Karada Vishwa

Article · June 21, 2026

ಮರೆವನರಿಯದ ಯೋಗಸಾಧಕ

✍🏻ಜ್ಯೋತಿ. ಜಿ. ಕೃಷ್ಣ, ಅಂಗ್ರಾಜೆ

ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ದಿವ್ಯ ಚರಿತೆ
( ಭಾಮಿನೀ ಷಟ್ಪದಿಯಲ್ಲಿ ) 

ಭಾರತಾಂಬೆಯ ಕುವರರಾಗಿರೆ
ಶಾರದಾಂಬೆಯ ಸೇವೆಗೈಯುತ
ಸಾರುತಿರುವರು ಧರ್ಮ ಸಾರವ ವಿಶ್ವದಾದ್ಯಂತ
ಭಾರತೀತೀರ್ಥಾಖ್ಯ ಗುರುವರ
ಮೇರು ಮಠ ಶೃಂಗೇರಿಯಲಿ ಘನ
ಕೀರುತಿಯಲುತ್ತುಂಗವೇರಿದ ಪಾದದಡಿಗಳಿಗೆ

ತೆಲುಗು ರಾಜ್ಯದ ಮಚಲಿ ಪಟ್ಟಣ
ದೊಳಗೆ ವೆಲನಾಡೆಂಬ ಪುರದಲಿ
ಬೆಳೆದ ಬಾಲನು ವೆಂಕಟೇಶರ ವಂಶಕುಡಿಯಾಗಿ
ಕುಲದಿ ಮೊದಲಿಗೆ ನಾಲ್ಕು ಸಂತತಿ
ಗಳವು ಹೆಂಗಳ ಜನನವಾಗಲು
ತಳೆದ ಭಾಗ್ಯವು ಪುತ್ರನಾಗಿಸಿ ದೈವ ನಿರ್ಣಯದಿ

ವೆಂಕಟೇಶರ ಧರ್ಮ ಸತಿಯಾ
ತಂಕದಲ್ಲಿರೆ ಪುತ್ರನಿಲ್ಲದೆ
ಮಂಕು ಕವಿದಿಹನಂತಲಕ್ಷ್ಮಿಯು ಹರನ ಪೂಜಿಸಲು
ಲಂಕೆ ಲಂಘಿಸಿದಾಂಜನೇಯನು
ಶಂಕೆ ನೀಗಿಸಿ ಬಂದು ಕನಸಲಿ
ಶಂಕರಾರಾಧನೆಗೆ ಮೆಚ್ಚುತಲಭಯ ನೀಡಿರಲು

ಹನುಮ ಕರುಣೆಯು ಫಲಿತವಾಗಲು
ಜನಿಸಿ ಸೀತಾರಾಮ ಹೆಸರೊಳು
ಜನನಿ ಜನಕಗೆ ಮುದವ ನೀಡುತ ಸಗ್ಗ ಬುವಿಗಿಳಿಸಿ
ದಿನಗಳುರುಳಲು ಶಿವನ ನಾಮವ
ಮನದಿ ಜಪಿಸುತ ಬೆಳೆದ ಬಾಲಕ
ಕನಸಿನಲ್ಲಿಯು ಗಾಹೆಗಳನುಚ್ಚರಿಸಿ ದೇಗುಲದಿ

ಬಾಲ ತನುಜಗೆ ಬ್ರಹ್ಮಚರ್ಯದ
ನೂಲು ಜನಿವಾರವನು ತೊಡಿಸವ
ಗೇಳು ವರುಷದೊಳುಪನಯನ ಸಂಸ್ಕಾರ ನೀಡಿರಲು
ಶಾಲೆ ಪಾಠದ ಜೊತೆಗೆ ಜಪತಪ
ಕಾಲಕಾಲದೊಳಗ್ನಿ ಕಾರ್ಯವು
ಮೂಲ ವೇದಾಭ್ಯಾಸದೊಂದಿಗೆ ತೆಲುಗು ಗಣಿತವನು

ಹತ್ತು ವರುಷಕೆ ನುಡಿದು ಸಂಸ್ಕೃತ
ಬತ್ತದಂತಿರೆ ವೇದದರ್ಚನೆ
ಮುತ್ತಿದಾಸೆಗೆ ತಿರುವು ನೀಡಿತು ಗುರುಗಳಾಗಮವು
ಬತ್ತಳಿಕೆಯಲಿ ಪ್ರಶ್ನೆ ಶರಗಳು
ಸುತ್ತಿ ಶಾಸ್ತ್ರಾಧ್ಯಯನದತ್ತವೆ
ನೆತ್ತಿ ಮೇಗಡೆ ಕರವನಿರಿಸುತ ಹರಸಲಭಿನವರು

