Karada Vishwa

Article · November 13, 2026

ಅರ್ಧಸತ್ಯ : ಸುಳ್ಳಿಗಿಂತಲೂ ಅಪಾಯಕಾರಿಯಾದ ಸತ್ಯದ ಇನ್ನೊಂದು ಮುಖ!

By Adarsh Golwalkar Y

ಆದರ್ಶ ಗೋಳ್ವಲ್ಕರ್

ನಾವು ಜೀವನದಲ್ಲಿ ಅನೇಕ ಬಾರಿ ಒಂದು ಮಾತನ್ನು ಕೇಳಿರುತ್ತೇವೆ. ಸುಳ್ಳಿಗಿಂತ ಅರ್ಧಸತ್ಯ ಹೆಚ್ಚು ಅಪಾಯಕಾರಿ. ಏಕೆಂದರೆ ಸುಳ್ಳನ್ನು ಗುರುತಿಸುವುದು ಕೆಲವೊಮ್ಮೆ ಸುಲಭ. ಆದರೆ ಅರ್ಧಸತ್ಯವನ್ನು ಗುರುತಿಸುವುದು ಅಷ್ಟು ಸುಲಭವಲ್ಲ

ಯಿಡ್ಡಿಷ್ ಭಾಷೆಯಲ್ಲೊಂದು ಬಹಳ ಅರ್ಥಪೂರ್ಣವಾದ ಗಾದೆಯಿದೆ: "A half-truth is a whole lie."‌ ಅಂದರೆ, ಅರ್ಧಸತ್ಯ ಒಂದು ಸಂಪೂರ್ಣ ಸುಳ್ಳಿಗೆ ಸಮಾನ.
ನಾವು ಸಾಮಾನ್ಯವಾಗಿ ಸುಳ್ಳು ಹೇಳುವುದನ್ನು ತಪ್ಪು ಎಂದು ಪರಿಗಣಿಸುತ್ತೇವೆ. ಆದರೆ ಸತ್ಯದ ಒಂದು ಭಾಗವನ್ನು ಮಾತ್ರ ಹೇಳಿ, ಉಳಿದ ಭಾಗವನ್ನು ಉದ್ದೇಶಪೂರ್ವಕವಾಗಿ ಮರೆಮಾಚುವುದೂ ಒಂದು ರೀತಿಯ ಮೋಸವೇ. ಏಕೆಂದರೆ ಅರ್ಧಸತ್ಯ ಕೇಳುವವರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತದೆ. ಸುಳ್ಳು ಹೇಳದೆಯೇ ಇನ್ನೊಬ್ಬರನ್ನು ತಪ್ಪುದಾರಿಗೆ ಎಳೆಯುವ ಶಕ್ತಿ ಅರ್ಧಸತ್ಯಕ್ಕಿದೆ.

ಕೆಲವೊಮ್ಮೆ ನಾವು ಹೇಳುವ ಮಾತು ಸುಳ್ಳಾಗಿರುವುದಿಲ್ಲ. ಆದರೆ ನಾವು ಹೇಳದೆ ಬಿಟ್ಟಿರುವ ವಿಷಯವೇ ನಿಜವಾದ ಸತ್ಯವಾಗಿರುತ್ತದೆ. ನಾವು ಜೀವನದಲ್ಲಿ ಅನೇಕ ಬಾರಿ ಒಂದು ಮಾತನ್ನು ಕೇಳಿರುತ್ತೇವೆ. ಸುಳ್ಳಿಗಿಂತ ಅರ್ಧಸತ್ಯ ಹೆಚ್ಚು ಅಪಾಯಕಾರಿ. ಏಕೆಂದರೆ ಸುಳ್ಳನ್ನು ಗುರುತಿಸುವುದು ಕೆಲವೊಮ್ಮೆ ಸುಲಭ. ಆದರೆ ಅರ್ಧಸತ್ಯವನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಅರ್ಧಸತ್ಯ ಎಂದರೆ ಸಂಪೂರ್ಣ ಸುಳ್ಳಲ್ಲ. ಅದರಲ್ಲಿ ಸ್ವಲ್ಪ ಸತ್ಯವಿರುತ್ತದೆ. ಆದರೆ ಉಳಿದ ಸತ್ಯವನ್ನು ಮರೆಮಾಚಲಾಗಿರುತ್ತದೆ. ಕೇಳುವವರಿಗೆ ಒಂದು ವಿಷಯದ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುವುದೇ ಅರ್ಧಸತ್ಯದ ನಿಜವಾದ ಅಪಾಯ.

