Karada Vishwa

Article · July 14, 2026

ಕೊರೊನಾ ನಿಜಾನಾ

_ಶಾರದಾ ಕಜೆಗದ್ದೆ, ಬಾಯಾರು.

2019 ದಶಂಬರ ತಿಂಗಳಲ್ಲಿ ಕೊರೋನ ಎಂಬ ಶ್ವಾಸಕೋಶ ಸಂಬಂಧಿ ರೋಗ ಚೀನಾದಲ್ಲಿ ಹುಟ್ಟಿ ಒಂದೊಂದೇ ದೇಶ ಸುತ್ತಾಡಿ 2020 ಮಾರ್ಚ್ ಹೊತ್ತಿಗೆ ಯಾವ ವೀಸಾ ಪಾಸ್ಪೋರ್ಟ್ ಇಲ್ಲದೆ ಭಾರತಕ್ಕೆ ಹಾರಿ ಬಂದಾಗಿತ್ತು. ವಾಯುವೇಗದಲ್ಲಿ ಎಲ್ಲಾ ರಾಜ್ಯಗಳಿಗೆ ಹರಡಿ ಟಿವಿ ವಾರ್ತಾ ವಾಹಿನಿಗಳ TRP ರಾತ್ರಿಬೆಳಗಾಗುದ್ರೊಳಗೆ ದುಪ್ಪಟ್ಟಾಗುವಂತೆ ಮಾಡಿತು. ಸಣ್ಣಮಕ್ಕಳಿಂದ ಹಿಡಿದು 90 ವರ್ಷ ಮೇಲ್ಪಟ್ಟವರೂ ಮುಂಜಾನೆಯಿಂದ ಮಧ್ಯರಾತ್ರಿವರೆಗೆ ಟಿವಿ ಮುಂದೆ ಕಣ್ಣು ಕಿವಿ ಬಿಚ್ಚಿಡುವಂತೆ ಮಾಡಿತು.

Lockdown ಘೋಷಣೆಯಾದಮೇಲೆ ವಾಹನ ಓಡಾಟ ಸಂಖ್ಯೆ ತೀವ್ರಗತಿಯಲ್ಲಿ ಕಡಿಮೆಯಾದ ಕಾರಣ ಕೆಲವು ತಿಂಗಳುಗಳ ಕಾಲ ಪ್ರಕೃತಿ ಉಸಿರಾಡುವಂತಾಯಿತು. ಇದರಿಂದ ಪರಿಸರ ಕಿಂಚಿತ್ ಪರಿಶುದ್ಧವಾಗಿರಬಹುದು. ಪ್ರಾಣಿಪಕ್ಷಿ ಜೀವಜಂತುಗಳು ಯಾವ ಭಯವಿಲ್ಲದೆ ಕೆಲವು ತಿಂಗಳು ಓಡಾಡಿರಬಹುದು.

