Karada Vishwa

Article · November 18, 2026

ನಿರಾಕರಣ

By ಸುಧಾ ಬಿ

ಸುಧಾ ಕೂವೆಕ್ಕಲ್ಲು

ವಿಶ್ರಾಂತ ಜೀವನ, ಸ್ವಾತಂತ್ರ್ಯ, ನೆಮ್ಮದಿಯ ಜೊತೆ ನನ್ನದೇ ಆದಂತಹ ಪುಟ್ಟ ಪುಟ್ಟ ಹವ್ಯಾಸಗಳ ಹೊರತಾಗಿ ಬೇರೇನೂ ಹೇಳಿಕೊಳ್ಳುವಂತಹ ಚಟುವಟಿಕೆಗಳಿಲ್ಲ, ಮನಸ್ಸಿಗೆ ತೀವ್ರವಾಗಿ ಅನಿಸಿದ್ದನ್ನು ಆಗೊಮ್ಮೆ ಈಗೊಮ್ಮೆ ಲೇಖನಿಗಿಳಿಸುವುದನ್ನ ಬಿಟ್ಟರೆ

ನಿರಾಕರಿಸಿ
ನನ್ನ ನಿನ್ನ ಸಂಬಂಧ
ಧಿಕ್ಕರಿಸಿ ನಿನ್ನ ಮನೆ
ಮೆಟ್ಟಲಿಳಿದು
ನಡೆದವಳ ಹೆಜ್ಜೆಗಳಲ್ಲಿ
ಛಲದ ಛಂದಸ್ಸಿತ್ತು.

ಮುರಿದ ಮನಸ್ಸುಗಳ ನೋವು
ನನ್ನ ಕಣ್ಣ ಕಾಡಿಗೆಯಲ್ಲೂ
ಪ್ರತಿಫಲಿಸದಂತೆ
ಬಿಡುಗಡೆಯ ಬೆಳಕು
ಪ್ರತಿಬಂಧಿಸಿತ್ತು.

ಕೊರಳ ತಬ್ಬಿದ ಮುಗ್ಧತೆಯೊಂದು
ಭುಜದ ಮೇಲೊರಗಿತ್ತು ,
ಪುಟ್ಟ ತಲೆ ನೇವರಿಸುತ್ತಿದ್ದ
ನನ್ನ ಕೈಗಳಲ್ಲಿ ಆಶ್ವಾಸನೆಯ
ಸ್ಪರ್ಶವಿತ್ತು.
ನಿನ್ನೊಳಗಿನ ಕೊಳಕುಗಳನ್ನದು
ಅಸಹ್ಯಿಸಿತ್ತು!!!

ಕರೆವ ಜಗವಿತ್ತು, ಪಡೆದ ವಿದ್ಯೆಯ
ಹೆಮ್ಮೆ ಬಗಲಲ್ಲಿತ್ತು,
ಹೊಸ ಅಧ್ಯಾಯವೊಂದಕ್ಕೆ
ಬದುಕು ತೆರೆದಿತ್ತು,
ಆ ಜಗತ್ತು ನನ್ನ ಸ್ವಂತದ್ದಾಗಿತ್ತು!

ಧಿಕ್ಕರಿಸಿದ ಧ್ವನಿಯ ನೋವಲ್ಲಿ
ಸುಖದ ಪಲುಕು ಮುಲುಗುಡುತ್ತಿತ್ತು!
‌

Creative Writings