
Article · November 16, 2026
ಮಂಗನ ಕೈಗೆ ಮಾಣಿಕ್ಯ…!
ಅಮೃತಾ ಒ ಬೇಂದ್ರೋಡು
ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕಳೆದುಹೋಗುತ್ತಿದೆಯೇ ನಮ್ಮ ಸ್ವಂತ ಬುದ್ಧಿಮತ್ತೆ?
ಇದು AI ಯುಗ….ಸಾಮಾನ್ಯ ಮನುಷ್ಯನ ಎಷ್ಟೋ ಕೆಲಸಗಳನ್ನು ಸುಲಭಗೊಳಿಸುವ, ಸಮಯ ಮತ್ತು ಶ್ರಮವನ್ನು ಉಳಿಸುವ ಹತ್ತಾರು ಕೃತಕ ಬುದ್ಧಿಮತ್ತೆ ಆಧಾರಿತ ಸಾಧನಗಳು (AI tools) ಇಂದು ನಮ್ಮ ಬೆರಳ ತುದಿಯಲ್ಲಿವೆ. ಮನುಷ್ಯನಿಗೆ ಆಗಿಂದಾಗ್ಗೆ ಬೇಕಾಗುವ ಬರವಣಿಗೆ, ಚಿತ್ರರಚನೆ, ಭಾಷಾಂತರ, ವರದಿ ತಯಾರಿ, ಆಮಂತ್ರಣ ಪತ್ರಿಕೆ ಅಥವಾ ಪೋಸ್ಟರ್ ವಿನ್ಯಾಸ, ಮಾಹಿತಿ ಸಂಗ್ರಹದವರೆಗೆ ಎಲ್ಲವನ್ನೂ ಕ್ಷಣಾರ್ಧದಲ್ಲಿ ಮಾಡಿಕೊಡುವ ತಂತ್ರಜ್ಞಾನದ ಸಾಮರ್ಥ್ಯ ನಿಜಕ್ಕೂ ಅಚ್ಚರಿಯದ್ದು, ಮೆಚ್ಚುವಂಥದ್ದು.
ಆದರೆ ಈ ವೇಗದ ಪ್ರಗತಿಯ ನಡುವೆ ನಮ್ಮನ್ನು ಕಾಡುವ ಒಂದು ಪ್ರಶ್ನೆಯಿದೆ. ನಾವು AI ಯನ್ನು ಬಳಸುತ್ತಿದ್ದೇವೆಯೇ, ಅಥವಾ ಕ್ರಮೇಣ AI ನಮ್ಮನ್ನು ಬಳಸಿಕೊಳ್ಳುತ್ತಿದೆಯೇ?
ಒಂದು ತಲೆಮಾರು ಹಿಂದಿನ ನಮ್ಮ ಹಿರಿಯರು ತಮ್ಮ ಬುದ್ಧಿವಂತಿಕೆ, ಸೃಜನಶೀಲತೆ, ಶ್ರದ್ಧೆ ಮತ್ತು ಆಳವಾದ ಅಧ್ಯಯನದಿಂದ ಸಾಧಿಸಿದ ಕೆಲಸಗಳನ್ನು ಇಂದು ನಾವು AI ಪರಿಕರಗಳ ನೆರವಿನಿಂದ ಸುಲಭವಾಗಿ ಮಾಡಿ ಮುಗಿಸಿ, ಅವರ ಮುಂದೆ ಪ್ರದರ್ಶಿಸಿ ಬೀಗುತ್ತೇವೆ. ನಮ್ಮ ತಂತ್ರಜ್ಞಾನದ ವೇಗವನ್ನು ಕಂಡು ಅವರೂ ಮೇಲ್ನೋಟಕ್ಕೆ ಮೆಚ್ಚಿ, ಈ ತಲೆಮಾರಿನ ಸಾಮರ್ಥ್ಯದ ಬಗ್ಗೆ ಹೆಮ್ಮೆಪಟ್ಟಿರಬಹುದು. ಆದರೆ ಆ ಕೆಲಸಗಳ ಒಳಹೊಕ್ಕು ನೋಡಿದಾಗ, ಅಲ್ಲಿ ನಮ್ಮ ಸ್ವಂತ ಯೋಚನೆಗಿಂತ ಕೃತಕ ಬುದ್ಧಿಮತ್ತೆಯ ಛಾಪೇ ಹೆಚ್ಚಾಗಿ ಕಾಣತೊಡಗಿದರೆ? ಆಗ ನಿಜಕ್ಕೂ ಬೇಸರವಾಗುತ್ತದೆ. ಹೊರಗಿನ ಹೊಳಪು ಹೆಚ್ಚಾಗುತ್ತಿದ್ದಂತೆ ಒಳಗಿನ ಸೃಜನಶೀಲತೆ ಸೊರಗುತ್ತಿದೆಯೇನೋ ಎಂಬ ಆತಂಕ ಕಾಡುತ್ತದೆ.
