Karada Vishwa

Article · July 1, 2026

ಹಲಸಿನ ಅಂಟು ಬೆಸೆಯುವ ನಂಟು

- ದಿವ್ಯಾ ಶಿರಂತಡ್ಕ

ಮನೆ ಮಂದಿಯನ್ನೆಲ್ಲ ಒಂದಷ್ಟು ಹೊತ್ತಾದರೂ ಒಟ್ಟಿಗೆ ಬೆಸೆದದ್ದು ಹಲಸಿನಕಾಯಿಯ ಅಂಟು. ಹೌದು, ಈ ವರ್ಷದ ಹಲಸಿನ ಕಾಯಿಯ ಸೀಸನ್ ಮುಗಿಯುತ್ತಾ ಬಂದಾಗ, ಕಡೆಯ ಕೆಲಸವೆಂಬಂತೆ ಒಂದಷ್ಟು ಕಾಯಿಗಳನ್ನು ಕೊಯ್ದು ' ಉಪ್ಪು ಸೊಳೆ ' ಹಾಕುವ ಕಾರ್ಯ ಪ್ರಾರಂಭ ಆಯ್ತು. ಸದಾ ಒಂದಿಲ್ಲೊಂದು ಕಾರ್ಯಗಳಿಗೆ ಮೊಬೈಲ್ ನೋಡುತ್ತಾ ಇರುವವರಿಗೆ ಅರ್ಧ ದಿನವಾದರೂ ಅದರಿಂದ ಮುಕ್ತಿ ಸಿಕ್ಕಂತಾಯಿತು. ಬೇರೆ ಯಾವುದೋ ಕೆಲಸವಾದರೆ ಮೊಬೈಲ್ ಪಕ್ಕದಲ್ಲಿಯೇ ವಿರಾಜಮಾನವಾಗಿರುತ್ತದೆ. ಆದರೆ ಇಲ್ಲಿ ಪಕ್ಕದಲ್ಲಿ ಇದ್ದರೂ ಹಲಸಿನ ಅಂಟಿನ ಕಾರಣದಿಂದ ಮೊಬೈಲಿಗೆ ನಾವು ಅಂಟದಂತೆ ಅಂತರ ಕಾಯ್ದುಕೊಳ್ಳಲೇ ಬೇಕಾಗುತ್ತದೆ. ಹಾಗೆಯೇ ಸೊಳೆ ಬಿಡಿಸಲು ಮನೆ ಮಂದಿಯೆಲ್ಲ ರೌಂಡ್ ಟೇಬಲ್ ಕಾನ್ಫರೆನ್ಸ್ ನಂತೆ ಜೊತೆಯಾಗಿ ಕೂತು ಅದರ ಕೆಲಸ ಮಾಡುವುದು. ಇದು ಮನೆಮಂದಿಯ ಮಧ್ಯೆ ಸೌಹಾರ್ದ ಸಂಬಂಧಕ್ಕೂ ಅತ್ಯಂತ ಸಹಕಾರಿಯೆಂದು ಅನಿಸದೆ ಇರಲಿಲ್ಲ. ಒಬ್ಬರು ದೊಡ್ಡ ದೊಡ್ಡ ಗಾತ್ರದ ಹಲಸಿನಕಾಯಿಯನ್ನು ಮೆಟ್ಟುಗತ್ತಿಯಲ್ಲಿ ಕೊಯ್ಯಲು, ಒಂದಿಬ್ಬರು ರೆಚ್ಚೆಯಿಂದ ಸೊಳೆ ಬೇರ್ಪಡಿಸಲು, ಮತ್ತೆ ಒಂದಷ್ಟು ಮಂದಿ ಸೊಳೆ ಬಿಡಿಸಲು... ಹೀಗೆ ಆಬಾಲ ವೃದ್ಧರಾದಿಯಾಗಿ ಮನೆಯಲ್ಲಿ ಇದ್ದಷ್ಟು ಮಂದಿಯ ಕೈಗಳಿಗೂ ಇಲ್ಲಿ ಕೆಲಸ ಇದ್ದೇ ಇರುತ್ತದೆ.‌ ಅದು ಇದು ಹರಟೆ ಮಾತನಾಡುತ್ತಾ, ಬಿಡಿಸಿದ ಸೊಳೆಗಳಲ್ಲಿ ಕೆಲವನ್ನು ಹೊಟ್ಟೆಗೆ ಸೇರಿಸಿಕೊಳ್ಳುತ್ತಾ, ಕಾಯಕ ಮುಂದುವರಿಯುತ್ತಿರುತ್ತದೆ.‌ ಈ ನಡುವೆ ಯಾರದಾದರೂ ಫೋನ್ ಬಂದರೂ ಎತ್ತಿಕೊಳ್ಳಲಾರದಷ್ಟು ಮಯಣ ಕೈಯನ್ನು ಅಲಂಕರಿಸಿಯಾಗಿರುತ್ತದೆ.‌

