
Article · October 17, 2026
ನಾನಾ ರೀತಿಯ ಜನರಿದ್ದಾರೆ, ನಾನಾ ಪಾಟೇಕರ್ ಒಬ್ಬರೇ!
ರವೀ ಸಜಂಗದ್ದೆ
ನುಡಿ ನಮನ
ಸಾವು...! ಒಂದಲ್ಲ ಒಂದು ದಿನ ಅದು ಎಲ್ಲರಿಗೂ ಬರುವಂತಹುದೇ. ಆದರೆ ಅದು ಬಂದಾಗ ನಾವು ಅದನ್ನ ಸ್ವಾಗತಿಸುವ ರೀತಿ ಇದೆಯಲ್ಲ... ಅದು ಬಹಳ ಮುಖ್ಯವಾಗುತ್ತದೆ. 'ಓಹ್ ಸಾವು ಬಂತಾ? ಸರಿ, ನಡೀರಿ ಹೋಗೋಣ, ಗುಡ್ ಬೈ' ಅಂತ ಯಾವ ಅಳುಕು-ಅಂಜಿಕೆಯೂ ಇಲ್ಲದೆ ಎದ್ದು ನಡೆಯುವ ಆ ಗತ್ತು-ಗಾಂಭಿರ್ಯ ಇದೆಯಲ್ಲ, ಬಹುಷಃ ಅದು ನಾನಾ ಪಾಟೇಕರ್ ಥರಹದ ವ್ಯಕ್ತಿತ್ವದ ಅಪರೂಪದ ಮನುಷ್ಯರಿಗೆ ಮಾತ್ರ ಸಾಧ್ಯ! ಹೌದಲ್ಲ? ಆ ಗಡುಸು ದನಿಯ, ಕಣ್ಣುಗಳಲ್ಲೇ ಬೆಂಕಿ ಉಗುಳುತ್ತಿದ್ದ, ಹುಬ್ಬುಗಳಲ್ಲಿ ಸಿಟ್ಟು-ಸೆಡವು ತೋರಿಸುತ್ತಿದ್ದ ಪರದೆಯ ಮೇಲಿನ ಆ ಜೀವಂತ ಜ್ವಾಲಾಮುಖಿ, ನಾನಾ ಅಭಿರುಚಿಯ ಅನೂಹ್ಯ ಪಾತ್ರಗಳನ್ನು ಮಾಡಿದ ನಾನಾ ಪಾಟೇಕರ್ (75 ವರ್ಷ) ಹೆಸರಿನ ಜೀವ ಈಗ ಶಾಂತವಾಗಿದೆ. ಅವರು ಕೇವಲ ಒಬ್ಬ ನಟನಾಗಿ ಮಾತ್ರ ಪ್ರಸಿದ್ದಿ ಪಡೆದುದಲ್ಲದೆಯೇ ಆ ವ್ಯಕ್ತಿತ್ವವು ಆಕ್ರೋಶದ, ವಾಸ್ತವದ ಮತ್ತು ಬದುಕಿನ ಬೆತ್ತಲೆ ಸತ್ಯದ ಪ್ರತಿರೂಪವೇ ಆಗಿತ್ತಲ್ಲ!
