Karada Vishwa

Article · August 16, 2026

ಭಕ್ತಿ ಗೀತೆ

_ವೀಣಾ ಎಂ ಭಟ್

ಕಣಕಣದಿ ಬೆರೆತಿರುವೆ ದಣಿವ ತಣಿಸು ದೊರೆಯೆ

ಕ್ಷಣ ಕ್ಷಣವು ದರುಶನದ ಹಂಬಲವು ನರಹರಿಯೆ

ಎಣೆಯಿಲ್ಲದ ನಿನ್ನ ಮಹಿಮೆ ವರ್ಣಿಸಲರಿಯೆ

ಕ್ಷಣಕಾಲ ಬಿಡೆ ನಿನ್ನ ಪಾದವನು ಶ್ರೀಹರಿಯೆ

ಅಗಣಿತ ಗುಣ ನಿನ್ನ ಪಾದಧೂಳಲಿ ಮಿಂದು

ಕ್ಷಣಿಕ ಈ ಭವದಲ್ಲಿ ನಿಂದಿರುವೆ ದಯ ಸಿಂಧು

ಸೃಷ್ಟಿ ಸ್ಥಿತಿ ಲಯದಲ್ಲಿ ನಿನ್ನ ಪಾತ್ರದ ಗರಿಮೆ

ಭ್ರಷ್ಟ ಜೀವಕೆ ಅರಿಯದೆಂದು ಈ ಮಹಿಮೆ

ದುಷ್ಟರ ನಡುವಿನಲಿ ಕೆಟ್ಟು ಹೋಗಿದೆ ಕಾಲ

ಕೊಟ್ಟು ಬಿಡು ನೀತಿಯ ಅರಿಯದು ನಿನ್ನ ಲೀಲೆ

ಪರಮಾತ್ಮ ನೀ ಸಕಲ ಆತ್ಮದಲಿ ಅಡಗಿರುವೆ

ದುರುಳ ರಕ್ಕಸರನ್ನ ಭುವಿಗೇಕೆ ತಂದಿರುವೆ

ಸಜ್ಜನಗೆ ಉಳಿವಿಲ್ಲ ದುರ್ಜನರ ಕೂಟದಲಿ

ದೌರ್ಜನ್ಯದ ಪೀಡೆ ತೊಲಗಿಸು ಹೇ ದೇವಾ

Creative Writings