ಆದರೆ ಮೊದಲಬಾರಿಗೆ ಎಂಬಂತೆ ಮಾನವಜೀವಿ ಇನ್ನಿಲ್ಲದಂತೆ ತಲೆಕೆಡಿಸಿಕೊಂಡದ್ದು. ಯಾಕೆಂದರೆ ಗಂಟಲುಕೆರೆತ, ತಲೆನೋವು, ಶೀತ, ಜ್ವರಗಳ ಸಾಮಾನ್ಯ ರೂಪದಲ್ಲಿ ಬರುವ ಕೊರೋನಾ ಮಹಾಮಾರಿ ಜೀವವನ್ನೇ ಕಸಿದುಕೊಳ್ಳುವಷ್ಟರ ಮಟ್ಟಿಗೆ ಭೀಕರತೆಯನ್ನು ತೋರಿಸುವಂತೆ ಮಾಡಿತ್ತು ಟಿವಿ ಮಾಧ್ಯಮಗಳು. ಶ್ವಾಸಕೋಶ ಸಂಬಂಧಿ ಯಾವುದೇ ಸಣ್ಣಪುಟ್ಟ ತೊಂದರೆಗಳು ಕಂಡುಬಂದರೂ ಮನೆಮಂದಿಯೆಲ್ಲ ಮಾಸ್ಕ್ ಧರಿಸಿಯೋ ಇಲ್ಲವೇ ತಮ್ಮಷ್ಟಕ್ಕೆ ತಾವೇ ಪ್ರತ್ಯೇಕ ಕೋಣೆಯೊಳಗೆ ಕ್ವಾರಂಟೈನ್ ಅನುಭವಿಸುತ್ತಿದ್ದರು. ಇನ್ನು ಸ್ವಲ್ಪ ವಿಪರೀತ ಲಕ್ಷಣಗಳು ಕಂಡುಬಂದು ಆಸ್ಪತ್ರೆ ಸೇರಿದವರಲ್ಲಿ ಹೆಚ್ಚಿನವರು ಬಂದದ್ದು ಹೆಣವಾಗಿಯೇ. ರೋಗಲಕ್ಷಣ ಏನೇ ಇದ್ದರೂ ಕಾರಣ ಒಂದೇ, ಕೋರೋನ!! ಇಲ್ಲಿವರೆಗೆ ಇಡೀ ಜಗತ್ತೇ ತನ್ನ ಕಪಿಮುಷ್ಟಿಯಲ್ಲಿದೆ, ತನ್ನನ್ನು ಯಾರೂ ಏನು ಮಾಡಿದರೂ ನಿಯಂತ್ರಿಸಲು ಅಸಾಧ್ಯ ಅನ್ನುವಂಥ ಭಂಡಧೈರ್ಯದಲ್ಲಿ ಸೂತ್ರ ಇಲ್ಲದ ಗಾಳಿಪಟದಂತೆ ತೂರಾಡುತ್ತಿದ್ದ ಮನುಜನೂ ಹೆದರಿ ಒಂದಡಿ ಮನೆಯಿಂದ ಹೊರಗಿಡಲು ಯೋಚಿಸುವಂತಾಯಿತಲ್ಲ...ಅಂತೂ ಇಂತೂ ಮನುಷ್ಯನೂ ಹತ್ತಿರಹತ್ತಿರ ಒಂದುವರ್ಷ ಪ್ರಾಣಭಯದಲ್ಲಿ ಬಾಳುವೆ ನಡೆಸುವಂತಾದದ್ದು ಆಶ್ಚರ್ಯವೇ!!

ಏನೇ ಇರಲಿ, ಶಾಲೆ ಕಾಲೇಜ್ ಗಳಿಗೆ ರಜೆ ಘೋಷಣೆಯಾಗಿ ಮಕ್ಕಳೆಲ್ಲ ಮನೆಯಲ್ಲೇ ಇರಬೇಕಾಗಿ ಬಂದ ನಂತರ ದೂರದರ್ಶನ ಹಿಂದಿ ವಾಹಿನಿಯಲ್ಲಿ ಮಹಾಭಾರತ ಮತ್ತು ರಾಮಾಯಣ ಪೌರಾಣಿಕ ಧಾರಾವಾಹಿಗಳು ಬಿತ್ತರವಾಗತೊಡಗಿದುವು. ಅತ್ಯಾಶ್ಚರ್ಯದಿಂದ, ಬಹು ಶ್ರದ್ಧೆಯಿಂದ ಮನೆಮಂದಿಯೆಲ್ಲ ಜೊತೆ ಕೂತು ಈ ಧಾರಾವಾಹಿಗಳನ್ನು ವೀಕ್ಷಿಸುವಂತಾಯಿತು. ಮಕ್ಕಳಿಗೆ ಹೊಸ ಕಥೆ,ಪಾತ್ರಗಳ ಪರಿಚಯವಾದರೆ ಶಿಕ್ಷಣ, ಉದ್ಯೋಗ, ಸಂಪಾದನೆ ಹೀಗೆ ಧಾವಂತದ ಜೀವನದಲ್ಲೇ ಮುಳುಗಿದ್ದ ಜನಕ್ಕೆ ಮರೆತು ಮೂಲೆಗುಂಪಾಗಿ ಮನದಮೂಲೆಯಲ್ಲೆಲ್ಲೋ ಬಿದ್ದಿದ್ದ ರಾಮ, ಕೃಷ್ಣ, ಈ ಕಥೆಗಳು, ಪಾತ್ರಗಳೆಲ್ಲ ಮತ್ತೊಮ್ಮೆ ಸುಂದರ ನೆನಪುಗಳಾಗಿ ಮೂಡಿದವು. ಎಲ್ಲರ ಬಾಯಲ್ಲೂ ಅಥ ಶ್ರೀ ಮಹಾಭಾರತ ಕಥಾ, ಯದಾ ಯದಾ ಹಿ, ಹಮ್ ಕಥಾ ಸುನಾತೆ ರಾಮ್ ಅನ್ನುವ ಸುಂದರ ಸಾಲುಗಳು ಬರತೊಡಗಿದವು.

