
Article · April 27, 2026
ಸ್ವಗತ: ಲೀಲಕ್ಕನಿಂದ ಮಾಲುಕ್ಕನವರೆಗೆ...!
- ರವೀ ಸಜಂಗದ್ದೆ
ಮನೆಯ ಅಂಗಳದಲ್ಲಿ ಒಣಗಲು ಹಾಕಿದ, ಮಾಳಿಗೆಯ ಕೊನೆಯ ಕಟ್ಟಿಗೆ ಒಲೆಯ ಕೋಣೆಯ ಮೇಲಿರುವ ಸ್ಟಾಕ್ ರೂಮಿನಲ್ಲಿ ಭದ್ರವಾಗಿ ಶೇಖರಿಸಿಟ್ಟ ಒಣಗಿದ ಅಡಿಕೆ ಮತ್ತು ಕರಿಮೆಣಸು ಚೀಲಗಳು ಹೊರಸೂಸುವ ಪರಿಮಳಯುಕ್ತ ಘಮಕ್ಕೆ ಕೇವಲ ಮಣ್ಣಿನ ಸೊಗಡು-ಸೊಬಗು ಮಾತ್ರ ಇರುವುದಲ್ಲ; ಅದಕ್ಕೆ ಮನೆಯವರ ಬೆವರ ಹನಿಗಳ, ಪರಿಶ್ರಮದ, ಆಸೆ ಆಕಾಂಕ್ಷೆಗಳ ತ್ಯಾಗದ, ಸಂಕಷ್ಟದ ದಿನಗಳನ್ನು ಮೀರಿ ನಿಂತ ಐವತ್ತು ವರ್ಷಗಳ ಸುದೀರ್ಘವಾದ, ಇಡೀ ಕೂಡು ಕುಟುಂಬ ಒಗ್ಗಟ್ಟಾಗಿ ನಿಂತು-ಹೋರಾಡಿ, ಬಂದ ಅಡೆತಡೆಗಳನ್ನು ನಿವಾರಿಸಿ-ನಿವಾಳಿಸಿ, ಬದುಕನ್ನು ಸಮರ್ಥವಾಗಿ ಎದುರಿಸಿದ ಘಮಲಿದೆ, ಸುವಾಸನೆ ಇದೆ!
ಸುಮಾರು ಐವತ್ತು ವರ್ಷಗಳ ಹಿಂದಿನ ಮಾತು. ನಮ್ಮ ಕೂಡು ಕುಟುಂಬದ ದೊಡ್ಡ ಮಗನು ಅಮ್ಮ, ಹೆಂಡತಿ, ಚಿಕ್ಕ ವಯಸ್ಸಿನ ಮಕ್ಕಳು ಮತ್ತು ತಮ್ಮನ ಅದೇ ಮಾದರಿಯ ಕುಟುಂಬವನ್ನು ನಡು ನೀರಿನಲ್ಲಿ ಬಿಟ್ಟು, ಅಚಾನಕ್ಕಾಗಿ ನಾಕದ ದಡ ಸೇರಿಯಾಗಿತ್ತು! ಅಣ್ಣನ ಅಗಲುವಿಕೆಯ ತರುವಾಯದ ಈ ಕಷ್ಟದ ಸಂದರ್ಭದಲ್ಲಿ ಇಡೀ ಕುಟುಂಬದ ಜವಾಬ್ದಾರಿ ಸಣ್ಣ ವಯಸ್ಸಿನಲ್ಲೇ ಅಯಾಚಿತವಾಗಿ ತಮ್ಮನ ಹೆಗಲೇರಿತು. ಕಷ್ಟ ಮತ್ತು ಕಡು ಬಡತನದ ದಿನಗಳವು. 