Karada Vishwa

Article · November 4, 2026

ನಿದ್ರಾಲೋಕದ ಅಚ್ಚರಿಯ ಹೆಜ್ಜೆಗಳು!!

By Shylaja Bhat

ಶೈಲಜಾ ಭಟ್

ನಿದ್ರೆಯಲ್ಲೂ ಸಾಗುವ ಅಚ್ಚರಿಯ ಹೆಜ್ಜೆಗಳು, ಅರಿವಿಲ್ಲದೆ ನಡೆಯುವ ವಿಚಿತ್ರ ನಡಿಗೆ ಮತ್ತು ಅದರ ಹಿಂದಿರುವ ಕಾರಣಗಳು ನಿಜಕ್ಕೂ ಕುತೂಹಲ ಮೂಡಿಸುತ್ತವೆ. ಕೆಲವೊಮ್ಮೆ ಮನೆಯವರಲ್ಲಿ ಅಚ್ಚರಿ ಮೂಡಿಸಿ, ತುಟಿಯಂಚಿನಲ್ಲಿ ನಗು ತರಿಸುವ ಈ ಅನುಭವವು ಮೆದುಳಿನ ಅಚ್ಚರಿಯ ಕಾರ್ಯವೈಖರಿಯ ಒಂದು ವಿಶಿಷ್ಟ ನಿದರ್ಶನವಾಗಿದೆ.

ರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದ ಸಮಯ. ಮನೆಯ ಬಾತ್‌ರೂಮ್‌ನಿಂದ ಇದ್ದಕ್ಕಿದ್ದಂತೆ ಬಾಗಿಲ ಸದ್ದು, ಅದರ ಬೆನ್ನಲ್ಲೇ ನೀರು ಹರಿಯುವ ಸದ್ದು ಕೇಳಿಸಿತು.ಆ ಸದ್ದಿಗೆ ಎಚ್ಚರವಾಯಿತು. ಗಾಬರಿಯಿಂದ ಎದ್ದು ಕುಳಿತು ಏನಾಯಿತು ಎಂದು ನೋಡುವಷ್ಟರಲ್ಲಿ ಬಾತ್‌ರೂಮ್‌ನ ಬಾಗಿಲು ತೆರೆಯಿತು. ಹೊರಗೆ ಬಂದ ವ್ಯಕ್ತಿಯ ಕೈಯಲ್ಲಿ ಹೊದಿಕೆ ಮತ್ತು ತಲೆದಿಂಬು! ಒಂದು ಕ್ಷಣ ಆಶ್ಚರ್ಯವಾಯಿತು. ಬಾತ್‌ರೂಮ್‌ಗೆ ಹೋದವರು ಕೈಯಲ್ಲಿ ಬಟ್ಟೆ ತರುವುದನ್ನು ನೋಡಿದ್ದೇವೆ, ಆದರೆ ಹೊದಿಕೆ ಮತ್ತು ತಲೆದಿಂಬು ಹೊತ್ತು ಬರುವುದನ್ನು ನೋಡಿದ್ದೇವೆಯೇ?

ನಂತರ ತಿಳಿದ ವಿಷಯವೇನೆಂದರೆ, ಆ ವ್ಯಕ್ತಿ ಗಾಢ ನಿದ್ರೆಯಲ್ಲಿಯೇ ಬಾತ್‌ರೂಮ್‌ಗೆ ಹೋಗಿದ್ದರು. ನೀರಿನ ಸದ್ದಿಗೋ ಗೊತ್ತಿಲ್ಲ ಹೊರ ಬರುವಷ್ಟರಲ್ಲಿ ಅವರಿಗೆ ಎಚ್ಚರವಾಗಿತ್ತು. ಏನೂ ಆಗಿಲ್ಲವೆಂಬಂತೆ ತಮ್ಮ ಹಾಸಿಗೆಯ ಬಳಿಗೆ ಹೋಗಿ ಮತ್ತೆ ಮಲಗಿದ್ದರು. ಬೆಳಗಿನ ಜಾವ ಈ ಘಟನೆ ನೆನಪಾದಾಗ ಅಚ್ಚರಿಯ ಜೊತೆಗೆ ತುಟಿಯಂಚಿನಲ್ಲಿ ನಗುವೂ ಮೂಡಿತು. ನಿದ್ರೆಯಲ್ಲಿದ್ದಾಗ ನಮ್ಮ ಮೆದುಳು ಯಾವ ಲೋಕದಲ್ಲಿರುತ್ತದೆಯೋ, ದೇಹ ಮಾತ್ರ ತನ್ನದೇ ಆದ ದಾರಿಯಲ್ಲಿ ಸಾಗುತ್ತಿರುತ್ತದೆ!

