Karada Vishwa

Article · June 19, 2026

"ಬಾಡಿ ಶೇಮಿಂಗ್" ಎನ್ನುವ ಕುಹಕ ನುಡಿ

✍🏻ದಿವ್ಯಾ ಬಿ ಶಿರಂತಡ್ಕ

         ಈ ಪ್ರಪಂಚದಲ್ಲಿ ಒಬ್ಬರ ಹಾಗೆ ಇನ್ನೊಬ್ಬರಿಲ್ಲ. ಇರಲೂ ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ರೂಪ, ಬಣ್ಣ, ಎತ್ತರ, ಆಕಾರ ಹೀಗೆ ವಿಭಿನ್ನ ದೇಹ ರಚನೆ ಇರುತ್ತದೆ. ಒಬ್ಬ ವ್ಯಕ್ತಿಯ ದೇಹದ ಬಗ್ಗೆ ಬೇರೊಬ್ಬ ವ್ಯಕ್ತಿ  ನಕಾರಾತ್ಮಕವಾಗಿ ಟೀಕೆ ಮಾಡಿದಲ್ಲಿ ಅದನ್ನು ಬಾಡಿ ಶೇಮಿಂಗ್ ಎಂದು ಕರೆಯಲಾಗುತ್ತದೆ.

     ಸುಂದರವಾಗಿ ಕಾಣಬೇಕೆಂಬ ಬಯಕೆ ಸಹಜ. ಆದರೆ  ಎಲ್ಲರೂ ಸಿನಿಮಾ ನಟ ನಟಿಯರಂತೆ ಕಾಣಿಸಿಕೊಳ್ಳುವುದು ಸಾಧ್ಯವಿಲ್ಲ. ನಮ್ಮ ಸೌಂದರ್ಯವನ್ನು ಯಾರಾದರೂ ಹೊಗಳಿದರೆ ಆಗುವ ಸಂತಸಕ್ಕಿಂತ ನೂರು ಪಟ್ಟು ದುಃಖ ನಮ್ಮ ದೇಹದ ಬಗ್ಗೆ ಅವಮಾನಿಸಿದರೆ ಉಂಟಾಗುತ್ತದೆ. ಯಾಕೆ ಹೀಗೆ?

    'ಬಾಡಿ ಶೇಮಿಂಗ್' ಇದು ಇಂದು ನಿನ್ನೆಯದಂತೂ ಅಲ್ಲ. ಅನಾದಿ ಕಾಲದಿಂದಲೇ ಜನ ಈ ಬಗ್ಗೆ ಋಣಾತ್ಮಕ ಮಾತುಗಳಿಂದ ನೊಂದು ಹೋಗಿದ್ದಾರೆ, ಹೋಗುತ್ತಿದ್ದಾರೆ. ಇಂತಹ ಕುಹಕ ನುಡಿಗಳಿಂದ ತಮ್ಮ ಶರೀರದ ಮೇಲೆ ಪ್ರೀತಿ ಕಡಿಮೆಯಾಗಿ ಆತ್ಮವಿಶ್ವಾಸವೂ ಕುಗ್ಗಿ ಮಾನಸಿಕ ಖಿನ್ನತೆಗೆ ಸಿಲುಕಿ ನಲುಗುವವರ ಸಂಖ್ಯೆಯೂ ಸಾಕಷ್ಟಿದೆ.  

        ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮದುವೆಯಾಗಿ ಮಕ್ಕಳಾದ ಮೇಲೆ ಒಂದಷ್ಟು ಸ್ಥೂಲಕಾಯರಾಗುವುದು ಸಾಮಾನ್ಯ. ಅದುವೇ ದೊಡ್ಡ ಅಪರಾಧ ಎನ್ನುವಂತೆ ಬಿಂಬಿಸುವ ಬಾಯಿಗಳೆಷ್ಟೋ. 'ಏನು ದಪ್ಪ ಆಗಿದ್ದಿ ಕಣೆ, ಯಾವ ಹಿಂಡಿ ತಿನ್ನೋದು? ಏನಿದು ಮುಖ ಊದಿದೆ? (ಗುಂಡು ಗುಂಡಾಗಿ ಕಾಣಿಸಿಕೊಂಡಲ್ಲಿ) ಜೇನುನೊಣ ಕಚ್ಚಿಸಿಕೊಂಡ್ಯಾ? ಡುಮ್ಮಿ ಆಗಿದ್ದಿ, ಏನ್ ಕಥೆ?'.... ಹೀಗೆ ನಾನಾ ರೀತಿಯಲ್ಲಿ ಹಾಸ್ಯ ಮಾಡಿ ವಿಕೃತ ಸಂತೋಷ ಅನುಭವಿಸುತ್ತಾರೆ. ಕಣ್ಣಿಗೆ ಕಂಡ ಪ್ರತಿಯೊಬ್ಬನ ಬಗ್ಗೆಯೂ ಇಲ್ಲಸಲ್ಲದ ಟೀಕೆ ಮಾಡುವುದು ಕೆಲವರ ನೆಚ್ಚಿನ ಹವ್ಯಾಸ. ಬಿಳಿ ಇದ್ದರೆ ಬಿಳಿ ಜಿರಳೆ, ಕಪ್ಪಗಿದ್ದರೆ ಗ್ಯಾರಂಟಿ ಬಣ್ಣ, ಉದ್ದ ಇದ್ದರೆ ದೋಂಟಿ,  ಗಿಡ್ಡ ಇದ್ದರೆ ಕುಳ್ಳ, ಬೋಳು ತಲೆಯವನಿಗೆ ಮೊಟ್ಟೆ, ಉದ್ದ ಕುತ್ತಿಗೆ ಹೊಂದಿದವರಿಗೆ ಜಿರಾಫೆ... ಹೀಗೆ ಸಾಗುತ್ತದೆ. ಇನ್ನು ಅಂಗ ನ್ಯೂನತೆ ಇದ್ದರಂತೂ ಕೇಳುವುದೇ ಬೇಡ.  ಆ ನ್ಯೂನತೆಯೇ ಅವರ ಗುರುತಾಗಿ, ಹೆಸರಾಗಿ ಸೇರಿಸಲ್ಪಡುತ್ತದೆ. ಮೋಂಟ, ಕೆಪ್ಪ, ಪೊಟ್ಟ  ಸೋಡಾ ಗ್ಲಾಸ್, ಹೀಗೆ ನೂರಾರು ಕಾಮೆಂಟ್ ಗಳು ಜನರ ಬಾಯಲ್ಲಿ ಹರಿದಾಡುತ್ತಿರುತ್ತದೆ. ಇದೆಲ್ಲ ಕೇಳಿದಾಗ ನನಗೆ ಪುರಾಣದ ಅಷ್ಟಾವಕ್ರನ ಕಥೆ ನೆನಪಿಗೆ ಬರುತ್ತದೆ.