ಮನದಭೀಷ್ಟಕೆ ಯಾತ್ರೆಗೈಯುತ
ಕನಕಶೃಂಗಕೆ ಬರಲು ಗುರುಗಳು
ಕೊನೆಗು ಸೀತಾರಾಮನರುಹಲು ಮನಸಿನಿಂಗಿತವ
ಮಣಿದು ಪಾದಕೆ ಕೋರುತಾಶ್ರಯ
ವಿನಯ ತೋರಿದ ಬಾಲವಟುವಿನ
ಕೊನರಿದಾಸೆಗೆ ಜೀವ ಬರಿಸಿತು ಗುರುಗಳೊಡನಾಟ

ಹರಿವ ವಾಹಿನಿ ತೆರದಿ ಸುಮನವು
ಪರಮ ಪೂಜ್ಯರ ನೆರಳ ಬಯಸುತ
ತರೆಯಲಂತ:ಕರಣ ಗುರುಗಳ ಪಾದಕೆರಗುತಲಿ
ಬೆರೆಯಲಧ್ಯಯನದೊಳು ಚರಿತನು
ಸರಿದು ಕಾಲವು ನಿಪುಣನಾದನು
ನುರಿತ ವಾಗ್ಮಿಯು ಸರ್ವ ವಿದ್ಯೆಯನರಿತು ಮಠದಲ್ಲಿ

ಗೃಹವ ತೊರೆದಿಹ ಬ್ರಹ್ಮಚಾರಿಗೆ
ಸಹನೆಯಿಂದಲಿ ತರ್ಕಶಾಸ್ತ್ರವ
ವಿಹಿತ ಮಾರ್ಗದಿ ಬೋಧಿಸುತ್ತಿರೆ ಹಿರಿಯ ಗುರುವರರು
ಇಹದ ಭೋಗವ ಬಿಟ್ಟು ಪರಹಿತ
ಮಹತವೆನ್ನುತ ನಡೆದ ಹಾದಿಯು
ಮಹಿಮನಾಗುವ ಪೂರ್ವ ಸೂಚನೆ ಕೊಡುತ ಮುನ್ನಡೆಸಿ

ತರುಣ ಸೀತಾರಾಮ ವಿದ್ವಾಂ
ಸರರ ಸಭೆಗಳ ಪಾತ್ರವಹಿಸುತ
ಸರಳ ಚರ್ಚೆಯ ಮಂಡಿಸುತ್ತಲಿ ನ್ಯಾಯ ಮೀಮಾಂಸೆ
ಭರದಿ ಕಲಿಯುತ ವಿವಿಧ ಭಾಷೆಗ
ಳರಿತು ತಪ್ಪನು ನೇರ್ಪುಗೊಳಿಸುವ
ಮರೆವನರಿಯದ ಯೋಗಸಾಧಕ ಜಯಿಸಿ ಗುರುಮನವ

ವೇದವೇದಾಂಗಗಳನರಿತವ 
ನಾದ ಜ್ಯೋತಿಷ ಕಲ್ಪ ಸಾಂಖ್ಯದಿ
ಸಾಧಿಸುತನವ ಶುದ್ಧ ಸಾತ್ತ್ವಿಕ ಸಚ್ಚರಿತನಾಗಿ
ಭೇದವಿರದಿಹ ಗರ್ವವಿರದವ
ಗಾಧ ಪಾಂಡಿತ್ಯವನು ವೀಕ್ಷಿಸಿ
ಮೋದದಿಂ ಗುರು ಮೆಚ್ಚಲವನನು ಶಿಷ್ಯನಂತಾಗಿ

ತೆರಳಿ ಗುರುಗಳು ಗರ್ಭಗುಡಿಯೊಳು
ಕರವ ಮುಗಿಯುತಲಂತರಂಗದೊ
ಳರಿವು ಬೆಳಗಿತು ತಾಯಿ ಶಾರದೆ ಕೃಪೆಯ ತೋರಿರಲು
ಅರಿತು ವಿದ್ಯಾತೀರ್ಥರಿಂಗಿತ
ಸರಿಸಿ ತುಮುಲವ ಶಿಷ್ಯನಾಯ್ಕೆಗೆ
ಹರಸುತಭಯವನಿತ್ತು ಕಳುಹಲು ಹಾಸ ಮೊಗದಲ್ಲಿ 

