Karada Vishwa

Article · July 17, 2026

ಮದರಂಗಿಯಲ್ಲಿ ಮನಸ್ಸಿನ ರಂಗು ( ಲಘು ಧಾಟಿಯ ಬರಹ )

- ದಿವ್ಯಾ ಶಿರಂತಡ್ಕ

ಅದೊಂದು ದಿನ ಕನ್ನಡಿ ನೋಡುತ್ತಿದ್ದಾಗ ಫಳ್ಳನೆ ಮಿಂಚು ಹೊಡೆದಂತಾಯಿತು. ಬೆಳ್ಳನೆ ಕೂದಲೊಂದು ನನ್ನೇ ನೋಡಿ ನಕ್ಕು ಅಣಕಿಸಿತು. ಮತ್ತೆ ಸೂಕ್ಷ್ಮವಾಗಿ ನೋಡಿದಾಗ ಮತ್ತೂ ಒಂದೆರಡು ಬೆಳ್ಳಿ ಕೂದಲು ಕಂಡು ಕಸಿವಿಸಿ ಆಯ್ತು. ಅನಂತರ ಶುರುವಾಯಿತು ನೋಡಿ ಆ ಬೆಳ್ಳಿ ಕೂದಲನ್ನು ಮರೆಸುವಂತೆ ತಲೆ ಬಾಚಿಕೊಳ್ಳುವ ಹುನ್ನಾರ. ಎಷ್ಟೇ ನಾಜೂಕಾಗಿ ಬಾಚಿಕೊಂಡರೂ ಬೆಳ್ಳಿ ಕೂದಲು ಮಾತ್ರ ಮೇಲೆದ್ದೆದ್ದು ಲೋಕ ನೋಡುತ್ತಿತ್ತು.... ದಿನಗಳು ಉರುಳಿದಂತೆ ಅವುಗಳ ಸಂಖ್ಯಾಬಲವೂ ಜಾಸ್ತಿಯಾಗಿ ಕಪ್ಪು ಕೂದಲಿನ ಮಧ್ಯೆ ಕಾಣಿಸುತ್ತಿದ್ದ ಬಿಳಿ ಕೂದಲಿನ ಬದಲಾಗಿ, ಬಿಳಿಕೂದಲಿನ ಮಧ್ಯೆ ಕಪ್ಪು ಕೂದಲು ಹುಡುಕುವ ಪರಿಸ್ಥಿತಿ ನಿರ್ಮಾಣವಾಯಿತು.

ವಯಸ್ಸಾಗುವುದು ಸಹಜ ಪ್ರಕ್ರಿಯೆಯೇ ಸರಿ. ಚರ್ಮ ಸುಕ್ಕುಗಟ್ಟುವುದು, ಕೂದಲು ಬೆಳ್ಳಗಾಗುವುದು, ಶರೀರ ದುರ್ಬಲವಾಗುವುದು, ಹಲ್ಲುಗಳು ಸಡಿಲವಾಗಿ ಉದುರುವುದು ಒಂದೇ ಎರಡೇ... ಎಂತಹ ವಿಶ್ವ ಸುಂದರಿಗೇ ಆದರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗಂಡಸರಿಗೆ ಹೋಲಿಸಿದರೆ ಹೆಣ್ಣು ಮಕ್ಕಳು ತಮ್ಮ ರೂಪ ಲಾವಣ್ಯದ ಬಗ್ಗೆ ಅತಿಯಾಗಿ ಕಾಳಜಿ ಹೊಂದಿರುತ್ತಾರೆ. ತಮ್ಮ ಸಹಜ ರೂಪಕ್ಕೆ ಒಂದಷ್ಟು ಮೆರಗು ನೀಡಿಯೇ ಅವರು ಹೊರಗೆ ಕಾಣಿಸಿಕೊಳ್ಳಲು ಇಷ್ಟಪಡುವವರು. ಹಾಗೆ ನನ್ನ ಸಮಸ್ಯೆ ಜಾಗತಿಕ ಸಮಸ್ಯೆ ಎನಿಸಿದ್ದೇ ತಡ ನನ್ನ ದೃಷ್ಟಿ 40 ದಾಟಿದವರ ತಲೆಯ ಮೇಲೆ ಇರುತ್ತಿತ್ತು. ಹಲವರ ಕೂದಲು ಬೆಳ್ಳಗಾದದ್ದು ಕಂಡು ಮನದೊಳಗೆ ಸಂತಸ ಪಟ್ಟರೂ ಇನ್ನು ಕೆಲವರ ಕೂದಲು 70 ದಾಟಿದರೂ ಕಾಡಿಗೆಯಷ್ಟೇ ಕಪ್ಪು ಇರುವುದನ್ನು ಕಂಡಾಗ ಅಚ್ಚರಿಯಾಗುತ್ತಿತ್ತು. White hairs are respected... black hairs suspected ಅನ್ನೋ ಮಾತಿನಂತೆ ನನಗೆ ಅವರ ಕೂದಲ ಬಣ್ಣವನ್ನು ನೋಡುವಾಗ ಸಂದೇಹ ಬರುತ್ತಿತ್ತು. ಆದರೆ ಅಚ್ಚರಿ ಎಂದರೆ ಯಾವ ಲೇಪನವೂ ಮಾಡದೆ ಕೆಲವರ ಕೂದಲು ಕರ್ರಗೆ ಕಂಗೊಳಿಸುತ್ತಿತ್ತು.