ಏನು ಯೋಚಿಸಬೇಕಾದರೂ, ಏನು ನಿರ್ಧರಿಸಬೇಕಾದರೂ, ಏನು ಬರೆಯಬೇಕಾದರೂ ChatGPTಯಂತಹ ಸಾಧನಗಳ ಮೊರೆಹೋಗುವ ಪ್ರವೃತ್ತಿ ಯುವ ತಲೆಮಾರಿನಲ್ಲಿ ವ್ಯಾಪಕವಾಗಿರುವುದನ್ನು ಅಲ್ಲಗಳೆಯಲಾಗದು. ಇಲ್ಲಿ AI ಬಳಕೆಯ ಬಗ್ಗೆ ಆಕ್ಷೇಪವಿಲ್ಲ. ಆದರೆ ನಮ್ಮ ಮಿದುಳಿನ ಕೆಲಸವನ್ನೇ ಅದಕ್ಕೆ ವಹಿಸಿಕೊಟ್ಟು, ಅದರ ಆಲೋಚನೆಗಳನ್ನು ನಮ್ಮದೇ ಸಾಧನೆಯೆಂಬಂತೆ ಪ್ರದರ್ಶಿಸುವ ಮನೋಭಾವದ ಬಗ್ಗೆ ಸ್ವಲ್ಪ ಬೇಸರವೆನಿಸುತ್ತದೆ.
ಒಬ್ಬ ಉತ್ತಮ ಬರಹಗಾರನ ಬರಹದಲ್ಲಿ ಕೇವಲ ಪದಗಳ ಜೋಡಣೆಯಿರುವುದಿಲ್ಲ. ಬದುಕಿನ ಅನುಭವ, ಸೂಕ್ಷ್ಮ ಅವಲೋಕನ, ಆಳವಾದ ಚಿಂತನೆ, ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಮನಸ್ಸು, ವಿಷಯದ ಒಳಹೊಕ್ಕು ನೋಡುವ ದೃಷ್ಟಿಕೋನ ಇವೆಲ್ಲವೂ ಮಿಳಿತಗೊಂಡಿರುತ್ತವೆ. ಆತನ ಮನಸ್ಸಿನ ರಸಪಾಕದಲ್ಲಿ ಹದಗೊಂಡ ವಿಚಾರಗಳು ಅಕ್ಷರರೂಪ ಪಡೆದು ಓದುಗರ ಮನಸ್ಸನ್ನು ತಲುಪುತ್ತವೆ, ತಟ್ಟುತ್ತವೆ. ಅದಕ್ಕಾಗಿಯೇ ಕೆಲವು ಬರಹಗಳು ಓದಿದ ಮೇಲೂ ನಮ್ಮೊಳಗೆ ಉಳಿಯುತ್ತವೆ.
ಆದರೆ ಇಂದು ಪರಿಸ್ಥಿತಿ ಬದಲಾಗುತ್ತಿದೆ. ವಿಷಯದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದಿದ್ದರೂ ಎಲ್ಲರೂ ಬರಹಗಾರರಾಗುತ್ತಿದ್ದಾರೆ! ಯಾಕೆಂದರೆ ಸಹಾಯಕ AI ಅಲ್ಲಿ ಮೇಲುಗೈ ಸಾಧಿಸುತ್ತಾನೆ. AI ಕೊಟ್ಟ ಬರಹವನ್ನು ಓದಿ, ಅರ್ಥೈಸಿ, ಪರಿಷ್ಕರಿಸಿ, ತಮ್ಮದೇ ವಿಚಾರಗಳೊಂದಿಗೆ ಬೆರೆಸುವ ಬದಲು, ಅದನ್ನೇ ಯಥಾವತ್ತಾಗಿ ತಮ್ಮ ಹೆಸರಿನಲ್ಲಿ ಪ್ರಕಟಿಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಹೀಗೆ ಮುಂದುವರಿದರೆ ಬರಹಗಾರರ ಸಂಖ್ಯೆ ಹೆಚ್ಚಾದರೂ ಸ್ವಂತಿಕೆಯಿಂದ ಬರೆಯುವವರ ಸಂಖ್ಯೆ ಕಡಿಮೆಯಾಗುವ ಅಪಾಯವಿದೆ.
