Karada Vishwa

News · September 5, 2026

ಗುರುಭ್ಯೋ ನಮಃ

'ಶಿಕ್ಷಕರ ದಿನ' ನಿಮಿತ್ತ ತನ್ನ ಈರ್ವರು ಗುರುಗಳಿಗೆ ಶ್ರೀಮತಿ ನಳಿನಿ ಸೈಪಂಗಲ್ಲು ಅವರಿಂದ ಗೌರವಾರ್ಪಣೆ...

ಇಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ, ತಮ್ಮ ಪ್ರಾಥಮಿಕ ತರಗತಿಗಳಲ್ಲಿ ತಿದ್ದಿ-ತೀಡಿ, ಜ್ಞಾನದ ಬೆಳಕು ಚೆಲ್ಲಿದ ಇಬ್ಬರು ನಿವೃತ್ತ ಶಿಕ್ಷಕರನ್ನು ಅವರ ಮನೆಗಳಿಗೆ ತೆರಳಿ ಶ್ರೀಮತಿ ನಳಿನಿ ಸೈಪಂಗಲ್ಲು ಅವರು ಗೌರವಪೂರ್ವಕವಾಗಿ ಸನ್ಮಾನಿಸಿದರು.

ಕೆದಂಬಾಯಿಮೂಲೆ ರಾಮಚಂದ್ರ ಭಟ್ ಅವರ ಧರ್ಮಪತ್ನಿ ಶ್ರೀಮತಿ ಪ್ರೇಮಾ ಎ. ಎಸ್. ಹಾಗೂ ಪೆರ್ಲ ನಿವಾಸಿ ಶ್ರೀ ಕೋಟೆ ಶಿರಂತಡ್ಕ ವಾಸುದೇವ ಭಟ್ ಅವರು ಗೌರವಿಸಲ್ಪಟ್ಟ ಶಿಕ್ಷಕರು. ಇಬ್ಬರೂ ಸ್ವರ್ಗದ ಸ್ವಾಮಿ ವಿವೇಕಾನಂದ ಎ.ಯು.ಪಿ. ಶಾಲೆಯ ನಿವೃತ್ತ ಮುಖ್ಯ ಅಧ್ಯಾಪಕರು ಎಂಬುದು ವಿಶೇಷ. ಗೌರವಿಸಲ್ಪಟ್ಟ ಇಬ್ಬರೂ ನಮ್ಮ ಕರಾಡ ಸಮುದಾಯದವರು.

ತಾವು ಸ್ವತಃ ಅಧ್ಯಾಪಕಿಯಾಗಿದ್ದ ಶ್ರೀಮತಿ ನಳಿನಿ ಸೈಪಂಗಲ್ಲು ಅವರು ತಾವು ನಿವೃತ್ತಿ ಹೊಂದಿದ ಮೇಲೂ ತಮ್ಮ ಬದುಕಿಗೆ ದಾರಿ ತೋರಿದ ತಮ್ಮ ಗುರುಗಳನ್ನು ಭೇಟಿ ಮಾಡಿ ಗೌರವಿಸುವ ಈ ನಡತೆ ನಿಜಕ್ಕೂ ಅಭಿನಂದನೀಯ .

ತಮ್ಮ ಜೀವನದಲ್ಲಿ ಅಕ್ಷರದ ಅರಿವು ಮೂಡಿಸಿದ, ಜ್ಞಾನದ ದಾರಿಯನ್ನು ತೋರಿಸಿದ ಗುರುಗಳಲ್ಲಿ ಪ್ರತಿ ವರ್ಷ ಒಬ್ಬರನ್ನೋ , ಇಬ್ಬರನ್ನೋ ಭೇಟಿ ಮಾಡಿ ಗೌರವಾರ್ಪಣೆ ಸಲ್ಲಿಸುವುದರ ಜೊತೆಗೆ ಅವರ ಆಶೀರ್ವಾದ ಪಡೆಯುವುದರ ಮೂಲಕ ಶ್ರೀಮತಿ ನಳಿನಿ ಅವರು ಪ್ರತಿವರ್ಷ ಶಿಕ್ಷಕರ ದಿನಾಚರಣೆಯನ್ನು ಸಾರ್ಥಕವಾಗಿ, ಸರಳವಾಗಿ ಆಚರಿಸುತ್ತಾರೆ . ಇದು ನಮಗೂ ಮಾದರಿಯಾಗಲಿ.

ಗುರುಭ್ಯೋ ನಮಃ