
Article · June 23, 2026
ಚಿನ್ನಾ
✍🏻 ಶಾರದಾ ಕಜೆಗದ್ದೆ, ಬಾಯಾರು
ಹೆಂಗಳೆಯರ ಆಸೆಯ, ಸೌಂದರ್ಯದ, ಕನಸಿನ, ಪ್ರತಿಷ್ಠೆಯ ಮತ್ತು ಸ್ತ್ರೀತ್ವದ ಪ್ರತೀಕ ಈ ಚಿನ್ನ. ದೇವತಾಕಾರ್ಯದಲ್ಲಿ ಹೂವಿನಲಂಕಾರ ಸೌಂದರ್ಯವನ್ನು ಇಮ್ಮಡಿಸಿದರೆ , ಬಂಗಾರದಲಂಕಾರ ದೇವರ ಗಾಂಭೀರ್ಯವನ್ನು ಹೆಚ್ಚಿಸುತ್ತದೆ. ಸ್ವರ್ಣಾಭರಣಭೂಷಿತೆಯಾದ ನವವಧುವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲದೆ ಚಿನ್ನದಲ್ಲಿನ ಹೂಡಿಕೆ ಒಂದು ದೇಶದ, ಕುಟುಂಬದ ಸುಭದ್ರ ಭವಿಷ್ಯಕ್ಕೆ ಅಡಿಗಲ್ಲು ಇದ್ದಂತೆ.
ಕಲ್ಲು, ಮುತ್ತು, ಹವಳ, ಮಾಣಿಕ್ಯ,ಪುಷ್ಯರಾಗ, ಗೋಮೇಧಿಕ, ವಜ್ರ ಇಂತಹ ಯಾವುದೇ ಬೆಳೆಬಾಳುವ ಪ್ರಕೃತಿದತ್ತ ಒಡವೆಯನ್ನು ನಾವು ಧರಿಸಬೇಕೆಂದರೆ ಅದಕ್ಕೆ ಬಂಗಾರದ ಪೋಣಿಕೆ ಅಗತ್ಯ. ಅಂಥ ಚಿನ್ನವಿರುವುದು ಈ ಪವಿತ್ರ ಮಣ್ಣಿನಲ್ಲಿ. ಆದರೆ ಚಿನ್ನವಾಗಿಯಲ್ಲ, ಮಣ್ಣಲ್ಲಿ ಮಣ್ಣಾಗಿ...
ಎಲ್ಲಾ ಪ್ರದೇಶದ ಮಣ್ಣಿನಲ್ಲಿ ಚಿನ್ನವಿಲ್ಲ. ಕೆಲವೊಂದು ಕಡೆಯ ಮಣ್ಣಿನಲ್ಲಿ ಮಾತ್ರ ಚಿನ್ನ ಅಡಕವಾಗಿದೆ. ಅಂತಹ ಸ್ಥಳದ ಚಿನ್ನದಂಶವಿರುವ ಮಣ್ಣನ್ನು ಗಣಿಗಾರಿಕೆಯ ಮುಖಾಂತರ ಭೂಮಿಯೊಡಲಿಂದ ಹೊರತೆಗೆದು ಕಾರ್ಖಾನೆಗಳಿಗೆ ಸಾಗಿಸಿ ವಿಜ್ಞಾನ ತಂತ್ರಜ್ಞಾನಗಳನ್ನ ಬಳಸಿ ಮಣ್ಣಿನಿಂದ ಚಿನ್ನವನ್ನು ಬೇರ್ಪಡಿಸಲಾಗುತ್ತಿದೆ. ಆದರೆ ಇದು ಈ ಅಕ್ಷರಗಳಲ್ಲಿ ಬರೆದಷ್ಟು, ಓದಿದಷ್ಟು ಸುಲಭದ ಕೆಲಸ ಅಲ್ಲ. ಈ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ನಮ್ಮೆಲ್ಲರ ಒಡನಾಡಿ ಮೊಬೈಲ್ ನೀಡುತ್ತದೆ.
ಹೀಗೆ ಬೇರ್ಪಡಿಸಿದ ಚಿನ್ನವನ್ನು ರಾಸಾಯನಿಕ ಕ್ರಿಯೆಗಳಿಗೊಳಪಡಿಸಿ, ಶುದ್ಧ ಪಡಿಸಿ ತದನಂತರವೇ ಒಡವೆಯನ್ನಾಗಿಸಿ ನಾವೆಲ್ಲ ಕೊಂಡುಕೊಳ್ಳುವಂತೆ ಮಾಡಿ ನಮ್ಮನ್ನ ಬಂಗಾರದೊಡತಿಯಾಗಿ ಮಾಡುತ್ತದೆ ಈ ಮಣ್ಣು.
