Karada Vishwa

Article · September 12, 2026

ಅಜ್ಜನ ಮನೆ

ವೀಣಾ ಎಂ ಭಟ್

ಅಜ್ಜನ ಮನೆಗೆ ಹೊರಡುವುದೆಂದರೆ

ನಮಗದು ಭಾರೀ ಉಲ್ಲಾಸ

ಅಜ್ಜಿಯ ಕೈಯ ನಳಪಾಕವನು

ಮೆಲ್ಲಲು ನಮಗೆ ಸಂತೋಷ

ಶಾಲೆಗೆ ಬೀಗ ಜಡಿಯುವ ಮುನ್ನವೆ

ಅಮ್ಮನಲಿ ನಮ್ಮ ಅಹವಾಲು

ಅಜ್ಜನ ಮನೆಗೆ ಹೋಗುವ ದಿನವು ಎಂದು

ಇದುವೇ ನಮ್ಮದು ಸವಾಲು

ಅಮ್ಮನು ಹೊರಡುವ ಆತುರ ತೋರಲು

ಅಪ್ಪನದಿಲ್ಲಿ ಪರದಾಟ

ಸುಮ್ಮನೆ ಕೂರು ರಜೆ ಸಿಕ್ಕಿದ ಒಡನೆ

ಹೋಗುವುದೇತಕೆ ಗೊಣಗಾಟ

ಅಜ್ಜನ ಮನೆಯ ಸೇರಲು ಮನದೊಳು

ಅಮ್ಮನಿಗಾಯಿತು ಸಂತಸವು

ಅಜ್ಜಿಯ ಜೊತೆಯಲಿ ಮಾತಿನ ಮಲ್ಲಿ

ಅಜ್ಜಿಯ ಮನಸಿಗೆ ಉಲ್ಲಾಸವು

ಅಜ್ಜನು ಮಾಡಿದ ಮಡಲಿನ ವಾಚು

ಇಲ್ಲವು ಇದಕೆ ಚಿಕ್ಕಾಸು ಖರ್ಚು

ತೋಟಕೆ ಹೋಗಿ ಅಜ್ಜನ ಜೊತೆಯಲಿ

ತಂದೆವು ಮಡಲನು ಬಗಲಲ್ಲಿ

ಚೊಟ್ಟ ತೆಂಗಿನಕಾಯಿಯ ಕೊರೆದು

ಗಿರಿಗಿಟಿ ಮಾಡಿ ಕೊಡುವರು ಅಜ್ಜ

ಕಂಗಿನ ಸೋಗೆಯ ಹಾಳೆಲಿ ಕೂರಿಸಿ

ಎಳೆಯುವ ಮೋಜು ನೋಡಿರಿ ಅಜ್ಜ

ಬಾಳೆಯ ದಿಂಡನು ಸಾಲಾಗಿ ಕಟ್ಟಿ

ಈಜಲು ಭರದಿ ಕಲಿಸುವ ಮಾವ

ಕುಡಿಯಲು ಕಡಿಯದು ರೆಡಿಯಾಗಿಹುದು

ಬಿರಾಂಡ ಮಸಲತ್ತು ಅಜ್ಜಿಯದು

ಸಂಜೆಯ ವೇಳೆಯ ಲಗೋರಿ ತಲೆಮ್ಮ

ಆಟದ ಸಮಯದ ಗಮ್ಮತ್ತು

ಇರುಳಲಿ ಅಜ್ಜನ ಕಥೆಗಳ ಮೋಡಿ

ರಜೆಯ ಮಜವದು ಮುಗಿದ್ಹೋಯ್ತು

ದಿನ ವಾರ ತಿಂಗಳು ಮುಗಿಯುತ ಬಂತು

ಸಮಯವು ಅರಿಯದೆ ಮುಗಿದ್ಹೋಯ್ತು

ಹೊರಡುವ ದಿನವು ಬಂದಾಗ ಎಲ್ಲರ

ಕಂಗಳಲಿ ನೀರು ಬಂದಾಯ್ತು

Creative Writings