
Article · October 21, 2026
ಹುಲ್ಲಿನ ಮನೆ
ವೀಣಾ ಎಂ ಭಟ್
ಗಾಳಿಮಳೆ ಬಂದರೂ ನಲುಗದ ಹುಲ್ಲಿನ ಮನೆಯು
ಹವಾನಿಯಂತ್ರಿತ ಕೊಠಡಿ ಬೇಕಿಲ್ಲದ ಮನೆಯು
ಹಳ್ಳಿ ಜೀವನದ ಸೊಗಡು ತಾಣ ಕಂಡಿಹುದಿಲ್ಲಿ
ದಿಲ್ಲಿಯಲಿ ಇರದಂಥ ನೆಮ್ಮದಿ ತುಂಬಿಹುದಿಲ್ಲಿ
ಸೂರು ಸೋರಿದರೇನು ಸೋರದಿರು ಓ ಮನವೆ
ಸಾರುತಿದೆ ಮಣ್ಣಿನ ಗೋಡೆಯ ಕಣದಿ ಮನವು
ಕಣ್ಣ ಸೆಳೆಯದ ಸೂರು ತನುವಿಗೆ ಹಿತಕರವು
ಬಣ್ಣನೆಗೆ ನಿಲುಕದ ಶಾಂತಿ ಸಹನೆಯ ನಿಲುವು
ಮನೆ ಚಿಕ್ಕದಾದರೂ ಮನವು ಚೊಕ್ಕದು ಹಿರಿದು
ತಾರಸಿಯ ಅಂದಕೆ ಸರಿಸಾಟಿ ಬಾರದೂ ಎಂದು
ಹುಲ್ಲಿನ ಹಾಸುಗೆಯ ಮಾಡು ತಂಪಿನ ಮಡಿಲಲ್ಲಿ
ಹತ್ತುಹಲ ತಲೆಮಾರು ಸೊಂಪಾಗಿ ಬೆಳೆದಿಹುದಿಲ್ಲಿ
ಮಣ್ಣಿನ ನೆಲಕೆ ಸೊಗಸಾದ ಸೆಗಣಿಯ ಹೊದಿಕೆ
ವಾತರೋಗಕೆ ಬಲು ಹಿತಕರವು ಆತಂಕವಿಲ್ಲ ಮನಕೆ
ಅರಿವಿಲ್ಲ ನವ ಯುವ ಜನತೆಗೆ ಇದರ ಗರಿಮೆ
ಅರಿತವರಾರಿಲ್ಲ ಸೆಗಣಿ ಸಾರಿಸುವ ಕಲೆ ಮಹಿಮೆ
ಕನಸುಗಳು ನೂರಾರು ಹೆಣೆದ ಕಾಲವು ಇಲ್ಲಿ
ಮನಭಂಗ ತಾರದೆ ನಡೆದ ಪಯಣವು ಇಲ್ಲಿ
ಬೆರೆತು ಸೇರಿದ ಸೂರು ಒಡಹುಟ್ಟು ಸ್ನೇಹದಲಿ
ಜೇನುಗೂಡಿನ ತರಹ ಬೆರೆತು ಒಂದಾಗಿ ಸ್ನೇಹದಲಿ
ಸೂರು ಸೋರುತಿದೆಯೆಂದು ಮೇರು ಆಸೆಯಲಿ
ತಾರಸಿಯ ಸೂರನ್ನು ಏರಿಸಿದರು ಸಂಭ್ರಮದಲ್ಲಿ
ತಾರಸಿಯು ಸೋರುತಿದೆ ಯಾರನ್ನ ದೂಷಿಸಲಿ
ಬರಿದಾಯ್ತು ಬಾಳಪಥ ಎಲ್ಲ ಸೋರುವ ಮನದಲ್ಲಿ