ಒಂದು ಸರಳ ಉದಾಹರಣೆ ನೋಡೋಣ.

ಒಬ್ಬ ವ್ಯಕ್ತಿ ತನ್ನ ಸ್ನೇಹಿತನ ಬಗ್ಗೆ, "ಅವನು ನನ್ನಿಂದ ಹಣ ತೆಗೆದುಕೊಂಡಿದ್ದಾನೆ" ಎಂದು ಹೇಳುತ್ತಾನೆ. ಇದನ್ನು ಕೇಳಿದವರಿಗೆ ಆ ಸ್ನೇಹಿತ ಹಣ ಪಡೆದು ವಾಪಸ್ ಕೊಡದವನು ಎಂಬ ಭಾವನೆ ಬರಬಹುದು. ಆದರೆ ಆತ ಹೇಳದಿರುವ ಮತ್ತೊಂದು ಸತ್ಯವೆಂದರೆ, ಆ ಹಣವನ್ನು ಸ್ನೇಹಿತನಿಗೆ ಸಾಲವಾಗಿ ನೀಡಿದ್ದನು ಮತ್ತು ಸ್ನೇಹಿತ ಅದನ್ನು ಈಗಾಗಲೇ ಹಿಂದಿರುಗಿಸಿದ್ದಾನೆ ಎಂಬುದು! ಇಲ್ಲಿ ಹೇಳಿದ ಮಾತು ಸಂಪೂರ್ಣ ಸುಳ್ಳಲ್ಲ. ಆದರೆ ಸಂಪೂರ್ಣ ಸತ್ಯವೂ ಅಲ್ಲ. ಒಂದು ಸತ್ಯವನ್ನು ಮಾತ್ರ ಹೇಳಿ, ಮತ್ತೊಂದು ಸತ್ಯವನ್ನು ಮರೆಮಾಚಿದಾಗ ಅರ್ಧಸತ್ಯ ಹುಟ್ಟಿಕೊಳ್ಳುತ್ತದೆ.