ಹೌದು.. ಚಿನ್ನವನ್ನೇನೋ ನಾವೆಲ್ಲ ಪ್ರೀತಿಯಿಂದ, ಜಾಗರೂಕತೆಯಿಂದ ಖರೀದಿಸುತ್ತೇವೆ. ನಮ್ಮ ಸೌಂದರ್ಯ, ಪ್ರತಿಷ್ಠೆ, ಅಹಂಗಳನ್ನು ಇಮ್ಮಡಿಗೊಳಿಸಿ ನಮ್ಮ ಮೇಲೆ ನಮಗೆ ಹೆಮ್ಮೆ, ಗೌರವವನ್ನು ಮೂಡುವಂತಾಗಿಸುತ್ತದೆ. ಆದರೆ ಬೆಲೆಬಾಳುವ ಚಿನ್ನದಂಶವನ್ನು ಕಳೆದುಕೊಂಡ ಆ ಸಾರಹೀನ, ರಾಸಾಯನಿಕಯುಕ್ತ ಮಣ್ಣು ಏನಾಗುತ್ತಿದೆ? ಟನ್ ಗಟ್ಟಲೆ ಮಣ್ಣು ಹೊರಹೋಗಿ ಬರಿದಾದ ಆ ದೊಡ್ಡದೊಡ್ಡ ಹೊಂಡಗಳ ಸ್ಥಿತಿಗತಿ ಹೇಗಿದೆ? ಗಣಿಗಾರಿಕೆಯಾಗುತ್ತಿರುವ ಸುತ್ತಮುತ್ತಲ ಪರಿಸರದ ಪರಿಸ್ಥಿತಿ ಎಂತಿದೆ?? ಅಲ್ಲಿ ವಾಸಿಸುತ್ತಿದ್ದ ಜೀವಜಂತುಗಳೇನಾದುವು?? ಗಣಿಗಾರಿಕೆಗೆ ಸಹಕರಿಸಿದ ಆ ಕೆಲಸದಾಳುಗಳ ಮತ್ತು ಅವರ ಕುಟುಂಬದವರ ಆರೋಗ್ಯ ಎಂತಿದೆ? ಚಿನ್ನದೊಡವೆ ಕೊಳ್ಳುವಾಗ ಎಂದಾದರೊಂದು ಕ್ಷಣ ಆಲೋಚಿಸಿರಬಹುದೇ ಇದೆಲ್ಲದರ ಬಗ್ಗೆ ನಮ್ಮಲ್ಲೊಬ್ಬರಾದರೂ? ಒಂದು ಪ್ರದೇಶದಲ್ಲಿ ಚಿನ್ನದ ಗಣಿ ಇದೆ ಅಂದ ಮಾತ್ರಕ್ಕೆ ಅದನ್ನು ಬರಿದು ಮಾಡುವುದು ಎಷ್ಟು ಸಮಂಜಸ?
ಇಷ್ಟೆಲ್ಲಾ ಉತ್ಪಾದಿಸಿದ ಚಿನ್ನದಲ್ಲಿ ಕೇವಲ ಅತ್ಯಲ್ಪ ಅಂಶ ಮಾತ್ರ ಉಪಯೋಗಿಸುತ್ತಿದ್ದೇವೆ. ಉಳಿದ ಬಹುಭಾಗ ಚಿನ್ನ ಮಾರಾಟ ಮಳಿಗೆಗಳಲ್ಲಿ, ದೇವಸ್ಥಾನಗಳಲ್ಲಿ, ಬ್ಯಾಂಕು ಲಾಕರ್ ಗಳಲ್ಲಿ, ಉಳಿದ ಒಂದಂಶ ನಮ್ಮ ನಿಮ್ಮ ಮನೆಗಳ ಬೀರುಗಳಲ್ಲಿ ಭದ್ರವಾಗಿ ಬಿದ್ದುಕೊಂಡಿದ್ದರೆ ಕಾಲಂಶ ಮಾತ್ರ ನಾವುಗಳು ತೊಟ್ಟುಕೊಂಡಿರಬಹುದು. ನಮ್ಮ ಬಿಗುಮಾನಕ್ಕೆ ಚಿನ್ನವಿರುವ ಭೂಪ್ರದೇಶದ ಅಂದವನ್ನು ಕೆಡಿಸಿ ನಾವೆಲ್ಲ ಸುಂದರವಾಗಿ ಬದುಕುತ್ತಿರುವ ರೀತಿ ಬಹುದೊಡ್ಡ ವಿಪರ್ಯಾಸವೇ ಸರಿ.