ಕೆಲಸದ ಸ್ಥಳಗಳಲ್ಲೂ ಅಷ್ಟೇ….AI tools ಕೈಗೆ ನಮ್ಮನ್ನು ನಾವು ಅರ್ಪಿಸಿ ಬಿಡುವ ಮಂದಿ ನಮ್ಮಲ್ಲಿ ಎಷ್ಟಿಲ್ಲ? ಯಾರಾದರೂ ಒಂದು ವಿಷಯದ ಬಗ್ಗೆ ವರದಿ ಕೇಳಿದರೆ, ಅದಕ್ಕೆ ಬೇಕಾದ ಮಾಹಿತಿಯಿರುವ ಅನೇಕ file ಗಳನ್ನು ChatGPT ಯ ಬಾಯೊಳಗೆ ತುರುಕುತ್ತೇವೆ. ನಮ್ಮಿಂದಲೇ ವಿವರ ಪಡೆದು ಕ್ಷಣಾರ್ಧದಲ್ಲಿ ವರದಿ ಸಿದ್ಧಪಡಿಸುವ ಸಾಮರ್ಥ್ಯ AIಗಿದೆ. ಆದರೆ ಆ ವರದಿಯಲ್ಲಿ ಏನಿದೆ? ಯಾವುದು ಸರಿಯಾದ ಮಾಹಿತಿ? ಯಾವುದು ಅಪ್ರಸ್ತುತ? ಯಾವುದು ತಪ್ಪು? ಯಾವುದು ಸಂದರ್ಭಕ್ಕೆ ಹೊಂದುವುದಿಲ್ಲ? ಎಂಬುದನ್ನು ಪರಿಶೀಲಿಸುವ ಜವಾಬ್ದಾರಿ ನಮ್ಮದಲ್ಲವೇ? ಕೆಲವೊಮ್ಮೆ AI ತನಗೆ ಕೊಟ್ಟ ಮಾಹಿತಿಯನ್ನು ಇನ್ನೇನೋ ಅಪಾರ್ಥ ಮಾಡಿಕೊಂಡು, ಜೀರ್ಣಿಸಿಕೊಳ್ಳಲಾಗದೆ ಕಕ್ಕಿದಂತಿರುವ ವಿಚಾರಗಳೂ ವರದಿಯೊಳಗೆ ಸೇರಿಕೊಂಡಿರುತ್ತವೆ. ದುರಂತವೆಂದರೆ, ಅದನ್ನು ಗುರುತಿಸುವಷ್ಟು ತಾಳ್ಮೆಯಾಗಲೀ, ವಿವೇಚನೆಯಾಗಲೀ ಇಲ್ಲದೆ ಅದನ್ನು ಹಾಗೆಯೇ ಒಪ್ಪಿಸಿ ಕೃತಾರ್ಥರಾಗುವವರೂ ಇದ್ದಾರೆ..!
AI ನೀಡಿದ ಮಾಹಿತಿಯೆಲ್ಲ ಸತ್ಯವಿರಬೇಕೆಂದೇನಿಲ್ಲ; ಅದು ನೀಡಿದ ಪ್ರತಿಯೊಂದು ಉತ್ತರದಲ್ಲೂ ಪರಿಪೂರ್ಣತೆ ಇರಬೇಕೆಂಬ ಲಿಖಿತ ನಿಯಮವೂ ಇಲ್ಲ. ಅದನ್ನು ಪ್ರಶ್ನಿಸುವ, ಪರಿಶೀಲಿಸುವ, ತಿದ್ದುವ ಮತ್ತು ಸರಿಯಾದುದನ್ನು ಆಯ್ದುಕೊಳ್ಳುವ ಸಾಮರ್ಥ್ಯ ಬಳಕೆದಾರನಿಗಿರಬೇಕು. ಆದರೆ ನಮ್ಮ ಸ್ವಂತ ಮಿದುಳಿನ ಗ್ರಹಣಶಕ್ತಿ ಮತ್ತು ವಿವೇಚನಾಶಕ್ತಿಗೆ ನಿರಂತರವಾಗಿ ಕೆಲಸ ನೀಡುವ ಬದಲು, ಸಿದ್ಧವಾಗಿ ಸಿಗುವ ಉತ್ತರಗಳನ್ನೇ ಅವಲಂಬಿಸುತ್ತಾ ಹೋದರೆ, ಕ್ರಮೇಣ ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯವೇ ಕಳೆದುಹೋಗುವುದಲ್ಲವೇ?
