
Article · September 5, 2026
ಪರೋಪಕಾರಾರ್ಥಂ
By ಗಾಯತ್ರಿ ನಾಗರಾಜ
ಗಾಯತ್ರಿ ಕೆ ಅಡ್ಕತೊಟ್ಟಿ
ಅನ್ಯೋನ್ಯಾಶ್ರಯದಿ ಸಾಗಿಹುದು ವಿಶ್ವದ ರಥವು,
ಪರಸ್ಪರಾಲಂಬನವೇ ಸೃಷ್ಟಿಯ ನೇಮವು,
ಗ್ರಹಗಣವೆಲ್ಲಾ ಸೂರ್ಯನ ಸುತ್ತಲಿ ಭ್ರಮಣಿಪುದು,
ಒಂದು ತಪ್ಪಿದರೂ ವಿನಾಶವೇ ಗಮನಿಪುದು.
ಮಳೆ, ಚಳಿ, ಗಾಳಿ, ಬಿಸಿಲು ಪ್ರಕೃತಿಯ ಪರಿವಾರ
ಒಂದನ್ನೊಂದು ಪೋಷಿಸಿ ಬೆಳೆಸುವ ಸಹಕಾರ
ಒಂದೇ ಕೊಂಡಿ ಕಡಿದರೂ ಉರುಳುವುದು ಬಾಳು
ಪರಸ್ಪರ ಸಹಕಾರವೇ ಜಗದ ಉಸಿರಾಳು.
ಹುಟ್ಟಿನಿಂದ ಸಾವಿನ ತನಕ ಮಾನವನು ಋಣಿ
ತಾಯ ಮೊಲೆಯ ಹಾಲು, ರೈತನ ಅನ್ನದ ಮಣಿ
ಉಟ್ಟ ಬಟ್ಟೆ, ಉಂಡ ಅನ್ನ ಇಹದ ವಸತಿ ರಥವು
ಪರರ ಬೆವರಿನ ಕಾಣಿಕೆಯೇ ಅಲ್ಲದೆ ಮತ್ತೇನು?
ಫಲಭರಿತ ವೃಕ್ಷವು ಪರಹಿತಕೆ ಬಾಗಿಹುದು
ನದಿ ಜಲವು ಪರರ ದಾಹಕೆ ಹರಿದಿಹುದು
ಧೇನುವು ತನ್ನ ಕರುವಿಗೂ ಮಿಕ್ಕು ಸುರಿಸಿಹುದು
ಪ್ರಕೃತಿಯ ಕಣಕಣವೂ ಪರಾರ್ಥಕೆ ಬದುಕಿಹುದು.
ಕ್ಷಣಿಕವೀ ಕಾಯ, ಮಣ್ಣಲಿ ಬೆರೆವ ಬೂದಿ
ಸಾರ್ಥಕ್ಯವಿಲ್ಲದಿರೆ ಇದೇ ನರಕದ ಗೂಡಿ
ಕೊಟ್ಟು ಬೆಳಗು ಇನ್ನೊಬ್ಬರ ಬಾಳಿಗೆ ದೀಪವು
ಪರೋಪಕಾರಾರ್ಥಂ ಇದಂ ಶರೀರಮ್ - ಇದೇ ಮೋಕ್ಷದ ರೂಪವು.
Creative Writings