'ಕಾಲಿಗೆಳೆದರೆ ತಲೆಗಿಲ್ಲ; ತಲೆಗೆಳೆದರೆ ಕಾಲಿಗಿಲ್ಲ' ಎಂಬ ಪರಿಸ್ಥಿತಿ. ದಿನಗಳುರುಳಿದವು. ತಲೆಮಾರಿನ ಮೊದಲ/ದೊಡ್ಡ ಮಗಳು, ತೀರಿಕೊಂಡ ಅಣ್ಣನ ಮಗಳು ಲೀಲಕ್ಕನ ಮದುವೆ ನಿಶ್ಚಯವಾದ ಸಮಯ. ಮನೆಯಲ್ಲಿ ಸಂಭ್ರಮದ ವಾತಾವರಣಕ್ಕಿಂತ ಹೆಚ್ಚಾಗಿ, ಜವಾಬ್ದಾರಿಯ, ಮದುವೆಗೆ ಬೇಕಾದುದನ್ನು ವ್ಯವಸ್ಥೆ ಹೇಗೆ ಮಾಡುವುದು ಎನ್ನುವ ಆತಂಕವೇ ಮನೆಮಾಡಿತ್ತು! ಸಣ್ಣದೊಂದು ಅಡಿಕೆ ತೋಟದ ಆದಾಯವನ್ನು ಮಾತ್ರ ನಂಬಿ ಬದುಕುತ್ತಿದ್ದ, ದಿನದ ಊಟಕ್ಕೂ ಕಷ್ಟಪಡಬೇಕಾಗಿದ್ದ ಕೆಳ ಮಧ್ಯಮ ವರ್ಗದ ಕೂಡು ಕುಟುಂಬ ನಮ್ಮದು. ಮನೆಯ ಮುಂದಿನ ತಲೆಮಾರಿನ ಗಂಡು ಮಕ್ಕಳು ಇನ್ನೂ ಕಲಿಯುತ್ತಿರುವ ವಯಸ್ಸು. ಆರ್ಥಿಕ ಮುಗ್ಗಟ್ಟಿನ ನಡುವೆ ಮನೆಯ ಹಿರಿಯ ಮಗಳು ಲೀಲಕ್ಕನ ಮದುವೆ ಮಾಡಿಸುವುದು ಸುಲಭದ ಮಾತಾಗಿರಲಿಲ್ಲ. ಅಷ್ಟಿಷ್ಟು ಹಣ ಒಟ್ಟು ಸೇರಿಸಿ, ನೆಂಟರಿಷ್ಟರ ಸಹಾಯ-ಸಹಕಾರ ಸಿಕ್ಕಿದರೂ ಮದುವೆಗೆ ಸಾಕಾಗುವಷ್ಟು ಹಣ ಒಟ್ಟಾಗಲಿಲ್ಲವಲ್ಲ!
ಏನು ಮಾಡುವುದೆಂದು ತೋಚದೆ, ಕೊನೆಗೆ ಅಂಗಳದಲ್ಲಿ ಇನ್ನೂ ಸರಿಯಾಗಿ ಒಣಗದಿದ್ದ, ಮುಂದಿನ ವರ್ಷದ ಖರ್ಚು ವೆಚ್ಚಕ್ಕೆ ಆಗಿ ಬರುವಂತಿದ್ದ ಅರ್ಧಂಬರ್ಧ ಹಸಿ ಅಡಿಕೆಯನ್ನೇ ಮದುವೆಗೆ ಒಂದೆರಡು ದಿನ ಮೊದಲು ಸುಲಿದು, ಮಾರಿ, ಅದ್ಹೇಗೋ ಮದುವೆ ಸುಸೂತ್ರವಾಗಿ ಆಗುವಷ್ಟು ದುಡ್ಡನ್ನು ಮನೆಯವರು ಹೊಂದಿಸಿದರು. ಮನೆಮಗಳ ಮೇಲಿನ ಪ್ರೀತಿಗೆ ಯಾವುದೇ ಕಡಿಮೆ ಆಗದಂತೆ, ಒಂದಷ್ಟು ಚಿನ್ನಾಭರಣ ಹಾಕಿ, ಅದ್ದೂರಿಯಲ್ಲದಿದ್ದರೂ ಅಚ್ಚುಕಟ್ಟಾಗಿ, ಚಂದವಾಗಿ ಮದುವೆ ಮಾಡಿ ಮುಗಿಸಿದರು, ಲೀಲಕ್ಕ ತಾನು ಬಲಗಾಲಿಟ್ಟು ಪ್ರವೇಶಿಸಿದ ಮನೆಯ ಹೊಂಬೆಳಕಾದಳು!