ಬಣ್ಣದ ಲೋಕದಲ್ಲಿ ಎಲ್ಲರೂ ಪೌಡರ್ ಬಳಿದುಕೊಂಡು, ಮೇಕಪ್ ಮಾಡಿಕೊಂಡು, ಸಿಕ್ಸ್ ಪ್ಯಾಕ್ ತೋರಿಸುತ್ತಾ ತೆರೆಯ ಮೇಲೆ ಅತ್ಯಂತ ಸುಂದರವಾಗಿ ಕಾಣಲು ಹಂಬಲಿಸುತ್ತಿದ್ದ ಕಾಲಘಟ್ಟವದು. ಆ ಹೊತ್ತಿನಲ್ಲಿ ತನ್ನ ಸಹಜ, ಗೋಧಿ ಬಣ್ಣದ, ಸಾಧಾರಣ ಮೈಕಟ್ಟಿನ, ವಿಶಿಷ್ಟ ಒರಟು ಮುಖ ಮತ್ತು ರಗಡ್ ಲುಕ್ನ ಮೂಲಕವೇ ಕ್ಯಾಮರಾ ಮುಂದೆ ಬಂದು ನಿಂತು, ಸಹಜವಾದ ಅಭಿನಯದ ಮೂಲಕ ಮೋಡಿ ಮಾಡಿದವರು, ಬಹುಪಾಲು ಜನರಿಗೆ ಇಷ್ಟವೂ ಆದವರು ಇದೇ ನಾನಾ ಪಾಟೇಕರ್! 'ಇದೇ ನನ್ನ ಮುಖ, ಇದೇ ನನ್ನ ಬದುಕು, ಇದೇ ನನ್ನ ವ್ಯಕ್ತಿತ್ವ, ಇದೇ ನನ್ನ ಅನನ್ಯ ಶೈಲಿ, ಒಪ್ಪುವುದಾದರೆ ಒಪ್ಪಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ದಾರಿ ನಿಮ್ಮದು, ನನ್ನ ದಾರಿ ನನ್ನದು' ಎಂಬ ನೇರ ನಡೆ-ನುಡಿಯ ದರ್ಪ, ಹಟ ಅವರಲ್ಲಿತ್ತು . ಆ ದರ್ಪಕ್ಕೆ ಅಹಂಕಾರದ ಲೇಪದ ಬದಲಾಗಿ ಮುಖವಾಡವಿಲ್ಲದ ಚಿನ್ನದಷ್ಟು ಅಪ್ಪಟ ಪ್ರಾಮಾಣಿಕತೆಯಿತ್ತು, ಹೃದಯದ ಭಾಷೆಯಿತ್ತು, ಪ್ರೇಕ್ಷಕರ ಮನದಲ್ಲಿ ಛಾಪೊತ್ತುವ ಪಾತ್ರವನ್ನೇ ಮಾಡಬೇಕೆನ್ನುವ ತಪಸ್ಸು ಪ್ರತಿ ಬಾರಿಯೂ ಇತ್ತು. ಹಾಗಾಗಿ ಅವರು ಏರಿದ ಎತ್ತರ ಬಲು ದೊಡ್ಡದು.
ಕರಾವಳಿಯ ಮಣ್ಣಿನ ಮೂಲದಲ್ಲಿ ಜನಿಸಿದವರು ವಿಶ್ವನಾಥ ಗಜಾನನ ಪಾಟೇಕರ್! ಮುಂಬೈನ ಲೋಕಲ್ ರಸ್ತೆಗಳಲ್ಲಿ ಜೀಬ್ರಾ ಕ್ರಾಸಿಂಗ್ಗಳಿಗೆ ಪೈಂಟ್ ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದ ಸಾಮಾನ್ಯ ಯುವಕನೊಬ್ಬ, ಮುಂದೆ ಭಾರತೀಯ ಸಿನಿಮಾರಂಗದ ಬಲು ಅತುಲ್ಯ ದಿಗ್ಗಜನಾಗಿ ಬೆಳೆದ ಕಥೆಯೇ ಒಂದು ಅದ್ಭುತ ಸಿನಿಮಾದ ಸರಕು! ರಂಗಭೂಮಿಯ ಕಠಿಣ ಗರಡಿಯಲ್ಲಿ ಪಳಗಿದ್ದ ಅವರಿಗೆ ನಟನೆ ಎಂದರೆ ಕೇವಲ ಡೈಲಾಗ್ ಒಪ್ಪಿಸುವುದಾಗಿರದೆ ಪ್ರತಿಯೊಂದು ಪಾತ್ರದೊಳಗೆ 'ಪರಕಾಯ ಪ್ರವೇಶ' ಮಾಡುವುದಾಗಿತ್ತಲ್ಲ. ತನ್ನ ಡೈಲಾಗ್ ಡೆಲಿವರಿಯ ನಡುವೆ ನಾನಾ ಪಾಟೇಕರ್ ತೆಗೆದುಕೊಳ್ಳುತ್ತಿದ್ದ ಆ ದೀರ್ಘ ನಿಟ್ಟುಸಿರು-ವಿರಾಮವು ಇಡೀ ಚಿತ್ರಮಂದಿರವೇ ಉಸಿರು ಬಿಗಿಹಿಡಿದು ಕಾಯುವಂತೆ ಮಾಡುತ್ತಿತ್ತು. ತನ್ನ ನರನಾಡಿಗಳನ್ನು ಉಬ್ಬಿಸಿ, ತನಗೊಪ್ಪಿಸಿದ ಸಂಭಾಷಣೆ ಹೇಳಲು ಶುರುಮಾಡಿದರೆ, ಎದುರಿಗಿದ್ದ ಎಂಥಾ ದಿಗ್ಗಜ ನಟನೂ ಒಂದು ಕ್ಷಣ ಮಂಕಾಗಲೇ ಬೇಕಿತ್ತು. ಅವರು ಉದುರಿಸಿದ ಪ್ರತಿಯೊಂದು ಮಾತೂ ಚಪ್ಪಾಳೆ ಗಿಟ್ಟಿಸಿರುವುದು ಅವರ ಅಪರಂಜಿಯಂಥ ನಟನಾ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿ. 'ಪರಿಚಯ್'ದ ಆ ಸಾಮಾನ್ಯ ಯುವಕನಿಂದ ಶುರುವಾದ ಸಿನಿ ಪಯಣ, 'ಪರಿಂದಾ' ಚಿತ್ರದ ಅಣ್ಣಾ ಸೇಠ್ ರೂಪದಲ್ಲಿ ಬೆಂಕಿಯಂತೆ ಉರಿಯಿತು. 'ಕ್ರೈಂ ಬಾಸ್'ನ ಆ ಕ್ರೌರ್ಯ, ಆತನ ಅಸಹಾಯಕತೆ ಮತ್ತು ಆತನ ಭಯ... ಹೀಗೆ ಎಲ್ಲವನ್ನೂ ನಾನಾ ಪಾಟೇಕರ್ ತಮ್ಮ ಕಣ್ಣುಗಳಲ್ಲೇ ಪ್ರೇಕ್ಷಕರ ಮನದೊಳಗೆ ದಾಟಿಸಿದ್ದರು. ಇನ್ನು 'ಕ್ರಾಂತಿವೀರ್'ನ ಪ್ರತಾಪ್ ನಾರಾಯಣ್ ತಿಲಕ್ ಪಾತ್ರವನ್ನು ಭಾರತೀಯ ಸಿನಿಮಾ ಪ್ರೇಕ್ಷಕರು ಮರೆಯಲಸಾಧ್ಯ. 'ಇದು ಹಿಂದೂವಿನ ರಕ್ತ, ಇದು ಮುಸಲ್ಮಾನನ ರಕ್ತ; ಹೇಳು, ಇದರಲ್ಲಿ ಹಿಂದೂವಿನ ರಕ್ತ ಯಾವುದು?' ಎಂದು ಅಲ್ಲೆಲೋ ಗಲ್ಲಿಯ ಮಧ್ಯೆ ನಿಂತು ಆತ ಕೂಗಿದಾಗ, ಅದು ಧರ್ಮದ ಹೆಸರಿನಲ್ಲಿ ಬಡಿದಾಡುವ ಇಡೀ ಸಮಾಜದ ಮುಖಕ್ಕೆ ಹೊಡೆದ ಬಲವಾದ ಚಾಟಿ ಏಟಾಗಿತ್ತು. ನಾನಾ ಪಾಟೇಕರ್ ಅಭಿನಯ ಆಕ್ರೋಶದ ಪಾತ್ರಗಳಿಗೆ ಮಾತ್ರ ಸೀಮಿತವಾಗಲಿಲ್ಲ. 