ಬ್ಯಾನರ್, ಆಮಂತ್ರಣ ಪತ್ರಿಕೆ, ಪೋಸ್ಟರ್ ಮುಂತಾದವುಗಳನ್ನು ಸುಲಭವಾಗಿ ಸಿದ್ಧಪಡಿಸಿಕೊಡುವ AIಯ ಸಾಮರ್ಥ್ಯವಂತೂ ನಿಜಕ್ಕೂ ಅದ್ಭುತ. ಆದರೆ ನಾವು ಅದರ ಮುಂದಿಡುವ ನಮ್ಮ ಕಲ್ಪನೆ ಮತ್ತು ಮಾಹಿತಿಯನ್ನು ಅದು ಗ್ರಹಿಸುವ ರೀತಿಯೇ ಕೆಲವೊಮ್ಮೆ ಬೇರೆಯಾಗಿರಬಹುದು. ನಾವು ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುವುದಕ್ಕೂ AI ಸೃಷ್ಟಿಸುವುದಕ್ಕೂ ಅಜಗಜಾಂತರವಿರಬಹುದು. ಹೀಗಾಗಿ AIಗೆ ಸೂಚನೆ ನೀಡುವ ಕಲೆ, ಅಂದರೆ ನಮಗೆ ಬೇಕಾದುದನ್ನು ನಿಖರವಾಗಿ, ಸ್ಪಷ್ಟವಾಗಿ ವಿವರಿಸುವ ಸಾಮರ್ಥ್ಯವನ್ನೂ ನಾವು ಬೆಳೆಸಿಕೊಳ್ಳಬೇಕು. ಅದಕ್ಕೂ ಮೊದಲು, ನಮಗೇನು ಬೇಕು ಎಂಬ ಸ್ಪಷ್ಟ ಕಲ್ಪನೆ ನಮಗೂ ಇರಬೇಕು. ಅದಿಲ್ಲದೇ ಏನಾದರೂ ಒಂದು ಮಾಡಿಕೊಡು ಅಂತ AI ಗೆ ಆದೇಶಿಸುವುದಲ್ಲ..! AI ಕೊಟ್ಟದ್ದನ್ನು ಸರಿಯಾಗಿ ಗಮನಿಸದೆ ಹೋದರೆ, ಅಕ್ಷರದೋಷ, ಅರ್ಥದೋಷ, ತಪ್ಪು ಚಿತ್ರಣ, ಅಸಂಬದ್ಧ ವಿನ್ಯಾಸಗಳನ್ನೆಲ್ಲ ಹಾಗೆಯೇ ಸ್ವೀಕರಿಸಿ ಸ್ಟೇಟಸ್ಗೆ ಹಾಕುವುದು, ಮುದ್ರಿಸಿ ಹಂಚುವುದು, ಕೊನೆಗೆ ಕಾರ್ಯಕ್ರಮದ ವೇದಿಕೆಯಲ್ಲಿ ಬೃಹತ್ ಬ್ಯಾನರ್ ರೂಪದಲ್ಲಿ ಪ್ರದರ್ಶಿಸಿ ಅಪಹಾಸ್ಯಕ್ಕೀಡಾಗುವುದೂ ನಡೆಯುತ್ತಿರುತ್ತದೆ! ತಂತ್ರಜ್ಞಾನವನ್ನು ಬಳಸಿದ ಹೆಮ್ಮೆಯಲ್ಲಿ ಅದರ ಫಲಿತಾಂಶವನ್ನು ಪರಿಶೀಲಿಸುವ ಕನಿಷ್ಠ ಜವಾಬ್ದಾರಿಯನ್ನೂ ಮರೆಯುವುದು ವಿಪರ್ಯಾಸವಲ್ಲವೇ?