ಇಲ್ಲಿ ಮದುವೆಯ ಚಪ್ಪರ ತೆಗೆದು, ತೋರಣ ಬಾಡುವಷ್ಟರಲ್ಲಿ ಶುರುವಾದದ್ದೇ ಅಸಲು ಬದುಕಿನ ಕಷ್ಟ-ಕರಾಳತೆ! ಮನೆಯಲ್ಲಿದ್ದ ಅಡಿಕೆ-ಕರಿಮೆಣಸು ಬೆಳೆಯೆಲ್ಲವೂ ಅದಾಗಲೇ ಖಾಲಿ. ಮದುವೆಗಾಗಿ ಮಾಡಿದ ಸಾಲದ ಹೊರೆ ಒಂದೆಡೆಯಾದರೆ, ನಾಳಿನ ದಿನದ ಹೊಟ್ಟೆಪಾಡಿನ ಚಿಂತೆ ಇನ್ನೊಂದೆಡೆ. ಇದರ ಜೊತೆಗೆ ಮನೆಯ ಹುಡುಗರ ವಿದ್ಯಾಭ್ಯಾಸದ ಖರ್ಚೂ ಸೇರಿ 'ದುರ್ಭಿಕ್ಷದಲ್ಲಿ ಅಧಿಕ ಮಾಸ'! ಮುಂದಿನ ಒಂದೆರಡು ವರ್ಷಗಳ ಕಾಲ ಇಡೀ ಕುಟುಂಬ ಆ ಸಾಲ ತೀರಿಸಲು, ದೈನಂದಿನ ಜೀವನ ಸಾಗಿಸಲು ಪಟ್ಟ ಹರಸಾಹಸ-ಪಾಡು ಹೇಳತೀರದು. ಪ್ರತಿ ಹೊತ್ತಿನ ಅನ್ನಕ್ಕೂ, ಪ್ರತಿ ರೂಪಾಯಿಗೂ ಅಕ್ಷರಶಃ ಬೆವರು ಸುರಿಸಿದ ಕುಟುಂಬ ಒಂದಷ್ಟು ಏದುಸಿರು-ನಿಟ್ಟುಸಿರು ಬಿಡುತ್ತಾ ಬದುಕು ಸಾಗಿಸಿತು. ಈ ನಡುವೆ ಮನೆಯ ಒಂದೆರಡು ಹುಡುಗರು ವಿದ್ಯಾಭ್ಯಾಸ ಮುಗಿಸಿ, ಸಿಕ್ಕಿದ ಕೆಲಸಕ್ಕೆ ಸೇರಿ, ಹೊಟ್ಟೆಗೆ ತಣ್ಣೀರು ಕುಡಿದು ಮನೆಯ ಆರ್ಥಿಕ ಕಷ್ಟಕ್ಕೆ ಶಕ್ತಿಮೀರಿ ನೆರವಾದರಲ್ಲ, ಅದು ಅವರ ಕುಟುಂಬ ಪ್ರೀತಿ, ತಾಯಿಬೇರಿನೆಡೆಗಿನ ಅಚಲ ಒಲವು!
ಕಾಲ ಯಾವ ದೊಣ್ಣೆ ನಾಯಕನಿಗೂ ಕಾಯುವುದಿಲ್ಲವಲ್ಲ! ದಿನಗಳು ತಿಂಗಳುಗಳಾಗಿ, ತಿಂಗಳುಗಳು ವರ್ಷಗಳಾಗಿ ಉರುಳಿದವು. ಅಂದು ಮನೆ-ಮನ ಬೆಳಗಿದ ಅಜ್ಜ-ಅಜ್ಜಿ ಸಾತತ್ಯದ ಬದುಕು ನಡೆಸಿ, ಮುಂದಿನ ತಲೆಮಾರಿಗೆ ಒಳ್ಳೆಯದನ್ನೇ ಹಸ್ತಾಂತರಿಸಿ ಕಾಲವಾದರು. ಅವರ ಹೆಗಲೇರಿ ಆಡಿದ ಮಕ್ಕಳು ಇಂದು ಅಜ್ಜಂದಿರಾದರು; ಮೊಮ್ಮಕ್ಕಳು ಬೆಳೆದು ತಂದೆ-ತಾಯಿಯರಾದರು; ಹೊಸ ತಲೆಮಾರು ಅಂಗಳದ ತುಂಬಾ ಹೆಜ್ಜೆ ಇಟ್ಟಿತು, ಕುಟುಂಬ ಸಂತಸ ಸಂಭ್ರಮದಿ ನಲಿದಾಡಿತು, ಹಿಗ್ಗಿತು!
