Karada Vishwa

Article · August 13, 2026

ಲೈಫಲ್ಲಿ ಸ್ವಲ್ಪ "ಅಡ್ಜಸ್ಟ್ಮೆಂಟ್" ಬೇಕ್ರಿ

By ದಿವ್ಯಾ ಶಿರಂತಡ್ಕ

_ದಿವ್ಯಾ ಬಿ ಶಿರಂತಡ್ಕ

(ಲಘು ಧಾಟಿಯ ಬರಹ)

ಅಂದು ಕೆಸರುಗದ್ದೆ ಆಟೋಟದ ಸಂಭ್ರಮ. ಹತ್ತು ಹಲವಾರು ಸ್ಪರ್ಧೆಗಳು. ನಾನು ಮೊದಲ ಬಾರಿಗೆ ಕೆಸರು ತುಂಬಿದ ಗದ್ದೆಗೆ ಇಳಿದಿದ್ದೆ. ಒಂದೊಂದು ಹೆಜ್ಜೆ ಇಡಲೂ ಕಷ್ಟ ಪಡುತ್ತಿದ್ದೆ. 'ಮುಳುಗಿದವನಿಗೆ ಚಳಿ ಎಂತ' ಎನ್ನುವ ಗಾದೆಯಂತೆ ಅನಂತರ ಅಲ್ಲಿ ಆಯೋಜಿಸಿದ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸೋಣ ಎಂದು ನಿರ್ಧರಿಸಿದೆ. ಅದರಲ್ಲಿ ಮೋಜು ಎನಿಸಿದ್ದು ಒಂಟಿ ಕಾಲಿನ ಓಟ. ಆ ಆಟದ ಕಲ್ಪನೆಯೇ ನನಗಿರಲಿಲ್ಲ. ನಾನು ಮತ್ತು ನನ್ನ ಸಂಬಂಧಿಕರೊಬ್ಬರು ಆ ಆಟಕ್ಕೆ ಜೋಡೆತ್ತಿನಂತೆ ಜೋಡಿಯಾದೆವು. ನಮ್ಮಿಬ್ಬರ ಒಂದೊಂದು ಕಾಲನ್ನು ಜೊತೆಯಾಗಿ ಸೇರಿಸಿ ಗೋಣಿ ಕಟ್ಟಿದರು. ಆ ಪರಿಸ್ಥಿತಿಯಲ್ಲಿ ಓಡಿ ನಾವು ಗುರಿ ತಲುಪಬೇಕಿತ್ತು. ಆಗ ನನಗೆ ಮೊದಲ ಬಾರಿಗೆ ಅಡ್ಜಸ್ಟ್ಮೆಂಟ್ ಎಂದರೇನು ಎಂದು ತೀವ್ರವಾಗಿ ಅರಿವಾಯಿತು. ನಮ್ಮಿಬ್ಬರಲ್ಲಿ ಸರಿಯಾದ ಸಹಕಾರ ಇದ್ದಾಗ ಮಾತ್ರ ಮುಂದೆ ಹೋದೇವು. ಅದಿಲ್ಲದಿರೆ ಎಡವಿ ಬೀಳುವುದೊಂದೇ ನಮ್ಮ ಮುಂದಿದ್ದ ಆಯ್ಕೆ! ಪ್ರಥಮ ಪ್ರಯತ್ನವಾದ್ದರಿಂದ ಎರಡನೇ ಆಯ್ಕೆಯೇ ನಮಗೆ ಅನಿವಾರ್ಯವಾಯ್ತು ಅನ್ನಿ.

