
Article · March 30, 2026
ನವ ವಸಾಹತುಶಾಹಿ !
✍️ ಆರ್. ಸಿ. ಭಟ್ ಸುಳ್ಯ (ಇಂದಿನ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ವಿದೇಶಗಳಲ್ಲಿವೆ ಅಮೆರಿಕದ 750 ಸೇನಾ ನೆಲೆಗಳು
ವಿಶ್ವದ ಮೇಲೆ ದೊಡ್ಡಣ್ಣನ 360 ಡಿಗ್ರಿ ಕಣ್ಗಾವಲು
ಮಧ್ಯಪ್ರಾಚ್ಯ ಸಂಘರ್ಷ ಅಮೆರಿಕ- ಇರಾನ್- ಇಸ್ರೇಲ್ ನಡುವೆ ಕೇಂದ್ರೀಕೃತವಾಗಿದ್ದರೂ, ಇರಾನ್ ಈ ಯುದ್ಧವನ್ನು ಇಡೀ ಗಲ್ಫ್ ರಾಷ್ಟ್ರಗಳಿಗೆ ವಿಸ್ತರಿಸಿದೆ. ಅಮೆರಿಕ ಸೇನೆಗೆ ಗಲ್ಫ್ ರಾಷ್ಟ್ರಗಳು ನೆಲೆ ಕೊಟ್ಟಿದ್ದೇ ಈ ದಾಳಿಗೆ ಕಾರಣ. ಕೇವಲ ಗಲ್ಫ್ ರಾಷ್ಟ್ರಗಳಿಗಷ್ಟೇ ಅಮೆರಿಕ ಸೇನಾ ನೆಲೆಗಳು ಸೀಮಿತವಾಗಿಲ್ಲ, ವಿಶ್ವದ 70ಕ್ಕೂ ಹೆಚ್ಚು ದೇಶಗಳಲ್ಲಿ ಸೇನಾ ನೆಲೆಗಳನ್ನು ನಿಯೋಜಿಸಿದೆ. ಅಮೆರಿಕದ ಈ ತಂತ್ರಗಾರಿಕೆಯ ಹಿಡನ್ ಅಜೆಂಡಾ ಏನು ?, ಶತ್ರು ರಾಷ್ಟ್ರಗಳಿಗೆ ಈ ನೆಲೆಗಳು ಹೇಗೆ ಅಪಾಯಕಾರಿ ?.. ಓದಿ ಇಂದಿನ ವಿಕ ಫೋಕಸ್ ನಲ್ಲಿ...
++++
ಒಂದೊಮ್ಮೆ ಬ್ರಿಟಿಷ್ ವಸಾಹತುಶಾಹಿ ಅನೇಕ ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿಟ್ಟು ವಿಶ್ವವನ್ನೇ ಆಳುವ ಕನಸು ಕಂಡಿತ್ತು. ಏಷ್ಯಾ, ಆಫ್ರಿಕಾ, ಅಮೆರಿಕಾ ಮತ್ತು ಆಸ್ಟ್ರೇಲಿಯಾ ಖಂಡಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿ, ಸ್ಥಳೀಯ ಸಂಪನ್ಮೂಲಗಳನ್ನು ನಿರ್ದಯವಾಗಿ ದೋಚಿಕೊಂಡಿತು. ತನ್ನ ಸೈನಿಕ ಬಲದ ಮೂಲಕ ಸ್ವಾಯತ್ತ ಆಡಳಿತಗಳನ್ನು ಕುಗ್ಗಿಸಿ, ಬ್ರಿಟಿಷ್ ನಿಯಮಗಳನ್ನು ಬಲವಂತವಾಗಿ ಜಾರಿಗೊಳಿಸಿತು. ಆದರೆ ಇತಿಹಾಸದ ಚಕ್ರ ತಿರುಗಿತು. ವಸಾಹತುಶಾಹಿ ವ್ಯವಸ್ಥೆ ಕುಸಿದುಬಿದ್ದು, ಒಂದರ ಹಿಂದೆ ಒಂದಾಗಿ ರಾಷ್ಟ್ರಗಳು ಸ್ವಾತಂತ್ರ್ಯ ಗಳಿಸಿದವು.