ತಲೆ ಕೂದಲ ವಿಷಯಕ್ಕೆ ಬಂದಾಗ ಕಪ್ಪು ಬಿಳಿ ಬಣ್ಣವಷ್ಟೇ ಅಲ್ಲ ಕೆಂಪು ಬಣ್ಣವೂ ಇತ್ತೀಚೆಗೆ ರಾರಾಜಿಸುತ್ತಿದೆ. ಇದನ್ನು ಚೆನ್ನಾಗಿ ಬಲ್ಲ ನಾನು ಕಪ್ಪು ಹೋಗಲಿ ಕೆಂಪಾದರೂ ಮಾಡೋಣ ಎಂದು ಕಾತರಳಾದೆ. ಕಪ್ಪು ಬಣ್ಣವನ್ನು ಹಾಗೆಯೇ ಉಳಿಸಿಕೊಳ್ಳಲು ಅಂಗಡಿಯಲ್ಲಿ ವಿವಿಧ ರೀತಿಯ ಡೈಗಳು ಸಿಗುವುದು ಗೊತ್ತಿದ್ದರೂ ಸುಮಾರು ನಾಲ್ಕು ದಶಕಗಳ ಕಾಲ ಕಪ್ಪನ್ನೇ ಹೊತ್ತ ತಲೆಗೆ ಒಂದಷ್ಟು ಭಿನ್ನ ಬಣ್ಣ ನೀಡುವ ಮನಸ್ಸಾಯಿತು. ಹಾಗೆ ಈ ವಿಷಯದಲ್ಲಿ ಕೆಲವು ವರ್ಷಗಳಿಂದ ಅನುಭವ ಪಡೆದ ಬಿಳಿ ಕೂದಲ ಅಲ್ಲಲ್ಲ.... ಕೆಂಪು ಕೂದಲಿನವರನ್ನು ಸಂಪರ್ಕಿಸಿದೆ. ಅವರ ಸಲಹೆಯ ಮೇರೆಗೆ ಗೋರಂಟಿ ಎಲೆ, ದಾಸವಾಳ ಮುಂತಾಗಿ ಅರೆದು ಅದಕ್ಕೆ ಒಂದಷ್ಟು ಚಾ ಹುಡಿಯನ್ನು ಬೆರೆಸಿ ಒಂದೆರಡು ಗಂಟೆ ಹಾಗೆ ಮುಚ್ಚಿ ಇಟ್ಟಿದ್ದೆ.‌ ಮಕ್ಕಳು ಮರಿಗಳನ್ನು ಶಾಲೆಗೆ ಕಳುಹಿಸಿ ನಿಧಾನವಾಗಿ ಈ ಮಹತ್ತರ ಕಾರ್ಯಕ್ಕೆ ಅಡಿ ಇಡೋಣ ಎಂದು ನಿರ್ಧರಿಸಿದ್ದೆ. ಬೆಳಗ್ಗೆ ಘನ ಗಾಂಭೀರ್ಯದಿಂದ ಅದೇನೋ ಯೋಚಿಸುತ್ತ ನೀರ್ದೋಸೆ ಹೊಯ್ಯುತ್ತಿದ್ದೆ. ಮಕ್ಕಳು ದೋಸೆಗೆ ಮಾಡಿದ ಚಟ್ನಿ ಎಂದುಕೊಂಡು ನನ್ನ ಅರೆದಿಟ್ಟ ಮೆಹಂದಿಯನ್ನು ನೋಡಿ ಅಮ್ಮ ಇವತ್ತು ಯಾಕೆ ಚಟ್ನಿ ಈ ಬಣ್ಣವಿದೆ..? ಸ್ಪೆಷಲ್ ಚಟ್ನಿಯಾ ಇದು ಎನ್ನಬೇಕೇ?!! ಬಟ್ಟಲಿಗೆ ಹಾಕಿ ರುಚಿ ನೋಡದ್ದು ನನ್ನ ಭಾಗ್ಯ ಎನ್ನಿ!