ಕಾಸರಗೋಡಿನ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಒಂದು ಅನುಭವ ನನಗೆ ರೋಚಕವಾಗಿ ಕಂಡಿತು. ಅವರು ಹುಡುಗಿ ನೋಡಲು ಹೋದಾಗ ಹುಡುಗಿಯ ಮನೆಯವರಿಗೆ ಅವರು ಬರುವ ಮಾಹಿತಿ ಇರಲಿಲ್ಲವಂತೆ.‌ ಇವರು ಹೋದಾಗ ಇವರನ್ನು ಸ್ವಾಗತಿಸಲು ಯಾರೂ ಸಜ್ಜಾಗಿರಲಿಲ್ಲ. ಹುಡುಗಿ ತನ್ನ ಪಾಡಿಗೆ ಹೊರಗೆ ಬಟ್ಟೆ ಒಗೆಯುವುದರಲ್ಲಿ ತಲ್ಲೀನಳಾಗಿದ್ದಳು. ಒಂದು ಕ್ಷಣ ಆಕೆಯನ್ನು ಕಂಡವರು ಆಕೆಯ ಮುಖವನ್ನೂ ನೋಡದೆ 'ಈ ಹುಡುಗಿ ತನಗೆ ತಕ್ಕವಳು' ಎಂದು ತೀರ್ಮಾನಿಸಿ ಬಿಟ್ಟರಂತೆ; ಅದೂ ಆಕೆ ಧರಿಸಿದ್ದ ಹವಾಯಿ ಚಪ್ಪಲ್ ನೋಡಿ! ಅವಳು ಧರಿಸಿದ್ದ ಚಪ್ಪಲಿ ಆಕೆ ಕಾಲಿನ ಅಳತೆಗಿಂತ ಬಹು ದೊಡ್ಡದಾಗಿತ್ತಂತೆ. ಈಕೆಯನ್ನು ವಿವಾಹವಾದರೆ ಖಂಡಿತ ಇವಳು ಎಲ್ಲಾ ಪರಿಸ್ಥಿತಿಗೂ ಅಡ್ಜಸ್ಟ್ ಆದಾಳು ಎಂದು ಮನದಲ್ಲೇ ಅಂದುಕೊಂಡರಂತೆ. ಮುಂದೆ ಆಕೆಯನ್ನೇ ವಿವಾಹವಾಗಿ ಇಂದಿಗೂ ಸಂತೃಪ್ತ ಜೀವನವನ್ನು ನಡೆಸುತ್ತಿದ್ದೇನೆ ಎಂದು ಅವರು ತಮ್ಮ ಬದುಕಿನ ಕಥೆಯನ್ನು ಬಿಚ್ಚಿಟ್ಟಿದ್ದು ಕಂಡಾಗ ನನಗೆ ನಿಜಕ್ಕೂ ಅವರ ಆ ಸೂಕ್ಷ್ಮಮತಿ ಬಹಳ ಅಚ್ಚರಿ ಮೂಡಿಸಿತು.

ಎಷ್ಟೋ ಸಲ ಬಸ್ಸಿನಲ್ಲಿ ಪ್ರಯಾಣಿಸುವಾಗ ಹಲವಾರು ಅನುಭಗಳಾಗುವುದಿದೆ. ಸೀಟು ಸಿಕ್ಕಿತು ಎಂದು ಖುಷಿಗೊಂಡು ಹೊರಗೆ ಪ್ರಕೃತಿ ಸೌಂದರ್ಯ ಸವಿಯೋಣ ಎಂದುಕೊಂಡರೆ ಆಗಲೇ ಕಂಡಕ್ಟರ್ ಅಶಕ್ತರಾದ ಯಾರೋ ಒಬ್ಬರನ್ನು ತೋರಿಸಿ 'ಸ್ವಲ್ಪ ಅಡ್ಜಸ್ಟ್ ಮಾಡ್ರಿ' ಎನ್ನುತ್ತಾ ಇಬ್ಬರು ಕುಳಿತುಕೊಳ್ಳುವ ಸೀಟಿನಲ್ಲಿ ಮೂರನೆಯವರನ್ನು ಕೂರಿಸಲು ಯತ್ನಿಸುತ್ತಾನೆ. ಕೆಲವರು ಜಪ್ಪಯ್ಯ ಎಂದರೂ ಇದಕ್ಕೆ ಒಪ್ಪದೆ ವಾದ ಮಾಡಿ ನಿರಾಕರಿಸುತ್ತಾರೆ. ಆದರೆ 'ಚಲ್ತಾ ಹೇ' ಧೋರಣೆಯ ಕೆಲವರು ಅಡ್ಜಸ್ಟ್ ಮಾಡುವ ಮನಸ್ಸು ಮಾಡುತ್ತಾರೆ. ತಮಗೆ ಕೊಂಚ ಅನಾನುಕೂಲವಾದರೂ ಯಾರಿಗೋ ಒಂದಷ್ಟು ಹಿತಾನುಭವ ನೀಡುತ್ತಾರೆ.