'ಖಾಮೋಶಿ' ಚಿತ್ರದ ಕಿವುಡ ಮತ್ತು ಮೂಗ 'ಜೋಸೆಫ್' ಆಗಿ ಅವರ ಅಭಿನಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಶಬ್ದಗಳಿಲ್ಲದೆ ಕೇವಲ ಹಾವಭಾವಗಳಿಂದಲೇ ಅವರು ಪ್ರೇಕ್ಷಕರ ಎದೆಗಿಳಿದರು. 'ಅಬ್ ತಕ್ ಛಪ್ಪನ್' ಚಿತ್ರದ ಸಾಧು ಅಗಾಶೆ ಪಾತ್ರದಲ್ಲಿ ಆಕ್ರೋಶವಿರಲಿಲ್ಲ, ಕೂಗಾಟವಿರಲಿಲ್ಲ. ಅದರೊಳಗೆ ಹೆಪ್ಪುಗಟ್ಟಿದ ಮೌನ, ನಗುತ್ತಲೇ ಎನ್ಕೌಂಟರ್ ಮಾಡುವ ಕರ್ತವ್ಯದ ಭಯಾನಕ ಕ್ರೌರ್ಯವಿತ್ತಲ್ಲ. ಒಂದು ಕಡೆ ಇಷ್ಟೆಲ್ಲಾ ಗಂಭೀರ ಪಾತ್ರಗಳನ್ನು ಮಾಡುತ್ತಲೇ, 'ವೆಲ್ಕಮ್' ಚಿತ್ರದ ಉದಯ್ ಶೆಟ್ಟಿಯಾಗಿ ಇಡೀ ದೇಶವನ್ನು ನಗಿಸಿದ ಕೀರ್ತಿಯೂ ಅದೇ ಒರಟು ಮನುಷ್ಯನಿಗೇ ಸಲ್ಲುತ್ತದೆ!
'ನಟಸಾಮ್ರಾಟ್' ಚಲನಚಿತ್ರದ ಗಣಪತರಾವ್ ಬೆಲ್ವಾಲ್ಕರ್ ಆಗಿ ನಾನಾ ಜೀವಿಸಿದ ರೀತಿ, ಪ್ರತಿಯೊಬ್ಬ ಕಲಾವಿದನಿಗೂ ಒಂದು ಪಾಠ. 'ಟು ಬಿ ಆರ್ ನಾಟ್ ಟು ಬಿ'ಯಲ್ಲಿ ಅವರು ಎಂದಿನಂತೆ ಸಂಪೂರ್ಣ ಪಾತ್ರದ ಒಳಹೊಕ್ಕು ಆ ಪಾತ್ರವನ್ನೇ ಕುಡಿದುಬಿಟ್ಟಿದ್ದರು. ತನ್ನೆಲ್ಲಾ ಅನುಭವಗಳನ್ನು ಆ ಒಂದೇ ಪಾತ್ರದಲ್ಲಿ ಧಾರೆ ಎರೆದಿದ್ದರು. ಬೆಳ್ಳಿತೆರೆಯ ಮೇಲೆ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ನಿಜ ಜೀವನದಲ್ಲಿ ಪಾಟೇಕರ್ ಅಪ್ಪಟ ಮಣ್ಣಿನ ಮಗ. ಮುಂಬೈನ ಐಷಾರಾಮಿ ಬಂಗಲೆಗಳಲ್ಲಿ, ಸಿನಿಮಾರಂಗದ ಬಣ್ಣದ ಜಗತ್ತಿನ ಪಾರ್ಟಿ-ನಶೆಗಳಲ್ಲಿ ಕಳೆದುಹೋಗುವ, ಎಂಜಾಯ್ ಮಾಡುವ ಅವಕಾಶವಿದ್ದರೂ, ಅವರು ಪುಣೆಯ ಹಳ್ಳಿಯೊಂದರಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಕೃಷಿ ಮಾಡುತ್ತಾ ಬದುಕಿದರು. ಪಾಟೇಕರ್ ನೆಲಮೂಲದ ಕಲಾವಿದರು!
