Karada Vishwa

Article · September 14, 2026

ಶ್ರೀ ವಕ್ರತುಂಡಾಷ್ಟಾಂಗ ತತ್ವ ಗೀತೆ

By ಗಾಯತ್ರಿ ಕೆ ನಾಗರಾಜ

ಗಣೇಶನ ಶರೀರದ ಒಂದೊಂದು ಅಂಗಗಳು ಒಂದೊಂದು ತತ್ವವನ್ನು ಬೋಧಿಸುತ್ತವೆ . ಇದನ್ನು ಸೂಚಿಸಿ ಬರೆದಂತಹ ಒಂದು ಗೀತೆ

ವಿಶಾಲ ಮಸ್ತಕ ವಿನಾಯಕನೆ ವಿಶ್ವಜ್ಞಾನದ ನಾಯಕನೆ
ವಿಶಾಲ ಶ್ರವಣದಿ ಪಾಲಿಸಯ್ಯಾ ನಮ್ಮ ಅಂತರಂಗದ ಯಾಚನೆ

ಸೂಕ್ಷ್ಮ ನೇತ್ರದಿ ಸೂಕ್ಷ್ಮ ದೃಷ್ಟಿಯ ತೋರಿ
ಅಲ್ಪ ಜಿಹ್ವೆಯಲಿ ಮಿತ ಭಾಷೆಯ ಸಾರಿ

ದೊಡ್ಡ ತಲೆಯು ನಿನ್ನದು ದೊಡ್ಡದಾಗಿ ಚಿಂತಿಸೆಂದು
ಬೋಧಿಸುವುದು ಬ್ರಹ್ಮಾಂಡದ ಜ್ಞಾನವನೆಲ್ಲ ಹೀರಿಸೆಂದು
ದೊಡ್ಡ ಕಿವಿಯು ನಿನ್ನದು, ಶ್ರುತಿ ತತ್ಪರನಾಗು ಎಂದು
ಉತ್ತಮ ಶ್ರೋತೃವಾಗು, ಪರ ನಿಂದೆಯನು ತೊರೆಯೆಂದು

ಸಣ್ಣ ಕಣ್ಣುಗಳು ನಿನ್ನವು ಏಕಾಗ್ರತೆಯ ಸಂಕೇತ
ಸಣ್ಣ ಬಾಯಿಯು ನಿನ್ನದು ಮಿತಭಾಷಣದ ನಿಯತ
ಹೊಂದಾಣಿಕೆಯ ಸೊಂಡಿಲು, ವಿವೇಕದ ಪರಮ ದೀಪ್ತಿ
ಒಳ್ಳೆಯದನು ಆಘ್ರಾಣಿಸಿ, ಕೆಟ್ಟದನು ದೂರ ತಳ್ಳುವ ಪ್ರಾಪ್ತಿ

ಲಂಬೋದರದಿ ನಿನ್ನಲಿ ಲೋಕದ ಸುಖ ದುಃಖ ಜೀರ್ಣ
ಸಹನಶೀಲತೆಯ ಪಾಠ, ಉದರದಿ ಬ್ರಹ್ಮಾಂಡ ಪೂರ್ಣ
ಏಕದಂತವು ನಿನ್ನದು ತ್ಯಾಗ ವಿವೇಚನೆಯ ಮೂರ್ತಿ
ಒಳಿತನು ಉಳಿಸಿ ಕೆಡುಕನು ಕಡಿದೊಗೆವ ಪರಮ ಕೀರ್ತಿ

ಕರದೊಳು ಮೋದಕವು ಸಾಧನೆಯ ಮಧುರ ಫಲವು
ಜ್ಞಾನಾಮೃತದ ಸಂಕೇತ, ಆತ್ಮಾನಂದದ ಬೆಳಕು
ಪಾದದಡಿ ಮೂಷಕವು ಚಂಚಲ ಮನಸಿನ ವಾಹನ
ಅದನೇರಿ ನಿಂತ ನಿನ್ನದು ಇಂದ್ರಿಯ ನಿಗ್ರಹ ಸಾಧನ

ಗಜಮುಖನೆ, ಗಣನಾಥನೆ, ಅಂಗಾಂಗದಿ ತತ್ವವ ತೋರಿದೆ
ನಿನ್ನ ರೂಪವೇ ಅದ್ಭುತವಾಗಿದೆ ಭಕ್ತರನು ಉದ್ಧರಿಸಿದೆ

Creative Writings