ಎಲ್ಲರೂ ಮನೆಯಿಂದ ಹೊರಟು ಹೋದ ನಂತರ ತಲೆಗೆ ಅದಾಗಲೇ ತಯಾರಿಸಿಟ್ಟ ಮೆಹಂದಿ ಲೇಪನ ಶುರುವಾಯಿತು. ಮೊಬೈಲ್ ರೇಡಿಯೋದಲ್ಲಿ 'ಮೆಹಂದಿ ಲಗಾಕೆ ರಖನ...ಡೋಲಿ ಸಜಾಕೆ ರಖನಾ' ಹಾಡು ತೇಲಿ ಬರುತ್ತಿತ್ತು. ಎರಡು ದಶಕಗಳ ಹಿಂದಿನ ನನ್ನ ಮದುವೆಯ ದಿನದ ನೆನಪಾಯಿತು. ಆಗ ಕೈ ತುಂಬಾ ಹಚ್ಚಿದ್ದ ಗೋರಂಟಿ ಈಗ ಅದೇ ಕೈಯಿಂದ ತಲೆಗೆ ಹಚ್ಚಬೇಕಾಗಿತಲ್ಲ ಎಂದುಕೊಂಡು ಕಾಲದ ಮಹಿಮೆಯನ್ನು ಯೋಚಿಸುತ್ತಾ ತಲೆ ಕೆರೆಯೋಣ ಎಂದರೆ ಅದಾಗಲೇ ಹಚ್ಚಿದ್ದ ಗೋರಂಟಿ ಗಟ್ಟಿಯಾಗಿ ತಲೆಯನ್ನು ಟೊಪ್ಪಿಯಂತೆ ಅಪ್ಪಿ ಹಿಡಿದಿತ್ತು. ಒಂದೆರಡು ಕಿಲೋ ಭಾರ ತಲೆ ಮೇಲೆ ಇದೆಯೇನೋ ಎಂದು ಅನಿಸಲು ಶುರುವಾಯಿತು. ಎರಡು ಮೂರು ಗಂಟೆಯ ನಂತರ ಸ್ನಾನ ಮಾಡಿದಾಗ ಹಗುರಗುರಾದ ಭಾವ. ಆದರೆ ಕೂದಲಿನ ಬಣ್ಣ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆ ಆಗದೆ ನಿರಾಸೆ ಮೂಡಿತು. ಏನೇ ಆದರೂ "ಮರಳಿ ಯತ್ನವ ಮಾಡು" ಎನ್ನುವ ಮಾತನ್ನು ಮನದಲ್ಲೇ ಗಟ್ಟಿ ಮಾಡಿಕೊಂಡೆ.

ಈ ನಡುವೆ ತಲೆ ಕೂದಲು ಕೆಂಬಣ್ಣ ಮಾಡಲು ಹೋಗಿ ಮನೆಯಲ್ಲಿ ಚಾಹುಡಿ ಖರ್ಚು ಹೆಚ್ಚಾಗುತ್ತಿತ್ತು. ಇದರಿಂದಾಗಿ ಮನೆಯವರ ಕಣ್ಣು ಕೆಂಪಾಗದೊಡಗಿತು. ದಿನಕ್ಕೊಮ್ಮೆ ಚಾ ಮಾಡುವ ಮನೆಯಲ್ಲಿ ಅದು ಹೇಗೆ ಇಷ್ಟು ಬೇಗ ಚಾ ಹುಡಿ ಖಾಲಿಯಾಗುತ್ತದೆ ಎಂದು ವಿ'ಚಾ'ರಿಸಿದರು. ಅದು ಗೋರಂಟಿಯ ಜೊತೆ ನನ್ನ ತಲೆ ಸೇರುತ್ತಿದೆ ಎಂದು ನಾ ಸಂಕೋಚದಿಂದಲೇ ಹೇಳಿದಾಗ... ಅಬ್ಬ ! ಹಾಲು, ಸಕ್ಕರೆ ಕೂಡ ಸೇರಿಸುತ್ತಿಲ್ಲವಲ್ಲ ಅದೇ ಭಾಗ್ಯ.. ಎಂದು ಮನೆಯವರು ಹೇಳಿದಾಗ ಅಲ್ಲಿಂದ ಸದ್ದಿಲ್ಲದೆ ಜಾಗ ಖಾಲಿ ಮಾಡಿದೆ.

Creative Writings