ರೈತರು ಸಾಲಬಾಧೆಯಿಂದ ನೇಣಿಗೆ ಕೊರಳೊಡ್ಡುತ್ತಿರುವಾಗ, ಕೃಷಿಕರು ಹಲವಾರು ಸಂಕಟಗಳಿಗೆ ತುತ್ತಾದರೂ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿದ್ದಾಗ, ನಾನಾ ಕೇವಲ ಸಹಾನುಭೂತಿ ತೋರಿ, ಪತ್ರಿಕಾ ಹೇಳಿಕೆ ನೀಡಿ ಸುಮ್ಮನಾಗದೆ 'ನಾಮ್ ಫೌಂಡೇಶನ್' ಕಟ್ಟಿ ರೈತರ ಕಣ್ಣೀರು ಒರೆಸಲು ಟೊಂಕ ಕಟ್ಟಿ ನಿಂತರಲ್ಲ! ಅದರ ಭಾಗವಾಗಿ, ಮಹಾರಾಷ್ಟ್ರದ ಬರಪೀಡಿತ ಹಳ್ಳಿಗಳಿಗೆ ನೀರು ತಂದರು. ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ಮತ್ತು ಮಾನಸಿಕ ಬಲ ತುಂಬುವ ಕೆಲಸ ಮಾಡಿದರು. ತನ್ನ ಗಳಿಕೆಯ ಬಹುಪಾಲು ಹಣವನ್ನು ಮತ್ತು ವಿವಿಧ ಪ್ರಶಸ್ತಿಗಳ ಜೊತೆ ಬಂದ ನಗದು ಮೊತ್ತವನ್ನು ರೈತರು ಮತ್ತು ಸಮಾಜದ ಒಳಿತಿಗಾಗಿಯೇ ಸುರಿದರು.
'ಬದುಕು ಬಹಳ ಚಿಕ್ಕದು, ಅದನ್ನು ಆಡಂಬರದಿಂದ ಯಾಕೆ ಕಳೆಯಬೇಕು?' ಎನ್ನುತ್ತಿದ್ದ ನಾನಾ, ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ರೈತರ ಜೊತೆಗೇ, ಪರಿಸರದ ಮಧ್ಯೆಯೇ, ನೆಲದ ಮೂಸೆಯೊಳಗೆ ಕಾಲ ಕಳೆಯುತ್ತಿದ್ದರು. ಅವರ ಬಟ್ಟೆಗಳು ಮತ್ತು ಬದುಕುವ ಪರಿ ಅತಿ ಸಾಮಾನ್ಯವಾಗಿದ್ದವು.
