Karada Vishwa

Article · November 9, 2026

ಮನಸ್ತಮಸು

By ಗಾಯತ್ರಿ ನಾಗರಾಜ ಅಡ್ಕತ್ತೊಟ್ಟಿ

ಗಾಯತ್ರಿ ಕೆ ಅಡ್ಕತೊಟ್ಟಿ

ಬಾಗಿಲಲಿ ದೀಪಪಂಕ್ತಿ ಅಂಗಳದಿ ರಂಗವಲ್ಲಿ
ಮಾಡದಲಿ ದೀಪಮಾಲೆ ಮಿಂಚು ಮುಗಿಲಲಿ
ಎಲ್ಲೆಲ್ಲೂ ಬೆಳಕ ಸೊಬಗು ಸಂಭ್ರಮದ ಮೆರುಗು

ಒಳಮನದಿ ಗಾಢವೇ ನೆಲೆಸಿಹುದು
ಬಾಹ್ಯದ ಬೆಳಕು ಒಳತಮವ ಸೋಕದೇ ಇಹುದು
ದೀಪಾವಳಿಯ ಬೆಳಕಿಗೆ ಏನರ್ಥವು ಹೇಳು?

ತಮಸಿನೊಳಗೆ ದ್ವೇಷವೆಂಬ ಕರಾಳ ಸರ್ಪವಿದೆ
ಮತ್ಸರವೆಂಬ ಮುಳ್ಳು ಅಹಮೆಂಬ ಗಿರಿಯಿದೆ
ಅಸೂಯೆಯ ಕರಿಮೋಡ ಸ್ವಾರ್ಥದ ಕಾರ್ಗತ್ತಲು

ಇವುಗಳೆಲ್ಲ ಕೂಡಿ ಮನವನೆ ಕತ್ತಲೆಯಾಗಿಸಿವೆ
ದೀಪಗಳ ಸಾಲು ಮನೆಯನ್ನು ಬೆಳಗಿದರೆ
ತಿಳಿ,ಮನವ ಬೆಳಗುವ ದೀಪವು ಅದಲ್ಲವೆಂಬುದು

ಮನವೆಂಬ ದೇಗುಲದಿ ಕತ್ತಲೆಯು ತುಂಬಿರಲು
ದ್ವೇಷಾದಿ ರೋಷಗಳು ರಕುತದಲಿ ಹರಿದಿರಲು
ದೇವರ ದೀಪಕೇನರ್ಥ? ಹಬ್ಬಕೇನರ್ಥ?

ಮತ್ತೊಬ್ಬರ ಕಣ್ಣೀರಲಿ ನಮ್ಮ ನಗುವನರಸಲು
ಮಗದೊಬ್ಬನ ಬದುಕ ಕತ್ತಲೆಯಾಗಿಸಿ ಬೆಳಗಲು
ಬೆಳಕಿನ ಹಬ್ಬಕೆ ಕಪ್ಪು ಚುಕ್ಕೆಯು ಅಂಟುವುದು.

ಪರರ ಉಪಕರಿಸಿ ಸಂತೋಷವನೇ ಬಯಸಿ
ಮನದಿಂದ ಮದ ತೊರೆದು ಮೋಹವನು ಮರೆತು
ದ್ವೇಷವನು ತೊಡೆದು ದಯೆಯ ಬೆಳೆಸಬೇಕು

ಅಹಂನ ಪರದೆಯು ಸರಿದು ಆತ್ಮವು ಬೆಳಗಿದರೆ
ಅಂದೇ ಉದಯಿಸುವುದು ಒಳಗಿನ ದೀಪವು
ಮನದ ಕತ್ತಲು ಕಳೆದಾಗಲೇ ಹಬ್ಬಕೆ ಅರ್ಥವು.

Creative Writings