Karada Vishwa

Article · October 29, 2026

ಒಡನಾಡಿ

ಸರೋಜ ಅಂಬುಕುಂಜೆ

ಕೈಯಲ್ಲಿ ಒಂದು ರೊಟ್ಟಿಯನ್ನು ಹಿಡಿದು ಬುಜ್ಜಿ ಬುಜ್ಜಿ,.. ಎಂದು ಕರೆಯುತ್ತಾ ನಿಂತೆ.ಆದರೆ ಅವಳ ಸುಳಿವೇ ಇಲ್ಲ. ಹೀಗೆ ಕಾಯುತ್ತಿರುವಾಗ ನೆನಪುಗಳು ಸುರುಳಿಯಂತೆ ಒಂದೊಂದಾಗಿ ಬರಲಾರಂಬಿಸಿದವು.

ಸುಮಾರು ಎರಡು ವರ್ಷಗಳ ಹಿಂದೆ ಒಂದು ಮುಸ್ಸಂಜೆಯಲ್ಲಿ ಪುಟ್ಟ ನಾಯಿ ಮರಿಯೊಂದು ಹಸಿವೆಯಿಂದ ಅತ್ತಿತ್ತ ಓಡಾಡುತ್ತಿತ್ತು. ತನ್ನ ಪುಟ್ಟ ಬಾಲವನಲ್ಲಾಡಿಸುತ್ತಾ ಬಂದು ಮೈದಾನದಲ್ಲಿ ಗೆಳೆಯರೊಂದಿಗೆ ಮಾತನಾಡ್ತಾ ಕುಳಿತಿದ್ದ ನನ್ನ ಮಗನ ಮಡಿಲೇರಿ ಕುಳಿತುಕೊಂಡಿತು. ಪ್ರೀತಿಯಿಂದ ಕುಳಿತ ಪುಟ್ಟ ಮರಿಯನ್ನು ಬಿಟ್ಟು ಬರಲು ಮನಸ್ಸಾಗದೆ ತನ್ನ ಜೊತೆಗೆ ಕರೆದುಕೊಂಡು ಬಂದ. ಬೊಗಸೆಯಷ್ಟು ಚಿಕ್ಕದಿದ್ದ ಆ ಪುಟ್ಟ ಮರಿಯೋ ನೋಡುತ್ತಿದ್ದಂತೆ ಬೆಳೆದು ದೊಡ್ಡದಾಯಿತು. ಅವಳನ್ನು ಪ್ರೀತಿಯಿಂದ 'ಬ್ರೂಸಿ 'ಎಂದು ಕರೆಯಲು ಶುರು ಮಾಡಿದೆವು . ತುಂಬಾ ತುಂಟತನ , ಎಲ್ಲಾ ಕಡೆಗೂ ಜೊತೆಗೆ ಬರುವವಳು. ದನ ಕರುಗಳನ್ನು ಮೇಯಲು ಬಿಟ್ಟರೆ ಬಳ್ಳಿ ಎಳೆದುಕೊಂಡು ಹೋಗುವುದು ಹಾಲು ಕರೆಯಲು ಹೋದರೆ ಹಟ್ಟಿಯ ಬಾಗಿಲಲ್ಲಿ ಕುಳಿತುಕೊಳ್ಳುವುದು , ಬೆಂಕಿ ಉರಿಸಿದರೆ ಪಕ್ಕದಲ್ಲಿ ಬಂದು ಕುಳಿತುಕೊಳ್ಳುವುದು ಹೀಗೆ ಜೊತೆಜೊತೆಗೆ ಬರುವಳು ಎಲ್ಲಾ ಕೆಲಸದಲ್ಲಿಯೂ ಅವಳದೇ ಕಾರುಬಾರು. ಅವಳಿಗೆ ತಿಳಿಯದೆ ನಾವು ಎಲ್ಲಾದರೂ ಹೊರಗಡೆ ಹೋಗಿ ಬಂದಾಗ ಅವಳದ್ದು ಗಲಾಟೆಯೋ ಗಲಾಟೆ ಪುಟ್ಟ ಮಕ್ಕಳಂತೆ ನಮ್ಮ ಕೈಯಲ್ಲಿದ್ದ ಬ್ಯಾಗು, ಕವರು ಎಲ್ಲವನ್ನು ಎಳೆದುಕೊಂಡು ಹೋಗಿ ಎಲ್ಲಿಯಾದರೂ ಇಟ್ಟು ಬರುತ್ತಾಳೆ. ಅವಳೆದುರು ವಾಹನವನ್ನೇರಿದರೆ, ಅವಳೂ ಒಳಗೆ ಬಂದು ಕಾಲಿಗೆ ಕಚ್ಚಿ ಉಟ್ಟ ಸೀರೆಯನ್ನೇ ಹರಿದುಹಾಕುವಳು.ಮನೆಗೆ ಯಾರೇ ಬಂದರೂ ಜೋರಾಗಿ ಬೊಗಳುತ್ತಾ ಕಚ್ಚಲು ಹೋಗುವಳು, ಆದರೆ ಬಂದವರು ಅವಳನ್ನು ಬಜ್ಜಿ .. ಬಜ್ಜಿ.. ಎಂದು ಕರೆದರೆ ಸಾಕು ಬಾಲವನ್ನು ಅಲ್ಲಾಡಿಸಿಕೊಂಡು ಪರಿಚಯದವರಂತೆ ಸುಮ್ಮನೆ ಆಗುತ್ತಾಳೆ. ನೋಡುತ್ತಿದ್ದಂತೆಯೇ ವರ್ಷವೂ ಕಳೆದು ಹೋಯಿತು ಈಗ ಬುಜ್ಜಿಯು ತಾಯಿಯಾಗುವ ಸಂಭ್ರಮದಲ್ಲಿದ್ದಳು ಆದರೆ ಅದು (pre- matured )ಡೆಲಿವರಿ ಆಗಿ ಮರಿಗಳು ಪುಟ್ಟ ಮಾಂಸದ ಮುದ್ದೆಯಂತೆ ನಿರ್ಜೀವವಾಗಿ ಹುಟ್ಟಿದವು. ಅದನ್ನು ಕಂಡು ಬುಜ್ಜಿಯು ದುಃಖದಿoದ ಅಳುತ್ತಾ ಎಲ್ಲರನ್ನೂ ಮರುಗುವಂತೆ ಮಾಡಿದಳು.