ಮಹಾಭಾರತದಲ್ಲಿಯೂ ಇದೆ ಅರ್ಧಸತ್ಯದ ಒಂದು ಪ್ರಸಂಗ!
ಅರ್ಧಸತ್ಯದ ಬಗ್ಗೆ ಮಾತನಾಡುವಾಗ ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ನಡೆದ ದ್ರೋಣಾಚಾರ್ಯರ ಪ್ರಸಂಗ ನೆನಪಾಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣಾಚಾರ್ಯರು ಕೌರವರ ಪರವಾಗಿ ಹೋರಾಡುತ್ತಿದ್ದರು. ಅವರನ್ನು ಸೋಲಿಸುವುದು ಪಾಂಡವರಿಗೆ ಬಹಳ ಕಷ್ಟವಾಗಿತ್ತು. ದ್ರೋಣಾಚಾರ್ಯರಿಗೆ ತಮ್ಮ ಮಗ ಅಶ್ವತ್ಥಾಮನೆಂದರೆ ಅಪಾರ ಪ್ರೀತಿ. ದ್ರೋಣಾಚಾರ್ಯರನ್ನು ಯುದ್ಧದಿಂದ ದೂರ ಮಾಡುವ ಉದ್ದೇಶದಿಂದ ಶ್ರೀಕೃಷ್ಣ ಒಂದು ಉಪಾಯವನ್ನು ಸೂಚಿಸುತ್ತಾನೆ. ಭೀಮನು ಅಶ್ವತ್ಥಾಮ ಎಂಬ ಹೆಸರಿನ ಆನೆಯೊಂದನ್ನು ಕೊಂದು, "ಅಶ್ವತ್ಥಾಮ ಸತ್ತನು" ಎಂದು ಘೋಷಿಸುತ್ತಾನೆ. ಆದರೆ ದ್ರೋಣಾಚಾರ್ಯರಿಗೆ ಈ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ. ಆದ್ದರಿಂದ ಅವರು ಸತ್ಯವನ್ನೇ ಹೇಳುವ ಧರ್ಮರಾಜ ಯುಧಿಷ್ಠಿರನ ಬಳಿ ಬಂದು, "ನನ್ನ ಮಗ ಅಶ್ವತ್ಥಾಮ ಬದುಕಿದ್ದಾನೆಯೇ?" ಎಂದು ಕೇಳುತ್ತಾರೆ.
ಆಗ ಯುಧಿಷ್ಠಿರನು, "ಅಶ್ವತ್ಥಾಮ ಹತಃ..." ಎಂದು ಹೇಳಿ, ನಂತರ ಮೆಲ್ಲಗೆ "ನರೋ ವಾ ಕುಂಜರೋ ವಾ" (ಮನುಷ್ಯನೋ ಅಥವಾ ಆನೆಯೋ) ಎಂದು ಹೇಳುತ್ತಾನೆ.
ಅಂದರೆ ಅಶ್ವತ್ಥಾಮ ಸತ್ತಿದ್ದಾನೆ ಎಂಬ ಮಾತು ನಿಜವಾಗಿದ್ದರೂ, ಸತ್ತಿದ್ದು ದ್ರೋಣಾಚಾರ್ಯರ ಮಗನಲ್ಲ, ಅಶ್ವತ್ಥಾಮ ಎಂಬ ಹೆಸರಿನ ಆನೆ. ತನ್ನ ಮಗನೇ ಸತ್ತಿದ್ದಾನೆ ಎಂದು ಭಾವಿಸಿದ ದ್ರೋಣಾಚಾರ್ಯರು ಶಸ್ತ್ರಾಸ್ತ್ರಗಳನ್ನು ಕೆಳಗಿಡುತ್ತಾರೆ. ನಂತರ ಧೃಷ್ಟದ್ಯುಮ್ನನಿಂದ ಹತರಾಗುತ್ತಾರೆ.

ಈ ಪ್ರಸಂಗ ನಮಗೆ ಒಂದು ಗಂಭೀರವಾದ ಪ್ರಶ್ನೆಯನ್ನು ಮುಂದಿಡುತ್ತದೆ.ನಾವು ಹೇಳುವ ಮಾತು ಅಕ್ಷರಶಃ ಸತ್ಯವಾಗಿದ್ದರೆ ಸಾಕೇ? ಅಥವಾ ಆ ಮಾತಿನಿಂದ ಎದುರಿನವರಿಗೆ ಯಾವ ಅರ್ಥವಾಗುತ್ತದೆ ಎಂಬುದೂ ಮುಖ್ಯವೇ? ಮಹಾಭಾರತದ ಈ ಘಟನೆ ಕೇವಲ ಒಂದು ಯುದ್ಧದ ತಂತ್ರವಲ್ಲ. ಸತ್ಯ, ಧರ್ಮ, ಕರ್ತವ್ಯ ಮತ್ತು ನೈತಿಕತೆಯ ನಡುವಿನ ಸಂಘರ್ಷವನ್ನೂ ತೋರಿಸುತ್ತದೆ.

ನಮ್ಮ ದಿನನಿತ್ಯದ ಬದುಕಿನಲ್ಲಿಯೂ ಅರ್ಧಸತ್ಯ!

ಅರ್ಧಸತ್ಯ ಎನ್ನುವುದು ಕೇವಲ ಮಹಾಭಾರತದ ಕಾಲಕ್ಕೆ ಸೀಮಿತವಾಗಿಲ್ಲ. ಇಂದಿನ ನಮ್ಮ ಕುಟುಂಬಗಳಲ್ಲಿ, ಸ್ನೇಹಿತರ ನಡುವೆ, ಕಚೇರಿಗಳಲ್ಲಿ ಮತ್ತು ಸಮಾಜದಲ್ಲಿ ಪ್ರತಿದಿನವೂ ಕಾಣಸಿಗುತ್ತದೆ. ಕುಟುಂಬದಲ್ಲಿ ಇಬ್ಬರ ನಡುವೆ ಜಗಳವಾದಾಗ ಒಬ್ಬರು ತಮ್ಮ ತಪ್ಪುಗಳನ್ನು ಮರೆಮಾಚಿ, ಎದುರಿನವರ ತಪ್ಪುಗಳನ್ನು ಮಾತ್ರ ಬೇರೆಯವರ ಮುಂದೆ ಹೇಳುತ್ತಾರೆ. ಕೇಳುವವರಿಗೆ ಒಂದು ಕಡೆಯ ಮಾತು ಮಾತ್ರ ಕೇಳಿಸುತ್ತದೆ. ಅದರ ಆಧಾರದ ಮೇಲೆ ಅವರು ತೀರ್ಪು ನೀಡುತ್ತಾರೆ.
ಕೆಲಸದ ಸ್ಥಳದಲ್ಲಿಯೂ ಇದೇ ಪರಿಸ್ಥಿತಿ. ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಮಾತ್ರ ಹೇಳಿ, ಅದಕ್ಕೆ ಕಾರಣವಾದ ಪರಿಸ್ಥಿತಿಯನ್ನು ಮರೆಮಾಚಬಹುದು. ಪರಿಣಾಮವಾಗಿ ತಪ್ಪು ಮಾಡದ ವ್ಯಕ್ತಿಯೂ ತಪ್ಪಿತಸ್ಥನಾಗಬಹುದು. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಅರ್ಧಸತ್ಯದ ಅಪಾಯ ಇನ್ನೂ ಹೆಚ್ಚಾಗಿದೆ. ಒಂದು ಘಟನೆಯ ಹತ್ತು ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡು, ಅದರ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಬಗ್ಗೆ ತೀರ್ಪು ನೀಡುವವರಿದ್ದಾರೆ. ಆದರೆ ಆ ಘಟನೆಗೆ ಮೊದಲು ಏನಾಯಿತು? ನಂತರ ಏನಾಯಿತು? ಅದರ ಹಿಂದಿನ ಕಾರಣವೇನು? ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವವರು ಕಡಿಮೆ.

ಒಂದು ಘಟನೆಯ ಸಣ್ಣ ಭಾಗವನ್ನು ನೋಡಿ ಇಡೀ ಘಟನೆಯ ಬಗ್ಗೆ ನಿರ್ಧಾರಕ್ಕೆ ಬರುವುದು ಎಷ್ಟು ಸರಿಯಾಗಿದೆ? ಅರ್ಧಸತ್ಯ ಹೇಳುವವರಿಗಿಂತ ಅದನ್ನು ನಂಬುವವರೂ ಎಚ್ಚರಿಕೆಯಿಂದಿರಬೇಕು! ಯಾರಾದರೂ ಬಂದು ಇನ್ನೊಬ್ಬರ ಬಗ್ಗೆ ಏನಾದರೂ ಹೇಳಿದಾಗ ತಕ್ಷಣ ನಂಬಬಾರದು. ಒಂದು ಘಟನೆಯ ಒಂದು ಮುಖವನ್ನು ಮಾತ್ರ ಕೇಳಿ ನಿರ್ಧಾರಕ್ಕೆ ಬರಬಾರದು. ಎರಡೂ ಕಡೆಯ ಮಾತುಗಳನ್ನು ಕೇಳಬೇಕು. ಭಾವನೆಗಳಿಗಿಂತ ವಾಸ್ತವಾಂಶಗಳಿಗೆ ಹೆಚ್ಚು ಮಹತ್ವ ನೀಡಬೇಕು. ಏಕೆಂದರೆ ನಮಗೆ ತಲುಪಿದ ಮಾಹಿತಿಯೇ ಸಂಪೂರ್ಣ ಸತ್ಯ ಎಂದು ಹೇಳಲು ಸಾಧ್ಯವಿಲ್ಲ.