ಆದರೆ ಇಂದು ಬ್ರಿಟಿಷ್ ವಸಾಹತುಶಾಹಿ ಆಡಳಿತ ಇಲ್ಲದಿದ್ದರೂ ಅಮೆರಿಕಾ ಜಾಗತಿಕ ರಾಜಕೀಯದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಇದೇ ರೀತಿಯ ಮಾರ್ಗವನ್ನು ಅನುಸರಿಸುತ್ತಿದೆ. ಇಡೀ ವಿಶ್ವದ ವ್ಯವಹಾರ ಡಾಲರ್ ಅಡಿಯಲ್ಲೇ ನಡೆಯಬೇಕು ಎಂಬುದು ಒಂದು ವಾದವಾದರೆ, ವಿಶ್ವದ ರಾಷ್ಟ್ರಗಳು ತನ್ನ ಅಣತಿಯಂತೆ ನಡೆದುಕೊಳ್ಳಬೇಕು ಎಂಬ ಅಧಿಕಾರಲಾಲಸೆ ಅಮೆರಿಕದ್ದು.
ಇದಕ್ಕೆ ಬಹುಮುಖ್ಯವಾಗಿ ಸೇನಾ ಬಲ ಅಗತ್ಯ ಇರುವುದರಿಂದ ಅನೇಕ ದೇಶಗಳಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸುವ ಮೂಲಕ ವಿಶ್ವಕ್ಕೇ ಹದ್ದಿನ ಕಣ್ಗಾವಲು ಇಟ್ಟಿದೆ. ಒಂದು ರೀತಿಯಲ್ಲಿ `ಲಿಟ್ಲ್ ಅಮೆರಿಕ' ಹೆಸರಿನಲ್ಲಿ ಆಧುನಿಕ ರೂಪದ ವಸಾಹತುಶಾಹಿಯ ಕಾಲೊನಿಗಳನ್ನೇ ಸ್ಥಾಪಿಸಿವೆ. ಜಾಗತಿಕ ಭದ್ರತೆ ಮತ್ತು ಮೈತ್ರಿ ರಾಷ್ಟ್ರಗಳ ರಕ್ಷಣೆ ನೆಪದಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸಲಾಗಿದೆ ಎಂದು ಅಮೆರಿಕ ಹೇಳುತ್ತಿದ್ದರೂ, ಯುದ್ಧದ ವೇಳೆ ಶತ್ರುರಾಷ್ಟ್ರಗಳನ್ನು ಗುರಿಯಾಗಿಸಲೇ ಈ ನೆಲೆಗಳನ್ನು ಸ್ಥಾಪಿಸಿರುವುದು ವಾಸ್ತವ.
70 ದೇಶಗಳಲ್ಲಿದೆ 750ಕ್ಕೂ ಅಧಿಕ ಸೇನಾ ನೆಲೆಗಳು !
ಅಮೆರಿಕ ವಿದೇಶಗಳಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸುವ ಕನಸು ಕಂಡಿದ್ದು ಇಂದು ನೆನ್ನೆಯಲ್ಲ. 1898ರಲ್ಲೇ ಅಮೆರಿಕ ಕ್ಯೂಬಾದಲ್ಲಿ ಸೇನಾ ನೆಲೆ ಸ್ಥಾಪಿಸುವ ಮೂಲಕ ವಿದೇಶದಲ್ಲಿ ತನ್ನ ಮೊಟ್ಟ ಮೊದಲ ನೆಲೆಯನ್ನು ಸ್ಥಾಪಿಸಿತು. ಅಂದು ಸ್ಪೈನ್ ವಸಾಹತಿನಲ್ಲಿದ್ದ ಕ್ಯೂಬಾ ಸ್ವತಂತ್ರ ದೇಶಕ್ಕಾಗಿ ಹೋರಾಡುತ್ತಿದ್ದ ಸಂದರ್ಭ ಮಿಲಿಟರಿ ನೆರವು ನೀಡಿದ ಅಮೆರಿಕ ಸ್ಪೈನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿತು. ಯುದ್ಧದಲ್ಲಿ ಸ್ಪೈನ್ ಸೋತು ಕ್ಯೂಬಾ ಸ್ವತಂತ್ರ ದೇಶವಾಯಿತು. ಈ ವೇಳೆ ಅಮೆರಿಕ ಅಲ್ಲಿ ತನ್ನ ಮೊದಲ ಸೇನಾ ನೆಲೆ ಸ್ಥಾಪಿಸಿತ್ತು.
