Karada Vishwa

Article · July 11, 2026

ಕಾರಣ ನೀನು ಹೆಣ್ಣು

-- ಶ್ರೀವಿದ್ಯಾ. ಎಸ್.ಗೋಖಲೆ

ತೆರೆಮರೆಯಲ್ಲಿ ಇದ್ದು ಬಿಡು.. ಪೋರಿ

ನೀ ಹೊರಗೆ ಬರಬೇಡ ಕಾರಣ ನೀನು ಹೆಣ್ಣು ..

ನರ ಸತ್ತ ರಾಕ್ಷಸರು ಶಿಕಾರಿಗಿಳಿದಿಹರು

ಅಪಹರಣ, ಶೀಲಹರಣ ಮಾಡೋ ನರಾಂತಕರು..

ಹೆಣ್ಣು ಹರಿಣಿಯ ಅಟ್ಟಾಡಿಸೋ ಬೇಟೆಗಾರರು//

ಆಟವಾಡಲು ಹೋಗದಿರು ಕುವರಿ

ಬಯಲು, ಮೈದಾನಕ್ಕೆ, ಕಾರಣ ನೀನು ಹೆಣ್ಣು..

ನಿನ್ನ ಹುರಿದು ಮುಕ್ಕಿ ತಿನ್ನಲು ಕಾದಿಹರು

ತಾಯಿ ತಂಗಿ ವ್ಯತ್ಯಾಸ ತಿಳಿಯದ ಕಾಮುಕರು ..

ಮೂರೂ ಬಿಟ್ಟವರ ತೆವಲಿಗೆ ನೀ ಬಲಿಯಾಗದಿರು//

ಸಮಾಜದ ವಿರುದ್ಧ ಮಾತು ಬೇಡ

ಬಾಲೆ, ಕಾರಣ ನೀನು ಹೆಣ್ಣು..

ನಾಲ್ಕು ಗೋಡೆಯ ಮಧ್ಯೆ ಇರಬೇಕು ಎನ್ನುವರು

ತಮ್ಮ ಬೀದಿಬಸವ ಮಗನ ದಿನಚರಿ ಬಗ್ಗೆ ಚಕಾರ ಎತ್ತದವರು..

ನಿನ್ನ ಉಡುಪು, ನಡೆಯ ಬಗ್ಗೆ ಭಾಷಣ ಬಿಗಿಯುವರು//

ಹೆತ್ತವರು ಎಳೆದ ವೃತ್ತ ನೀ

ದಾಟಲೇ ಬಾರದು ಪುಟ್ಟ ಗೆಳತಿ ಕಾರಣ ನೀನು ಹೆಣ್ಣು..

ಒಡಹುಟ್ಟಿದವರ ಸ್ವಾತಂತ್ರ್ಯ ಬಗ್ಗೆ ನೀ ಪ್ರಶ್ನಿಸಿದರೆ ಕೆಂಗಣ್ಣ ಬೀರುವರು

ಅವರು ತಾನೇ ಮುಸ್ಸಂಜೆ ಕಾಲದ ಪೋಷಕರು?..

ನೀನು ಹೆಣ್ಣು..ನಿನ್ನ ಪ್ರಶ್ನೆ ಆಸೆಗಳ ಬದಿಗೊತ್ತಿ

ನಿನ್ನ ಮಿತಿಯಲ್ಲಿರು.//

Creative Writings