ಇದರ ಪರಿಣಾಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ChatGPTಯಂತಹ ಸಾಧನಗಳನ್ನು ವಿದ್ಯಾರ್ಥಿಗಳು ಯಥೇಚ್ಛವಾಗಿ ಬಳಸುತ್ತಿರುವುದರಿಂದ, ವಿಷಯವನ್ನು ಸ್ವತಃ ಓದಿ ಮನನ ಮಾಡಿಕೊಳ್ಳುವ, ಅರ್ಥೈಸುವ ಮತ್ತು ಸ್ವತಂತ್ರವಾಗಿ ಉತ್ತರಿಸುವ ಅಭ್ಯಾಸ ಬೆಳೆಸುವುದು ಶಿಕ್ಷಕರಿಗೆ ಸವಾಲಾಗುತ್ತಿದೆ. ಸಿದ್ಧ ಉತ್ತರಗಳು ಸುಲಭವಾಗಿ ದೊರೆಯುವಾಗ, ಅವುಗಳ ಹಿಂದೆ ಇರುವ ತರ್ಕವನ್ನು ಅರ್ಥಮಾಡಿಕೊಳ್ಳುವ ತಾಳ್ಮೆ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುವ ಅಪಾಯವಿದೆ.
ಇಷ್ಟೇ ಅಲ್ಲ, ಶಿಕ್ಷಕರಲ್ಲಿಯೂ ಕೆಲವರು ಬೋಧನಾ ಟಿಪ್ಪಣಿಗಳ ತಯಾರಿ, ಅಸೈನ್ಮೆಂಟ್ ಪ್ರಶ್ನೆಗಳು, ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ರಚನೆ ಹೀಗೆ ಎಲ್ಲದಕ್ಕೂ ಸಂಪೂರ್ಣವಾಗಿ AIಯನ್ನೇ ಅವಲಂಬಿಸುತ್ತಿರುವುದು ಕಂಡುಬರುತ್ತಿದೆ. AIಯ ನೆರವು ಪಡೆದು ಬೋಧನಾ ಸಾಮಗ್ರಿ ಸಿದ್ಧಪಡಿಸುವುದರಲ್ಲಿ ತಪ್ಪಿಲ್ಲ. ಆದರೆ ಅದನ್ನು ಆಧರಿಸಿ ವಿಷಯವನ್ನು ಸ್ವತಃ ಅರ್ಥಮಾಡಿಕೊಂಡು, ತಮ್ಮ ಅನುಭವ ಮತ್ತು ತಿಳುವಳಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ವಿವರಿಸುವ ಸಾಮರ್ಥ್ಯವೂ ಶಿಕ್ಷಕರಿಗಿರಬೇಕಲ್ಲವೇ? ಒಂದು ವಿಷಯವನ್ನು ತಾನು ತಿಳಿದುಕೊಳ್ಳುವುದು ಒಂದು ಹಂತವಾದರೆ, ಅದನ್ನು ಮತ್ತೊಬ್ಬರಿಗೆ ಸರಳವಾಗಿ, ಸ್ಪಷ್ಟವಾಗಿ ಅರ್ಥಮಾಡಿಸುವುದು ಇನ್ನೊಂದು ಹಂತ. ಆ ಸಾಮರ್ಥ್ಯವೇ ಒಬ್ಬ ಉತ್ತಮ ಶಿಕ್ಷಕನ ನಿಜವಾದ ಶಕ್ತಿ.
ಮುಂದಿನ ದಿನಗಳಲ್ಲಿ ಶಿಕ್ಷಕರ ಅಗತ್ಯವೇ ಇಲ್ಲ, ವಿದ್ಯಾರ್ಥಿಗಳು AI ಮೂಲಕ ತಾವೇ ಎಲ್ಲವನ್ನೂ ಕಲಿಯಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಮಾಹಿತಿ ಪಡೆಯುವುದಕ್ಕೂ ಜ್ಞಾನವನ್ನು ಅರಿತುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಉತ್ತರಗಳನ್ನು ಪಡೆಯುವುದಕ್ಕೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. AI ಮಾಹಿತಿಯನ್ನು ನೀಡಬಲ್ಲದು, ಆದರೆ ವಿದ್ಯಾರ್ಥಿಯ ಯೋಚನಾ ಪ್ರಕ್ರಿಯೆಯನ್ನು ರೂಪಿಸುವ, ತಪ್ಪುಗಳನ್ನು ಗುರುತಿಸಿ ತಿದ್ದುವ, ಕಲಿಕೆಯ ಆಸಕ್ತಿಯನ್ನು ಬೆಳೆಸುವ ಮಾನವೀಯ ಸ್ಪರ್ಶಕ್ಕೆ ಪರ್ಯಾಯವಾಗಬಲ್ಲದೇ?