ಬಂದವರ ಬಳಿ ಜೋರಾಗಿ ಅಳುತ್ತಾ ತನ್ನ ನೋವನ್ನು ಪ್ರಕಟಿಸ ತೊಡಗಿದಳು. ನಾವಾದರೊ ಹೇಗೆ ಸಂತೈಸಬೇಕು ಎಂದು ತಿಳಿಯದೆ ಅಸಹಾಯಕರಾಗಿ ನಿಂತಿದ್ದೆವು , ಊಟ ನಿದ್ದೆ ಇಲ್ಲದೆ ಬರೀ ಆಕ್ರಂದನ.... ಎಷ್ಟೇಂದರೂ ಅದು ತಾಯಿ ಅಲ್ಲವೇ ? ಎಷ್ಟೇ ಅಳುತ್ತಿದ್ದರು ಅವಳನ್ನ ತಬ್ಬಿ ಹಿಡಿದು ಆಲಂಗಿಸಿದರೆ ಸಮಾಧಾನಗೊಳ್ಳುತ್ತಿದ್ದಳು ಪಾಪ..

ಹೀಗೆ ದಿನ ಕಳೆದಂತೆ ಅವಳು ಸಹಜ ಸ್ಥಿತಿಯತ್ತ ಮರಳುತ್ತಿದ್ದಳು ತಿಂಗಳುಗಳು ಉರುಳಿದವು.ಈಗ ಮತ್ತೊಮ್ಮೆ ತಾಯಿಯಾಗುವ ಲಕ್ಷಣಗಳು ಕಾಣಿಸಿತೊಡಗಿತು ನಮಗೆಲ್ಲರಿಗೂ ತುಂಬಾ ಭಯವಾಯಿತು ಮುಂದಿನ ದಿನಗಳಲ್ಲಿ ಹೇಗಪ್ಪ ಇವಳನ್ನು ಸoಬಾಳಿಸುವುದು ? ಎಂದು. ಹೀಗೆ ತಿಂಗಳುಗಳು ಉರುಳಿದವು ಈ ಸಲ ಪುಟ್ಟದಾದ ಆರೋಗ್ಯವಂತ ಮರಿಗಳು ಜನಿಸಿದವು. ಒಂದು ತಿಂಗಳಲ್ಲಿ ಮರಿಗಳು ಅಮ್ಮನ ಜೊತೆ ಓಡಾಡಲು ಶುರು ಮಾಡಿದವು. ಸಿಕ್ಕ ಸಿಕ್ಕಲ್ಲಿ ಮಲಗಿಕೊಳ್ಳುವುದು ,ಅಮ್ಮನ ಜೊತೆ ಮಲಗಿಕೊಳ್ಳುವುದು, ರಸ್ತೆಯಲ್ಲೆಲ್ಲ ಮಲಗಲು ಪ್ರಾರಂಭಿಸಿದವು. ಆದರೆ ಒಂದು ಬೆಳ್ಳಂ ಬೆಳಗ್ಗೆ ಒಂದು ವಾಹನದ ಅಡಿಯಲ್ಲಿ ಬಿದ್ದು ಮರಿಗಳು ಅಪ್ಪಚ್ಚಿಯಾದವು. ಓ ದೇವರೇ ಮತ್ತೆ ಶುರುವಾಯಿತು ಇವಳ ಆಕ್ರಂದನ... ಅವಳನ್ನು ಗಟ್ಟಿಯಾಗಿ ಹಿಡಿದು ಆಲಂಗಿಸಿ ಸಮಾಧಾನಿಸಲು ಪ್ರಯತ್ನಿಸಿದೆವು. ಎಲ್ಲರ ಕಣ್ಣಂಚು ಒದ್ದೆಯಾದದ್ದಂತೂ ಸತ್ಯ. ಈ ಆಘಾತದಿಂದ ಹೊರಬರಲು ಒಂದು ತಿಂಗಳೇ ಬೇಕಾಯಿತು.

ಮುಂದೇನು? ಎಂಬ ಚಿಂತೆ ಎಲ್ಲರಿಗೂ ಕಾಡತೊಡಗಿತು. ಪ್ರತಿಸಲವೂ ಸಾವು-ನೋವು . ಕೊನೆಗೆ ನಾವು ಇವಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೆಂದು, ಇವಳನ್ನು ಹೋಟೆಲ್ ಅಥವಾ ಮದುವೆ ಛತ್ರ ಅಥವಾ ದೇವಸ್ಥಾನದ ಬಳಿಗೆ ಬಿಟ್ಟು ಬರುವುದೆಂದು ತೀರ್ಮಾನಿಸಿದೆವು. ಆದರಂತೆ ಅವಳನ್ನು ಒಂದು ದೇವಸ್ಥಾನದ ಬಳಿಗೆ ಬಿಟ್ಟು ಬಂದಾಯಿತು ಮನೆಗೆ ಬಂದಾಗ ಏನೋ ಒಂದು ಅಪರಾಧಿ ಪ್ರಜ್ಞೆ ಕಾಡತೊಡಗಿತು. ಸರಿಯಾಗಿ ನಿದ್ದೆಯೂ ಬಾರದು. ತಟ್ಟನೆ ನೆನಪಾಗಿ ಬುಜ್ಜಿ ಬಂದಳು ಎಂಬಂತೆ ಹಗಲು-ರಾತ್ರಿ ಕಾಡತೊಡಗಿದಳು ಹೀಗೆ ಮೂರು ದಿನ ಕಳೆದಿರಬಹುದು,ಒಂದು ರಾತ್ರಿ ಮಗನು ಅದೇ ದಾರಿಯಲ್ಲಿ ಬರುವಾಗ ಎಲ್ಲಿ ಕಾದು ಕುಳಿತಿದ್ದಳೋ ಅವನನ್ನ ಕಂಡ ತಕ್ಷಣ ಬೈಕಿನ ಕಡೆಗೆ ಹಾರಿದ್ದಳು.

