
Article · April 25, 2026
ನುಡಿ ನಮನ: ಮಾಧವೈಕ್ಯರಾದ ಜ್ಞಾನದೀವಿಗೆಗೆ ನಮೋ ನಮಃ
- ರವೀ ಸಜಂಗದ್ದೆ
ಕರಾಡ ಸಮುದಾಯದ ಹೆಮ್ಮೆಯ ಜ್ಞಾನನಿಧಿ, ವೇದ ಪಾರಂಗತರು, ಬಹುಶ್ರುತ ವಿದ್ವಾಂಸರೂ ಆಗಿದ್ದ ವೇದಮೂರ್ತಿ, ಮಹಾಮಹೋಪಾಧ್ಯಾಯ ಮುಂತಾದ ಬಿರುದಾಂಕಿತ ಬಳ್ಳಪದವು ಮಾಧವ ಉಪಾಧ್ಯಾಯರು ಇಂದು ಇಹಲೋಕದ ಸುದೀರ್ಘ ಯಾತ್ರೆ ಮುಗಿಸಿ ದೈವಾಧೀನರಾಗಿರುವುದು ಕರಾಡ ಸಮುದಾಯದ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ. ಶ್ರೀಯುತರ ಅಗಲುವಿಕೆಯಿಂದ ನಮ್ಮ ಸಮಾಜದ ವಿಶಿಷ್ಟ ಪರಂಪರೆಯ, ಅಪರೂಪದ, ಅನರ್ಘ್ಯ ಕೊಂಡಿಯೊಂದು ಕಳಚಿದಂತಾಗಿದೆ.
ಶತಾಯುಷಿ ಮಾಧವ ಉಪಾಧ್ಯಾಯರು ಸಮಾಜವನ್ನು ನಿರಂತರವಾಗಿ ಜಾಗೃತಗೊಳಿಸುತ್ತಿದ್ದ, ಒಳಿತಿನೆಡೆಗೆ ಮುನ್ನಡೆಸುತ್ತಿದ್ದ ಜ್ಞಾನದ ಜೀವಂತ ದೀವಿಗೆಯಾಗಿದ್ದರು. ಅಗಲ್ಪಾಡಿ ಅಮ್ಮನವರ ಸನ್ನಿಧಿಯಲ್ಲಿ ದಶಕಗಳ ಕಾಲ ಅವರು ಸಲ್ಲಿಸಿದ ನಿಷ್ಠಾವಂತ ಹಾಗೂ ನಿಸ್ವಾರ್ಥ ಸೇವೆಗೆ ಸಾಟಿಯಿಲ್ಲ. ಅವರ ಬದುಕು, ವಿದ್ವತ್ತು, ಸಂಗೀತ, ಸಂಸ್ಕೃತ ಪಾಂಡಿತ್ಯ, ದೇವಭಕ್ತಿ, ಸರಳತೆ ಮತ್ತು ಅಗಾಧ ಜ್ಞಾನದ ಅಪರೂಪದ ಮತ್ತು ಅನನ್ಯ ಸಂಗಮವಾಗಿತ್ತು. ಸಮಾಜಕ್ಕೆ ಮಾರ್ಗದರ್ಶಕರಾಗಿ ಸೇವೆಗೈಯುವುದರ ಜೊತೆಗೆ ನಾವೆಲ್ಲರೂ ಅನುಸರಿಸಬೇಕಾದ ಅಪ್ಪಟ ಆದರ್ಶದ ಸಾಕಾರ ಮೂರ್ತಿಯಾಗಿದ್ದರು.
'ಯೋಗೇನಾಂತೇ ತನುತ್ಯಜಾಮ್' ಎಂಬ ಸುಭಾಷಿತದ ಉಕ್ತಿಯಂತೆ, ಜೀವನವನ್ನು ಪರಿಪೂರ್ಣವಾಗಿ ಜೀವಿಸಿ, ದೇವರು ತನಗೆ ವಹಿಸಿದ ಪಾತ್ರವನ್ನು ಚಾಚೂ ತಪ್ಪದೆ ನಿರ್ವಹಿಸಿ, ಕೊನೆಯವರೆಗೂ ಸಮುದಾಯದ ಉನ್ನತಿಗೆ ಇಡೀ ಬದುಕನ್ನು ಮುಡಿಪಾಗಿರಿಸಿ, ಸಾರ್ಥಕತೆಯ ಹಾದಿಯಲ್ಲಿ ನಡೆದು, ನಮಗೆಲ್ಲ ಒಂದು ಉಜ್ವಲ-ಸುಸಂಸ್ಕೃತ-ಅವಿಚ್ಛಿನ್ನ ಪರಂಪರೆಯನ್ನು ಬಳುವಳಿಯಾಗಿ ನೀಡಿ ನಾಕದೆಡೆಗೆ, ದೇವಿ ಸಾನ್ನಿಧ್ಯದೆಡೆಗೆ ಪರಿಪೂರ್ಣತೆಯೊಂದಿಗೆ ತೆರಳಿದ್ದಾರೆ. ಅವರ ಭೌತಿಕ ಶರೀರ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕೊಡುಗೆ ನೀಡಿದ ಸಂಸ್ಕಾರ, ಧಾರೆಯೆರೆದ ಜ್ಞಾನಾಮೃತ ಮತ್ತು ಹಾಕಿ ಕೊಟ್ಟ ಅತುಲ್ಯ ಸನ್ಮಾರ್ಗ ಎಂದೆಂದಿಗೂ ಇಡೀ ಕರಾಡ ಸಮುದಾಯಕ್ಕೆ ದಾರಿದೀಪವಾಗಿ ಸದಾ-ನಿರಂತರ ಉಳಿಯಲಿದೆ. ಅವರು ಸಮುದಾಯಕ್ಕೆ ನೀಡಿದ ಶಿಷ್ಯ ಪರಂಪರೆ ನಮ್ಮೆಲ್ಲರ ಆಸ್ತಿ.