        ಅಷ್ಟಾವಕ್ರ ತಾಯಿಯ ಗರ್ಭದೊಳಗೆ ಇದ್ದಾಗಲೇ ತಂದೆಯಿಂದ ಶಪಿಸಲ್ಪಟ್ಟ ದುರ್ದೈವಿ. ತಂದೆ ಕಹೋಳನಿಗೆ ಕಿಂಚಿತ್ ವಾಗ್ದೋಷವಿತ್ತು. ಒಂದು ದಿನ  ಆತ ವೇದಾಧ್ಯಯನ ಮಾಡುತ್ತಿದ್ದ. ವೇದಘೋಷ ಮುಗಿಲು ಮುಟ್ಟುತ್ತಿತ್ತು. ಗರ್ಭದೊಳಗಿನ ಶಿಶು ಇದನ್ನು ಕೇಳಿ ತಪ್ಪಿನ ಬಗ್ಗೆ ಎಚ್ಚರಿಸಿತು. ಎಲ್ಲರ ಎದುರು ಅವಮಾನಿತರಾದ ತಂದೆ ಹಿಂದೆ ಮುಂದೆ ನೋಡದೆ ಮಗುವನ್ನು ಶಪಿಸಿಯೇ ಬಿಟ್ಟ. ಅದೂ ಅಷ್ಟ ವಿಧದ ವಕ್ರತೆಯಿಂದ ಕೂಡಿ ಜನಿಸಲಿ ಎಂದು! ಶಾಪ ಸುಳ್ಳಾಗಲಿಲ್ಲ. ಹುಟ್ಟುವಾಗಲೇ ಮಗು ಅಷ್ಟ ವಕ್ರತೆಯಿಂದ ಜನ್ಮ ತಾಳಿತು. ಶಿಶುವಿಗೆ 'ಅಷ್ಟಾವಕ್ರ' ಎಂದೇ ಹೆಸರಿಡಲಾಯಿತು. ಇದು ಯಾರೋ ಅಪಹಾಸ್ಯ ಮಾಡಲು ಕರೆದ ಹೆಸರಂತೂ ಅಲ್ಲ. ವಾಸ್ತವಿಕತೆಯನ್ನು ಒಪ್ಪಿಕೊಂಡು ಇಟ್ಟ ಹೆಸರು. ಅಷ್ಟು ನ್ಯೂನತೆ ಇದ್ದರೂ ಅತ್ಯಂತ ಮೇಧಾವಿಯಾಗಿದ್ದ ಅವನು ಮುಂದೆ ತನ್ನ ಮೇಧಾವಿತನದಿಂದಲೇ ತಂದೆಯನ್ನು ಕಾಪಾಡುತ್ತಾನೆ. ಮಹಾ ತಪಸ್ವಿಯಾಗಿ, ಬ್ರಹ್ಮರ್ಷಿಯಾಗಿ ಕೀರ್ತಿಗೆ ಪಾತ್ರನಾಗುತ್ತಾನೆ. ಜನರಾಡುವ ಮಾತುಗಳನ್ನು ನಿರ್ಲಕ್ಷ್ಯಿಸಿಯೇ ತನ್ನ ಗಮ್ಯದತ್ತ ಸಾಗಿರಬೇಕು ಎಂದೆನಿಸುತ್ತದೆ. ಹಾಗೆ ನೋಡಿದರೆ ಪಾರ್ವತಿ ಸುತ ಗಣೇಶನಿಗೆ ಆನೆಯ ಮೊಗವನ್ನಿರಿಸಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದರೂ ಅವನು ಮೊದಲ ಪೂಜಿತನಾಗಿದ್ದು, ವಕ್ರತೆ ಅವನಿಗೆ ಶಾಪವಾಗಿ ಕಾಡದ್ದು  ವಿಶೇಷವೇ ಸರಿ.

     ಆಧುನಿಕ ಕಾಲಕ್ಕೆ ಬಂದರೆ ದೈಹಿಕ ಸೌಂದರ್ಯಕ್ಕೆ ಜನ ಎಷ್ಟು ಮಾರುಹೋಗಿರುತ್ತಾರೆ ಎಂದರೆ ಊಹಿಸುವುದು ಕಷ್ಟವಾಗುತ್ತದೆ. ಎವರ್ ಗ್ರೀನ್ ಬ್ಯೂಟಿ ಎಂದು ಕರೆಸಿಕೊಂಡಿದ್ದ ನಟಿ ಶ್ರೀದೇವಿ ಕೂಡ 29 ಬಾರಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡವರು. ಈ ಸಾಲಿಗೆ ಸೇರಿದವರದೆಷ್ಟೋ ಮಂದಿ. 