ಇದರ ಬಗ್ಗೆ ಓದಿದಾಗ ತಿಳಿದಂತಹ ಕೆಲವು ವಿಷಯಗಳು:

ನಿದ್ರೆಯಲ್ಲಿ ನಡೆಯುವ ಸ್ಥಿತಿಯ ವೈಜ್ಞಾನಿಕ ಹೆಸರು ಸೋಮ್ನಾಂಬುಲಿಸಂ. ಇದನ್ನು ವೈದ್ಯಕೀಯ ಭಾಷೆಯಲ್ಲಿ ನಿದ್ರಾ ನಡಿಗೆ ಅಥವಾ ಸ್ಲೀಪ್‌ವಾಕಿಂಗ್ (Sleepwalking) ಎಂದು ಕರೆಯುತ್ತಾರೆ.

ನಿದ್ರೆಯಲ್ಲೂ ಎಚ್ಚರವಾಗುವ ದೇಹ!

ನಿದ್ರೆ ಎಂದರೆ ದೇಹ ಮತ್ತು ಮನಸ್ಸು ಸಂಪೂರ್ಣ ವಿಶ್ರಾಂತಿ ಪಡೆಯುವ ಸ್ಥಿತಿ ಎಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಮೆದುಳಿನ ಒಂದು ಭಾಗ ನಿದ್ರೆಯಲ್ಲಿದ್ದರೂ ದೇಹದ ಚಲನೆಗಳು ಮಾತ್ರ ಎಚ್ಚರದಲ್ಲಿರುವಂತೆ ನಡೆಯುತ್ತವೆ. ಆಗ ವ್ಯಕ್ತಿ ಹಾಸಿಗೆಯಿಂದ ಎದ್ದು ನಡೆಯಬಹುದು, ಬಾಗಿಲು ತೆರೆಯಬಹುದು, ಮಾತನಾಡಬಹುದು ಅಥವಾ ದಿನನಿತ್ಯದ ಕೆಲವು ಕೆಲಸಗಳನ್ನು ಮಾಡಬಹುದು. ಆದರೆ ಆ ಕ್ಷಣದಲ್ಲಿ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಇರುವುದಿಲ್ಲ.

ಕೆಲವು ಅಧ್ಯಯನಗಳ ಪ್ರಕಾರ ಸಾಮಾನ್ಯವಾಗಿ ಇಂತಹ ಘಟನೆಗಳು ಗಾಢ ನಿದ್ರೆಯ ಹಂತದಲ್ಲಿ, ವಿಶೇಷವಾಗಿ ರಾತ್ರಿ ಮೊದಲ ಕೆಲವು ಗಂಟೆಗಳಲ್ಲಿ ಸಂಭವಿಸುತ್ತವೆ. ಕಣ್ಣು ತೆರೆದಿದ್ದರೂ ವ್ಯಕ್ತಿ ಸಂಪೂರ್ಣ ಎಚ್ಚರದಲ್ಲಿರುವುದಿಲ್ಲ. ಕೆಲವೊಮ್ಮೆ ಸುತ್ತಮುತ್ತಲಿನವರ ಮಾತಿಗೂ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ, ಮಾತನಾಡಿದರು ಅದು ಸ್ಪಷ್ಟವಾಗಿರುವುದಿಲ್ಲ. ಬೆಳಗ್ಗೆ ಎದ್ದಾಗ ರಾತ್ರಿ ನಡೆದ ಘಟನೆಗಳ ನೆನಪೇ ಇರುವುದಿಲ್ಲ.

ನಿದ್ರಾ ನಡಿಗೆಗೆ ಕಾರಣವೇನು?

