
Article · September 12, 2026
ಪಂಚಪ್ರಾಣ ಈ ಗಾಳಿ
By ಶಾರದಾ ಕಜೆಗದ್ದೆ, ಬಾಯಾರು
ಶಾರದಾ ಕಜಗದ್ದೆ
ಪಂಚಭೂತಗಳಲ್ಲಿ ಒಂದಾದ ಗಾಳಿಯ ಮಹತ್ವದ ಕುರಿತು ಸಣ್ಣ ಚಿಂತನೆ.
ಪಂಚಭೂತಗಳಲ್ಲಿ ಒಂದಾದ ಗಾಳಿಯ ಬಗ್ಗೆ ಗಾಳಿಮಾತಾಡಿದರೂ ಆ ಗಳಿಗೆಯಲ್ಲೇ ತಿಳಿದುಬಿಡುತ್ತದೆ ಈ ಗಾಳಿಗೆ. ಹೌದು, ಒಂದು ಸಣ್ಣ ಶಬ್ದ ನಮ್ಮ ಕಿವಿಗೆ ಬೀಳಬೇಕೆಂದರೂ ವಾಯುಸಂಚಾರವಿರಬೇಕು. ಬಾಯಿಂದ ಹೊರಬಿದ್ದ ಶಬ್ದ ನಿಶ್ಶಬ್ದವಾಗದೆ ಸಶಬ್ದವಾಗಿ ಆಲಿಸುವ ಕಿವಿಗಳಿಗೆ ಸೇರುವುದೇ ಗಾಳಿಯಿಂದ..ಕಾಯಿ ಹಣ್ಣಾಗಿದೆ ಎಂದರುಹಲು, ಮೊಗ್ಗರಳಿ ಹೂವಾಗೋ ಗಂಧವನ್ನು ಪಸರಿಸಲು, ಚಂದನದ ಸುಗಂಧವನ್ನು ಆಘ್ರಾಣಿಸಲು ವಾಯುಸಂಚಾರವಿರಬೇಕು. ಅನಲರಾಜನು ಹೊತ್ತಿ ಉರಿದು ಬೆಳಕಬೀರಲು ಅನಿಲದೇವನ ಕೃಪೆ ಬೇಕು. ಅಗಾಧಸಾಗರನಲ್ಲಿ ತರಂಗಗಳು ಏಳುಬೀಳಲು ಪವನರಾಜನ ಸ್ನೇಹ ಬೇಕು. ನದಿ ಸಾಗರಗಳಲ್ಲಿನ ನೀರು ಬಿಸಿಯಾಗಿ, ಆವಿಯಾಗಿ ಮಾರುತಗಳಾಗಿ ಅನಂತ ಆಕಾಶದಲ್ಲಿ ಸಂಚರಿಸಿ ಋತುಮಾನಕ್ಕನುಗುಣವಾಗಿ ತಂಪಾಗಿ ಭೂಮಿಗೆ ಮಳೆಯನ್ನೀಯಲು ಈ ಮರುತನ ಸಖ್ಯ ಸದಾ ಇರಲೇಬೇಕು.