ಕೆಲವರಿಗೆ ಜೀವನದಲ್ಲಿ ಎಲ್ಲವೂ ಇರುತ್ತದೆ ಹೊಂದಾಣಿಕೆ ಕೊರತೆಯನ್ನೊಂದು ಬಿಟ್ಟರೆ. ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕು, ನಾನು ಹೇಳಿದ್ದೇ ಅಂತಿಮ ನಿರ್ಧಾರವಾಗಬೇಕು ಎನ್ನುವ ಹಠವಿರುತ್ತದೆ. ಅಂತಹವರು ಆದೇಶ ಕೊಡುತ್ತಾ ಇರುತ್ತಾರೆಯೇ ವಿನಹ ಇನ್ನೊಬ್ಬರ ದನಿಗೆ ಕಿವಿಯಾಗುವುದೇ ಇಲ್ಲ.
ಹಿಂದೆಲ್ಲಾ ಪುರುಷ ಪ್ರಧಾನ ವ್ಯವಸ್ಥೆ ಜಾರಿಯಲ್ಲಿ ಇದ್ದ ದಿನಗಳು. ಆಗ ಹೆಣ್ಣಿಗೆ ಸ್ವಂತ ಅಭಿಪ್ರಾಯವಾಗಲಿ, ಆಸೆಯಾಗಲಿ ಪ್ರಕಟಪಡಿಸುವಂತೆಯೇ ಇರಲಿಲ್ಲ. ಆಗ ಆಕೆ ತನ್ನ ಇಡೀ ಜೀವಿತಾವಧಿಯನ್ನು 'ಹೊಂದಾಣಿಕೆ'ಯಲ್ಲೇ ಬದುಕಬೇಕಿತ್ತು. ಇದು ಎಷ್ಟರ ಮಟ್ಟಿಗೆ ಎಂದರೆ ಆಕೆ ತನ್ನ ಇರುವಿಕೆಯನ್ನೇ ತಾನು ಮರೆಯುವಷ್ಟು. ಹಾಗಿದ್ದೂ ಆಕೆ ನಾನು ಎಲ್ಲಾ ಕಡೆ ಅಡ್ಜಸ್ಟ್ಮೆಂಟ್ ಮಾಡುತ್ತಿದ್ದೇನೆ ಎಂಬ ಭಾವನೆಯೂ ಬಾರದೆ ಅತ್ಯಂತ ಸಹಜ ಎಂಬಂತೆ ಬದುಕುತ್ತಿದ್ದಳು.

ಜೀವನದಲ್ಲಿ ಅತಿಯಾಗಿ ಅಡ್ಜಸ್ಟ್ಮೆಂಟ್ ಬೇಕಾಗುವುದು ಮದುವೆಯಾದ ಮೇಲೆ ಸಂಗಾತಿಯ ಜೊತೆ ಎಂದರೆ ಅತಿಶಯೋಕ್ತಿಯಲ್ಲ. ಪೂರ್ವ ಪಶ್ಚಿಮದಂತೆ, ಹಗಲು -ಇರುಳಿನಂತೆ ಒಂದಕ್ಕೆ ಒಂದು ತದ್ವಿರುದ್ಧ ಸ್ವಭಾವದವರು ಸಿಕ್ಕಿದರಂತೂ ಜೀವನಪೂರ್ತಿ ಹೊಂದಾಣಿಕೆಯಲ್ಲೇ ಕಳೆಯಬೇಕಾಗುತ್ತದೆ. ಇಲ್ಲಿ ವಾಚಾಳಿ ಪತ್ನಿಯ ಮಾತುಗಳನ್ನು ಇಷ್ಟವಿಲ್ಲದಿದ್ದರೂ ಪತಿ ಕೇಳಬೇಕಾಗುತ್ತದೆ, ಕರ್ಣ ಕಠೋರ ಗಂಡನ ಗೊರಕೆ ಸದ್ದನ್ನು ಕಿವಿ ಮುಚ್ಚಿಯಾದರೂ ಹೆಂಡತಿ ಸಹಿಸಿಕೊಳ್ಳಬೇಕಾಗುತ್ತದೆ, ಒಬ್ಬರಿಗೆ ಫ್ಯಾನ್/ ಎಸಿ ಬೇಕೆನಿಸಿದರೆ ಇನ್ನೊಬ್ಬರಿಗೆ ಅದು ಆಗಿಯೇ ಬರದು... ಅಂತಹ ಸಂದರ್ಭದಲ್ಲಿ ಅದನ್ನು ಮೀಡಿಯಂ ಹದಕ್ಕೆ ಸರಿ ಹೊಂದಿಸಿ ಕದನ ವಿರಾಮ ಮಾಡಬೇಕಾಗುತ್ತದೆ... ಹೀಗೆ ಹೆಜ್ಜೆ ಹೆಜ್ಜೆಗೂ ಅಲ್ಲಿ ಹೊಂದಾಣಿಕೆ ಪ್ರಶ್ನೆ ಏಳುತ್ತದೆ. ಜಾಣರು ಅದು ಹೇಗೋ ಅಡ್ಜಸ್ಟ್ಮೆಂಟ್ ಪಾಲಿಸಿಗೆ ತಲೆಬಾಗುತ್ತಾರೆ ಎಂದು ಬೇರೆ ಹೇಳಬೇಕಾಗಿಲ್ಲ ತಾನೆ!



Creative Writings