ಹೀಗೆ ಶಿಕ್ಷಣ, ಉದ್ಯೋಗದ ವಿಚಾರವಾಗಿ ಮುಂದೇನು ಎಂದು ಚಿಂತಿಸುತ್ತಿರುವಾಗಲೇ online ಮುಖಾಂತರ ಎಲ್ಲವನ್ನೂ ಪುನಾರಂಭಗೊಳಿಸುವ ಆಲೋಚನೆ ಬಂದು ಎಲ್ಲವೂ ಮನೆಯಿಂದಲೇ ಮೊಬೈಲ್ ಇಂಟರ್ನೆಟ್ ಮುಖಾಂತರ ಶುರುವಾಯಿತು. LKG ಮಕ್ಕಳಿಂದ ತೊಡಗಿ ರಿಟೈರ್ಮೆಂಟ್ ಆಗಲಿರುವ ಉದ್ಯೋಗಸ್ಥರ ತನಕ ಮೊಬೈಲ್, ಲ್ಯಾಪ್ಟಾಪ್ ಗಳ ಮೇಲೆ ಅವಲಂಬಿತರಾಗುವಂತೆ ಆಯಿತು. ಇಂಥ ಸಂದರ್ಭದಲ್ಲಿ ಚೈನಾದ ಮೊಬೈಲ್ , ಟ್ಯಾಬ್ಲೆಟ್, ನೋಟ್ಬುಕ್, ಲ್ಯಾಪ್ಟಾಪ್ ಉತ್ಪಾದನಾ ಕಂಪನಿಗಳೂ ಹೊಸಹೊಸ ಮಾದರಿಯ ಉತ್ಪಾದನೆಗೆ ತೊಡಗಿ ಬೇಗಬೇಗನೆ ಪ್ರಚಾರ ಮಾಡಿ ಮಾರಾಟಕ್ಕಿಳಿದುವು.

ಕೊರೊನಾ ಹೆಸರಲ್ಲಿ ಇಡೀ ಜಗತ್ತನ್ನೇ ಹೆದರಿಸಿ lockdown ಹೆಸರಲ್ಲಿ ತನ್ನ ಮೊಬೈಲ್, ಲ್ಯಾಪ್ಟಾಪ್ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆಯನ್ನು ಸೃಷ್ಟಿಸಿರುವಂಥ ಚೀನಾದ ತೆರೆಮರೆಯಾಟ ಇನ್ನೂ ಕೂಡ ತನ್ನ ಪ್ರದರ್ಶನ ನಿಲ್ಲಿಸಿಲ್ಲ. ಯಾಕೆಂದರೆ Lockdown ಕಾಲ ಕಳೆದು ಎಲ್ಲವೂ ಸುಸೂತ್ರವಾದರೂ ಮೊಬೈಲ್ ಬಳಕೆಯಿಂದ ಮಾತ್ರ ಹೊರಬರಲು ಇಂದಿಗೂ ಯಾರಿಂದಲೂ ಸಾಧ್ಯವಾಗಲಿಲ್ಲ. ಇದರ ಮುಂದುವರಿದ ಭಾಗವಾಗಿ AI, ಕೃತಕ ಬುದ್ಧಿಮತ್ತೆ ಬಳಕೆ ಕೂಡ ಮೊಬೈಲ್ ಎಂಬ ಮಾಯಜಾಲವನ್ನೇ ಅವಲಂಬಿಸಿರುವುದು ದುರಾದೃಷ್ಟವೇ ಸರಿ. ಅಂತೂ ಚೀನಾದ ಅತ್ಯಂತ ಯೋಜನಾಬದ್ಧ, ಸುವ್ಯವಸ್ಥಿತ ಮಾರುಕಟ್ಟೆ ಜಾಲದಲ್ಲಿ ಶಾಶ್ವತವಾಗಿ ಇಡೀ ಜಗತ್ತಿನ ಅತಿಬುದ್ಧಿವಂತ ಪ್ರಾಣಿ ಸಿಕ್ಕಿಬೀಳುವಂತಾಯಿತಲ್ಲ.

ಈಗ ಯೋಚಿಸಿ ಕೊರೋನ ನಿಜಾನಾ??!!

Creative Writings