ಅದೇ ರೀತಿ ನಾವು ಮಾತನಾಡುವಾಗಲೂ ಎಚ್ಚರಿಕೆ ಇರಬೇಕು. ನಮಗೆ ಅನುಕೂಲವಾಗುವ ಸತ್ಯವನ್ನು ಮಾತ್ರ ಹೇಳಿ, ಉಳಿದ ಸತ್ಯವನ್ನು ಮರೆಮಾಚುವುದರಿಂದ ತಾತ್ಕಾಲಿಕವಾಗಿ ಗೆದ್ದಂತೆ ಕಾಣಬಹುದು. ಆದರೆ ದೀರ್ಘಕಾಲದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ. ಎಲ್ಲವನ್ನೂ ಎಲ್ಲರಿಗೂ ಹೇಳಬೇಕೆಂದಿಲ್ಲ. ಕೆಲವೊಮ್ಮೆ ಮೌನವಾಗಿರುವುದೇ ಉತ್ತಮ. ಆದರೆ ಹೇಳುವ ಮಾತಿನಿಂದ ಇನ್ನೊಬ್ಬರಿಗೆ ತಪ್ಪು ಕಲ್ಪನೆ ಮೂಡುವಂತೆ ಮಾಡುವುದು ಸರಿಯಲ್ಲ.

ಕೊನೆಯ ಮಾತು...

ಸತ್ಯ ಹೇಳುವುದಕ್ಕೆ ಧೈರ್ಯ ಬೇಕು. ಆದರೆ ನಮ್ಮ ವಿರುದ್ಧವಾಗಿದ್ದರೂ ಸಂಪೂರ್ಣ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಇನ್ನೂ ಹೆಚ್ಚಿನ ಧೈರ್ಯ ಬೇಕು. ಕೆಲವೊಮ್ಮೆ ಸಂಪೂರ್ಣ ಸತ್ಯ ನಮ್ಮ ಪರವಾಗಿರುವುದಿಲ್ಲ. ನಮ್ಮ ತಪ್ಪುಗಳನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಆದರೂ ಸತ್ಯವನ್ನು ಮರೆಮಾಚಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳುವುದಕ್ಕಿಂತ, ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು ಉತ್ತಮ.

ಮಹಾಭಾರತದಲ್ಲಿ ಯುಧಿಷ್ಠಿರನ ಬಾಯಿಂದ ಹೊರಬಂದ ಅರ್ಧಸತ್ಯ ಒಂದು ಮಹತ್ವದ ತಿರುವಿಗೆ ಕಾರಣವಾಯಿತು. ಅದೇ ರೀತಿ ಇಂದಿನ ಬದುಕಿನಲ್ಲಿಯೂ ಅರ್ಧಸತ್ಯಗಳು ಸಂಬಂಧಗಳನ್ನು ಮುರಿಯಬಹುದು, ಸ್ನೇಹವನ್ನು ಹಾಳುಮಾಡಬಹುದು ಮತ್ತು ಮನುಷ್ಯರ ನಡುವಿನ ನಂಬಿಕೆಯನ್ನು ಕಳೆದುಹಾಕಬಹುದು.

ನೆನಪಿರಲಿ...

ಒಂದು ಸುಳ್ಳು ನಮ್ಮನ್ನು ಮೋಸಗೊಳಿಸಬಹುದು. ಆದರೆ ಒಂದು ಅರ್ಧಸತ್ಯ ನಮ್ಮ ಆಲೋಚನೆಗಳನ್ನೇ ಬದಲಾಯಿಸಬಹುದು.

ಸತ್ಯವನ್ನು ಮರೆಮಾಚಿ ಗೆದ್ದ ಸಂತೋಷ ಕ್ಷಣಿಕ. ಆದರೆ ಸಂಪೂರ್ಣ ಸತ್ಯವನ್ನು ಹೇಳಿ ಉಳಿಸಿಕೊಂಡ ನಂಬಿಕೆ ಶಾಶ್ವತ.

ಅರ್ಧಸತ್ಯದಿಂದ ಸಂಬಂಧಗಳನ್ನು ಗೆಲ್ಲಬಹುದು ಎಂದುಕೊಳ್ಳಬೇಡಿ. ಏಕೆಂದರೆ ಕೊನೆಗೆ ಸೋಲುವುದು ಸಂಬಂಧಗಳಲ್ಲಿರುವ ನಂಬಿಕೆಯೇ!

Creative Writings