಳನ್ನು ತನ್ನ ಸುತ್ತೆಲ್ಲ ಉದುರಿಸಿದೆ. ಹಾಗೆ ಮೇಲಕ್ಕೆ ದೃಷ್ಟಿ ಹಾಯಿಸಿದೆ ಚಿಟ್ಟೆಗಳು, ದುಂಬಿಗಳು, ಜೇನು ನೊಣಗಳು, ಇತರ ಜೇನು ಹೀರುವ ಜೀವಿಗಳೇ ಹೂವುಗಳನ್ನು ಮುತ್ತಿಡುತ್ತಿವೆ. ಉದುರಿದ ದಳಗಳ ತುಂಬೆಲ್ಲ ವಿವಿಧ ಜಾತಿಯ ಇರುವೆಗಳು ಓಡಾಡುತ್ತಿವೆ. ಹಾಗೆ ಮುಂದಕ್ಕೆ ಬಂದಾಗ ಮನೆಯ ಪಕ್ಕದ ಚಿಕ್ಕು ಮರದಲ್ಲಿ ಸಣ್ಣಕ್ಕೆ ಕಾಯಿ ಬಿಟ್ಟಿದೆ. ಅದರಲ್ಲೂ ಅಷ್ಟೇ ಹಲವು ಬಗೆಯ ಜೀವಿಗಳು ಬೀಡು ಬಿಟ್ಟಿವೆ. ನಾನು ಬಂದ ಶಬ್ದ ಕೇಳಿ ಹಟ್ಟಿಯಲ್ಲಿದ್ದ ದನ ಕರು ಅಂಬಾ ಎಂದು ನನ್ನ ಕೂಗಿ ಕರೆದವು. ಹೆರೆದಿಟ್ಟ ಹುಲ್ಲನ್ನು ಹಾಕಿ ಬಂದಾಗ ಹೂವಿನ ತೋಟದಲ್ಲಿ ಬೇಟೆಯಾಡುತ್ತಿದ್ದ ಬೆಕ್ಕಿನ ಮರಿ ನಾನು ಬಂದ ಶಬ್ದಕ್ಕೆ ಬೇಟೆ ತಪ್ಪಿತೆಂದು ಸಿಟ್ಟಿನಿಂದ ದೂರಕ್ಕೋಡಿತು. ಕೈಕಾಲು ಮುಖ ತೊಳೆಯುತ್ತಿದ್ದಂತೆ ಟೈಗು ನಾಯಿ ಪ್ರೀತಿಯಿಂದ ಬೊಗಳುತ್ತಾ ಬಾಲ ಅಲ್ಲಾಡಿಸತೊಡಗಿತು.

ಒಳಗೆ ಬಂದು ಗಂಟೆ ಎಷ್ಟಾಯಿತೆಂದು ಗಡಿಯಾರ ನೋಡಿದರೆ ಹನ್ನೊಂದೂವರೆ. ಅಮ್ಮ ಗಾಂಧಾರಿ ಮೆಣಸು,ಶುಂಠಿ, ಇಂಗು ಹಾಕಿದ ಮಜ್ಜಿಗೆನೀರು ತಂದಿಟ್ಟಳು. ಒಂದು ಚೆಂಬು ತುಂಬಾ ಕುಡಿದು ಸುಮ್ಮನೆ ನೆಲದಲ್ಲಿ ಬಿದ್ದುಕೊಂಡೆ. ಅಲ್ಲೇ ಟಿವಿ ನೋಡುತಿದ್ದ ಅಪ್ಪ ಕೇಳಿದರು ಇಷ್ಟವಾಯಿತ ತೋಟ ಎಂದು. ನಾನು ಉತ್ತರಿಸಿದೆ ಈ ತೋಟ, ಗುಡ್ಡ, ಮನೆ, ನನ್ನದೊಬ್ಬನದೇ ಅಲ್ಲ, ಇದಕ್ಕೆ ಪಾಲುದಾರರು ಸುಮಾರು ಜನ ಇದ್ದಾರೆ ಎಂದ ತಕ್ಷಣ ಅಮ್ಮ ಅಪ್ಪ ಹೌಹಾರಿ ಯಾರೆಂದು ಕೇಳುತ್ತಾ ಗಾಬರಿಯಾದರು. ನಾನು ಕಂಡದೆಲ್ಲ ಹೇಳಿದಾಗ ನಗೆಯಾಡುತ್ತಾ ಹೇಳಿದರು ಅವುಗಳ ಜೊತೆ ನೀನು ಒಬ್ಬ. ಅವುಗಳೆಲ್ಲ ಇದ್ದರೇ ನಮಗೆಲ್ಲ ಹಬ್ಬ ಎಂದು.

Creative Writings