       ಸುಂದರ ಕಾಯದವನಾಗಿದ್ದ ಮಹಾರಾಜ ನಳನು ಕಾರ್ಕೋಟಕ ಕಚ್ಚಿ ನೀಲಿ ಬಣ್ಣಕ್ಕೆ ಬದಲಾಗುತ್ತಾನೆ.  ಆ ವಿಷದಿಂದ ವಿಕಾರ ರೂಪ ಉಂಟಾಗುತ್ತದೆ. ವರ್ಣಿಸುವಾಗ ಸಭ್ಯತೆಯ ಎಲ್ಲೆ ಮೀರದ ಹಾಗೆ 'ಅಡ್ಡ ಮೋರೆಯ  ಗಂಟು ಮೂಗಿನ ಜಡ್ಡು ದೇಹದ ಗುಜ್ಜಗೊರಳಿನ ದೊಡ್ಡ ಕೈಕಾಲುಗಳ ಉದುರಿದ ರೋಮ ಮೀಸೆಗಳ' ಎನ್ನುವ ಸಾಲುಗಳ ವರ್ಣನೆ ಇಂದಿಗೂ ನೆನಪಿಗೆ ಬರುತ್ತದೆ.  ಈ ಎಲ್ಲಾ ವಕ್ರತೆಗಳು, ಹಿಂದೆ ಸುಂದರನಾಗಿದ್ದ ನಳನ ಮೇಲೆ  ಹೇಗೆ ಪರಿಣಾಮ ಬೀರಿರಬಹುದು? ಜನ ಅವನನ್ನು ಹೇಗೆ ಆಡಿಕೊಂಡಿರಬಹುದು ಎಂದೆಲ್ಲಾ ಕಲ್ಪನೆ ಹುಟ್ಟುತ್ತದೆ. 

   ಸೌಂದರ್ಯ ಅನ್ನೋದು ಕೇವಲ ಬಾಹ್ಯ ಶರೀರಕ್ಕೆ ಸೀಮಿತಗೊಳಿಸಿದಲ್ಲಿ ಅದರಿಂದ ನೈಜ ವ್ಯಕ್ತಿಸೌಂದರ್ಯ ಪ್ರಕಟವಾಗುವುದಿಲ್ಲ. ಎ.ಪಿ.ಜೆ ಅಬ್ದುಲ್ ಕಲಾಂ, ಸ್ಟೀಫನ್ ಹಾಕಿಂಗ್, ವೈಕಮ್ ವಿಜಯಲಕ್ಷ್ಮಿ, ನೆಲ್ಸನ್ ಮಂಡೇಲಾ ಹೀಗೆ ಹೆಸರಿಸಿ ಮುಗಿಯದಷ್ಟು ಸಾಧಕ ವ್ಯಕ್ತಿಗಳು ನೋಡಲು ಅತ್ಯಾಕರ್ಷಕವಾಗಿಲ್ಲ ಎಂದರೆ ನಂಬಲೇಬೇಕು.  

   ಕೆಲವು ವರ್ಷಗಳ ಹಿಂದೆ ರಾಜ್. ಬಿ. ಶೆಟ್ಟಿ ಯವರು ಅಭಿನಯಿಸಿದ 'ಒಂದು ಮೊಟ್ಟೆ ಕಥೆ' ಎನ್ನುವ ಸಿನಿಮಾ ನೋಡಿದ್ದೆ. ಅವರ ಅಮೋಘ ನಟನೆ, ಚಿತ್ರಕಥೆ ಎಲ್ಲವೂ ಬಹಳ ಸೊಗಸಾಗಿತ್ತು ಹಾಗೂ ನೈಜತೆಯಿಂದ ಕೂಡಿತ್ತು. ಬೋಳು ತಲೆಯ ಉಪನ್ಯಾಸಕ ತಾನು ಅನುಭವಿಸುವ ಕಷ್ಟ, ಅವಮಾನ, ತಿರಸ್ಕಾರ ಎಲ್ಲವನ್ನೂ ಸಹಿಸಿ ಮುಂದಕ್ಕೆ ಸಾಗುವುದೇ ಸಿನಿಮಾದ ಕಥಾವಸ್ತು. ಸ್ವತಃ ವಿದ್ಯಾರ್ಥಿಗಳು 'ಮೊಟ್ಟೆ' ಎಂದು ಹಿಂದಿನಿಂದ ಅಪಹಾಸ್ಯ ಮಾಡಿದಾಗ ಅಸಹಾಯಕತೆಯಿಂದ ತಲೆ ಮೇಲೆ ಕೈ ಇಟ್ಟರೆ ಮತ್ತದೇ ಬೋಳು ತಲೆಯ ನೆನಪಾಗಿ ನಿರುತ್ಸಾಹ. 'ಬಾಡಿ ಶೇಮಿಂಗ್' ಒಬ್ಬ ವ್ಯಕ್ತಿಯ ಮೇಲೆ  ಅದೆಷ್ಟು ಪರಿಣಾಮ ಬೀರುತ್ತದೆ ಎನ್ನುವುದನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ ಸಿನಿಮಾ ಅದು.

