Karada Vishwa

Article · March 22, 2026

ನವಚೇತನ

- ಶ್ರೀದೇವಿ. ಯಸ್.ಭಟ್. ಕಜಮಲೆ

ಶಂಖನಾದವು ಮೊಳಗಿ ಓಂಕಾರದಲೆಯಾಗಿ 
ವೇದ  ನಾದಗಳಲ್ಲಿ ಪ್ರತಿಧ್ವನಿಸಿತು  .
ಪಂಚಭೂತಗಳೆಲ್ಲ ಒಂದಾಗಿ ಸೃಷ್ಟಿಯಲಿ 
ಜಗವು ನವ ಚೇತನದ ಚಿಲುಮೆಯಾಯ್ತು. 

ರವಿಚಂದ್ರತಾರೆಯರು ಬಾನಿನಲಿ ಉದಯಿಸಲು 
ಜಗವೆಲ್ಲ ಮಿಂಚಾಗಿ ಪ್ರಜ್ವಲಿಸಿತು. 
ನದಿತೊರೆಗಳೆಲ್ಲವದು ಹರಿದು ಸೇರಲು ಶರಧಿ 
ಸಂತಸದ ಹೊನಲಾಗಿ ಭೋರ್ಗರೆಯಿತು. 

ಕಾನನದ ಹಸಿರುಸಿರಿ ತಂಗಾಳಿ ಜತೆಯಾಗಿ 
ಸುಮವರಳಿ ಮುದದಿ ಸೌರಭಸೂಸಿತು. 
ಪಶುಪಕ್ಷಿ ಸಂಕುಲವು ಒಡನಾಡಿ ಹಾರಾಡಿ 
ಕಾನನದ ತುಂಬೆಲ್ಲ ನಲಿದಾಡಿತು. 

ಭೂಮಿ ಬಾನುಗಳೆರಡು ಹಾಸು, ಹೊದಿಕೆಗಳಂತೆ 
ಜೀವರಕ್ಷಣೆಯಾಗಿ ಅಣಿಯಾಯಿತು. 
ಜೀವ ಜೀವಗಳೆಲ್ಲ ಒಂದಾಗಿ ಪ್ರಕೃತಿಯಲಿ 
ವನಸಿರಿಯ ಹಸಿರೆಲ್ಲ ಉಸಿರಾಯಿತು.

Creative Writings
ನವಚೇತನ