ನಾನಾ ಪಾಟೇಕರ್ ಯಾವತ್ತೂ ಪ್ರಶಸ್ತಿಗಳಿಗಾಗಿ ಲಾಬಿ ಮಾಡಿದವರಲ್ಲ, ನಟನೆಯ ಅವಕಾಶಗಳಿಗಾಗಿ ಯಾರ ಮುಂದೆಯೂ ಕೈಕಟ್ಟಿ ನಿಂತವರಲ್ಲ. 'ನನಗೆ ಹೊಟ್ಟೆ ತುಂಬುವಷ್ಟು ಅನ್ನ, ಮಲಗಲು ಸ್ವಲ್ಪ ಜಾಗ, ಮತ್ತು ಒಂದೆರಡು ಜೊತೆ ಬಟ್ಟೆ ಇದ್ದರೆ ಸಾಕು. ಉಳಿದದ್ದೆಲ್ಲಾ ಹೆಚ್ಚುವರಿ ತಲೆನೋವು' ಎನ್ನುವ ಅವರ ಮಾತುಗಳು ಅವರ ಬದುಕಿನ ತತ್ವವನ್ನು ಸಾರುತ್ತಿದ್ದವು. 'ಅಚ್ಛಾ ಹೈ... ಏಕ್ ದಿನ್ ಸಬ್ ಕೋ ಜಾನಾ ಹೇ' - ಅವರು ಯಾವಾಗಲೂ ಹೇಳುತ್ತಿದ್ದುದು ಇಷ್ಟೇ. ಆ ದಿನ ಬಂದಿದೆ! ನಿರ್ದೇಶಕರು ಆಕ್ಷನ್ ಹೇಳುವುದನ್ನು ನಿಲ್ಲಿಸಿದ್ದಾರೆ. ಕ್ಯಾಮರಾ ಆಫ್ ಆಗಿದೆ. ನಟಸಾಮ್ರಾಟನ ಈ ಬದುಕಿನ ನಾಟಕ ಮುಕ್ತಾಯವಾಗಿದೆ.
ಆದರೆ ನಾನಾ ಪಾಟೇಕರ್ ಹೆಸರಿನ, ನಾನಾ ಪಾತ್ರಗಳಿಗೆ ದಶಕಗಳ ಕಾಲ ಜೀವ ತುಂಬಿದ ಆ ಗಡುಸು ದನಿ, ಆ ಸಿಡಿಮಿಡಿಯ ಮುಖ, ಹಳ್ಳಿಯ ಮಣ್ಣಲ್ಲಿ ಬೆರತ ಆ ಜೀವ ಸದಾಕಾಲ ಜೀವಂತ. 'ಮನುಷ್ಯ ಹುಟ್ಟಿದಾಗ ತಾನು ಅಳುತ್ತಾನೆ, ಸತ್ತಾಗ ಇತರರನ್ನು ಅಳಿಸುತ್ತಾನೆ. ಹುಟ್ಟು ಮತ್ತು ಸಾವಿನ ಈ ಎರಡೂ ಅಳುವಿನ ನಡುವೆ ಸಿಗುವ ಪುಟ್ಟ ಅವಕಾಶವೇ 'ಬದುಕು'. ಹಾಗಿದ್ದ ಮೇಲೆ ಬದುಕಿರುವಷ್ಟು ದಿನ ನಾವೇಕೆ ನಗುತ್ತಾ, ಇತರರನ್ನು ನಗಿಸುತ್ತಾ ಬದುಕಬಾರದು?' ನಿಮ್ಮದೇ ಮಾತುಗಳ ಮೂಲಕ ನಾವು ನಮ್ಮನ್ನು ಸಾಂತ್ವನಗೊಳಿಸುವೆವು! ವಿದಾಯ ನಾನಾ ಪಾಟೇಕರ್ ಜೀ... ನಿಮ್ಮ ಆ 'ಮೌನ' ಇನ್ಮುಂದೆ ಶಾಶ್ವತ. ಮತ್ತೊಮ್ಮೆ ಯಾವಾಗಲಾದರೂ ಇದೇ ಮಣ್ಣಿನಲ್ಲಿ ಹುಟ್ಟಿ ಬನ್ನಿ. ಇನ್ನಷ್ಟು-ಮತ್ತಷ್ಟು ಪಾತ್ರಗಳಿಗೆ ಜೀವ-ಭಾವ ತುಂಬುವ ಸರದಿ ನಿಮ್ಮದಾಗಲಿ, ಅದನ್ನೆಲ್ಲಾ ಪ್ರೀತ್ಯಾದರಗಳಿಂದ ಕಣ್ತುಂಬಿಕೊಂಡು ಆನಂದ ಪಡುವ ಸರದಿ ನಮ್ಮದಾಗಲಿ. ಓಂ ಶಾಂತಿ. ಹೋಗಿ ಬನ್ನಿ.
