Karada Vishwa

News · August 18, 2026

ಶ್ರೀಯುತ ಗಣೇಶ ಪ್ರಸಾದ್ ಅವರಿಗೆ ಅಭಿನಂದನೆಗಳು

ಬಿ ಕೆ ಶ್ರೀರಾಮ

ತಿರುವಿದಾಂಕೂರು ದೇವಸ್ವಂ ಮಂಡಳಿಯ ದೇವಾಲಯಗಳಲ್ಲಿ ವಿಧಿ ವಿಧಾನ ಪ್ರಕಾರವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಅರ್ಹತೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ದರ್ಖಾಸ್ತು ಬೇರ್ಪಡ್ಕ ರಾಮಕೃಷ್ಣ ಭಟ್ಟರ ಹಿರಿಯ ಪುತ್ರ ಗಣೇಶ ಪ್ರಸಾದ ಭಟ್ ಇದೀಗ ಪ್ರತಿಷ್ಠಿತ ಶಬರಿಮಲೆ ದೇವಸ್ಥಾನದಲ್ಲಿ ಉಪ ಅರ್ಚಕರಾಗಿ(ಶಾಂತಿ ಕಾರನಾಗಿ) ಒಂದು ವರ್ಷ ಅವಧಿಗೆ ಆಯ್ಕೆಯಾಗಿದ್ದಾರೆ.ಬಹಳ ಜಟಿಲವಾದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಶ್ರೀಯುತರು ಭಾಗವಹಿಸುತ್ತಿದ್ದರೂ ಕೊನೆಗೆ ಚೀಟಿ ಎತ್ತುವಾಗ ಅವಕಾಶ ವಂಚಿತರಾಗುತ್ತಿದ್ದರು.ಈ ಸಾರಿಯೂ ಎಲ್ಲ ಮಾನದಂಡಗಳಲ್ಲಿ ಒಂದನೆಯವರಾಗಿ ಆಯ್ಕೆಯಾಗಿ, ಇದೀಗ ಚೀಟಿ ಎತ್ತುವಾಗ ಶ್ರೀಯುತರು ಒಂದು ವರ್ಷ ಅವಧಿಗೆ ಶಬರಿಮಲೆ ದೇವಸ್ಥಾನದಲ್ಲಿ ಉಪ ಅರ್ಚಕನಾಗಿ ಆಯ್ಕೆಯಾದುದು ಕರಾಡಸ್ತರಿಗೆ ಹೆಮ್ಮೆಯ ವಿಷಯವಾಗಿದೆ. ಮಾಹೆಯಾನ ಐದು ದಿನಗಳು ಮತ್ತು ಮಂಡಲಕಾಲದಲ್ಲಿ ನಲುವತ್ತೈದು ದಿನ, ದಿನದ ಹದಿನೆಂಟು ಘಂಟೆಗಳೂ ದುಡಿಯಬೇಕಾದ ಕಠಿಣ ಕೆಲಸದಲ್ಲಿ ನಮ್ಮವರಾದ ಪ್ರಸಾದ ಭಟ್ಟರು ಯಶಸ್ಸು ಸಾಧಿಸಿ ಒಂದು ವರ್ಷ ಕಾಲದ ಪೂಜಾದಿಗಳನ್ನು ನಿರ್ವಿಘ್ನವಾಗಿ ನೆರವೇರಿಸಿ ಬರಲಿ ಎಂದು ಶುಭ ಹಾರೈಸೋಣ.

ಇವರ ತೀರ್ಥರೂಪರಾದ ದರ್ಖಾಸ್ತು ಬೇರ್ಪಡ್ಕ ರಾಮಕೃಷ್ಣಭಟ್ಟರು ಮತ್ತು ಮಾತಾಶ್ರೀ ರತ್ನಾವತಿ ಅಮ್ಮನವರು ಕಳೆದ ಎರಡು ಮೂರು ದಶಕಗಳಿಂದ ಕೇರಳಂ ರಾಜಧಾನಿ ತಿರುವನಂತಪುರದಲ್ಲಿ ವಾಸವಾಗಿದ್ದಾರೆ. ಗಣೇಶ ಪ್ರಸಾದರ ಕಿರಿಯ ಸಹೋದರ ಗಿರೀಶ್ ಕೂಡ ಅರ್ಚಕ ವೃತ್ತಿಯಲ್ಲೇ ಮುಂದುವರೆಯುತ್ತಿದ್ದಾರೆ.

ಕೋಟೆ ಶಿರಂತಡ್ಕ ನಾರಾಯಣ ಭಟ್ಟರ ಪುತ್ರಿ ಸೌಮ್ಯರನ್ನು ವಿವಾಹವಾದ ಶ್ರೀಯುತ ಗಣೇಶ ಪ್ರಸಾದರು,ಸುಖೀ ಸಂಸಾರದಲ್ಲಿ ಅದೈತ್ ಮತ್ತು ಅನರ್ಘ್ಯ ಎಂಬ ಮಕ್ಕಳನ್ನು ಪಡೆದು ಊರಿನಿಂದ ಬರುವ ಯಾರೇ ಬಂಧುಗಳನ್ನೂ ಬಹಳ ಪ್ರೀತಿಯಲ್ಲಿ ಸ್ವೀಕರಿಸುತ್ತಾರೆ.ಇವರ ಸಹೋದರಿ ಮಮತಾರನ್ನು ಬದಿ ಶ್ರೀನಿವಾಸ ಭಟ್ ವಿವಾಹವಾಗಿ, ಅವರೂ ಇತ್ತೀಚಿನವರೆಗೆ ತಿರುವನಂತಪುರದಲ್ಲಿ ಅರ್ಚಕ ವೃತ್ತಿಯಲ್ಲಿದ್ದರು ಹಾಗೂ ಈಗ ಬದಿಯಡ್ಕ ಸಮೀಪದ ಕಾಡಮನೆಯಲ್ಲಿ ಕೃಷಿಭೂಮಿ ಖರೀದಿಸಿ ಕೃಷಿಕೆಲಸಗಳಲ್ಲಿ, ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿದ್ದಾರೆ.

ಗಣೇಶ ಪ್ರಸಾದ್ ಅವರ ಎಲ್ಲ ಕೆಲಸಗಳಲ್ಲಿ ಅನ್ನಪೂರ್ಣೇಶ್ವರಿಯ ಅನುಗ್ರಹವಿರಲಿ.ಅಯ್ಯಪ್ಪ ಸ್ವಾಮಿಯು ಅವರೆಲ್ಲಾ ಅಭೀಷ್ಟಗಳನ್ನು ನೆರವೇರಿಸಲಿ.ಅವರ ಮುಂದಿನ ಭಾವಿ ಉಜ್ವಲವಾಗಲಿ ಎಂದು ಹಾರೈಸೋಣ.

AchieversHeritage
ಶ್ರೀಯುತ ಗಣೇಶ ಪ್ರಸಾದ್ ಅವರಿಗೆ ಅಭಿನಂದನೆಗಳು