ಅಷ್ಟೇ ಅಲ್ಲದೆ ಮಾನವನನ್ನೊಳಗೊಂಡು ಜಗತ್ತಿನಲ್ಲಿರುವ ಕೋಟ್ಯಂತರ ಜೀವಿಗಳು ಉಸಿರಾಡಲು ಪರಿಶುದ್ಧ ಗಾಳಿ ಅತ್ಯಗತ್ಯ. ಅದಕ್ಕೆ ಅಲ್ಲವೇ ಗಾಳಿಯನ್ನು ಪ್ರಾಣವಾಯು ಎಂದು ಪೂಜನೀಯವಾಗಿಸಿರುವುದು. ಆಧ್ಯಾತ್ಮಿಕ ಮತ್ತು ದೈವಿಕರೂಪದಲ್ಲಿ ನೋಡುವುದಾದರೆ ಒಂದು ಜೀವಿಯ ದೇಹದಲ್ಲಿ ಸಂಚರಿಸುವ ಗಾಳಿಯನ್ನು ಪ್ರಾಣಾಪಾನ ವ್ಯಾನೋದಾನ ಸಮಾನ ಎಂದು ಪಂಚಪ್ರಾಣಗಳಾಗಿಸಿ ವಾಯುವಿನ ಮಹತ್ವವನ್ನು ವಿವರಿಸಲಾಗಿದೆ. ಅಲ್ಲದೆ ಜೀವಿಗಳೆಲ್ಲ ತಮ್ಮ ಸುಸ್ತನ್ನು ಹೊರಹಾಕುವುದು ಏದುಸಿರಿನ ಮುಖಾಂತರವೇ ಅಲ್ಲವೇ. ಇನ್ನು ನಾವುಗಳು ನಮ್ಮ ಕಷ್ಟ, ದುಃಖಗಳ ಮನೋಭಾರವನ್ನು ನಿಟ್ಟುಸಿರ ರೂಪದಲ್ಲಿ ಹೊರಹಾಕಿ ನಿರಾಳರಾಗುತ್ತೇವೆ. ಆದರೆ, ಆದರೆ ಈ ವಿಶಾಲವಾದ ಭೂಮಿಯಲ್ಲಿ ಅಂಥ ಪರಿಶುದ್ಧ ಗಾಳಿಯನ್ನು ಇಡೀ ವಿಶ್ವಕ್ಕೇ ಪೂರೈಸುವ ಜವಾಬ್ದಾರಿಯನ್ನು ಮಾತ್ರ ಹಸಿರು ಹೊತ್ತ ಗಿಡಮರಬಳ್ಳಿಗಳು ಅನಾದಿಕಾಲದಿಂದಲೂ ಅನಾಯಾಸವಾಗಿ, ಅನೂಚಾನಾಗಿ, ಅವ್ಯಾಹತವಾಗಿ, ನಿರಹಂಕಾರದಿಂದ ನಿರ್ವಹಿಸುತ್ತಿವೆ.
ಆದರೆ ಬೇಕಾಬಿಟ್ಟಿ ಕಟ್ಟಡ, ಸಾವಿರಾರು ಮೈಲಿ ರಸ್ತೆ, ರೈಲ್ವೆಮಾರ್ಗಗಳ ನಿರ್ಮಾಣದ ಹೆಸರಿನಲ್ಲಿ ಕಾಡುಗಳ ಸರ್ವನಾಶ, ವಿಪರೀತ ವಾಹನ ಸಂಚಾರ, ಹಗಲು ರಾತ್ರಿಗಳೆನ್ನದೆ ಕಾರ್ಖಾನೆಗಳಿಂದ ಹೊರಬಿಡುವ ರಾಸಾಯನಿಕಯುಕ್ತ ಅನಿಲಗಳು ಪ್ರಾಣವಾಯುವನ್ನೇ ವಿಷಮಯವಾಗಿಸುತ್ತಿವೆ. ಹೀಗೆ ವಿಜ್ಞಾನ, ತಂತ್ರಜ್ಞಾನ, ಆಧುನಿಕತೆ ಹೆಸರಿನಲ್ಲಿ ಭೂಮಿಯಲ್ಲಿರುವ ಹಸಿರನ್ನೆಲ್ಲ ಬರಡಾಗಿಸಿ ಸಂಪೂರ್ಣ ಜಗತ್ತನ್ನೇ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸ ಹೊರಟು ವಾತಾವರಣವನ್ನೇ ನಿರ್ವಾತ/ ದುರ್ನಾತ/ ಕಲುಷಿತಗೊಳಿಸಿ ತಾನೇ ಅತೀಬುದ್ಧಿವಂತ ಎಂದು ಬೀಗುತ್ತಿರುವ ಈ ಮಾನವ ಜೀವಿಗೆ ಏನು ಹೇಳೋಣ ಹೇಳಿ. ಗಾಳಿ ಎಂದರೆ ಅಷ್ಟೊಂದು ಹಗುರವೇ? ನೆನಪಿರಲಿ! ಅತ್ಯಂತ ಸನಿಹದ ನಾಳೆಯಿಂದಲೇ ಒಂದುಸಿರು ಪರಿಶುದ್ಧ ಗಾಳಿಗೆ ಬೆಲೆತೆತ್ತು ಉಚ್ಛ್ವಸಿಸಬೇಕಾದೀತು. ಏನಂತೀರಾ.