ಸನ್ನಿಧಾನಕೆ ಕರೆದು ಹೆತ್ತವ
ರನ್ನು ಶ್ರೀಗಳು ತಿಳಿಸಿ ಹೃದ್ಗತ
ಚೆನ್ನ ಪುತ್ರನ ಶಿಷ್ಯನಾಗಿಸೆ ನೀಡಲೆನ್ನುತಲಿ
ಬಣ್ಣಿಸದ ಸಂತಸವು ತಳಮಳ 
ದೆನ್ನದಲ್ಲದ ಭಾವ ಮೂಡಿಸಿ
ಸಣ್ಣ ಚಿಂತೆಯು ಕಾಡಿತವರೊಳು ಲೋಕಕರ್ಪಿಸಲು

ಗುರುಗಳಾಜ್ಞೆಯ ಶಿರದಲಿರಿಸುತ
ಬರುವ ಕರ್ತವ್ಯಗಳ ಹೊಣೆಯಲಿ
ತಿರೆಯ ಬಂಧನಕಿಂದು ಮುಕ್ತಿಯು ದೊರೆತ ಸಂಭ್ರಮದಿ
ಮರೆಯಬೇಕಿದೆ ಪೂರ್ವ ಛಾಯೆಯ
ಹಿರಿಯ ಸೋದರಿಯರನು ನೆನೆಯದೆ
ತೊರೆದು ಸೀತಾರಾಮ ದೀಕ್ಷೆಗೆ ಸಿದ್ಧನಾಗುತಲಿ

ಭಕ್ತವೃಂದಕೆ ಶಿಷ್ಯಬಳಗಕೆ
ಸುತ್ತ ದಕ್ಷಿಣ ಭಾಗದೆಲ್ಲೆಡೆ
ಮುಕ್ತ ಮನದಾಹ್ವಾನ ಪತ್ರವು ಕಳುಹಿ ಕೊಡಲಂದು
ಯುಕ್ತ ಸಂನ್ಯಾಸಕ್ಕೆ ಮುನ್ನವೆ
ಶಕ್ತಿಯಾಲಯದೆದುರು ಹೋಮವು
ಭಕ್ತಿಪೂರ್ವಕ ಪೂರ್ವಕರ್ಮಗಳನ್ನು ನಡೆಸುತಲಿ

ಬೆಳಗು ಮೂಡಲು ಮುಗಿಸಿ ವಿಧಿಗಳ
ಮುಳುಗಿಯೇಳುತ ತುಂಗೆಯೊಡಲಲಿ
ಬೆಳೆದ ಶಿಖೆ ಕಟಿಸೂತ್ರ ಜನಿವಾರವನು ವರ್ಜಿಸುತ
ಪೊಳೆವ ದಂಡವ ಕರದಿ ಪಿಡಿಯುತ
ಹಳೆಯದೆಲ್ಲವ ತೊರೆದು ನವಜಗ 
ತಳೆದು ಜನ್ಮವ ಕಿರಿಯ ಯತಿ ಕಾಷಾಯ ವಸ್ತ್ರದಲಿ

ನೆರೆದ ಪುರಜನರೆದುರು ಗುರುಗಳು
ಹರಸಿ ತರುಣನ ತೆರೆದ ಕಂಠದಿ
ಪರಮಸಿಂಹಾಸನದಲೇರಿಸಿ ವೇದಘೋಷದೊಡೆ 
ಶಿರದಿ ಸಾಲಿಗ್ರಾಮವಿರಿಸುತ
ಮೆರೆಸಲುಪಚಾರಗಳು ಷೋಡಶ
ಗಿರಿಯ ಪೊತ್ತಿಹ ಕೃಷ್ಣನೊಲು ಕಿರಿಯೋಗಿ ಶೋಭಿಸಲು 

ಹಳೆಯ ಸೀತಾರಾಮ ನಾಮವ
ನಳಿಸಿ ನೂತನ ಗುರುಗಳಾಗುತ
ಬೆಳಗಿ ಶ್ರೀಗುರು ಭಾರತೀತೀರ್ಥಾಖ್ಯರೆನಿಸಿಹರು 
ಕಳೆದು ಪೂರ್ವಾಶ್ರಮದ ಗುರುತನು
ಬೆಳೆದರಾಧ್ಯಾತ್ಮಿಕದ ವೃಕ್ಷವ 
ಗಳಿಸೆ ಲೋಕಕೆ ಧರ್ಮ ಸೂಕ್ಷ್ಮದ ಮಧುರ ಫಲಗಳನು