ಇದಕ್ಕೆ ಹಲವು ರೀತಿಯ ಕಾರಣಗಳಿವೆ. ನಿದ್ರೆಯ ಕೊರತೆ, ಮಾನಸಿಕ ಒತ್ತಡ, ಜ್ವರ, ನಿದ್ರೆಯ ಸಮಯದಲ್ಲಿ ಆಗುವ ಬದಲಾವಣೆಗಳು ಹಾಗೂ ಕೆಲವು ನಿದ್ರಾ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು. ಕುಟುಂಬದಲ್ಲಿ ಇಂತಹ ಅಭ್ಯಾಸವಿದ್ದರೆ ಇತರರಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮಕ್ಕಳಲ್ಲಿ ನಿದ್ರಾ ನಡಿಗೆ ಹೆಚ್ಚು ಕಂಡುಬರುತ್ತದೆ. ವಯಸ್ಸು ಹೆಚ್ಚಾದಂತೆ ಬಹುತೇಕ ಮಕ್ಕಳಲ್ಲಿ ಇದು ಕಡಿಮೆಯಾಗುತ್ತದೆ. ಆದರೆ ಕೆಲವರಲ್ಲಿ ದೊಡ್ಡವರಾದ ಮೇಲೂ ಮುಂದುವರಿಯಬಹುದು ಅಥವಾ ಹೊಸದಾಗಿ ಕಾಣಿಸಿಕೊಳ್ಳಬಹುದು.

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?

ನಿದ್ರೆಯಲ್ಲಿ ನಡೆಯುವವರನ್ನು ಕಂಡಾಗ ಗಾಬರಿಯಾಗುವ ಅಗತ್ಯವಿಲ್ಲ. ಅವರನ್ನು ಗದರಿಸುವುದಾಗಲಿ, ಹೆದರಿಸುವುದಾಗಲಿ ಮಾಡಬಾರದು. ಶಾಂತವಾಗಿ ಮಾತನಾಡಿ, ಸುರಕ್ಷಿತವಾಗಿ ಹಾಸಿಗೆಯ ಕಡೆಗೆ ಕರೆದೊಯ್ಯುವುದು ಉತ್ತಮ. ಮನೆಯ ಬಾಗಿಲು, ಕಿಟಕಿಗಳ ಸುರಕ್ಷತೆ ಮತ್ತು ದಾರಿಯಲ್ಲಿ ಅಡ್ಡಿಯಾಗುವ ವಸ್ತುಗಳ ಬಗ್ಗೆ ಗಮನವಿರಬೇಕು. ಇಂತಹ ಘಟನೆಗಳು ಪದೇಪದೇ ಸಂಭವಿಸಿದರೆ ಅಥವಾ ಅಪಾಯ ಉಂಟುಮಾಡಿದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ನಿದ್ರಾ ನಡಿಗೆ ಅಪರೂಪದ ಸಂಗತಿಯಲ್ಲ. ಆದರೆ ಅದು ನಮಗೆ ಮಾನವನ ಮೆದುಳಿನ ಕಾರ್ಯವೈಖರಿಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಹಗಲಿನಲ್ಲಿ ನಾವು ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂದು ಯೋಚಿಸಿ ಹೆಜ್ಜೆ ಇಡುತ್ತೇವೆ. ಆದರೆ ನಿದ್ರೆಯಲ್ಲಿ ಮಾತ್ರ ಹೆಜ್ಜೆಗಳಿಗೆ ದಾರಿಯ ಅರಿವಿರುವುದಿಲ್ಲ, ನಡೆದ ಘಟನೆಗಳಿಗೆ ನೆನಪೂ ಇರುವುದಿಲ್ಲ!

ಇಂತಹ ಎಚ್ಚರವಿಲ್ಲದ ಹೆಜ್ಜೆಗಳು ರಾತ್ರಿ ನಿಮ್ಮ ಮನೆಯಲ್ಲೂ ಓಡಾಡಿರಬಹುದು ...ನಿದ್ರೆಯಲ್ಲಿನ ಈ ನಡಿಗೆ ನಿಮಗೂ ಅಚ್ಚರಿ ಮೂಡಿಸಿರಬಹುದು, ಸಣ್ಣ ನಗುವಿಗೂ ಕಾರಣವಾಗಬಹುದು. ಆದರೆ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ ಎಂಬುದನ್ನು ಮರೆಯಬಾರದು. ನಗುವಿರಲಿ, ಆದರೆ ಅಪಹಾಸ್ಯ ಬೇಡ; ಕುತೂಹಲವಿರಲಿ, ಜೊತೆಗೆ ಕಾಳಜಿಯೂ ಇರಲಿ. ಏಕೆಂದರೆ ನಿದ್ರೆಯಲ್ಲಿಯೂ ನಡೆಯುವ ಈ ಹೆಜ್ಜೆಗಳು ನಮ್ಮ ಅರಿವಿಗೆ ಮೀರಿದ ಮೆದುಳಿನ ಮತ್ತೊಂದು ವಿಸ್ಮಯವನ್ನು ಪರಿಚಯಿಸುತ್ತವೆ!

Creative Writings