        ಮೇಲಿನದು ಸಿನಿಮಾ ಕತೆಯಾದರೆ ಒಂದು ನೈಜ ಘಟನೆ ಕೇಳಿ. ಎಮ್.ಬಿ. ಬಿ. ಎಸ್ ವ್ಯಾಸಂಗ ಮಾಡುತ್ತಿದ್ದ ಪ್ರತಿಭಾವಂತ ಯುವಕನೋರ್ವನಿಗೆ ಯಾಕೋ ಇತರ ಯುವಕರಂತೆ ಗಡ್ಡ ಮೀಸೆ ಬೆಳೆದಿರಲಿಲ್ಲವಂತೆ.  ಅದನ್ನೇ ಸಹಪಾಠಿಗಳು ಸದಾ ಗೇಲಿ ಮಾಡುತ್ತಿದ್ದರು. ಇದರಿಂದ ಮನನೊಂದ ಆತ ತೆಗೆದುಕೊಂಡ ನಿರ್ಧಾರ ಆತ್ಮಹತ್ಯೆಯಂತಹ ಸ್ವಯಂಶಿಕ್ಷೆ. ಗೇಲಿ ಮಾಡಿ ತಮಾಷೆ ನೋಡುವುದು ಇತರರ ಪ್ರಾಣಕ್ಕೆ ಸಂಚಕಾರ ತರಬಹುದು.

     ವಿದೇಶದಲ್ಲಿ ಹುಟ್ಟಿ ಬೆಳೆದ ಭಾರತೀಯ ಮೂಲದ ದಂಪತಿಗಳ ಸುಪುತ್ರಿಗೆ ಭಾರತಕ್ಕೆ ಬಂದಾಗ  ಇರಿಸು ಮುರಿಸು ಉಂಟಾಗುತ್ತದೆ ಎನ್ನುತ್ತಾಳಂತೆ. ಕಾರಣ ಇದುವೇ. 'ಸ್ವಲ್ಪ ಸಪೂರ ಆಗಿದ್ದೀಯಾ... ಈ ಬಾರಿ ದಪ್ಪವಾಗಿದ್ದಿ.. ಸ್ವಲ್ಪ ಕಪ್ಪಾಗಿದ್ದಿ'..
ಮುಂತಾಗಿಯೇ ಮಾತು ಪ್ರಾರಂಭಿಸುವ ಬಂಧುಗಳ ನಡವಳಿಕೆಯಿಂದ  ಆಕೆಗೆ ಬೇಸರವಂತೆ. ಅವಳಿರುವ  ದೇಶದಲ್ಲಿ ಈ ಬಗೆಗೆ ಯಾರೂ  ಮಾತನಾಡದಿರುವಾಗ ಇಲ್ಲಿ ಇದು ಬಿಟ್ಟು ಬೇರೆ ಮಾತೇ ಇಲ್ಲವೇ ಎಂದು ಪ್ರಶ್ನಿಸುತ್ತಾಳೆ .  ' ಏನು ಕಲಿಯುತ್ತಾ ಇದ್ದಿ? ಏನು ಕೆಲಸ ಮಾಡುತ್ತಿದ್ದಿ? ಪಿ.ಎಚ್. ಡಿ ಯ ವಿಷಯ ಯಾವುದು? ಯಾವ ವಿಶ್ವವಿದ್ಯಾನಿಲಯ?ಯಾರು ಗೈಡ್? ಆ ವಿಷಯದಲ್ಲಿ ಏನೇನು ಬರುತ್ತೆ ?ಮುಂತಾದ ಆಸಕ್ತಿ ಇರಬೇಕಾದ ಯಾವೊಂದರ ಬಗ್ಗೆಯೂ ತುಟಿ ಪಿಟಕ್ ಎನ್ನದ ಮಂದಿಯಿಂದ ದೇಹದ ಬಗ್ಗೆ ನೂರಾರು ಕಮೆಂಟ್ ಗಳು!!