ಈ ಐವತ್ತು ವರ್ಷಗಳಲ್ಲಿ ಅಂಗಳದಲ್ಲಿ ಲೆಕ್ಕವಿಲ್ಲದಷ್ಟು ಅಡಿಕೆ-ಕರಿಮೆಣಸು ಒಣಗಿ ನಮ್ಮ ಒಡನಾಡಿ-ಜೀವನಾಡಿಯಾದವು. ಐದು ದಶಕದ ಮಳೆಗಾಲದಲ್ಲಿ ಮನೆಯ ಮಾಡಿನಿಂದ ಇಳಿದ ನೀರು ಅಂಗಳದಲ್ಲಿ ಸಾಗಿ ಸಮುದ್ರ ಸೇರಿಕೊಂಡು ಕಡಲು ಒಡಲಾಯಿತು! ಲೀಲಕ್ಕನ ಮದುವೆಯೂ ಸೇರಿಸಿ, ಮನೆಯ ಹೆಬ್ಬಾಗಿಲಿನಿಂದ ಹೊರ ಬಂದು, ತುಳಸಿ ಕಟ್ಟೆಗೆ ಸುತ್ತುಗಟ್ಟಿ ದಿಬ್ಬಣ ಹೊರಟು, ತೋರಣ ದಾಟಿ ಬಂದ-ಹೋದ ಮನೆಯ ಹತ್ತೊಂಭತ್ತು ಹೆಣ್ಣು-ಗಂಡು ಮಕ್ಕಳು ಹಸೆಮಣೆ ಏರಿದರು. ಮನೆ ಮಗಳು ಲೀಲಕ್ಕ ಹಿರಿಯಕ್ಕನಾಗಿ ಬಂದು ಹರಸಿದಳು, ಹಾರೈಸಿದಳು, ಮಡಿಲು ತುಂಬಿಸಿದಳು! ಅಚ್ಚರಿಯ ಸಂಗತಿಯೆಂದರೆ, ಆರ್ಥಿಕ ಸಂಕಷ್ಟಗಳು, ಏಳು-ಬೀಳುಗಳು ಮನೆಯವರನ್ನು ಆಗೀಗ ಬಿಡದೆ ಕಾಡಿದರೂ, ಆಗಿ ಹೋದ ಹತ್ತೊಂಭತ್ತು ಮದುವೆಗಳೂ ಒಂದಕ್ಕಿಂತ ಒಂದು ವಿಜೃಂಭಣೆಯಿಂದ, ವೈಭವದಿಂದ ನೆರವೇರಿದ ತೃಪ್ತಿ ಮನೆಯವರೆಲ್ಲರದ್ದು. ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ ಅದನ್ನು ನುಂಗಿಕೊಂಡು, ಹೀರಿಕೊಂಡು, ಪ್ರತಿ ಮದುವೆಯ ಸಂದರ್ಭದಲ್ಲಿ ಮದುವೆಗೆ ಬಂದ ಬಂಧು-ಬಾಂಧವರಿಗೆ ಯಾವುದೇ ಕೊರತೆಯಾಗದಂತೆ ಸತ್ಕರಿಸಿದ, ಮದುವೆಗಳನ್ನು ಚೆನ್ನಾಗಿ ನಡೆಸಿದ ನಮ್ಮ ಕೂಡು ಕುಟುಂಬದ ಒಗ್ಗಟ್ಟು, ಛಲ ನಿಜಕ್ಕೂ ಅದ್ಭುತ - ನಿಜಾರ್ಥದಲ್ಲಿ 'ನಮ್ಮ ಸಂಸಾರ ಆನಂದ ಸಾಗರ'!