ಆ ಮಹಾನ್ ಚೇತನಕ್ಕಿದೋ ಶಿರಬಾಗಿ ಸಲ್ಲಿಸುವ ಕಂಬನಿಯ, ಗೌರವಪೂರ್ಣ ವಿದಾಯ, ಅಂತಿಮ ನಮನವಿದು. ಜಗನ್ಮಾತೆ ಅಗಲ್ಪಾಡಿ ಅಮ್ಮನವರು ಅವರ ಪವಿತ್ರ ಆತ್ಮಕ್ಕೆ ಸದ್ಗತಿ-ವಿಷ್ಣುಸಾಯುಜ್ಯವನ್ನು ಕರುಣಿಸಲಿ. ಅವರ ಕುಟುಂಬ ವರ್ಗ, ಅಪಾರ ಶಿಷ್ಯವೃಂದ ಮತ್ತು ಸಮಾಜಕ್ಕೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಆ ಜಗನ್ಮಾತೆ ನೀಡಲಿ ಎಂಬುದಷ್ಟೇ ಈ ಕ್ಷಣದ ಪ್ರಾರ್ಥನೆ.
ಅಣ್ಣಯ್ಯ, ಅಣ್ಣಯ್ಯಣ್ಣ, ಅಣ್ಣಯ್ಯ ಮಾಮು, ಅಣ್ಣಯ್ಯಜ್ಜ, ಬಳ್ಳದವು ಉಪಾಧ್ಯಾವೊ, ಮಾಧವಣ್ಣ, ಮಾಧಣ್ಣ, ಮಾಧವ ಮಾಮು, ಮಾಧವಜ್ಜ, ಹೀಗೆ ವಿವಿಧ ನಾಮಾಂಕಿತರಾಗಿ ಜನಾನುರಾಗಿಯಾಗಿರುವ ಶ್ರೀಯುತರು ನಮ್ಮೆಲ್ಲರ ಪಾಲಿನ ಆತ್ಮಬಂಧು-ಕಣ್ಮಣಿ! ನಿಗರ್ವಿ, ಪೌರೋಹಿತ್ಯದ ಮೇರು ವ್ಯಕ್ತಿತ್ವ, ಪುರೋಗಾಮಿ, ಜ್ಞಾನದೀವಿಗೆ, ದೈವಾಂಶಸಂಭೂತ ಮಾಧವ ಉಪಾಧ್ಯಾಯರ ಬದುಕು ಮತ್ತು ಇಂದಿನ ಮಾಧವೈಕ್ಯದ ಕುರಿತಾಗಿ ಮಂಕುತಿಮ್ಮನ ಕಗ್ಗದ ಈ ಸಾಲುಗಳು ಅತ್ಯಂತ ಅರ್ಥಪೂರ್ಣವೆನಿಸುತ್ತವೆ:
ಉರಿಯುತಿಹ ದೀಪದಲಿ ಎಣ್ಣೆ ತೀರಿದ ಬಳಿಕ ।
ಉರಿಯೆತ್ತ ಹೋದಪುದು? ಕರಗಿತೆಲ್ಲಿ? ॥
ಬೆರಗುಗೊಳಿಸುತ ಬಂದು ಬೆರಗುಗೊಳಿಸುತ ಪೋಗು-।
ವಿರುಹುದಾವುದೆ? ಪೇಳೊ ಮಂಕುತಿಮ್ಮ ॥
ಗೌರವಾನ್ವಿತ ಅಣ್ಣಯ್ಯ ಮಾಮು, ನೀವು ಹಾಕಿಕೊಟ್ಟ ಶ್ರೇಷ್ಠ ಸನ್ಮಾರ್ಗದಲ್ಲಿ ನಡೆಯುವ ಶಕ್ತಿ ಮತ್ತು ಸನ್ಮನಸ್ಸು ಆ ಸರ್ವವಂದ್ಯ ನಮಗೆಲ್ಲರಿಗೂ ನೀಡಲಿ. ನೀವು ನಮ್ಮೆಲ್ಲರ ಪ್ರೀತಿಪಾತ್ರರು, ಹೃದಯ ಶಿವ, ರಮಾಧವ! ಹೋಗಿ ಬನ್ನಿ ಗುರುವರೇಣ್ಯರೇ.
ಓಂ ಶಾಂತಿ ಶಾಂತಿ ಶಾಂತಿಃ. 🙏🙏🙏
✒️ ರವೀ ಸಜಂಗದ್ದೆ
Creative Writings
