Karada Vishwa

Article · November 7, 2026

ಅಂದುಕೊಂಡಂಗೆಲ್ಲಾ ಜೀವನ ಸಾಗದೂ ಗೆಳೆಯಾ!

ರವೀ ಸಜಂಗದ್ದೆ

ಬದುಕು ನಾವಂದುಕೊಂಡಂತೆ, ನಮ್ಮ ನಿರೀಕ್ಷೆಯಂತೆ ಸಾಗುವುದೇ ಇಲ್ಲವಲ್ಲ! ಬದುಕಿನ ಪಯಣದ ಹಾದಿಯಲ್ಲಿ ನಿರೀಕ್ಷೆಗಳಿಗಿಂತ ಅನಿರೀಕ್ಷಿತ ಏರಿಳಿತ, ಅಯಾಚಿತ ತಿರುವುಗಳೇ ಹೆಚ್ಚು. 'ಆಕಾಶವೇ ಹತ್ತಿರವಿದೆ' ಎಂಬಂತೆ ನಾವು ಸಂತಸ-ಸಂಭ್ರಮದಲ್ಲಿ ತೇಲಾಡುತ್ತಿರುವಾಗ, ಅಚಾನಕ್ಕಾಗಿ ಕುಟುಂಬದೊಳಗೆ ಎದುರಾಗುವ ಅನಾರೋಗ್ಯ ಅಥವಾ ಆರೋಗ್ಯವಾಗಿ ಇದ್ದ ಹತ್ತಿರದವರ ಹಠಾತ್ ಸಾವು ಇಡೀ ಬದುಕಿನ ಬಣ್ಣವನ್ನೇ ಬದಲಿಸಿಬಿಡುತ್ತದೆ. 'ಬದುಕಿನ ತಿರುವಲಿ ದೇವರು ಎದುರಾದಾನು' ಎಂದುಕೊಂಡು ಸಾಗುತ್ತಿರುವಾಗ ದೆವ್ವ ಮುಗುಳ್ನಗು ಬೀರುತ್ತಾ ಎದುರಾದ ಪರಿಸ್ಥಿತಿ!

ಮನೆಯಲ್ಲಿ ಶುಭ ಸಮಾರಂಭದ ಸಡಗರ, ಮದುವೆಯ ತಯಾರಿ, ಆಮಂತ್ರಣ ಪತ್ರಿಕೆ ಹಂಚುವ ಸಡಗರ. ಎಲ್ಲವೂ ಅಂದುಕೊಂಡಂತೆಯೇ ನಡೆಯುತ್ತಿದೆ ಎನ್ನುವಾಗಲೇ, ಖುಷಿ-ಸಂಭ್ರಮದ ವಾತಾವರಣವಿರುವ ಮನೆಯಲ್ಲಿ ದಿಢೀರ್ ಎಂದು ಶೋಕ ಮಡುಗಟ್ಟುತ್ತದೆ! ಶುಭ ಕಾರ್ಯದ ಸಿದ್ಧತೆಯಲ್ಲಿರಬೇಕಾದ ಕೈಗಳು, ಅನಿವಾರ್ಯವಾಗಿ ಮನೆಯ ಆತ್ಮೀಯರ ಅಂತ್ಯಸಂಸ್ಕಾರ ಮಾಡುವ ದೌರ್ಭಾಗ್ಯ ಎದುರಾದಾಗ ಎದೆ ಒಡೆದು ಹೋಗುತ್ತದೆ. ಆ ಕ್ಷಣದಲ್ಲಿ ಬದುಕಿನ ಕ್ಷಣಿಕತೆ, ವಿಷಣ್ಣತೆ ಕಣ್ಣೆದುರು ಬಂದು ನಿಲ್ಲುತ್ತದೆ.

ಇಂತಹ ಭೀಕರ ಮತ್ತು ಕಹಿ ಸತ್ಯಗಳು ನಮ್ಮೆಲ್ಲರನ್ನೂ ದಿಢೀರ್ ಕುಗ್ಗಿಸುತ್ತವೆ. ಆದರೆ 'ಬಂದುದನ್ನು ಬಂದಂತೆ ಸ್ವೀಕರಿಸಬೇಕು' ಎನ್ನುವ ಸ್ಥಿತಪ್ರಜ್ಞೆ-ಮನೋಭಾವವನ್ನು ಬೆಳೆಸಿಕೊಳ್ಳಲು ದೇವರು ಆಗಾಗ್ಗೆ ಇಂತಹ ನೋವಿನ, ಅನಿವಾರ್ಯ ಬೀಳ್ಕೊಡುಗೆಯ ಪಾಠಗಳ ಮೂಲಕ ನಮಗೆ ಎಚ್ಚರಿಕೆ ನೀಡುತ್ತಾನೆ. 'ನಾವೆಲ್ಲರೂ ಈ ಭೂಮಿಯ ಮೇಲಿನ ತಾತ್ಕಾಲಿಕ ಅತಿಥಿಗಳು' ಎಂಬ‌ ಕಠೋರ ಸತ್ಯವನ್ನು ಆತ ನಮಗೆ ಅನ್ಯಾನ್ಯ ರೀತಿಯಲ್ಲಿ ಆಗಾಗ ಮನನ ಮಾಡಿಕೊಡುತ್ತಿರುತ್ತಾನೆ.