ಇದೀಗ ಕಾಲ ಮತ್ತಷ್ಟು ಬದಲಾಗಿದೆ. ಮನೆಯ ಇಪ್ಪತ್ತನೆಯ ಮದುವೆಗೆ, ಅಂದರೆ ಈಗಿನ ತಲೆಮಾರಿನ ಕೊನೆಯ ಮಗಳ 'ಕಲ್ಯಾಣೋತ್ಸವ'ಕ್ಕೆ, 'ಪರಿಣಯಾಥಿತ್ಯ'ಕ್ಕೆ ಮನೆ ಮತ್ತೆ ಸಂಭ್ರಮದಿಂದ ಸಜ್ಜಾಗುತ್ತಿದೆ. ಮನೆಯ ವಾತಾವರಣ 'ಸಿಂಗಾರ ಸಿರಿಯೇ'! ಐದು ದಶಕದ ಹಿಂದೆ ಮನೆಯ ಮೊದಲ ಅಳಿಯನಾದವರು ದ್ವಾರಕಾಧೀಶ ಅಂದರೆ 'ಶ್ರೀಕೃಷ್ಣ', ಕೊನೆಯ ಅಳಿಯನಾಗುವವರೂ ಅದೇ ಜಗದೋದ್ಧಾರಕನ ಹೆಸರಿನವರು ಅಂದರೆ 'ನೀಲೇಶಂ' - ಅಲ್ಲಿಗೆ ಬದುಕಿನ ಒಂದು ಸಂಪೂರ್ಣ ಆವೃತ್ತಿ-ವೃತ್ತ-ಮನ್ವಂತರ ಪರಿಪೂರ್ಣವಾಯಿತು!
ಮದುವೆಗೆ ಇನ್ನೂ ಇನ್ನೂರು ಚಿಲ್ಲರೆ ದಿನಗಳು ಬಾಕಿ ಇವೆ. ಸಂತಸದ ಸಂಗತಿ ಎಂದರೆ ಐವತ್ತು ವರ್ಷಗಳ ಹಿಂದಿನ ಆ ಆತಂಕ, ಆ ಉದ್ವೇಗ, ಆರ್ಥಿಕ ಸಂಕಷ್ಟಗಳು, ತೊಳಲಾಟಗಳು ಈಗ ನಮ್ಮ ನಡುವಿನಿಂದ ಬಹುತೇಕ ಮಾಯವಾಗಿವೆ! ಶೇಖರಿಸಿಟ್ಟ ಒಂದಷ್ಟು ಹಳೆಯ ಅಡಿಕೆಯನ್ನು ಅದಾಗಲೇ ಸುಲಿದು, ಮಾರಿ, ಮದುವೆಗೆ ಸಾಕಾಗಬಹುದಾದಷ್ಟು ಹಣವನ್ನು ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿ, ಮದುವೆಯ ಸಂದರ್ಭದಲ್ಲಿ ತೆಗೆಯಲು ಅನುಕೂಲ ಆಗುವಂತೆ ಆರು ತಿಂಗಳ ಎಫ್‌ಡಿ ಮಾಡಿಟ್ಟಿದ್ದಾರೆ ಮನೆಯ ಈಗಿನ ಹಿರಿಯರು! ಈ ಹಿಂದಿನ ಮದುವೆಗಳಿಗಿಂತ ಒಂದು ಪಾವು ಉತ್ತಮ-ಉತ್ಕೃಷ್ಟ ರೀತಿಯಲ್ಲಿ ಮದುವೆ ಮಾಡಿ ಸಂಭ್ರಮಿಸಲು ಮನೆಯವರೆಲ್ಲ ತಯಾರಾಗುತ್ತಿದ್ದಾರೆ. ಅಡಿಕೆ ಕೃಷಿಯ ಆದಾಯವೊಂದರಿಂದಲೇ ಮದುವೆಗೆ ಬೇಕಾದಷ್ಟು ಹಣ ಹೊಂದಿಕೆ ಆಗಿದೆಯಾದರೂ, ಇನ್ನೂ ಅಗತ್ಯ ಬಿದ್ದಲ್ಲಿ ದುಡ್ಡು ಹೊಂದಿಸಲು, ಎಲ್ಲರೂ ಕೈ ಜೋಡಿಸಲು ಸನ್ಮನಸ್ಸಿನಂದ ಉತ್ಸುಕರಾಗಿದ್ದಾರೆ. ಮನೆ, ಮನಸು ಮತ್ತಷ್ಟು ಪಕ್ವವಾಗಿದೆ, ಶ್ರೀಮಂತವಾಗಿದೆ, ಶ್ರೇಷ್ಠವಾಗಿದೆ. ಇದಲ್ಲವೇ ಕೂಡು ಕುಟುಂಬದ ನಿಜ ಶ್ರೀಮಂತಿಕೆ. ಎಂಥಾ ಶ್ರೀಮಂತನಂತಾನೋ...!