ಆ ಬಳಿಕ ಹಂತ ಹಂತವಾಗಿ ಅಮೆರಿಕ ತನ್ನ ಸೇನಾ ನೆಲೆಗಳನ್ನು ಒಂದೊಂದೇ ದೇಶಗಳಿಗೆ ವಿಸ್ತರಿಸಿತು. ಪ್ರಸ್ತುತ ಬರೋಬ್ಬರಿ 70 ದೇಶಗಳಲ್ಲಿ 750ಕ್ಕೂ ಅಧಿಕ ಸೇನಾ ನೆಲೆಗಳನ್ನು ಸ್ಥಾಪಿಸಿದೆ. ವಿಶ್ವದ ಬಲಾಢ್ಯ ದೇಶಗಳಾದ ಜರ್ಮನಿ, ಜಪಾನ್, ಫ್ರಾನ್ಸ್, ದಕ್ಷಿಣ ಕೊರಿಯಾ, ಇಂಗ್ಲೆಂಡ್, ಕುವೈಟ್, ಬಹರೈನ್, ಇಟಲಿ, ಟರ್ಕಿ ಮುಂತಾದ ದೇಶಗಳಲ್ಲಿ ಅಮೆರಿಕಾ ದೊಡ್ಡ ಮಟ್ಟಿನ ಸೇನಾ ನೆಲೆಗಳನ್ನು ಹೊಂದಿದ್ದು, ಸುಮಾರು 2 ಲಕ್ಷ ಮಂದಿ ಸೈನಿಕರು ವಿದೇಶಿ ಕ್ಯಾಂಪ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಪಾನ್‍ನಲ್ಲಿ ಅತಿ ಹೆಚ್ಚು ಸೇನಾ ನೆಲೆ
1945ರ ಎರಡನೇ ಮಾಹಾಯುದ್ಧದ ಸಂದರ್ಭ ಜಪಾನ್‍ನ ಹಿರೋಶಿಮ ಮತ್ತು ನಾಗಸಾಕಿ ಎಂಬ ಎರಡು ಬೃಹತ್ ನಗರಗಳನ್ನು ಅಣುಬಾಂಬ್ ಹಾಕಿ ಸರ್ವನಾಶ ಮಾಡಿದ ಅಮೆರಿಕ ಬಳಿಕ ಜಪಾನ್ ದೇಶದ ಮರು ನಿರ್ಮಾಣದ ಹೆಸರಿನಲ್ಲಿ ಅಲ್ಲಿ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಿತು. ಸದ್ಯ ಜಪಾನ್‍ನಲ್ಲಿ ಅತಿ ಹೆಚ್ಚು ಅಂದರೆ 120ಕ್ಕೂ ಅಧಿಕ ಸೇನಾ ನೆಲೆಗಳಿದ್ದು, 60 ಸಾವಿರಕ್ಕೂ ಅಧಿಕ ಸೈನಿಕರು ಆಶ್ರಯ ಪಡೆದಿದ್ದಾರೆ. ಆರ್ಥಿಕ ಸಹಾಯದ ಕಾರಣಕ್ಕಾಗಿ ಜಪಾನ್ ದೇಶವು ಅಮೆರಿಕದ ಸೇನಾ ನೆಲೆಗಳಿಗೆ ತನ್ನ ದೇಶದಲ್ಲಿ ಆಶ್ರಯ ಕೊಟ್ಟಿದ್ದರೂ, ಚೀನಾ ದೇಶದ ಸಾರ್ವಭೌಮತ್ವವನ್ನು ನಿಯಂತ್ರಿಸುವ ಸಲುವಾಗಿಯೇ ಈ ನೆಲೆಗಳನ್ನು ಬಳಸಲಾಗುತ್ತಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ಭಾರತವೇಕೆ ಆಶ್ರಯ ಕೊಟ್ಟಿಲ್ಲ ?