ಕಟ್ಟುನಿಟ್ಟಿನ ವ್ರತದ ದಿನಚರಿ
ಮೆಟ್ಟಿ ಲೌಕಿಕ ಮೋಹ ಲಾಲಸೆ
ಮುಟ್ಟಿ ಮೌಳೀಶ್ವರನ ಪಾದಕೆ ಪೂಜಿಸನವರತ 
ಸುಟ್ಟು ಷಡ್ವರ್ಗಗಳ ತಪದೊಳು
ಹುಟ್ಟು ಸಹನಾ ಮೂರ್ತಿಯೀಯತಿ
ಪಟ್ಟಕೇರಿದ ಶಾಸ್ತ್ರ ಕೋವಿದ ತರ್ಕಶಾಸ್ತ್ರಜ್ಞ 

ದೇಶದಗಲದಿ ಧರ್ಮ ಸಾರುವ
ರೀಶ ರೂಪಿಯ ಸನ್ನಿಧಾನರು
ರಾಶಿ ಸಂಸ್ಕಾರವನು ಪಡೆದಿಹ ಶ್ರೇಷ್ಠ ಗುರುವರ್ಯ
ಕ್ಲೇಷ ಕಳೆಯುವ ದಾರಿ ತೋರಿಸಿ
ದೋಷಗಳ ಪರಿಹರಿಸಿ ನೀತಿಯ
ತೋಷ ಪರಿಮಳ ಹರಡುವಂದದಿ ಸುಭಗರೆನಿ‌ಸುತಲಿ

ಹಿರಿಯ ವಿದ್ಯಾತೀರ್ಥ ಗುರುಗಳು
ನಿರತರಾಗುತ ತಪದೊಳನುದಿನ
ತೊರೆದು ದೇಹವ ಲೀನವಾದರು ಪಂಚಭೂತದೊಳು
ಗುರು ಪರಂಪರೆಯಂತೆ ಕಿರಿಯತಿ
ತೆರವು ಪೀಠಾಧಿಪತಿಯಾಗಲು
ಕರೆದು ವಿನಯದಿ ಬಕುತ ಜನರಿಗೆ ಶುಭವ ಹಾರೈಸಿ

ದೇವನೊಬ್ಬನೆ ಹಲವು ನಾಮದಿ
ಕಾವ ರೂಪನು ಮೌಲ್ಯ ಬದುಕಿಗೆ
ಜೀವಿತಾವಧಿ ಸತ್ಯಪಥದಲಿ ಸಂಚರಿಪರಾಗಿ
ನಾವೆ ತೇಲುವ ತೆರದಿ ಶಾಂತತೆ
ನೋವ ಮರೆಸುವ ಮಮತೆ ಸುರಿಸಲ
ದಾವ ಸುಕೃತವೊ ಪಡೆದು ಗುರುಗಳ ಧನ್ಯರಾಗಿಹೆವು

ಭಕ್ತಿ ಮೂಡಿಸಿ ಮಾರ್ಗದರ್ಶನ
ಮುಕ್ತಿ ದೊರಕಿಸೆ ತತ್ತ್ವಬೋಧನ
ಶಕ್ತಿ ಪೀಠವು ಶಾರದಾಂಬೆಯ ಮಡಿಲ ಶಾಲೆಯಿದು
ಸುತ್ತ ಹಲವಾರೋಗ್ಯ ಕೇಂದ್ರಗ
ಳೆತ್ತ ನೋಡಲು ಗೀತೆ ಪಠಣವು
ಮತ್ತೆ ಸಂಸ್ಕೃತ ಭಾಷೆ ಕೀರ್ತನೆ ಬರೆಯುತವಿರತವು 

ಸಾಗಿ ಪಯಣವು ದೇಶದುದ್ದಕು
ಮಾಗಿ ಕಾಯವು ಸಾರ್ಥಕತೆಯಲಿ
ಬಾಗಿಸುತ ಶಿರ ಭಾರತೀತೀರ್ಥಾಖ್ಯ ಚರಣಕ್ಕೆ 
ಸೋಗು ಕಾಣದ ಮಧುರ ವಾಣಿಯು
ಯೋಗ ಕರುಣಿಸಿ ಬಕುತರೆಲ್ಲರ
ತೂಗಿ ವಾತ್ಸಲ್ಯದೊಳು ಪೊರೆವಗೆ ನಮಿಪೆವುದ್ದಂಡ


Creative Writings