
Article · September 16, 2026
ಒಣಹವೆ
ವೀಣಾ ಎಂ ಭಟ್
ಬೆಂಕಿಯಂತೆ ಸುಡುವ ಬಿಸಿಲ ಉರಿಯುವ ತಾಪ
ಒಡೆಯನ ಅಪ್ಪಣೆಯೆ ? ಯಾವ ದೇವರ ಶಾಪ
ಕಣ್ಣು ಬಿಡಲಾರದಂಥ ಬೇಗೆಯ ತಾಪವಿದು
ಮಣ್ಣ ನೀರದು ಬತ್ತಿ ಕಮರಿದ ಕಾಲವಿದು
ಎಲ್ಲಿದೆ ಮೇಘಗಳ ನೀರ ಹನಿ ಸಿಂಚನವು
ಮಳೆ ಧಾರೆ ಸುರಿವ ರಾಗ ತಾನ ಪಲ್ಲವಿಯು
ಹಸಿರನೆಲ ಬರಡಾಗಿ ಉಸಿರ ಸಂಜೀವಿನಿ ಕೊರಡು
ಬಸಿರ ಜಲನಿಧಿ ಬತ್ತಿ ಮನು ಕುಲಕೆ ತೊಡರು
ಜಗವ ಸೂತ್ರವ ಹಿಡಿದ ಕಾಣದ ಕೈಯೊಂದು
ಪೃಕೃತಿ ಸುಂದರ ತಾಣ ಹದಗೆಡಹಿದೆ ಇಂದು
ನಳನಳಿಸುವ ಪತ್ರ ಪುಷ್ಪಾಂಜಲಿಯ ಸುರಲೋಕ
ಬರಡಾಗುತಿದೆ ಇಂದು ಮಣ್ಣ ಮೇಲಿನ ನಾಕ
ಆಸೆಗಳ ಹಂಚುತಿವೆ ಮೋಡಗಳು ಬಾನಲ್ಲಿ
ಮರೀಚಿಕೆ ತೋರುತಿವೆ ರವಿಯನ್ನ ಮಾಚುತಲಿ
ಮೇಘಗಳ ವರ್ಣರಂಜಿತ ಚಿತ್ತಾರದ ವ್ಯಾಮೋಹ
ಬರೆದು ಸರಿದಿದೆ ದೂರ ಇನ್ನೆಲ್ಲಿ ಮಳೆಯ ಮೋಹ
ಬಿಸಿಲ ತಾಳದ ಜನಕೆ ಮನೆಯೊಂದು ಸೆರೆಮನೆಯು
ಕೆಂಡದಂಥ ಬಿಸಿಗೆ ಹೋಗುವ ಪರಿಯೆಂತು
ಕೂತು ಉಂಡರೆ ಕುಡಿಕೆ ಹಣ ಸಾಲುವುದುಂಟೆ
ಕಷ್ಟ ಕಾಲಕು ಬಿಡದ ಸುಡು ಬೆಂಕಿ ಮಳೆಯು
Creative Writings