ಹಾಗಾದರೆ ಬದುಕನ್ನು ಹೇಗೆ ಬದುಕಬೇಕು ಸ್ವಾಮೀ? ನಾಳಿನ ಕ್ಷಣ-ದಿನ ಹೇಗಿರಲಿದೆ? ಎಂದು ಯಾರಿಗೂ ತಿಳಿಯದ ಈ ಬದುಕಿನಲ್ಲಿ, ಬಂದೊದಗಿದ ಪ್ರತಿ ಕ್ಷಣವನ್ನೂ ಪ್ರೀತಿಯಿಂದ, ದ್ವೇಷ-ಮುನಿಸು-ಮತ್ಸರಗಳನ್ನು ಬಿಟ್ಟು ಬದುಕಬೇಕಿದೆ. ಬಂದ ಕಷ್ಟ-ನೋವುಗಳನ್ನು ಮನೆಯವರೆಲ್ಲರೂ ಜೊತೆಯಾಗಿ ನಿಂತು, ಧೈರ್ಯದಿಂದ ಎದುರಿಸುತ್ತಾ, ಸದಾಕಾಲ ನೆನಪಿನಲ್ಲಿ ಉಳಿಯುವಂತಹ ಮಧುರ ಬಾಂಧವ್ಯವನ್ನು ಪ್ರತಿಯೊಬ್ಬರೊಡನೆ ಬೆಸೆದುಕೊಳ್ಳುವುದೇ ನಿಜವಾದ ಜೀವನ. ಹುಟ್ಟು ಸಾವು ಎರಡರ ನಡುವಿನ ಕೇವಲ ಮೂರು ದಿನದ ಬಾಳಿದು!

ಜನನ-ಮರಣಗಳ ನಡುವಿನ ಈ ಪಯಣದ ನಶ್ವರತೆಯ, ಅನಿಶ್ಚಿತತೆಯ ವಿಚಾರ ನಮಗೆ ಗೊತ್ತಾದರೆ, ಅರ್ಥವಾದರೆ ಬದುಕು ಸರಳ,‌ ಸುಂದರ,‌ ಸುಲಲಿತ. ಜೀವನದ ಪಾರಮಾರ್ಥಿಕ ಸತ್ಯವನ್ನು ತಿಳಿದು, ಪ್ರತಿಯೊಬ್ಬರ ಜೊತೆಗೂ ಪ್ರೀತಿಯಿಂದ ಬಾಳುವುದು ಮತ್ತು ಬಂದ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವುದೇ ಸಾರ್ಥಕ ಬದುಕು. ನೆನಪಿರಲಿ- 'ಹೂಗಳಂತೆ ನಾನು ನಿಮಗಾಗಿ ಬಾಳಲೇನು; ಮೇಣದಂತೆ ಹಣತೆ ನಗುತಾ ಬೆಳಗಲೇನು... ಅಂದುಕೊಂಡಂಗೆಲ್ಲಾ ಜೀವನ ಸಾಗದೂ ಗೆಳೆಯಾ!'

'ಏನು ವಿಸ್ಮಯ ಸೃಷ್ಟಿ! – ಮಂಕುತಿಮ್ಮ |' ಎನ್ನುವ ಕಗ್ಗದ ಅರ್ಥಗರ್ಭಿತ ಸಾಲಿನಂತೆ ಈ ಪ್ರಪಂಚ, ಬದುಕು, ಸಂಬಂಧ,‌ ಸುಖ-ದುಃಖಗಳು ನಮ್ಮ ಯೋಚನೆಗೆ ನಿಲುಕದ, ಯೋಜನೆಗೆ ಮೀರಿದ ವಿಶಿಷ್ಟ ಮೇರು ಸೃಷ್ಟಿ. ಇವೆಲ್ಲವೂ ಸೃಷ್ಟಿಯ, ಸರ್ವವಂದ್ಯನ ಗೂಢ-ನಿಗೂಢ ವಿಸ್ಮಯಗಳು, ಅಚ್ಚರಿಗಳು. ದೇವರೇ ಸೃಷ್ಟಿಕರ್ತ ಅವನೇ ಲಯಕರ್ತ, ಅವನೇ ಪರಮಾತ್ಮ, ಅವನೇ ಅಂತರಾತ್ಮ, ಅವನೇ ಬ್ರಹ್ಮ, ಕೊನೆಗೆ ಅವನೇ ಯಮಧರ್ಮನೂ! ಇಷ್ಟೇ.

Creative Writings