ಸರಿಯಾಗಿ ಐದು ದಶಕಗಳ ಹಿಂದೆ, ಅರ್ಧಂಬರ್ಧ ಒಣಗಿದ ಅಡಿಕೆಯನ್ನು ಬೇರೆ ದಾರಿ ಕಾಣದೆ, ಸಂಕಟದಿಂದ ಸುಲಿದು, ಮನೆಯ ಮೊದಲ ಮಗಳ ಮದುವೆಯನ್ನು ನೆರವೇರಿಸಿದ್ದ ಕುಟುಂಬ, ಇಂದು ಮನೆಯ ಈ ತಲೆಮಾರಿನ ಕೊನೆಯ ಮಗಳ ಮದುವೆಗೂ ಆರು ತಿಂಗಳ ಮುಂಚೆಯೇ ಆರ್ಥಿಕ ಭದ್ರತೆಯೊಂದಿಗೆ, ನೆಮ್ಮದಿ, ಸಂಭ್ರಮದಿಂದ ಮದುವೆಯ ದಿನಕ್ಕಾಗಿ ಕಾಯುತ್ತಿದೆ, ಉತ್ಸಾಹದಿಂದ ಎದುರು ನೋಡುತ್ತಿದೆ! ಅಂದಿನ ಸಂಕಷ್ಟದ ದಿನಗಳು ಕಳೆದು ಹೋಗಿವೆ. ಆರ್ಥಿಕ ದೃಢತೆ, ಮಾನಸಿಕ ನೆಮ್ಮದಿ, ಒಗ್ಗಟ್ಟು ಕೂಡು ಕುಟುಂಬದಲ್ಲಿ ಭದ್ರವಾಗಿ ನೆಲೆಯೂರಿದೆ. 'ಕಾಲ ಮತ್ತೊಮ್ಮೆ ನಮಗಾಗಿ ಬಂದಿದೆ'!
ಲೀಲಕ್ಕನಿಂದ ತೊಡಗಿದ ಮದುವೆಗಳ ಸವಿಪಯಣ ಮಾಲುಕ್ಕನ ವಿವಾಹದ ತನಕ ಅವ್ಯಾಹತವಾಗಿ ಮುಂದುವರೆದಿದೆ! ಲೀಲಕ್ಕನ ಮದುವೆಯೆಂಬ ಕಷ್ಟದ ದಿನಗಳಿಂದ ತೊಡಗಿ, ಅಜ್ಜ-ಅಜ್ಜಿಯರ ಆಶೀರ್ವಾದ, ಹಿರಿಯರ ಬೆವರು, ತ್ಯಾಗ, ಎಲ್ಲರ ಒಳಿತಿಗಾಗಿ ಹಲವರು-ಹಲವಾರು ಕನಸುಗಳನ್ನು ಮುಂದೂಡಿದ-ರದ್ದು ಮಾಡಿದ ಒಟ್ಟು ಪರಿಣಾಮ ಮತ್ತು ಒಗ್ಗಟ್ಟಿನ ಮಂತ್ರದಿಂದ, ಜತನದಿಂದ ಕಟ್ಟಿದ ಈ ತುಂಬು ಸಂಸಾರ ಇಂದು ಮನೆಯ ಎಲ್ಲರಿಗೂ ಮೊಗೆದಷ್ಟು ಪ್ರೀತ್ಯಾದರಗಳ ಒಲವು-ವರವನ್ನು ನೀಡುವ ಸದೃಢ, ಅತುಲ್ಯ ಹೆಮ್ಮರವಾಗಿ ಬೆಳೆದು ನಿಂತಿದೆ!
ಆಗೀಗ ಬಂದ-ಹೋದ ಭಿನ್ನಾಭಿಪ್ರಾಯಗಳು, ಒರಟು-ಒಲ್ಲದ ಮಾತುಗಳು, ಬೇಸರಗಳು, ಸಂಬಂಧಗಳಲ್ಲಿನ ಮೋಡ ಕವಿದ ವಾತಾವರಣ, ಅಭಿಪ್ರಾಯ ವ್ಯತ್ಯಾಸಗಳನ್ನು ಎಲ್ಲರೂ ಅರಗಿಸಿಕೊಂಡು, ನೀರು ಕುಡಿದು, ಇಲ್ಲವಾಗಿಸಿ, ಕಹಿಯನ್ನೂ 'ಬೆಲ್ಲ'ವಾಗಿಸಿ ಒಂದೇ ಸೂರಿನಡಿ ಜೊತೆ ಸಾಗುತಿರುವ ಈ ಪರಿ ವರ್ಣಿಸಲಸದಳವು!