ಈಗಾಗಲೇ AIಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಕೆಲವರಲ್ಲಿ ಸ್ವತಂತ್ರವಾಗಿ ಮಾತನಾಡುವಾಗ ಅವರಿಗೆ ಯಾವುದೇ ವಿಚಾರಗಳನ್ನು ಸ್ಫುಟವಾಗಿ, ಕ್ರಮಬದ್ಧವಾಗಿ ಮಂಡಿಸಲು , ಸ್ಪಷ್ಟವಾಗಿ ಇನ್ನೊಬ್ಬನಿಗೆ ಅರ್ಥವಾಗುವಂತೆ ಮಾತನಾಡಲು ಕಷ್ಟವಾಗುವುದನ್ನು ನಾವು ಗಮನಿಸಬಹುದು. ಸಿದ್ಧಪಡಿಸಿದ ಬರಹವನ್ನು ಓದುವುದು ಬೇರೆ; ಅದರಲ್ಲಿ ಅಡಕವಾಗಿರುವ ವಿಚಾರವನ್ನು ಸ್ವಂತ ಮಾತಿನಲ್ಲಿ ವಿವರಿಸುವುದು ಬೇರೆ. ಇವುಗಳಲ್ಲಿ ಈ ಎರಡನೆಯ ಸಾಮರ್ಥ್ಯ ಬೆಳೆಸಿಕೊಳ್ಳದಿದ್ದರೆ, ಮಾಹಿತಿ ಅಪಾರವಾಗಿದ್ದರೂ ಅಭಿವ್ಯಕ್ತಿ ಮಾತ್ರ ಅರೆಬರೆಯಾಗಿಯೇ ಉಳಿಯಬಹುದು.
ಹಾಗೆಂದು AIಯನ್ನು ದೂಷಿಸುವುದು ಅಥವಾ ಅದರ ಬಳಕೆಯನ್ನು ವಿರೋಧಿಸುವುದು ಈ ಬರಹದ ಉದ್ದೇಶವಲ್ಲ. ನಿಜ ಹೇಳಬೇಕೆಂದರೆ, AI ಸಾಧನಗಳು ಅಮೂಲ್ಯವಾದವು. ನಮ್ಮ ಸಮಯವನ್ನು ಉಳಿಸಬಲ್ಲವು, ನಮ್ಮ ಕೆಲಸದ ಗುಣಮಟ್ಟವನ್ನು ಹೆಚ್ಚಿಸಬಲ್ಲವು, ಹೊಸ ಆಲೋಚನೆಗಳಿಗೆ ದಾರಿಮಾಡಿಕೊಡಬಲ್ಲವು. ಆದರೆ ಅವುಗಳ ನಿಜವಾದ ಪ್ರಯೋಜನ ದೊರೆಯುವುದು ವಿವೇಚನೆಯುಳ್ಳ ವ್ಯಕ್ತಿಯ ಕೈಯಲ್ಲಿ ಮಾತ್ರ.
AI ನಮ್ಮ ಆಲೋಚನೆಗಳಿಗೆ ರೆಕ್ಕೆಗಳನ್ನು ಕೊಡಬೇಕೇ ಹೊರತು, ನಮ್ಮ ಆಲೋಚನೆಗಳಿಗೇ ಬದಲಿಯಾಗಬಾರದು. ನಮ್ಮ ಮಿದುಳಿಗೆ ಕೆಲಸ ನೀಡುವುದನ್ನು ನಿಲ್ಲಿಸಿ, ಪ್ರತಿಯೊಂದು ಸಣ್ಣ ವಿಷಯಕ್ಕೂ ಕೃತಕ ಬುದ್ಧಿಮತ್ತೆಯನ್ನೇ ಅವಲಂಬಿಸಿದರೆ, ನಾವೇ ನಮ್ಮ ಸ್ವಂತ ಸಾಮರ್ಥ್ಯವನ್ನು ಕುಂಠಿತಗೊಳಿಸಿದಂತಾಗುತ್ತದೆ. ಸ್ವಂತವಾಗಿ ಯೋಚಿಸುವುದು, ಪ್ರಶ್ನಿಸುವುದು, ವಿಶ್ಲೇಷಿಸುವುದು, ತಪ್ಪುಗಳನ್ನು ಗುರುತಿಸುವುದು, ಹೊಸತನ್ನು ಸೃಷ್ಟಿಸುವುದು ಇವೆಲ್ಲವೂ ನಿರಂತರ ಅಭ್ಯಾಸದಿಂದ ಮೊನಚಾಗುವ ಸಾಮರ್ಥ್ಯಗಳು. ಅವುಗಳಿಗೆ ಕೆಲಸ ನೀಡದೆ ಹೋದರೆ ಅವು ಮಂಕಾಗುವುದು ಸಹಜ.