ಭಾರತದಲ್ಲಿ ಯಾವುದೇ ಹೊರ ದೇಶಗಳಿಗೆ ಸೇನಾ ನೆಲೆ ಸ್ಥಾಪನೆಗೆ ಅವಕಾಶ ಇಲ್ಲ. ಭಾರತ ಅಲಿಪ್ತ ನೀತಿಯನ್ನು ಅನುಸರಿಸುತ್ತಿದ್ದು, ತನ್ನದೇ ಆದ ವಿದೇಶಾಂಗ ನೀತಿಯನ್ನು ಹೊಂದಿದೆ. ಅಲ್ಲದೆ ಕೆಲವು ದೇಶಗಳ ಜತೆಯಲ್ಲಿ ಸೇನಾ ಸಹಕಾರ ಒಪ್ಪಂದಗಳು ಮಾತ್ರ ಇದ್ದು, ಸೇನಾ ನೆಲೆ ಸ್ಥಾಪನೆಗೆ ಅವಕಾಶ ಇಲ್ಲ.
ಸೇನಾ ನೆಲೆ ಸ್ಥಾಪನೆಯಿಂದ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ. ಅಲ್ಲದೆ ಕೆಲವು ಒಪ್ಪಂದಗಳಿಗೆ ಒಳಪಡಬೇಕಾಗುತ್ತದೆ. ಒಂದಷ್ಟು ಭೂ ಭಾಗಗಳನ್ನು ಸಂಬಂಧಪಟ್ಟ ದೇಶಕ್ಕೆ ನೀಡಬೇಕಾಗುತ್ತದೆ. ಈ ವೇಳೆ ಆ ಭೂ ಪ್ರದೇಶದ ಮೇಲೆ ಹಿಡಿತವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಕಾರಣದಿಂದ ಭಾರತ ನೆಹರೂ ಕಾಲದಿಂದ ಮೋದಿ ಕಾಲದ ವರೆಗೂ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದೆ.
ಅಮೆರಿಕ ಸೇನಾ ನೆಲೆಯನ್ನೇ ಹೊರ ಹಾಕಿದ ಪಾಕ್, ಅಫ್ಗನ್ !
2001ರಲ್ಲಿ ತಾಲಿಬಾನ್ ಬೆಂಬಲಿತ ಆಲ್ ಖೈದಾ ಉಗ್ರ ಸಂಘಟನೆ ಅಮೆರಿಕದ World trade ಸೆಂಟರ್ ಮೇಲೆ ದಾಳಿ ನಡೆಸಿದ ಸಂದರ್ಭ ಅಫಘಾನಿಸ್ತಾನದ ವಿರುದ್ಧದ ಕಾರ್ಯಾಚರಣೆಗೆ ಪಾಕಿಸ್ತಾನವು ಅಮೆರಿಕಕ್ಕೆ ಸೇನಾ ನೆಲೆಗೆ ಜಾಗ ಒದಗಿಸಿಕೊಟ್ಟಿತ್ತು. ಅಂದು ಅಮೆರಿಕ ಬೇಡಿಕೆಗೆ ಆರಂಭದಲ್ಲಿ ಪಾಕಿಸ್ತಾನ ಒಪ್ಪದಿದ್ದರೂ ಆರ್ಥಿಕ ದಿಗ್ಭಂಧನ ಹಾಗೂ ಸೇನಾ ನೆರವು ಕಡಿತದ ಬೆದರಿಕೆ ಮಣಿದ ಪಾಕಿಸ್ತಾನ ಅನಿವಾರ್ಯವಾಗಿ ಒಪ್ಪಿಗೆ ಸೂಚಿಸಿತ್ತು.
ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಕಿತ್ತೊಗೆದ ಬಳಿಕವೂ ಅಮೆರಿಕದ ಸೇನಾ ನೆಲೆ ಪಾಕಿಸ್ತಾನದಲ್ಲೇ ಬೀಡು ಬಿಟ್ಟಿತು. ಪಾಕಿಸ್ತಾನವೂ ಯಾವುದೇ ತಕರಾರು ಮಾಡದೆ ಸಹಕಾರ ನೀಡಿತು. ಆದರೆ 2011ರಲ್ಲಿ ಮೇ ತಿಂಗಳಲ್ಲಿ World trade ಸೆಂಟರ್ ದಾಳಿಯ ರೂವಾರಿ ಒಸಮಾ ಬಿನ್ ಲಾಡೆನ್‍ನನ್ನು ಅಮೆರಿಕ ಸೇನೆಯು ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿತು. ಈ ಕಾರ್ಯಾಚರಣೆ ತನ್ನ ನೆಲದಿಂದಲೇ ನಡೆದಿತ್ತು ಎಂದು ಪಾಕ್ ಅಮೆರಿಕ ವಿರುದ್ಧ ಮುನಿಸಿಕೊಂಡಿತ್ತು.
ಇದಾದ ಬಳಿಕ 2011ರ ನವೆಂಬರ್‍ನಲ್ಲಿ ಪಾಕ್- ಅಫ್ಗನ್ ಗಡಿ ಪ್ರದೇಶದಲ್ಲಿ ನ್ಯಾಟೋ ಪಡೆಗಳು ದಾಳಿ ನಡೆಸಿತ್ತು. ತಾಲಿಬಾನ್ ಪಡೆಗಳು ಎಂದು ತಪ್ಪಾಗಿ ಭಾಗವಹಿಸಿ ನಡೆಸಿದ ಈ ದಾಳಿಯಲ್ಲಿ 24 ಮಂದಿ ಪಾಕಿಸ್ತಾನಿ ಸೈನಿಕರು ಹತರಾಗಿದ್ದರು. ಇದರಿಂದ ಕುಪಿತವಾದ ಪಾಕ್ ಸರಕಾರ ತಕ್ಷಣದಿಂದಲೇ ಅಮೆರಿಕ ಸೇನಾ ನೆಲೆಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿತು.
ಇದೇ ರೀತಿ ಅಫಘಾನಿಸ್ತಾನದಲ್ಲೂ ತಾಲಿಬಾನ್ ಆಡಳಿತವನ್ನು ಕಿತ್ತೊಗೆದ ಬಳಿಕ ಅಮೆರಿಕ ಸೇನಾ ನೆಲೆಗಳು ಅಲ್ಲಲ್ಲಿ ಕಾರ್ಯಾಚರಿಸುತ್ತಿತ್ತು. ಆದರೆ ಕ್ರಮೇಣ ತಾಲಿಬಾನ್ ಪ್ರಭಲವಾಗಿ ಅಮೆರಿಕ ಸೇನೆಯ ವಿರುದ್ಧ ಹೋರಾಟಕ್ಕೆ ಇಳಿದ ಬಳಿಕ ಅಮೆರಿಕ 2021ರಲ್ಲಿ ಅಫಘಾನಿಸ್ತಾನದಿಂದ ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ವಾಪಸ್ ಕರೆಸಿಕೊಂಡಿತು.
