Karada Vishwa

Article · March 10, 2026

ಉಡುಪಿ ಸ್ಪೆಷಲ್ ಹುಗ್ಗಿ ಮತ್ತು ಗೊಜ್ಜು

- ಡಾ. ಪ್ರಫುಲ್ಲ ಜಿ ಭಟ್ , ಉಡುಪಿ

ಹುಗ್ಗಿ ಮತ್ತು ಗೊಜ್ಜು ತುಂಬ ರುಚಿಯಾಗಿರುತ್ತದೆ. ಇದನ್ನು ಧನುರ್ಮಾಸದಲ್ಲಿ ದೇವರ ನೈವೇದ್ಯಕ್ಕೆ ಮಾಡುವುದು ವಿಶೇಷ. ಆ ಸಮಯದಲ್ಲಿ ಹುಣಸೇಮರ ಹೊಸ  ಹುಳಿಯನ್ನು ನೀಡುವುದರಿಂದ ಈ ಕ್ರಮ ಉಡುಪಿಯಲ್ಲಿ ಇಂದಿಗೂ ಇದೆ.

ಹುಗ್ಗಿ ಪುಡಿ ತಯಾರಿಸುವ ವಿಧಾನ: 
ಆರು ಲವಂಗ ,ಅರ್ಧ ಜಾಯಿಕಾಯಿ, ಎರಡು ಯಾಲಕ್ಕಿ ತೆಗೆದುಕೊಂಡು ಕುಟಾಣಿಯಲ್ಲಿ ಕುಟ್ಟಿ ಚೆನ್ನಾಗಿ ಪುಡಿ ಮಾಡಬೇಕು .ಈ ಪುಡಿಯನ್ನು ಹುಗ್ಗಿಗೆ ಹಾಕಿ ಕಲಸಬೇಕು.

ಹುಗ್ಗಿ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಹೆಸರುಬೇಳೆಯನ್ನು ಅರ್ಧ ಗಂಟೆ ಮೊದಲೇ ನೆನಸಿ ಇಡಬೇಕು. ನಂತರ ಹೆಸರುಬೇಳೆ ಅಷ್ಟೇ ಅಕ್ಕಿಯನ್ನು ತೊಳೆದು ಬೇಯಲು ಇಡಬೇಕು. ಅಕ್ಕಿ ಸ್ವಲ್ಪ ಬೆಂದ ಮೇಲೆ ಅದಕ್ಕೆ ಹೆಸರುಬೇಳೆಯನ್ನು ಸೇರಿಸಿ ಮತ್ತೆ ಬೇಯಿಸಬೇಕು. ಹದವಾಗಿ ಬೆಂದ ಮೇಲೆ ಅದಕ್ಕೆ ಬೆಲ್ಲ , ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಹದವಾದ ಉರಿಯಲ್ಲಿ ನೀರನ್ನು ಆರಿಸಿ ತೆಗೆಯಬೇಕು. ನಂತರ ಸ್ವಲ್ಪ ತೆಂಗಿನತುರಿ ಮತ್ತು ತುಪ್ಪ ಹಾಕಿ ಮಗುಚಬೇಕು. ಕೊನೆಯಲ್ಲಿ ಹುಗ್ಗಿ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ ಮುಚ್ಚಿಡಬೇಕು.

ಗೊಜ್ಜು ಮಾಡುವ ವಿಧಾನ:
ಒಂದು ದೊಡ್ಡ ನಿಂಬೆಹಣ್ಣು ಗಾತ್ರದಷ್ಟು ಹೊಸ ಹುಣಸೆ ಹಣ್ಣನ್ನು ಒಂದು ಪಾತ್ರೆಯಲ್ಲಿ ಅರ್ಧ ಗಂಟೆ ಮೊದಲು ನೆನೆಯಲು ಇಡಬೇಕು. ನಂತರ ಅದಕ್ಕೆಸ್ವಲ್ಪ ನೀರುಬೆರಸಿ ಚೆನ್ನಾಗಿ ಹಿಚುಕಿ, ರಸ ತೆಗೆಯಬೇಕು. ನಂತರ ಉಪ್ಪು ,ಬೆಲ್ಲ, ಶುಂಠಿ, ಹಸಿಮೆಣಸಿನಕಾಯಿ, ಇಂಗು ಹಾಕಿ ಕುದಿಯಲು ಇಡಬೇಕು. ಚೆನ್ನಾಗಿ ಕುದಿದು ಆರಿದಾಗ ಜೇನುತುಪ್ಪದ ಪಾಕಕ್ಕೆ ಬರುತ್ತದೆ. ಆಗ ಸಾಸಿವೆ, ಉದ್ದಿನ ಬೇಳೆ, ಮೆಣಸು, ಕರಿಬೇವು ಹಾಕಿ ಒಂದು ಒಗ್ಗರಣೆ ಕೊಡಬೇಕು. ನಂತರ ಹುಗ್ಗಿಗೆ ಮೇಲಿನಿಂದ ಈ ಗೊಜ್ಜನ್ನು ಸಿಂಪಡಿಸಿ ಸೇವಿಸುವುದು ಪದ್ಧತಿ. ಈ ಗೊಜ್ಜಿಗೆ ತುಂಬಾ ಬೆಲ್ಲ ಹಾಕಬೇಕಾಗುತ್ತದೆ.
Food
ಉಡುಪಿ ಸ್ಪೆಷಲ್ ಹುಗ್ಗಿ ಮತ್ತು ಗೊಜ್ಜು