     ನಮ್ಮೂರಲ್ಲಿ ಒಬ್ಬ ಕಿವುಡ/ಮೂಕ ವ್ಯಕ್ತಿ ಇದ್ದಾನೆ .( ಹೆಸರೇನೆಂದು ಇಷ್ಟು ವರ್ಷ ತಿಳಿಯಲಾಗಿಲ್ಲ) ಮಾತನಾಡಲಾಗದೆ ಬೆ..ಬೆ..ಬೆ ಎನ್ನುತ್ತಾ ದಿನಗಳೆಯುವ  ಅವನ ಹೆಸರೇ ಬೆಬೆಬ್ಬೆ ಆಗಬೇಕೇ? ಈ ಬಗ್ಗೆ ಮಂದಿ ಯಾಕೆ ಇನ್ನೂ‌ ಚಿಂತೆ ಮಾಡಿಲ್ಲ?
  
ಮಲಯಾಳ ಭಾಷೆಯಲ್ಲಿನ ಗಾದೆ 'ನೆರೆಮನೆಯವನ ಮಗಳು ಹುಚ್ಚಿಯಾಗಿ ಕುಣಿದಾಡಿದರೆ ನೋಡುಗರಿಗೆ ಅದೇ ಹಬ್ಬ' ಎನ್ನುವ ಹಾಗೆ ಪರರನ್ನು ಹೀಯಾಳಿಸುವುದು ಸುಲಭ. ಆದರೆ ಅದೇ ಮೂದಲಿಕೆ ತಮ್ಮ ಕಡೆ ಬಂದಾಗ ಮಾತ್ರ ಮನಸ್ಸು ವ್ಯಸ್ತಗೊಳ್ಳುತ್ತದೆ. ಬೇಸರ ಉಂಟಾಗುತ್ತದೆ. ಗಾಜಿನ ಕೋಣೆಯೊಳಗಿದ್ದವರು ಪರರತ್ತ  ಕಲ್ಲು ಎಸೆಯಬಾರದು ಎನ್ನುವುದು ಅನುಭವಿಗಳ ನುಡಿ. ಇನ್ನೊಬ್ಬರ ದೇಹದ ಬಗ್ಗೆ ನಾವಾಡುವ ಬಾಲಿಷ ಮಾತುಗಳು ನಮ್ಮತ್ತಲೂ ಬರಬಹುದು ಎಂಬ ಕಲ್ಪನೆ ನಮಗಿರಬೇಕು,ಮಾತ್ರವಲ್ಲ ದೇಹ ರಚನೆ ಅದು ದೈವೀ ರಚನೆ ಎಂದುಕೊಂಡು ಆ ಬಗ್ಗೆ ಸಾಧ್ಯವಾದರೆ ಒಂದೆರಡು ಒಳ್ಳೆಯ ಮಾತುಗಳಾಡೋಣ. ಸಾಧ್ಯವಾಗದಿದ್ದಲ್ಲಿ ನಕಾರಾತ್ಮಕ ಟೀಕೆಗಳನ್ನು ಮಾಡದೆ ಎಲ್ಲರನ್ನು ಇದ್ದ ಹಾಗೆ ಒಪ್ಪಿಕೊಳ್ಳೋಣ ಪ್ರೀತಿಸೋಣ.. ಆಗದೇ?



Creative Writings