ಶತ್ರು ರಾಷ್ಟ್ರಗಳ ಸುತ್ತವೇ ಚಕ್ರವ್ಯೂಹ
ಶತ್ರು ರಾಷ್ಟ್ರ ಎಂದು ಗುರುತಿಸಿಕೊಂಡ ಕೆಲವು ರಾಷ್ಟ್ರಗಳ ಸುತ್ತವೇ ಹೆಚ್ಚಾಗಿ ಅಮೆರಿಕ ತನ್ನ ಸೇನಾ ನೆಲೆಗಳ ಚಕ್ರವ್ಯೂಹವನ್ನು ಸ್ಥಾಪಿಸಿದೆ. ಇದರಿಂದ ಅಮೆರಿಕದ ಆಶಯ ಮೈತ್ರಿ ರಾಷ್ಟ್ರಗಳ ರಕ್ಷಣೆಗಿಂತಲೂ ಭವಿಷ್ಯದ ಯುದ್ಧಕ್ಕಾಗಿಯೇ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಇದೀಗ ಯುದ್ಧ ನಡೆಯುತ್ತಿರುವ ಇರಾನ್ ಪಕ್ಕದ ರಾಷ್ಟ್ರಗಳಾದ ಕುವೈಟ್, ಬಹರೈನ್, ಕತಾರ್, ಯುಎಇ, ಒಮನ್, ಸೌದಿ ಅರೆಬಿಯಾ ದೇಶಗಳಲ್ಲಿ ಸೇನಾ ನೆಲೆಗಳಿವೆ. ಕೆಲವು ದಶಕಗಳಿಂದಲೂ ಇರಾನ್ ಹಾಗೂ ಇರಾಕ್ ದೇಶದ ವಿರುದ್ಧ ಹೋರಾಟಕ್ಕೆ ಅಮೆರಿಕ ಇಲ್ಲೆಲ್ಲ ನೆಲೆಗಳನ್ನು ಸ್ಥಾಪಿಸಿವೆ.
ಇನ್ನು ಉತ್ತರ ಕೊರಿಯ ದಶಕಗಳಿಂದ ವಿನಾಶಕಾರಿ ಬಾಂಬ್‍ಗಳ ತಯಾರಿಕೆಯಲ್ಲಿ ತೊಡಗಿದ್ದು, ವಿಶ್ವಕ್ಕೆ ದೊಡ್ಡ ಮಾರಕ ಎನಿಸಲಿದೆ. ಈ ಕಾರಣದಿಂದ ಹಲವು ವರ್ಷಗಳಿಂದ ಅಮೆರಿಕ ಈ ದೇಶದ ವಿರುದ್ಧ ದಾಳಿಗೆ ಹೊಂಚು ಹಾಕುತ್ತಲೇ ಇದೆ. ಇದಕ್ಕಾಗಿ ಪಕ್ಕದ ದಕ್ಷಿಣ ಕೊರಿಯಾದಲ್ಲಿ ಅಮೆರಿಕ ವಿಶ್ವದ ಅತಿ ದೊಡ್ಡ ಸೇನಾ ನೆಲೆ ಸ್ಥಾಪಿಸಿದೆ.
ರಷ್ಯಾದ ಗಡಿಯಲ್ಲಿ ಜರ್ಮನಿ, ಪೋಲೆಂಡ್ ಮತ್ತು ಇತ್ತೀಚೆಗೆ ಫಿನ್‍ಲ್ಯಾಂಡ್‍ನಲ್ಲಿ ಅಮೆರಿಕದ ಸೇನಾನೆಲೆಗಳಿವೆ. ಉಕ್ರೇನ್ ಯುದ್ಧಕ್ಕೆ ಅಮೆರಿಕ ಇಲ್ಲಿಂದಲೇ ಶಸ್ತ್ರಾಸ್ತ್ರಗಳನ್ನು ಗುಪ್ತವಾಗಿ ಪೂರೈಕೆ ಮಾಡುತ್ತಿದೆ ಎಂಬುದು ರಷ್ಯಾದ ವಾದ.