ವಿಕಾಸದ ಹಾದಿಯಲ್ಲಿ ಮಂಗನಿಂದ ಮಾನವನಾದ ಜೀವಿ ತನ್ನ ಬುದ್ಧಿಶಕ್ತಿ, ವಿವೇಚನೆ ಮತ್ತು ಚಿಂತನಾ ಸಾಮರ್ಥ್ಯದಿಂದಲೇ ಈ ಮಟ್ಟಕ್ಕೆ ಬೆಳೆದಿದ್ದಾನೆ ಎಂಬುದು ವಿಕಾಸವಾದದ ಮೂಲಭೂತ ಕಲ್ಪನೆ. ಆದರೆ ಇಂದು ನಮ್ಮದೇ ಆದ ಯೋಚನಾಶಕ್ತಿಯನ್ನು ಕೃತಕ ಬುದ್ಧಿಮತ್ತೆಗೆ ಒಪ್ಪಿಸುತ್ತಾ ಹೋದರೆ, ಒಂದಷ್ಟು ತಲೆಮಾರುಗಳ ಬಳಿಕ ನಾವು ಸಾಧಿಸಿರುವ ಬೌದ್ಧಿಕ ಪ್ರಗತಿಯನ್ನೇ ಹಿಮ್ಮುಖಗೊಳಿಸುತ್ತಿದ್ದೇವೆಯೇನೋ ಎಂಬ ಆತಂಕ ಮೂಡುತ್ತದೆ.
ವ್ಯಂಗ್ಯವಾದರೂ ಸತ್ಯವೇನೆಂದರೆ ಮಾಣಿಕ್ಯ ಎಷ್ಟೇ ಅಮೂಲ್ಯವಾಗಿದ್ದರೂ ಅದರ ಮೌಲ್ಯವನ್ನು ಅರಿತು ಬಳಸುವ ವಿವೇಕ ಬೇಕು. AI ಕೂಡ ಹಾಗೆಯೇ. ಅದನ್ನು ಬಳಸುವ ಸಾಮರ್ಥ್ಯಕ್ಕಿಂತ, ಅದನ್ನು ಎಲ್ಲಿ, ಹೇಗೆ ಮತ್ತು ಎಷ್ಟರಮಟ್ಟಿಗೆ ಬಳಸಬೇಕು ಎಂಬ ತಿಳುವಳಿಕೆಯೇ ಮುಖ್ಯ.
AIಯೊಂದಿಗೆ ಹೆಜ್ಜೆ ಹಾಕೋಣ, ಆದರೆ ನಮ್ಮ ಮಿದುಳಿಗೆ ಬೀಗ ಹಾಕಿ ಅಲ್ಲ! ನಮ್ಮ ಸಾಮರ್ಥ್ಯವನ್ನು ಮೊನಚುಗೊಳಿಸುತ್ತಾ, ನಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತಾ, ಕೃತಕ ಬುದ್ಧಿಮತ್ತೆಯನ್ನು ನಮ್ಮ ನೈಸರ್ಗಿಕ ಬುದ್ಧಿಮತ್ತೆಯ ಸಹಾಯಕನನ್ನಾಗಿ ಮಾಡಿಕೊಳ್ಳೋಣ.
ಇಲ್ಲವಾದರೆ, ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗುವುದಷ್ಟೇ ಅಲ್ಲ, ಮನುಷ್ಯನ ಕೈಯಲ್ಲಿದ್ದ ವಿವೇಚನೆಯ ಮಾಣಿಕ್ಯವನ್ನೇ ಕಳೆದುಕೊಂಡಂತಾಗಬಹುದು!