ನಮ್ಮಲ್ಲಿ ಫಲ ಬಿಡುವ ಆರೇಳು ಹಲಸಿನ ಮರಗಳು ಇದ್ದು ಪ್ರತಿಯೊಂದರಲ್ಲೂ ಸಾಕಷ್ಟು ಹಲಸಿನ ಕಾಯಿಗಳು ತೂಗುತ್ತಿರುತ್ತವೆ. ಆದರೆ ಬೃಹತ್ ಗಾತ್ರದ ಮರಗಳಲ್ಲಿ ಕಾಯಿಗಳೆಲ್ಲ ಅತ್ಯಂತ ಮೇಲೆಯೇ ಇರುವುದರಿಂದ ಅದನ್ನು ಕೀಳಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಹಾಗೆಂದು ಕೊಯ್ವವರು ಇಲ್ಲದೆಯೂ ಅಲ್ಲ. ಆದರೆ ಯಾಕೋ ಬಾಲವಿರುವ ಅವುಗಳಿಗೆ ಬಾಲವಿಲ್ಲದ ನಮಗೆ ಕೊಯ್ದುಕೊಡಲು ಏನೋ ನಿರಾಕರಣೆ. ಸ್ವಜಾತೀಯ ಪ್ರೀತಿಯಿಂದ ಅವುಗಳೇ ಗೆಲ್ಲಿನಿಂದ ಗೆಲ್ಲಿಗೆ ಹಾರಿ, ತಿನ್ನುತ್ತಾ ಕೆಲವೊಮ್ಮೆ ನಮಗೆ ಅಲ್ಲಿಂದಲೇ ತೋರಿಸಿ ಆಸೆಪಡಿಸುತ್ತಾ ಅಣಕಿಸುತ್ತದೆ. 'ಕುಂಬಾರನ ಮನೆಯಲ್ಲಿ ಮಡಿಕೆಗೆ ತತ್ವಾರ' ಎನ್ನುವಂತೆ ನಮ್ಮಲ್ಲಿ ಅಷ್ಟೊಂದು ಹಲಸಿನ ಕಾಯಿಗಳು ಇದ್ದರೂ ಅದು 'ಮಂಗ'ಮಾಯವಾಗಿ ನಾವು ಉಪ್ಪು ಸೊಳೆ ಹಾಕಲು ಆತ್ಮೀಯರ ಮನೆಯಿಂದ ಹಲಸಿನ ಕಾಯಿ ತರಬೇಕಾಗಿ ಬಂತು.

40ರ ನಂತರ ಆರೋಗ್ಯಕರ ಜೀವನ ಶೈಲಿ ಹೇಗಿರಬೇಕು ಎನ್ನುತ್ತಾ ವೈದ್ಯರೊಬ್ಬರು ನಮಗೆಲ್ಲ ಟಿಪ್ಸ್ ಕೊಡುತ್ತಿದ್ದರು. ಅಂತೆಯೇ ಆಹಾರ ಕ್ರಮದ ಬಗ್ಗೆಯೂ ತಿಳಿ ಹೇಳುತ್ತಾ, 'ರಾತ್ರಿ ಊಟ ಬಿಡಿ, ಬದಲಿಗೆ ಒಂದೆರಡು ಹಣ್ಣುಗಳನ್ನು ಸೇವಿಸಿ, ಅದರಲ್ಲೂ ಮನೆಯಲ್ಲಿ ಬೆಳೆದ ಹಣ್ಣುಗಳಾದರೆ ಅತ್ಯುತ್ತಮ' ಎಂದಾಗ ನಾನು ಥಟ್ಟನೆ 'ನಮ್ಮಲ್ಲಿ ಈಗ ಇರುವುದು ಹಲಸಿನ ಹಣ್ಣು ಮಾತ್ರ' ಎಂದೆ. ನಗುವ ಸರದಿ ಅವರದ್ದಾಯಿತು. 'ಒಂದೇ..ಎಂದು ಒಂದಿಡೀ ಹಲಸಿನ ಹಣ್ಣನ್ನು ತಿನ್ನಲು ಹೋಗಬೇಡಿ, ಒಂದೆರಡು ಸೊಳೆ ತಿನ್ನಿ ಸಾಕು' ಎಂದು ಹೇಳಿ ಮನಸೋ ಇಚ್ಛೆ ನಕ್ಕರು.