ಚೀನಾದ ಸುತ್ತಲೂ ಜಪಾನ್, ದಕ್ಷಿಣ ಕೊರಿಯಾ, ಫಿಲಿಪೈನ್ಸ್ ಮತ್ತು ಆಸ್ಟ್ರೇಲಿಯಾದಲ್ಲಿ ಅಮೆರಿಕದ ಸೇನಾ ನೆಲೆಗಳಿವೆ. ಇದನ್ನು ಚೀನಾ ತನ್ನನ್ನು `ಬಂಧಿಸುವ ಸಂಚು' ಎಂದು ಹೇಳುತ್ತಿದೆ. ಇನ್ನು ಬಾಂಗ್ಲಾದೇಶದ `ಸೇಂಟ್ ಮಾರ್ಟಿನ್' ದ್ವೀಪದ ಮೇಲೂ ಅಮೆರಿಕ ಕಣ್ಣಿಟ್ಟಿದೆ. ಈ ದ್ವೀಪದಲ್ಲಿ ಹಕ್ಕು ಸ್ಥಾಪಿಸಿದರೆ ಸುಲಭದಲ್ಲಿ ಚೀನಾ ಸುತ್ತ ಕೋಟೆ ಕಟ್ಟಬಹುದೆಂಬ ಲೆಕ್ಕಾಚಾರ ಅಮೆರಿಕದ್ದು. ಈ ನಡೆಯನ್ನು ವಿರೋಧಿಸಿದ ಕಾರಣಕ್ಕೆ ನನ್ನ ಪದತ್ಯಾಗ ಆಯಿತು ಎಂದು ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೇಳಿಕೆಯೂ ಇದಕ್ಕೆ ಪುಷ್ಠಿ ನೀಡುತ್ತದೆ.
ವಿದೇಶದಲ್ಲಿರುವ ಅಮೆರಿಕದ ಬಹುದೊಡ್ಡ ಸೇನಾ ನೆಲೆಗಳು
ಕ್ಯಾಂಪ್ ಹಂಫ್ರೀಸ್ (ದಕ್ಷಿಣ ಕೊರಿಯಾ): ಇದು ಅಮೆರಿಕದ ವಿದೇಶದಲ್ಲಿರುವ ಅತಿದೊಡ್ಡ ಸೇನಾ ನೆಲೆಯಾಗಿದೆ. ಸುಮಾರು 3,500 ಎಕರೆ ಪ್ರದೇಶದಲ್ಲಿ ಹರಡಿರುವ ಈ ನೆಲೆಯಲ್ಲಿ 30,000ಕ್ಕೂ ಹೆಚ್ಚು ಸೈನಿಕರು ಮತ್ತು ಅವರ ಕುಟುಂಬದವರು ವಾಸಿಸುತ್ತಾರೆ. ಇದು ಒಂದು ಸ್ವತಂತ್ರ ನಗರದಂತೆಯೇ ಇದೆ.
ರಾಮ್‍ಸ್ಟೈನ್ ಏರ್ ಬೇಸ್ (ಜರ್ಮನಿ): ಯುರೋಪ್‍ನಲ್ಲಿರುವ ಅಮೆರಿಕದ ಅತ್ಯಂತ ಪ್ರಮುಖ ವಾಯುನೆಲೆ ಇದಾಗಿದೆ. ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುವ ಎಲ್ಲ ಡ್ರೋನ್ ದಾಳಿಗಳು ಮತ್ತು ಕಾರ್ಯಾಚರಣೆಗಳ ಮೇಲೆ ಇಲ್ಲಿಂದಲೇ ನಿಗಾ ಇಡಲಾಗುತ್ತದೆ.
ಅಲ್ ಉದೈದ್ ಏರ್ ಬೇಸ್ (ಕತಾರ್): ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಅತಿದೊಡ್ಡ ಸೇನಾ ನೆಲೆ ಇದು. ಇಲ್ಲಿಂದ ಇಡೀ ಗಲ್ಫ್ ರಾಷ್ಟ್ರಗಳ ಮೇಲೆ ಅಮೆರಿಕ ಹದ್ದಿನ ಕಣ್ಣು ಇಟ್ಟಿದೆ. ಸದ್ಯ ಇರಾನ್ ಇದೇ ಏರ್ ಬೇಸ್ ಗುರಿಯಾಗಿಸಿ ದಾಳಿ ನಡೆಸುತ್ತಿದೆ.
ಯೊಕೋಟಾ ಏರ್ ಬೇಸ್ (ಜಪಾನ್): ಪೆಸಿಫಿಕ್ ವಲಯದ ಪ್ರಮುಖ ಕೇಂದ್ರ. ಚೀನಾದ ಮೇಲೆ ನಿಗಾ ಇಡಲು ಇದು ಅತ್ಯಂತ ಆಯಕಟ್ಟಿನ ಜಾಗದಲ್ಲಿದೆ.
Published