ಇಂದು ಕಾರಿನಲ್ಲಿ ಅಪ್ಪನೊಂದಿಗೆ ಪೆರ್ಲ ಪೇಟೆಗೆ ಹೋಗಿ, ಕ್ಯಾಂಪ್ಕೋ ಸಂಸ್ಥೆಗೆ ಅಡಿಕೆ ಮೂಟೆಗಳನ್ನು ಮಾರಿ, ಅಡಿಕೆ ತೋಟದ ನಡುವಿನ ಮಾರ್ಗದಲ್ಲಿ ವಾಪಸ್ ಬಂದು ಮನೆಯೆದುರಿನ ಜಗಲಿಯಲ್ಲಿ ಕುಳಿತುಕೊಂಡು ಈ ಋತುವಿನ ಕೊನೆಯ ಕೊಯಿಲಿನ, ಅರ್ಧಂಬರ್ಧ ಒಣಗಿರುವ ಅಡಿಕೆ ಬೆಳೆಯನ್ನು ಅಂಗಳದ ತುಂಬಾ ನೋಡುವಾಗ, ಇದೆಲ್ಲ-ಇಷ್ಟೆಲ್ಲ ನೆನಪಾಗಿ, ಮನ ರಿವೈಂಡ್ ಆದಂತಾಗಿ ಯಾಕೋ ಕಣ್ಣಂಚಿನಲ್ಲಿ ನನಗರಿವಿಲ್ಲದಂತೆ ಜಿನುಗಿದ ನೀರು ಗಲ್ಲದ ಮೇಲಿನಿಂದ ಧರೆಗವತರಿಸಿತು - ಅದು ಅಂದಿನವರು ಸುರಿಸಿದ ಮಾದರಿಯ, ಕಷ್ಟ-ಬೇಸರದ ಕಾರಣದ ಕಣ್ಣೀರಲ್ಲ; ಬದಲಾಗಿ ಅದು ಐವತ್ತು ವರ್ಷಗಳ ಸಾರ್ಥಕತೆಯ, ಒಗ್ಗಟ್ಟಿನ, ಒಬ್ಬರಿಗೊಬ್ಬರು ಜೊತೆಯಾಗಿ ನಿಂತು ಮುನ್ನಡೆಯುವ ಮನಸ್ಸಿರುವ, ನಮ್ಮೆಲ್ಲರ ಖುಷಿ-ಗೆಲುವಿನ, ಅಂತರಾತ್ಮದ ಪರಿಶುದ್ಧ ಆನಂದಭಾಷ್ಪ! ಅಜ್ಜ-ಅಜ್ಜಿಯರು ಅಂದು ನೆಟ್ಟ ಮರಗಳ ಸಿಹಿಯಾದ ಫಲ ವಸ್ತುಗಳನ್ನು ನಾವುಗಳು ಉಣ್ಣುತ್ತಿದ್ದೇವೆ, ಅವರು ಅಲ್ಲೆಲ್ಲೋ ನಾಕದಿ ಕುಳಿತು, ನೋಡುತ್ತಾ ಮನೆಯವರೆಲ್ಲರನ್ನೂ ಆನಂದದಿಂದ ಹರಸುತ್ತಿದ್ದಾರೆ, ಇಷ್ಟೇ! ನಂಬಿಕೊಂಡು ಬಂದ ದೇವತೆಗಳೂ ಒಳಿತನ್ನು ಮಾಡಿರುವುದು ಸೂರ್ಯ ಚಂದ್ರರಷ್ಟೇ ಸತ್ಯ! - 'ಮರೆಯುವುದುಂಟೇ ಮರೆಯಲಿ ನಿಂತೇ ಕಾಯುವ ಕರುಣಾಮಯಿಯ...'
ಸತ್ಯಂ, ಶಿವಂ, ಸುಂದರಂ. ಜೇನಿನ ಗೂಡು ನಾವೆಲ್ಲಾ; ಬೇರೇಯಾದರೆ ಜೇನಿಲ್ಲಾ... ಭದ್ರಂ-ಶುಭಂ-ಮಂಗಳಂ. ಧನ್ಯೋಸ್ಮಿ.
Creative Writings