ಈಗಂತೂ ಅಲ್ಲಲ್ಲಿ ಹಲಸಿನ ಹಬ್ಬ/ ಮೇಳ ನಡೆಯುತ್ತಿರುತ್ತದೆ. ಹಲಸಿನಿಂದ ಎಣಿಸಲಾರದಷ್ಟು ವಿಧದ ಆಹಾರ ಖಾದ್ಯಗಳು ತಯಾರಾಗುತ್ತದೆ. ಒಂದು ಕಾಲದಲ್ಲಿ ಜನರ ಹೊಟ್ಟೆ ತುಂಬಿಸಿದ ತದನಂತರದಲ್ಲಿ ಒಂದಷ್ಟು ಅವಗಣನೆಗೆ ಒಳಗಾದ ಈಗ ಹಲವಾರು ಅವಕಾಶಗಳಿಗೆ ತನ್ನನ್ನು ಒಡ್ಡಿದ ಈ ಹಣ್ಣು ಹಣ್ಣಾಗಿಯೂ ತರಕಾರಿಯಾಗಿಯೂ ತನ್ನ ದ್ವಿ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ವೈವಿಧ್ಯಮಯ ತಳಿಗಳು ಇದರಲ್ಲಿ ಇವೆ. ಆದರೆ ಇದರ ವಿಶೇಷ ಮೇಣ ಕಂಡರೆ ಜನರಿಗೆ ಕೊಂಚ ಅಸಹನೆ. ಆದ್ದರಿಂದಲೇ 'ಗಮ್ಲೆಸ್' ಕೂಡ ಹುಟ್ಟಿಕೊಂಡಿತು. ಹಳ್ಳಿಯ ಮಂದಿ ಹಲಸಿನ ಕೆಲಸ ಮಾಡಲು ಸದಾ ಸಿದ್ಧ. ಆದರೆ ಎಲ್ಲವನ್ನೂ ಸುಲಿದ ಬಾಳೆಹಣ್ಣಿನಂತೆ ಕೆಲಸ ಮಾಡುವ ಪೇಟೆಯ ಮಂದಿಗೆ ಮಾತ್ರ ಹಲಸು ಬೇಕು ಆದರೆ ಅದರ ಕೆಲಸ ಬೇಡ. ಆದ ಕಾರಣ ಪಟ್ಟಣದಲ್ಲಿ ಒಂದು ಸೊಳೆಗೆ ಇಷ್ಟು ರೂಪಾಯಿ ಎಂದು ಭರದಿಂದ ಮಾರಾಟ ಆಗುತ್ತದೆ. ಹಲಸನ್ನು ಎಲ್ಲಿ ಬಚ್ಚಿಟ್ಟರೂ ಅದರ ಪರಿಮಳವನ್ನು ಬಚ್ಚಿಡಲು ಸಾಧ್ಯವೇ ಇಲ್ಲ. ಅದು ತನ್ನ ಇರುವಿಕೆಯನ್ನು ತೋರಿಸಿಬಿಡುತ್ತದೆ.

ಹಲಸಿನಕಾಯಿ ಬೆಳೆದಿದೆಯೋ ಇಲ್ಲವೋ ಎಂದು ಕೆಲವೊಮ್ಮೆ ಗೊತ್ತಾಗುವುದೇ ಇಲ್ಲ. ಬೆರಳಿಂದ ತಟ್ಟಿ ನೋಡಿದರೂ, ಕಾಯಿಯನ್ನು ಪೂರ್ಣವಾಗಿ ಮುಟ್ಟಿ ನೋಡಿದರೂ, ಮುಳ್ಳುಗಳು ದೂರವಾಗಿದೆ ಎಂದು ಖಚಿತಪಡಿಸಿಕೊಂಡರೂ ಕೆಲವೊಮ್ಮೆ ಕೊಯ್ದಾದ ಮೇಲೆ ಅದು ಅರೆಬರೆ ಬೆಳೆದಿರುತ್ತದೆಯಷ್ಟೇ. ಹಾಗಾಗಿ ನಾನು ಅದೆಷ್ಟೋ ಬಾರಿ ಹಲಸಿನ ಮುಂದೆ ನಿಂತು ಇದು ಒಳಗೆ ಬೆಳೆದಿದೆಯೋ ಇಲ್ಲವೋ ಎಂದು ನೋಡಲು ಒಂದು ಸ್ಕ್ಯಾನರ್ ಬೇಕಿತ್ತು ಎಂದು ಮನದಲ್ಲೇ ಯೋಚಿಸಿದ್ದಿದೆ.‌ ಹೆಚ್ಚು ಯೋಚಿಸುತ್ತಾ ಅಲ್ಲಿ ನಿಂತರೆ, ನ್ಯೂಟನ್ ತಲೆ ಮೇಲೆ ಆಪಲ್ ಬಿದ್ದಂತೆ ನನ್ನ ತಲೆ ಮೇಲೆ ಹಲಸಿನಕಾಯಿ ಬಿದ್ದರೂ ಬಿದ್ದೀತೆಂದು ಮನೆ ಸೇರುತ್ತೇನೆ.

Creative Writings