Karada Vishwa

Article · November 9, 2026

ಸುಖ, ಶಾಂತಿ, ನೆಮ್ಮದಿಯ ಹಣತೆ ಸದಾ ಬೆಳಗಲಿ...

ರವೀ ಸಜಂಗದ್ದೆ

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ. ಜೀವನದಲ್ಲಿ ನಾವು ಪ್ರಸ್ತುತ ಹೊಂದಿರುವ ಸೌಭಾಗ್ಯಗಳನ್ನು ಮನಃಪೂರ್ವಕವಾಗಿ ಅನುಭವಿಸಿ ಆನಂದಿಸುವುದನ್ನು ಬಿಟ್ಟು, ನಮ್ಮ ಬಳಿ ಇಲ್ಲದಿರುವ ವಸ್ತುಗಳ ಕುರಿತು ಅತಿಯಾಸೆ ಪಡುವುದು ಹಾಗೂ ಇತರರ ಯಶಸ್ಸನ್ನು, ಸಂತಸವನ್ನು ಕಂಡು ಅಸೂಯೆ ಪಡುವುದೇ ಹೆಚ್ಚಾಗಿದೆ. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ' ಎಂಬಂತೆ, ಇಲ್ಲದಿದ್ದುರ ಬೆನ್ನೇರಿ ಓಡುವ ಆತುರದಲ್ಲಿ ನಮ್ಮ ಕೈಯಲ್ಲಿರುವುದರ ಅಪರೂಪದ ಮೌಲ್ಯವನ್ನು ಮರೆಯುತ್ತಿದ್ದೇವೆ. ಆದರೆ ನಮಗೆ ಸಿಕ್ಕಿರುವ ಪ್ರತಿಯೊಂದು ಸೌಭಾಗ್ಯಕ್ಕೂ ಕೃತಜ್ಞತೆಯ ಭಾವದಿಂದ ನಮನ ಸಲ್ಲಿಸಿ, ಅವುಗಳನ್ನು ಆದರಿಸುವುದೇ ನಿಜವಾದ ಬದುಕಿನ ಸೌಂದರ್ಯ.

ನಮ್ಮ ದೈನಂದಿನ ಬದುಕಿನಲ್ಲಿ ದ್ವೇಷ, ಅಸೂಯೆ, ಕೊಂಕು ಮತ್ತು ಇತರರ ಬಗ್ಗೆ ಹಗುರವಾಗಿ ಆಡುವ ಮಾತುಗಳಿಂದ ನಮಗೆ ಏನೆಂದರೆ ಏನೂ ದಕ್ಕಲಾಗದು. ಅದು ನಮ್ಮ ಅಂತಃಸತ್ವವನ್ನು ಕುಂದಿಸಿ, ಮನಸ್ಸಿನಲ್ಲಿ ಕಲ್ಮಶವನ್ನು ತುಂಬುತ್ತದೆ ಹೊರತು ನೆಮ್ಮದಿಯನ್ನಲ್ಲ. ಆದ್ದರಿಂದ ಇಂತಹ ನಕಾರಾತ್ಮಕ ವಿಚಾರಗಳನ್ನು ಅಲ್ಲಿಗೇ ಬಿಟ್ಟು, ಒಳ್ಳೆಯತನದ ಹಾದಿಯನ್ನು ಹಿಡಿಯೋಣ. ಕತ್ತಲನ್ನು ಓಡಿಸಿ ಬೆಳಕು ತರುವ ದೀಪಾವಳಿಯ ಈ ಶುಭ ಸಂದರ್ಭದಲ್ಲಿ, ಇತರರ ಬಾಳಿನಲ್ಲಿ ನಗು ಮತ್ತು ಸಂತಸದ ಹಣತೆಯನ್ನು ಹಚ್ಚುವ ಮೂಲಕ ನಾವೇ ಒಂದು ದೀಪವಾಗೋಣ, ನಮ್ಮ ಹತ್ತಿರದವರ ಪಾಲಿಗೆ ದಾರಿದೀಪವಾಗೋಣ.