ಮೊದಲೇ ಕಪ್ಪು ಬಣ್ಣ ಅದರ ಜೊತೆಗೆ ಕತ್ತಲು ಬೇರೆ . ಅನಿರೀಕ್ಷಿತ ಆಘಾತದಿಂದ ಎಚ್ಚೆತ್ತು ನೋಡಿದರೆ ಬೈಕಿನ ಎದುರುಗಡೆ ಬಾಲ ಅಲ್ಲಾಡಿಸಿಕೊಂಡು ನಿಂತಿದ್ದಾಳೆ ಬುಜ್ಜಿ... ತಕ್ಷಣವೇ ಕರೆ ಮಾಡಿ ಅಮ್ಮಾ... ಊಟ ಇದೆಯಾ ? ಎಂದು ಕೇಳಿದ. ಬುಜ್ಜಿ ಬೈಕಿಗೆ ಅಡ್ಡವಾಗಿ ನಿಂತಿದ್ದಾಳೆ ಅವಳನ್ನು ಕರೆದುಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದ. ಕೊನೆಗೆ ಬೈಕ್ ಮೇಲೆ ಕುಳಿತಿಕೊಳ್ಳಲು ಸಾಧ್ಯವಾಗದೆ , ಬೈಕಿನ ಜೊತೆಗೆ ಮೂರು- ನಾಲ್ಕು ಕಿಲೋಮೀಟರ್ ಗಳಷ್ಟು ದೂರದವರೆಗೆ ಓಡುತ್ತಾ ಬಂದು ಮನೆಗೆ ಸೇರಿದಳು. ಪಾಪ ಅಷ್ಟು ದೂರ ನಡೆದುದ್ದರಿಂದಲೋ ಏನೋ ಮರುದಿನ ಅವಳಿಗೆ ಕಾಲು ನೋವಿನಿಂದ ಎದ್ದು ಓಡಾಡಲು ಆಗುತ್ತಿರಲಿಲ್ಲ ಅವಳ ಕೈ ಕಾಲುಗಳು ದಪ್ಪವಾಗಿ ಚಡಪಡಿಸತೊಡಗಿದಳು. ಅವಳಿಗೆ ಎರಡು ನೋವಿನ ಮಾತ್ರೆಯನ್ನು ಹಾಲಿನಲ್ಲಿ ಕರಗಿಸಿ ಕುಡಿಸಿದೆವು. ಹೀಗೆ ಸಂಜೆಯಷ್ಟರಲ್ಲಿ ಅವಳು ಎದ್ದು ಓಡಾಡಲು ಪ್ರಾರಂಭಿಸಿದಳು ಮರುದಿನ ಅವಳು ಮತ್ತೆ ಡ್ಯೂಟಿಗೆ ಹಾಜರ್...

ಇನ್ನು ಅವಳನ್ನು ನಾವೇ ಸಾಕಲು ನಿರ್ಧರಿಸಿ, ಮುಂದೆ ಅವಳು ಮರಿ ಹಾಕದಂತೆ ಸರ್ಜರಿ ಮಾಡಿಸಲು ಪಶುವೈದ್ಯರನ್ನು ಸಂಪರ್ಕಿಸಿದೆವು. ಅವರ ನಿರ್ದೇಶನದಂತೆ ಒಂದು ವಾರದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಮನೆಗೆ ಕರೆದುಕೊಂಡು ಬಂದೆವು. ಬಳಿಕ ಒಂದು ವಾರದ ವಿಶ್ರಾಂತಿಯ ನಂತರ ಅವಳು ಮಾಮೂಲಿಯಂತೆ ಚುರುಕಾದಳು. ವಿಶೇಷವೆಂದರೆ ಒಂದೇ ವಾರದಲ್ಲಿ ಗಾಯಗಳು ವಾಸಿಯಾಗಿದ್ದರೂ ಒಂದು ತಿಂಗಳವರೆಗೆ ಮಾಮೂಲಿ ಜಾಗಕ್ಕೆ ಬಂದು ಮಲಗಿ ಔಷಧಿ ಹಚ್ಚಿಸಿಕೊಳ್ಳುತ್ತಿದ್ದಳು. ಅಂದಹಾಗೆ ಬುಜ್ಜಿ ಜೊತೆಗೆ ಒಬ್ಬ ಮಗನೂ ಇದ್ದಾನೆ.

ಸೋ.. ಈಗ ಅವಳೂ ಹ್ಯಾಪಿ ನಾವೂ ಹ್ಯಾಪಿ.

Creative Writings