ಜೀವನದ ಹಾದಿಯಲ್ಲಿ ನಾವು ಎಷ್ಟೇ ಸಂಪತ್ತು, ಕೀರ್ತಿ ಮತ್ತು ಯಶಸ್ಸನ್ನು ಗಳಿಸಿದರೂ, ಮನಸ್ಸಿಗೆ ನಿಜವಾದ ತೃಪ್ತಿ ಸಿಗುವುದು ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಮಾತ್ರ. ದೀಪಾವಳಿಯ ಹಣತೆಯು ಮನೆಯ ಕತ್ತಲನ್ನು ದೂರ ಮಾಡಿದಂತೆ, ಸತ್ಚಿಂತನೆಗಳು ಮತ್ತು ಸತ್ಕಾರ್ಯಗಳು ನಮ್ಮ ಜೀವನದ ಎಲ್ಲಾ ಅಂಧಕಾರವನ್ನು ಹೊಡೆದೋಡಿಸುತ್ತವೆ. 'ದೀಪ ಹಚ್ಚುವುದರಿಂದ ಕತ್ತಲು ದೂರವಾಗುವುದರ ಜೊತೆಜೊತೆಗೆ ಅದು ನಮ್ಮೊಳಗೆ ಆಶಾವಾದ ಮತ್ತು ಭರವಸೆಯನ್ನು ಜಾಗೃತಗೊಳಿಸುತ್ತದೆ.' ಕಷ್ಟಗಳು ಬಂದಾಗ ಕುಗ್ಗದೆ, ಅದೊಂದು ಪಾಠವೆಂದು ಸ್ವೀಕರಿಸಿ ಮುನ್ನಡೆಯುವ ಧೈರ್ಯವಿರಲಿ. ನಮ್ಮ ಬಳಿ ಏನೆಲ್ಲ ಇದೆಯೋ ಅದಕ್ಕಾಗಿ ಭಗವಂತನಿಗೆ ಕೃತಜ್ಞರಾಗಿರುವುದು ಮನಸ್ಸಿಗೆ ಅಪಾರ ನೆಮ್ಮದಿ ನೀಡುತ್ತದೆ. ಇತರರ ತಪ್ಪುಗಳನ್ನು ಕ್ಷಮಿಸುವ ಹೃದಯವಂತ ಗುಣ ಮತ್ತು ಕಷ್ಟದ ಕಾಲದಲ್ಲಿ ತೋರುವ ತಾಳ್ಮೆ ನಮ್ಮ ಬದುಕನ್ನು ಹಸನಾಗಿಸುತ್ತದೆ.

ಬದುಕಿನಲ್ಲಿ ಎದುರಾಗುವ ನೋವು ಮತ್ತು ಕಹಿ ಅನುಭವಗಳನ್ನು ಮೌನವಾಗಿ ನುಂಗಿ, ಮತ್ತೊಬ್ಬರ ಬಾಳಿಗೆ ಸಿಹಿಯನ್ನು ಪಸರಿಸುವ ದೊಡ್ಡತನವನ್ನು ಮೈಗೂಡಿಸಿಕೊಳ್ಳೋಣ. ನಮ್ಮ ಸುತ್ತಲಿನವರ ಜೀವನವನ್ನು ಹಸನು ಮಾಡುವ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳೋಣ. ನಾವೆಲ್ಲರೂ ಈ ರೀತಿಯ ವಿಶಾಲ ಮನೋಭಾವದಿಂದ ಹೆಜ್ಜೆ ಇಟ್ಟಾಗ, ನಮ್ಮೆಲ್ಲರ ಬಾಳಿನಲ್ಲಿ ನೆಮ್ಮದಿಯ ಹಣತೆ ಸದಾಕಾಲ ಬೆಳಗುವುದು ಸಂಪೂರ್ಣ ನಿಶ್ಚಿತ. ಈ ದೀಪಾವಳಿ ಹಬ್ಬವು ಎಲ್ಲರ ಕುಟುಂಬದ ಬದುಕಿನಲ್ಲಿ ಎಂದೆಂದಿಗೂ ನಗುವಿನ ಬೆಳಕು ಮೂಡಿಸಲಿ ಮತ್ತು ಕತ್ತಲನ್ನು ದೂರಮಾಡಿ, ಸುಖ, ಶಾಂತಿ ಮತ್ತು ನೆಮ್ಮದಿಯ ದಿವ್ಯಜ್ಯೋತಿಯನ್ನು ಬೆಳಗಿಸಲಿ. ದೀಪಾವಳಿಯ‌ ಈ ಶುಭ ಸಂದರ್ಭದಲ್ಲಿ ಹಾರೈಕೆ ಇಷ್ಟೇ - ಎಲ್ಲರಿಗೂ ಸರ್ವ ರೀತಿಯಲ್ಲಿ ಶುಭವಾಗಲಿ!

'ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು, ಮನಸಿನಿಂದ ಮನಸು ಗೆಲ್ಲಲು...'

Creative Writings